ಮಂಗಳೂರು ವಿ.ವಿ ಅಂತರ್-ಕಾಲೇಜು ಪುರುಷರ ಲೆದರ್‌ಬಾಲ್ ಕ್ರಿಕೆಟ್ ಟೂರ್ನಮೆಂಟ್

0

  • ಅಲೋಶಿಯಸ್ ಕಾಲೇಜು ಮಂಗಳೂರು ವಲಯ ಚಾಂಪಿಯನ್, ಎಸ್.ಡಿ.ಎಂ ಮಂಗಳೂರು ರನ್ನರ್ಸ್

ಪುತ್ತೂರು: ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿ ಹಾಗೂ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಕಾಲೇಜು ಇವುಗಳ ಜಂಟಿ ಆಶ್ರಯದಲ್ಲಿ ಫಿಲೋಮಿನಾ ಕಾಲೇಜಿನ ಕ್ರೀಡಾಂಗಣದಲ್ಲಿ ಜರಗಿದ ಮಂಗಳೂರು ವಲಯ ಹಾಗೂ ಅಂತರ್ ವಲಯವನ್ನೊಳಗೊಂಡ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್-ಕಾಲೇಜು ಪುರುಷರ ಲೆದರ್‌ಬಾಲ್ ಮ್ಯಾಟ್ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಮಂಗಳೂರು ವಲಯದಿಂದ ಸಂತ ಅಲೋಶಿಯಸ್ ಕಾಲೇಜು ಮಂಗಳೂರು ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದೆ ಮಾತ್ರವಲ್ಲದೆ “ಶ್ರೀ ಮೂಲ್ಕಿ ದಯಾನಂದ್ ಕಾಮತ್ ರೋಲಿಂಗ್ ಟ್ರೋಫಿ”ಯನ್ನು ತನ್ನದಾಗಿಸಿಕೊಂಡಿತು. ಮಂಗಳೂರು ಎಸ್.ಡಿ.ಎಂ ಕಾಲೇಜು ರನ್ನರ್ಸ್ ಪ್ರಶಸ್ತಿಗೆ ತೃಪ್ತಿ ಪಟ್ಟುಕೊಂಡಿತು.


ಜ.೨೭ ರಂದು ನಡೆದ ಫೈನಲ್ ಪಂದ್ಯಾಟದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಎಸ್.ಡಿ.ಎಂ ಕಾಲೇಜು ೨೦ ಓವರ್‌ಗಳಲ್ಲಿ ೧೪೦ ರನ್‌ಗಳನ್ನು ಗಳಿಸಿತ್ತು. ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಅಲೋಶಿಯಸ್ ಕಾಲೇಜು ಕೇವಲ ಒಂದೇ ವಿಕೆಟ್ ಕಳೆದುಕೊಂಡು ನಿರಾಯಾಸವಾಗಿ ಗುರಿ ಮುಟ್ಟಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಉತ್ತಮ ಬ್ಯಾಟರ್ ಪ್ರಶಸ್ತಿಯನ್ನು ಮಂಗಳೂರು ಎಸ್.ಡಿ.ಎಂ ಕಾಲೇಜಿನ ದೀಕ್ಷಿತ್, ಉತ್ತಮ ಎಸೆತಗಾರ ಹಾಗೂ ಅಲ್ರೌಂಡರ್ ಪ್ರಶಸ್ತಿಯನ್ನು ಅನುಕ್ರಮವಾಗಿ ಅಲೋಶಿಯಸ್ ಕಾಲೇಜಿನ ಆರ್ಯನ್ ಹಾಗೂ ನಿಖಿಲ್‌ರವರು ಪಡೆದುಕೊಂಡರು.

