ಕುಂಬ್ರ ಕೆಪಿಎಸ್ ಸ್ಕೂಲ್ ಹಿಂಭಾಗದಲ್ಲಿ ತ್ಯಾಜ್ಯಗಳ ರಾಶಿ

0

  • ದುರ್ವಾಸನೆಯಿಂದ ಸ್ಕೂಲ್ ಆವರಣದಲ್ಲಿ ಸೊಳ್ಳೆಗಳ ಕಾಟ

ಪುತ್ತೂರು: ಶಾಲಾ ಪರಿಸರ ಸ್ವಚ್ಚವಾಗಿರಬೇಕು, ಸ್ವಚ್ಚವಾಗಿಡಬೇಕು ಎಂಬುದು ಸರಕಾರದ ಸೂಚನೆಯಾಗಿದೆ, ಈ ಕಾರಣಕ್ಕೆ ಶಾಲಾ ಆವರಣದಲ್ಲಿ ಧೂಮಪಾನವನ್ನು ಕೂಡಾ ನಿಷೇಧಿಸಲಾಗಿದೆ. ಕುಂಬ್ರ ಕೆಪಿಎಸ್ ಸ್ಕೂಲ್ ಆವರಣ ಸ್ವಚ್ಚವಾಗಿಯೂ ಇದೆ ಆದರೆ ಸ್ಕೂಲ್‌ನ ಹಿಂಭಾಗದ ಖಾಸಗಿ ವ್ಯಕ್ತಿಗೆ ಸೇರಿದ ಜಾಗದಲ್ಲಿ ಬೃಹತ್ ತ್ಯಾಜ್ಯಗಳ ರಾಶಿಯೇ ಇದ್ದು ದುರ್ವಾಸನೆ ಹೊಡೆಯುತ್ತಿದ್ದು ಪರಿಸರದಲ್ಲಿ ಸೊಳ್ಳೆಗಳ ಕಾಟವೂ ವಿಪರೀತವಾಗಿದೆ.

ಸ್ಕೂಲ್‌ನ ಅಡುಗೆ ಕೋಣೆಯಿಂದ ಮೀಟರ್ ದೂರದಲ್ಲಿ ಈ ತ್ಯಾಜ್ಯಗಳ ರಾಶಿ ಇದೆ. ಪೊದೆಗಳು ತುಂಬಿದ ಕಾರಣ ತ್ಯಾಜ್ಯ ದೂರದಿಂದ ಕಾಣಿಸುವುದಿಲ್ಲ ಈ ಕಾರಣಕ್ಕೆ ಇಲ್ಲಿನ ತ್ಯಾಜ್ಯಗಳ ವಿಚಾರ ಯಾರಿಗೂ ಗೊತ್ತಿರಲಿಲ್ಲ. ಪರಿಸರದಲ್ಲಿ ದುರ್ವಾಸನೆ ಬರುತ್ತಿದೆ, ಬೀದಿ ನಾಯಿಗಳು ತ್ಯಾಜ್ಯವನ್ನು ತಂದು ಸ್ಕೂಲ್ ಆವರಣದಲ್ಲಿ ಹಾಕುತ್ತಿರುವ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸ್ಥಳೀಯ ವಾರ್ಡ್ ಸದಸ್ಯರಾದ ವಿನೋದ್ ಶೆಟ್ಟಿ ತೆರಳಿ ಪರಿಶೀಲಿಸಿದಾಗ ತ್ಯಾಜ್ಯಗಳ ರಾಶಿ ಕಣ್ಣಿಗೆ ಬಿದ್ದಿದೆ. ಕಸವನ್ನು ಯಾರು ತಂದು ಹಾಕುತ್ತಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ. ಕುಂಬ್ರ ಪೇಟೆಯ ಕಸವೇ ಎಂಬುದಕ್ಕೆ ಅಲ್ಲಿರುವ ತ್ಯಾಜ್ಯಗಳೇ ಸಾಕ್ಷಿ ಹೇಳುತ್ತಿದೆ. ಸಂಬಂಧಿಸಿದವರು ತಕ್ಷಣವೇ ಇಲ್ಲಿನ ತ್ಯಾಜ್ಯಕ್ಕೆ ಮುಕ್ತಿ ಕಾಣಿಸಬೇಕಿದೆ. ಇಲ್ಲವಾದರೆ ಶಾಲಾ ವಿದ್ಯಾರ್ಥಿಗಳ ಊಟದ ತಟ್ಟೆಯಲ್ಲೂ ಸೊಳ್ಳೆಗಳು ಕೂತರೆ ಅಚ್ಚರಿಯಿಲ್ಲ.

LEAVE A REPLY

Please enter your comment!
Please enter your name here