ಮತದಾನ ಮಾಡದಿದ್ದರೆ ವ್ಯಕ್ತಿಗಲ್ಲ ದೇಶಕ್ಕಾಗುವ ನಷ್ಟ -12ನೇ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ನ್ಯಾಯಾಧೀಶ ಬಿ.ಅರುಣ್ ಕುಮಾರ್

0

  • ಎಸಿ ಡಾ. ಯತೀಶ್ ಉಳ್ಳಾಲ್ ಅವರಿಂದ ಮತದಾರ ಹಕ್ಕನ್ನು ಪ್ರತಿಪಾದಿಸುವ ಪ್ರತಿಜ್ಞಾ ವಿಧಿ ಭೋದನೆ

ಪುತ್ತೂರು: ಮನುಷ್ಯನ ಅಂಗಾಗಗಳ ದಾನ ಒಬ್ಬ ವ್ಯಕ್ತಿ ಅಥವಾ ಮೇಲ್ಪಟ್ಟಿರಬಹುದು. ಆದರೆ ಮತದಾನ ದೇಶದ ಅಭಿವೃದ್ಧಿಗೆ. ಈ ನಿಟ್ಟಿನಲ್ಲಿ ಮತದಾನ ಮಾಡದಿದ್ದರೆ ವ್ಯಕ್ತಿಗಲ್ಲ ದೇಶಕ್ಕಾಗುವ ನಷ್ಟ ಎಂದು ಪ್ರಿನ್ಸಿಪಾಲ್ ಸಿವಿಲ್ ನ್ಯಾಯಾಧೀಶ, ಜೆ.ಎಂ.ಎಫ್.ಸಿ ಬಿ.ಅರುಣ್ ಕುಮಾರ್ ಅವರು ನುಡಿದರು.


ಪುತ್ತೂತು ತಾಲೂಕು ಆಡಳಿತ ಸೌಧದಲ್ಲಿನ ತಾಲೂಕು ಕಚೇರಿ ಸಭಾಂಗಣದಲ್ಲಿ ಜ.25ರಂದು ನಡೆದ 12ನೇ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಉಪನ್ಯಾಸ ನೀಡಿದರು. ಮತದಾನ ದೇಶದ ರಾಷ್ಟ್ರದ ಅಭಿವೃದ್ಧಿಗೆ ಪೂರಕವಾಗಿರುತ್ತದೆ. 1950ರ ಜನವರಿ 25ರಂದು ಭಾರತದ ಚುನಾವಣಾ ಆಯೋಗ ಸ್ಥಾಪನೆಯಾಗಿದೆ. ಹೀಗಾಗಿ ಈ ದಿನವನ್ನು ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸಲಾಗುತ್ತಿದೆ. 2011 ಜನವರಿ 25ರಂದು ರಾಷ್ಟ್ರೀಯ ಮತದಾರರ ದಿನ ಎಂದು ಘೋಷಿಸಿ ಮತದಾನಕ್ಕೊಂದು ಮುನ್ನುಡಿ ಬರೆಯಲಾಗಿದೆ. ಬಳಿಕ ಪ್ರತಿ ವರ್ಷ ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ವರ್ಷ 12ನೇ ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸುತ್ತಿದ್ದೇವೆ ಎಂದ ಅವರು ಇದೊಂದು ಪ್ರಜಾ ವ್ಯವಸ್ಥೆಯಲ್ಲಿರುವಂತಹದಾಗಿದ್ದು ಇಲ್ಲಿ ಪ್ರಜೆಗಳೆ ನಿರ್ಣಯಕ ಹಂತದಲ್ಲಿರುತ್ತಾರೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮತದಾನದ ಪಾತ್ರ ಅತ್ಯಂತ ಮಹತ್ತರವಾದುದು ಎಂದರು.