ಸೆಮಿಫೈನಲ್ ಕಾದಾಟ:
ಈ ಮೊದಲು ನಡೆದ ಸೆಮಿಫೈನಲ್ ಕಾದಾಟದಲ್ಲಿ ಅಲೋಶಿಯಸ್ ಕಾಲೇಜು ತಂಡವು ಪುತ್ತೂರಿನ ಸಂತ ಫಿಲೋಮಿನಾ ಕಾಲೇಜು ಮತ್ತು ಎಸ್.ಡಿ.ಎಂ ಮಂಗಳೂರು ಕಾಲೇಜು ತಂಡವು ಮಡಂತ್ಯಾರು ಸೆಕ್ರೇಡ್ ಹಾರ್ಟ್ ಕಾಲೇಜು ತಂಡವನ್ನು ಸೋಲಿಸಿ ಅಧಿಕಾರಯುತವಾಗಿ ಫೈನಲಿಗೆ ಅರ್ಹತೆ ಪಡೆದಿತ್ತು. ಯೂನಿವರ್ಸಿಟಿ ಕಾಲೇಜು ಹಂಪನಕಟ್ಟೆ, ಗೋವಿಂದದಾಸ್ ಕಾಲೇಜು ಸುರತ್ಕಲ್, ರೋಶನಿ ನಿಲಯ ಮಂಗಳೂರು, ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾರ್‌ಸ್ಟ್ರೀಟ್, ಪದುವಾ ಕಾಲೇಜು ಮಂಗಳೂರು, ಎಸ್‌ಆರ್‌ಸಿ ರಾಮಕುಂಜ, ಎಫ್‌ಎಂಕೆಎಂಸಿ ಕೊಡಗು, ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪ್ಪಿನಂಗಡಿ, ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿ, ವಿದ್ಯಾರಶ್ಮಿ ಸವಣೂರು, ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ, ಯೂನಿವರ್ಸಿಟಿ ಕ್ಯಾಂಪಸ್ ಕೊಣಾಜೆ, ಎನ್‌ಎಂಸಿ ಸುಳ್ಯ, ಕಾವೇರಿ ಕಾಲೇಜು ಗೋಣಿಕೊಪ್ಪ, ಕೆನರಾ ಕಾಲೇಜು ಮಂಗಳೂರು ಇವುಗಳು ನಾಕೌಟ್ ಹಂತದಲ್ಲಿಯೇ ಹೊರ ಬಿದ್ದಿದ್ದವು.

ಸಮಾರೋಪ:
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕ್ರೀಡಾ ನಿರ್ದೇಶಕ ಡಾ.ಜೆರಾಲ್ಡ್ ಸಂತೋಷ್ ಡಿ’ಸೋಜರವರು ಮಾತನಾಡಿ, ಕ್ರಿಕೆಟ್‌ನಲ್ಲಿ ಪ್ರಬುದ್ಧ ಆಟಗಾರನಾಗಬೇಕಾದರೆ ಆತನಲ್ಲಿ ದೈಹಿಕ ಕ್ಷಮತೆ, ಸಾಧಿಸುತ್ತೇನೆ ಎಂಬ ಛಲ ಹಾಗೂ ಮನೋಧರ್ಮವಿದ್ದಾಗ ಯಶಸ್ಸು ಸಾಧ್ಯ. ಆಟಗಾರರಿಗೆ ವಿವಿ ಮಟ್ಟದ ಕ್ರಿಕೆಟ್ ಬರೀ ಆರಂಭ ಅಷ್ಟೇ. ಆಟಗಾರರು ನಿರಂತರ ಪರಿಶ್ರಮಪಟ್ಟು ಕೆಪಿಎಲ್, ಐಪಿಎಲ್, ರಣಜಿ ಹಾಗೂ ರಾಷ್ಟ್ರೀಯ ತಂಡದಲ್ಲಿ ಆಡುತ್ತೇನೆ ಎಂಬ ಗುರಿಯನ್ನು ಹೊಂದಿರಬೇಕು ಎಂದರು. ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲರಾದ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೋರವರು ಮಾತನಾಡಿ, ಆಟಗಾರರಲ್ಲಿ ಪರಸ್ಪರ ಸ್ಪರ್ಧೆ ಹಾಗೂ ಹೋಲಿಕೆ ಮಾಡದೆ ತನ್ನ ಸ್ವಂತ ಬಲದಿಂದ ಯಶಸ್ಸು ಗಳಿಸುವತ್ತ ಹೆಜ್ಜೆಯಿಡಬೇಕಾಗಿದೆ. ದಿನದಿಂದ ದಿನಕ್ಕೆ ತನ್ನಲ್ಲಿನ ಶಕ್ತಿಯನ್ನು ವೃದ್ಧಿಸಿಕೊಳ್ಳುವತ್ತ ಮನಸ್ಸು ಮಾಡಿ ಎಂದರು. ಕಾಲೇಜಿನ ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೋ, ಮಂಗಳೂರು ವಿಶ್ವವಿದ್ಯಾನಿಲಯದ ಸಹಾಯಕ ಕ್ರೀಡಾ ನಿರ್ದೇಶಕ ಡಾ|ಪ್ರಸನ್ನರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋರವರು ವಿಜೇತರ ಪಟ್ಟಿ ವಾಚಿಸಿದರು. ಕನ್ನಡ ಭಾಷಾ ವಿಭಾಗದ ಮುಖ್ಯಸ್ಥ ಡಾ|ವಿಜಯಕುಮಾರ್ ಮೊಳೆಯಾರ್ ಸ್ವಾಗತಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕ ಪ್ರಶಾಂತ್ ರೈ ಕಾರ್ಯಕ್ರಮ ನಿರೂಪಿಸಿದರು. ತೀರ್ಪುಗಾರರಾಗಿ ಕಿರಣ್ ಕುಮಾರ್ ಹಾಗೂ ರಾಜೇಶ್ವರ್ ಮತ್ತು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರಾಜೇಶ್ ಮೂಲ್ಯ ಹಾಗೂ ವಾಣಿಜ್ಯ ವಿಭಾಗದ ಉಪನ್ಯಾಸಕ ಧನ್ಯ ಪಿ.ಟಿರವರು ಸಹಕರಿಸಿದರು.

