ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ಅವಕಾಶ ನಿರಾಕರಿಸಿದ್ದೇ ಆಗಿದ್ದಲ್ಲಿ ಉಗ್ರ ಖಂಡನೆ: ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ

0

ಪುತ್ತೂರು: ಜ.26ರಂದು ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ಅವಕಾಶ ನಿರಾಕರಿಸಲಾಗಿದೆ ಎನ್ನುವುದು ಮಾಧ್ಯಮಗಳ ಮೂಲಕ ನಮಗೆ ತಿಳಿದುಬಂದಿದೆ. ಒಂದು ವೇಳೆ ಕೇಂದ್ರ ಸರ್ಕಾರವು ಇದನ್ನು ನಿರಾಕರಿಸಿದ್ದೇ ಆಗಿದ್ದಲ್ಲಿ ಇದನ್ನು ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಬಿಲ್ಲವ ಸಂಘವು ಉಗ್ರವಾಗಿ ಖಂಡಿಸುತ್ತದೆ ಎಂದು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷ ಎ. ಸತೀಶ್ ಕುಮಾರ್ ಕೆಡೆಂಜಿ ಹೇಳಿದ್ದಾರೆ.

ಸುದ್ದಿ ಸ್ಟುಡಿಯೋದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬ್ರಹ್ಮಶ್ರೀ ನಾರಾಯಣ ಗುರುಗಳು ಪಾತಃ ಸ್ಮರಣೀಯರು ಮತ್ತು ಪೂಜನೀಯರು. ದೇಶ ಕಂಡ ಅತ್ಯಂತ ಶ್ರೇಷ್ಠ ದಾರ್ಶನಿಕರಲ್ಲಿ ಒಬ್ಬರು. ಸಾಮಾಜಿಕ ಕ್ರಾಂತಿಯ ಹರಿಕಾರರು. ಹುಚ್ಚರ ಸಂತೆ ಎಂದು ಸ್ವಾಮಿ ವಿವೇಕಾನಂದರಿಂದ ಕರೆಯಲ್ಪಟ್ಟ ಕೇರಳದ ಚಿತ್ರಣವನ್ನೇ ಬದಲಾಯಿಸಿದ ಸಾಮಾಜಿಕ ಹರಿಕಾರರು. ಮೇಲು-ಕೀಳು, ಸ್ಪರ್ಶ-ಅಸ್ಪರ್ಶ ಎನ್ನುವ ಜಾತಿ ಭೇದ ತುಂಬಿದ ಸಾಮಾಜಿಕ ವ್ಯವಸ್ಥೆಯಲ್ಲಿ ಹಿಂದೂ ಧರ್ಮದ ಉಪನಿಷತ್ತುಗಳನ್ನು ಹೇಳಿದ ಸಮಾನತೆಯ ನೈಜ ಹಿಂದೂ ಧರ್ಮದ ಜ್ಞಾನದ ಬೆಳಕಾಗಿದ್ದವರು. ಒಂದೇ ಜಾತಿ, ಒಂದದೇ ಮತ, ಒಂದೇ ದೇವರು ಎನ್ನುವ ಸಾರ್ವಕಾಲಿಕ ಸತ್ಯ ಸಂದೇಶವನ್ನು ಜಗಕ್ಕೆ ಸಾರಿದ ಪರಮ ಗುರುಗಳು. ಇಂತಹ ನಾರಾಯಣ ಗುರುಗಳ ಸ್ತಬ್ಧ ಚಿತ್ರವನ್ನು ನಿರಾಕರಿಸುವುದು ಅಕ್ಷಮ್ಯ ಅಪರಾಧ ಎಂದು ಹೇಳಿದರು.