‘ಎಲ್ಲರನ್ನು ಒಳಪಡುವ ಚುನಾವಣೆ’ ಈ ವರ್ಷದ ಮತದಾನದ ವಿಶೇಷ:
ಮತದಾರರ ನೋಂದಣಾಧಿಕಾರಿ ಹಾಗು ಸಹಾಯಕ ಕಮೀಷನರ್ ಆಗಿರುವ ಡಾ. ಯತೀಶ್ ಉಳ್ಳಾಲ್ ಅವರು ಅಧ್ಯಕ್ಷತೆ ವಹಿಸಿ ಮತದಾರರ ದಿನಾಚರಣೆಯನ್ನು ಉದ್ಘಾಟಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮತದಾರರು ತಮ್ಮ ಹಕ್ಕನ್ನು ಪ್ರತಿಪಾದಿಸುವ ಕುರಿತು ಪ್ರತಿಜ್ಞಾ ವಿಧಿ ಭೋದನೆ ಮಾಡಿ ಮಾತನಾಡಿದ ಅವರು ಯುವ ಮತದಾರರು ಮತ್ತು ಮತದಾನದ ದಿನದಂದು ಮತದಾನ ಮಾಡದೆ ಇರುವ ಮತದಾರರನ್ನು ಮತದಾನ ಮಾಡುವಂತೆ ಪ್ರೇರೆಪಣೆ ಮಾಡುವಂತಹ ಕಾರ್ಯಕ್ರಮ ಇದಾಗಿದ್ದು, ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಗೆ ಅಧಿಕಾರ ಎಂದರು. ಇತಿಹಾಸ ನೋಡಿದರೆ ಬೇರೆ ಬೇರೆ ರಾಜ್ಯಗಳು, ರಾಜವಂಶಸ್ಥರು ಆಳುವ ಸಂದರ್ಭದಲ್ಲಿ ಒಬ್ಬ ರಾಜ ಇನ್ನೊಬ್ಬ ರಾಜನನ್ನು ಸೋಲಿಸಲು ಯುದ್ದ ಮಾಡಬೇಕಾಗಿತ್ತು. ಯುದ್ದಗಳು ನಡೆದು ಪಟ್ಟದಲ್ಲಿ ಬದಲಾವಣೆಯಾಗುವ ಕಾಲಗಟ್ಟವಿತ್ತು. ನಂತರ ಬಂದ ಬೆಳವಣಿಗೆಯಲ್ಲಿ ಚುನಾವಣೆ ಎಂಬ ವ್ಯವಸ್ಥೆಗೆ ಒಳಪಟ್ಟಾಗ ಅಧಿಕಾರ ಬದಲಾವಣೆ ಆಗಬೇಕಾದರೆ ಕೇವಲ ಚುನಾವಣೆ ನಡೆದರೆ ಸಾಕು ಯುದ್ದ ಬೇಕಾಗಿಲ್ಲ. ಈ ನಿಟ್ಟಿನಲ್ಲಿ ನಾಗರಿಕ ಸಮಾಜದಲ್ಲಿ ಅತ್ಯಂತ ಶಾಂತಿಯುತ ಮತ್ತು ಶಿಸ್ತಿನಿಂದ ನಮ್ಮನ್ನು ಆಳುವವರನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಯುವುದಕ್ಕೆ ಭಾರತ ಒಂದು ಮಾದರಿಯಾಗಿದೆ. ಹಾಗೆಂದು ವಿಶ್ವದಲ್ಲೆಲ್ಲಾ ಈ ರೀತಿಯ ಶಾಂತಿಯ ಚುನಾವಣೆ ನಡೆಯುವುದಿಲ್ಲ ಎಂದ ಅವರು ನಮ್ಮ ದೇಶದಲ್ಲಿ ಶಾಂತಿಯುತ ಮತದಾನ ನಡೆಯುತ್ತದೆ. ಮತದಾನದ ದಿನದಂದು ಆಲಸ್ಯ ಮಾಡದೆ ಮತದಾನ ಮಾಡಿ. 2023ಕ್ಕೆ ಚುನಾವಣಾ ವರ್ಷ ಬರುತ್ತದೆ. ಈ ಸಂದರ್ಭದಲ್ಲಿ ಇನ್ನೂ ಹೆಚ್ಚಿನ ಹೊಸ ಮತದಾರರನ್ನು ಸೇರ್ಪಡೆಗೊಳಿಸಬೇಕಾಗುತ್ತದೆ. ಯುವ ಮತದಾರರು ತಮ್ಮ ತಮ್ಮ ಸ್ನೇಹಿತರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಬೇಕು. ಯಾಕೆಂದರೆ ‘ಎಲ್ಲರನ್ನು ಒಳಪಡುವ ಚುನಾವಣೆ’ ಈ ವರ್ಷದ ಮತದಾನದ ವಿಶೇಷ ಎಂದರು. ಎಲ್ಲರು ವೋಟರ್ ಹೆಲ್ಪ್‌ಲೈನ್ ಆಪ್(ವಿಎಚ್‌ಎ) ಅನ್ನು ತಮ್ಮ ತಮ್ಮ ಮೊಬೈಲ್‌ನಲ್ಲ ಡೌನ್‌ಲೋಡ್ ಮಾಡುವಂತೆ ವಿನಂತಿಸಿದರು.


ಸದೃಢ ಭಾರತ ನಿರ್ಮಾಣಕ್ಕೆ ಕಡ್ಡಾಯ ಮತದಾನ ಮಾಡಿ:
ತಾಲೂಕು ಸ್ವೀಪ್ ಅಧ್ಯಕ್ಷರಾಗಿರುವ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಅವರು ಮಾತನಾಡಿ ರಾಜಕೀಯದಲ್ಲಿ ಪ್ರತಿ 5 ವರ್ಷಗಳಿಗೊಮ್ಮೆ ಚುನಾವಣೆ ನಡೆಯುತ್ತದೆ. ಈ ಸಂದರ್ಭದಲ್ಲಿ ನಾವು ಮತದಾನ ಮಾಡುವ ವೇಳೆ ಮೈಮರೆಯದೆ ಮತದಾನ ಮಾಡಬೇಕು. ಸದೃಢ ಭಾರತ ನಿರ್ಮಾಣ ಮಾಡಲು ಕಡ್ಡಾಯವಾಗಿ ಪ್ರತಿಯೊಬ್ಬರು ಮತದಾನ ಮಾಡಬೇಕು ಎಂದು ಹೇಳಿದರು.