ಯಾರಾಗಲಿದ್ದಾರೆ ಮಂಗಳೂರು ವಿ.ವಿ ಅಂತರ್-ವಲಯ ಚಾಂಪಿಯನ್
ಮಂಗಳೂರು ವಲಯ ಹಾಗೂ ಉಡುಪಿ ವಲಯ ಹೀಗೆ ಎರಡು ವಲಯಗಳಾಗಿ ವಿಂಗಡಿಸಿದ್ದು, ಮಂಗಳೂರು ವಲಯದಿಂದ ಅಲೋಶಿಯಸ್ ಮಂಗಳೂರು ಪ್ರಥಮ ಹಾಗೂ ಎಸ್‌ಡಿಎಂ ಮಂಗಳೂರು ದ್ವಿತೀಯ ತಂಡವಾಗಿ ಮತ್ತು ಉಡುಪಿ ವಲಯದಿಂದ ಎಸ್‌ಎಂಎಸ್ ಬ್ರಹ್ಮಾವರ್ ಕಾಲೇಜು ಪ್ರಥಮ ಹಾಗೂ ಆಳ್ವಾಸ್ ಕಾಲೇಜು ಮೂಡಬಿದ್ರೆ ದ್ವಿತೀಯ ತಂಡವಾಗಿ ಮಂಗಳೂರು ವಿ.ವಿ ಅಂತರ್ ವಲಯ ಟ್ರೋಫಿಯ ಸೆಮಿಫೈನಲ್ ಪ್ರವೇಶಿಸಿದೆ. ಸೆಮಿಫೈನಲಿನಲ್ಲಿ ಅಲೋಶಿಯಸ್ ಕಾಲೇಜು ಮೂಡಬಿದ್ರೆ ಆಳ್ವಾಸ್ ಕಾಲೇಜು ತಂಡದ ವಿರುದ್ಧ ಮತ್ತು ಎಸ್‌ಡಿಎಂ ಮಂಗಳೂರು ಕಾಲೇಜು ಎಸ್‌ಎಂಎಸ್ ಬ್ರಹ್ಮಾವರ್ ಕಾಲೇಜು ತಂಡದ ವಿರುದ್ಧ ನಡೆಯಲಿದ್ದು, ಪ್ರತಿಷ್ಠಿತ ಮಂಗಳೂರು ವಿ.ವಿ ಅಂತರ್-ವಲಯ ಚಾಂಪಿಯನ್ ಪಟ್ಟವನ್ನು ಯಾರು ಅಲಂಕರಿಸುತ್ತಾರೆ ಎಂದು ಸೋಮವಾರದ ತನಕ ಕಾದು ನೋಡಬೇಕಾಗಿದೆ.

ಜ.೨೯:ಸೆಮಿಫೈನಲ್..
ಅಲೋಶಿಯಸ್ ಮಂಗಳೂರು-ಆಳ್ವಾಸ್ ಮೂಡಬಿದ್ರೆ
ಎಸ್.ಡಿ.ಎಂ ಮಂಗಳೂರು-ಎಸ್‌ಎಂಎಸ್ ಬ್ರಹ್ಮಾವರ್
ಜ.೩೦:ಫೈನಲ್…

LEAVE A REPLY

Please enter your comment!
Please enter your name here