ಪ್ರಜಾಪ್ರಭುತ್ವದಲ್ಲಿ ಪ್ರಜೆಯೇ ರಾಜ ನಮ್ಮ ಸೇವೆಗಾಗಿ ಸಂಸದರ, ಶಾಸಕರ ಸಹಿತ ಜನಪ್ರತಿನಿಧಿಗಳ ಆಯ್ಕೆ, ಪಕ್ಷಗಳಿಗೆ ಅಸ್ತಿತ್ವ, ಅಧಿಕಾರಿಗಳ ನೇಮಕ ಎಂದಿರುವಾಗ – ಬೆಳ್ತಂಗಡಿಯಲ್ಲಿ ನಡೆದ ಘಟನೆಗಳು ಬೆಳ್ತಂಗಡಿಯ ಜನರಿಗೆ ಪ್ರಯೋಜನವೇ?, ತೊಂದರೆಯೇ ಅದು ಹೀಗೆಯೇ ಮುಂದುವರಿಯಬೇಕೇ?ಜನತೆ ಗಂಭೀರವಾಗಿ ಚಿಂತಿಸಬೇಕು

0

ಬೆಳ್ತಂಗಡಿಯಲ್ಲಿ ವಸಂತ ಬಂಗೇರರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಎಲ್ಲರೂ ಅವರ ಬಡವರ ಪರ ಕಾಳಜಿ, ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ನೆನಪಿಸಿದರು. ಬೆಳ್ತಂಗಡಿಯ ಜನತೆಗೆ ಬಂಗೇರರಿಂದ ಅಪಾರ ಪ್ರಯೋಜನವಾಗಿದೆಯೇ ಹೊರತು ತೊಂದರೆಯಾಗಿರುವುದಿಲ್ಲ. ಅವರ ನೆನಪು ಶಾಶ್ವತವಾಗಿರಲಿ ಎಂದು ನುಡಿನಮನ ಸಲ್ಲಿಸಿದರು. ಅದು ಈಗಿನ ಮತ್ತು ಮುಂದಿನ ಜನಾಂಗಕ್ಕೆ ಮಾದರಿಯಾಗಿರಲಿ ಎಂದು ಹಾರೈಸಿದರು.


ಆದರೆ ಈಗ ನಡೆಯುತ್ತಿರುವುದು ಏನು?. ಬೆಳ್ತಂಗಡಿಯಲ್ಲಿ ನಡೆದ ಅಕ್ರಮ ಗಣಿಗಾರಿಕೆ, ಬಿಜೆಪಿ ಯುವಮೋರ್ಛಾ ಅಧ್ಯಕ್ಷರ ಬಂಧನ, ನಿಜವಾದ ಆರೋಪಿಯ ಬದಲು ಅದು ನಿರಪರಾಧಿಯ ಬಂಧನ ಎಂಬ ಕೂಗು. ಅದಕ್ಕಾಗಿ ಶಾಸಕ ಹರೀಶ್ ಪೂಂಜರಿಂದ ಪೊಲೀಸ್ ಠಾಣೆಯಲ್ಲಿ ಧರಣಿ, ಪ್ರತಿಭಟನೆ, ಬಿಡುಗಡೆಗಾಗಿ ಒತ್ತಾಯ. ನಿಮ್ಮಪ್ಪನ ಆಸ್ತಿಯೇ ಎಂದು ನಿಂದನೆ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ಬೆದರಿಕೆ ಎಂಬ ಕೇಸು ದಾಖಲು, ಅದರ ಪರಿಣಾಮ ಬೆಳ್ತಂಗಡಿಯಲ್ಲಿ ಬಿಜೆಪಿ ಕಾರ್ಯಕರ್ತರಿಂದ, ಜನಪ್ರತಿನಿಧಿಗಳಿಂದ, ಶಾಸಕರಿಂದ ಪ್ರತಿಪ್ರಭಟನಾ ಮೆರವಣಿಗೆ, ಭಾಷಣ. ಅನ್ಯಾಯಕ್ಕೆ ಕಾಂಗ್ರೆಸ್ ಪಕ್ಷವೇ ಕಾರಣ. ಅಧಿಕಾರಿಗಳು ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಅದರ ವಿರುದ್ಧ ರಾಜ್ಯದಾದ್ಯಂತ ಪ್ರತಿಭಟಿಸುತ್ತೇವೆ ಎಂದು ಎಲ್ಲಾ ನಾಯಕರ ಹೇಳಿಕೆ. ಶಾಸಕ ಹರೀಶ್ ಪೂಂಜರಿಂದ ತಾಲೂಕು ಆಫೀಸ್‌ಗೆ ಕಾಂಗ್ರೆಸ್ ಪಕ್ಷದ ಕಛೇರಿ ಎಂಬ ಬೋರ್ಡ್ ಅಳವಡಿಕೆ, ಕಾಂಗ್ರೆಸ್ ನಾಯಕರ ಟೀಕೆ, ಬಿಜೆಪಿ ಕಾರ್ಯಕರ್ತರ ಮೈ ಮುಟ್ಟಿದರೆ ಪೊಲೀಸರ ಕಾಲರ್ ಪಟ್ಟಿಗೆ ಕೈ ಹಾಕಿ ಎಳೆಯುತ್ತೇನೆ. ಇಲ್ಲಿ ಡಿ.ಜೆ ಹಳ್ಳಿ, ಕೆ.ಜಿ ಹಳ್ಳಿಯ ಮಾದರಿಯಲ್ಲಿ ಠಾಣೆಗೆ ಮುತ್ತಿಗೆ ಹಾಕುತ್ತೇವೆ, ಕೇಸು ಆದರೆ ಬೇಲ್ ಪಡೆಯುವುದಿಲ್ಲ, ಜೈಲಿಗೆ ಹೋಗುತ್ತೇನೆ ಎಂಬ ಹೇಳಿಕೆ. ಹರೀಶ್ ಪೂಂಜರ ಹೇಳಿಕೆಗಾಗಿ ಅವರ ಮೇಲೆ ಪೊಲೀಸ್ ಕೇಸು, ಬಂಧನಕ್ಕೆ ಒತ್ತಾಯ. ಬಿಗು ವ್ಯವಸ್ಥೆಯೊಂದಿಗೆ ಪೊಲೀಸರ ತಂಡದಿಂದ ಶಾಸಕರ ಹರೀಶ್ ಪೂಂಜರನ್ನು ಬಂಧಿಸುವ ಪ್ರಯತ್ನ, ಅದಕ್ಕೆ ಜನತೆಯ ಪ್ರತಿರೋಧ, ಕಾಂಗ್ರೆಸ್ ಪಕ್ಷಕ್ಕೆ ಧಿಕ್ಕಾರ ಕೂಗು. ಜಿಲ್ಲಾ ಬಂದ್‌ನ ಬೆದರಿಕೆ. ಪೊಲೀಸರ ನೋಟೀಸ್‌ಗೆ ಪೂಂಜರಿಂದ ಉತ್ತರಕ್ಕೆ ಕಾಲಾವಕಾಶದ ಕೋರಿಕೆ, ಅವರನ್ನು ಬಂಧಿಸದೆ ಹಿಂತಿರುಗಿದ ಪೊಲೀಸರು. ರಾತ್ರಿ ಗಂಟೆಗೆ ಪಕ್ಷದ ಮುಖಂಡರೊಂದಿಗೆ ಸಂಸದ ನಳಿನ್ ಕುಮಾರ್ ಕಟೀಲ್‌ರವರೊಂದಿಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾದ ಹರೀಶ್ ಪೂಂಜ.