ಅತಿ ಹೆಚ್ಚು ನಮೂನೆ-6ರಲ್ಲಿ ಹೊಸ ಸೇರ್ಪಡೆಗೆ ಮತಗಟ್ಟೆ ಅಧಿಕಾರಿಗಳಿಗೆ ಗೌರವ:
ಅತಿ ಹೆಚ್ಚು ನಮೂನೆ -6ರಲ್ಲಿ ಹೊಸ ಸೇರ್ಪಡೆ ಮತ್ತು ದಾಖಲೆಗಳ ನಿರ್ವಹಣೆ ಇತ್ಯಾದಿಯ ಮೇಲೆ ಪರಿಗಣಿಸಿ ಮತಟ್ಟೆ ಅಧಿಕಾರಿಗಳಾದ ನೆಟ್ಟಣಿಗೆಮುಡ್ನೂರು ಗ್ರಾ.ಪಂ ಗ್ರಾಮ ಸಹಾಯಕ ರಘುನಾಥ, ನರಿಮೊಗ್ರು ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಸುಧಾ ಎಸ್ ಬಂಗೇರ, ಕೆದಂಬಾಡಿ ಗ್ರಾ.ಪಂ ಗ್ರಾಮ ಸಹಾಯಕ ಶ್ರೀಧರ ಪಿ, ಕೆಯ್ಯೂರು ಗ್ರಾ.ಪಂ ಗ್ರಾಮ ಸಹಾಯಕ ನಾರಾಯಣ, ಕರ್ನೂರು ಶಾಲೆಯ ಪಿಜಿಕಲ್ ಎಜುಕೇಶನ್ ಟೀಚರ್ ರಮೇಶ್ ಅವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ತಾಲೂಕು ಆಡಳಿತದಿಂದ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಣೆ ಮಾಡಲಾಯಿತು. ಸಹಾಯಕ ಮತದಾರರ ನೋಂದಣಾಧಿಕಾರಿಯಾಗಿರುವ ತಹಶೀಲ್ದಾರ್ ಟಿ.ರಮೇಶ್ ಬಾಬು, ಪೌರಾಯುಕ್ತ ಮಧು ಎಸ್ ಮನೋಹರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗ್ರೇಡ್ 2 ತಹಸೀಲ್ದಾರ್ ಲೊಕೇಶ್, ಉಪತಹಸೀಲ್ದಾರ್ ರಾಮಣ್ಣ, ತಾಲೂಕು ಕಚೇರಿಯ ನಾಗೇಶ್ ಅತಿಥಿಗಳನ್ನು ಗೌರವಿಸಿದರು. ರಾಮಕೃಷ್ಣ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಉಪತಹಸೀಲ್ದಾರ್ ಸುಲೋಚನಾ ಸ್ವಾಗತಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಯುವ ಮತದಾರರನ್ನು ಸೇರ್ಪಡೆಗೊಳಿಸಿದ ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ವಿ.ಜಿ.ಭಟ್ ಅವರನ್ನು ಗೌರವಿಸಲಾಯಿತು.

ಯುವ ಹೊಸ ಮತದಾರರ ಸೇರ್ಪಡೆ ವಿವೇಕಾನಂದ ಕಾಲೇಜು ರಾಜ್ಯಕ್ಕೆ ಪ್ರಥಮ
ನಮೂನೆ 6ರಲ್ಲಿ 18 ವರ್ಷದ 601ಯುವ ಹೊಸ ಮತದಾರರನ್ನು ಮತದಾನ ಪಟ್ಟಿಗೆ ಸೇರ್ಪಡೆಗೊಳಿಸಿದ ಪುತ್ತೂರು ವಿವೇಕಾನಂದ ಕಾಲೇಜು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದು, ಈ ನಿಟ್ಟಿನಲ್ಲಿ ಕಾಲೇಜಿನ ಪ್ರಾಂಶುಪಾಲ ವಿ.ಜಿ ಭಟ್ ಅವರನ್ನು ಗೌರವಿಸಲಾಯಿತು. ಇದು ಪುತ್ತೂರು ವಿಧಾನಸಭಾ ಕ್ಷೇತ್ರದ 206 ಮತಗಟ್ಟೆಯ ಸಾಧನೆ ಆಗಿದೆ. ವಿಹೆಚ್ ಆಪ್ ಮೂಲಕ ಹೊಸ ಮತದಾರರನ್ನು ಸೇರ್ಪಡೆಗೊಳಿಸುವ ಕಾರ್ಯ ವಿವೇಕಾನಂದ ಕಾಲೇಜು ಮಾಡಿದೆ.

LEAVE A REPLY

Please enter your comment!
Please enter your name here