ಪುತ್ತೂರು ಬಿಲ್ಲವ ಸಂಘದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಮೂರ್ತಿಯನ್ನು ಪ್ರತಿಷ್ಠಾಪಿಸಿ ವರ್ಷದ ೩೬೫ ದಿನಗಳಲ್ಲೂ ನಿರಂತರ ಪೂಜಾ ಕಾರ್ಯಗಳು ನಡೆಯುತ್ತಿವೆ. ಬೇರೆ ಬೇರೆ ಜಾತಿ ಧರ್ಮದ ಜನರು ಅಲ್ಲಿಗೆ ಆಗಮಿಸಿ ಅವರ ಆಶೀರ್ವಾದ ಪಡೆದುಕೊಂಡು ಹೋಗುತ್ತಿದ್ದಾರೆ. ಕರ್ನಾಟಕ, ಕೇರಳ, ದೇಶ ಸಹಿತ ಜಗತ್ತಿನಾದ್ಯಂತ ನಾರಾಯಣ ಗುರುಗಳಿಗೆ ಅನುಯಾಯಿಗಳಿದ್ದಾರೆ. ಇಂತಹ ಶ್ರೇಷ್ಠ ಸಂತರನ್ನು ಅವಮಾನಿಸಿದ್ದಾರೆ ಎಂದರೆ ಅದು ಎಲ್ಲ ಹಿಂದುಳಿದ ವರ್ಗ ಮತ್ತು ನಾರಾಯಣ ಗುರುಗಳ ಭಕ್ತರಿಗೆ ಮಾಡಿದ ದೊಡ್ಡ ದ್ರೋಹ. ಜ.೨೬ರಂದು ನಡೆಯುವ ಗಣರಾಜ್ಯೋತ್ಸವದ ಪೆರೇಡ್‌ನಲ್ಲಿ ನಾರಾಯಣಗುರುಗಳ ಸ್ತಬ್ಧಚಿತ್ರವನ್ನು ಅಳವಡಿಸಿಕೊಳ್ಳಬೇಕು. ಇದಕ್ಕೆ ಕೇಂದ್ರ ಸರ್ಕಾರ ಮಾನ್ಯತೆ ಕೊಡಲಿಲ್ಲ ಎಂದಾದರೆ ಮುಂದಿನ ದಿನಗಳಲ್ಲಿ ಪುತ್ತೂರು ಬಿಲ್ಲವ ಸಂಘದ ಮುಖಾಂತರ ೫೧ ಗ್ರಾಮ ಸಮಿತಿಗಳು, ಪಂಚಾಯತ್ ಸಮಿತಿ ಅಧ್ಯಕ್ಷರುಗಳು, ಸಂಘಟನೆಗಳ ಪ್ರಮುಖರು, ಪಕ್ಷ, ಜಾತ್ಯಾತೀತವಾಗಿ ಎಲ್ಲ ಸಮುದಾಯದ ನಾಯಕರನ್ನು ಸೇರಿಸಿಕೊಂಡು ಪುತ್ತೂರಿನಲ್ಲಿ ಬೃಹತ್ ಪ್ರತಿಭಟನೆಯನ್ನು ಮಾಡಲು ಸಿದ್ಧರಿದ್ದೇವೆ ಎಂದರು ಸತೀಶ್ ಕುಮಾರ್ ಕೆಡೆಂಜಿ ಹೇಳಿದರು.

ಜ.26ರಂದು ನಡೆಯುವ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರ ಭಾಗವಹಿಸಲು ಅನುಕೂಲ ಮಾಡಿಕೊಡುವಂತೆ ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರದ ಪ್ರತಿನಿಧಿಗಳು ಈ ಬಗ್ಗೆ ಕೇಂದ್ರ ಸರ್ಕಾರವನ್ನು ಆಗ್ರಹ ಮಾಡಬೇಕು. ಮಾಡದೇ ಇದ್ದಲ್ಲಿ ನಮ್ಮ ಮೂಲಕ ನಡೆಯುವ ಪ್ರತಿಭಟನೆಯಲ್ಲಿ ನಮ್ಮೊಂದಿಗೆ ಸೇರಿಕೊಳ್ಳಬೇಕು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಉಪಾಧ್ಯಕ್ಷ ಡಾ| ಸದಾನಂದ ಕುಂದರ್, ಕಾರ್ಯದರ್ಶಿ ನಾಗೇಶ್ ಬಲ್ನಾಡು, ಕೋಶಾಧಿಕಾರಿ ಬಿ.ಟಿ. ಮಹೇಶ್ಚಂದ್ರ ಸಾಲ್ಯಾನ್, ಜೊತೆ ಕಾರ್ಯದರ್ಶಿ ಚಿದಾನಂದ ಸುವರ್ಣ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here