ಈ ಮೇಲಿನ ಘಟನೆಗಳಲ್ಲಿ ಯಾರ ತಪ್ಪು, ಯಾರು ಸರಿ. ಪಕ್ಷಗಳು, ನಾಯಕರು, ಜನಪ್ರತಿನಿಧಿಗಳು, ಅಧಿಕಾರಿಗಳು, ತಮ್ಮ ತಮ್ಮ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆಯೇ?, ದುರುಪಯೋಗಪಡಿಸಿದ್ದಾರೆಯೇ?. ಅದನ್ನು ಹೇಗೆ ಮಾಡಬೇಕಿತ್ತು, ಹೇಗೆ ಮಾಡಬಾರದಿತ್ತು?. ಅದರಿಂದ ಬೆಳ್ತಂಗಡಿಯ ಜನತೆಗೆ ಆದ ಪ್ರಯೋಜನ ಏನು?. ತೊಂದರೆಗಳೇನು?. ಸಾಮಾನ್ಯ ಜನರಿಗೆ ಅಂತಹುದೇ ಪರಿಸ್ಥಿತಿ ಬಂದಾಗ ಅವರು ಅದನ್ನು ಎದುರಿಸುವುದು ಹೇಗೆ?. ಪಕ್ಷದ ಕಾರ್ಯಕರ್ತರಿಗೆ ಪೂಂಜರು ಬೆಂಬಲ ನೀಡಿದಂತೆ ಸಾಮಾನ್ಯ ಜನರಿಗೂ ಪೂಂಜರ ಮತ್ತು ಪ್ರತಿಭಟನೆ ಮಾಡಿದ ಎಲ್ಲರ ಬೆಂಬಲ ದೊರಕಬಹುದೇ?.


ಇಂತಹ ಪರಿಸ್ಥಿತಿಯಲ್ಲಿ ನಿಜವಾದ ಅರ್ಥದಲ್ಲಿ ರಾಜರಾಗಿರಬೇಕಾದ ಜನರ, ಜನಸೇವಕರಾದ ಜನಪ್ರತಿನಿಧಿಗಳ, ಅಧಿಕಾರಿಗಳ ಪಾತ್ರವೇನು? ಎಂಬ ಬಗ್ಗೆ ಈ ಸಲ ನಡೆದ ಪ್ರತಿಯೊಂದು ಘಟನೆಯನ್ನು ಅದರ ಮುಂದುವರಿದ ಭಾಗವನ್ನು ಯಾವುದೇ ಪಕ್ಷದ, ವ್ಯಕ್ತಿಯ ಆಧಾರದಲ್ಲಿ ಚರ್ಚಿಸದೆ ಬೆಳ್ತಂಗಡಿಯ ಜನತೆಯ ಹಿತಾಸಕ್ತಿಗಾಗಿ ಚರ್ಚಿಸೋಣವೇ? ಅಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳೋಣವೇ?. ಜನತೆ ಆ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಪತ್ರಿಕೆಗೆ ಬರೆಯಿರಿ ಮತ್ತು ಚಾನೆಲ್‌ನಲ್ಲಿ ಬಹಿರಂಗವಾಗಿ ಚರ್ಚಿಸುವಂತಾಗಲಿ.

LEAVE A REPLY

Please enter your comment!
Please enter your name here