ಸರಕಾರಿ ಆಸ್ಪತ್ರೆಯಲ್ಲಿ ಕೆಟ್ಟು ಹೋದ ಡಯಾಲಿಸಿಸ್ ಮೆಷಿನ್ – ಸಾರ್ವಜನಿಕರ ದೂರಿನ ಮೇರೆಗೆ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಆಸ್ಪತ್ರೆಗೆ ಭೇಟಿ

0

  • ನಾಳೆಯೇ ದುರಸ್ಥಿ ಮಾಡುವ ಕುರಿತು ಡಿಹೆಚ್‌ಒ ಭರವಸೆ – ಶಕುಂತಳಾ ಶೆಟ್ಟಿ

ಪುತ್ತೂರು: ಪುತ್ತೂರು ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದ 4ದಿನಗಳ ಹಿಂದೆ 3 ಡಯಾಲಿಸಿಸ್ ಮೆಷಿನ್ ಕೆಟ್ಟು ಹೋಗಿ ಅದರಲ್ಲಿ ಒಂದು ಮೆಷಿನ್ ದುರಸ್ಥಿಯಾಗಿದ್ದು ಇದೀಗ ಇನ್ನೆರಡು ಮೆಷಿನ್ ದುರಸ್ಥಿಯಾಗಬೇಕಾಗಿದ್ದರಿಂದ ಚಿಕಿತ್ಸೆಗೆ ಬರುವ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ದೂರು ವ್ಯಕ್ತವಾದ ಹಿನ್ನೆಲೆಯಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇತೃತ್ವದಲ್ಲಿ ನಿಯೋಗವೊಂದು ಪುತ್ತೂರು ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಆಡಳಿತ ವೈದ್ಯಾಧಿಕಾರಿಯನ್ನು ಮತ್ತು ಜಿಲ್ಲಾ ಆರೋಗ್ಯಾಧಿಕಾರಿಯವನ್ನು ಪೋನ್ ಮೂಲಕ ಸಂಪರ್ಕಿಸಿ ತಕ್ಷಣ ಡಯಾಲಿಸಿಸ್ ಮೆಷಿನ್ ದುರಸ್ಥಿಯಾಗಬೇಕೆಂದು ಎಚ್ಚರಿಕೆ ನೀಡಿದ ಘಟನೆ ಫೆ.೨ರಂದು ನಡೆದಿದೆ.


ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಒಟ್ಟು 5 ಡಯಾಲಿಸಿಸ್ ಮೆಷಿನ್ ಇದ್ದು, ಇವೆಲ್ಲಾ ಖಾಸಗಿ ವಲಯದ ಸಂಸ್ಥೆಯಿಂದ ಸರಕಾರದ ಪಾಲುದಾರಿಕೆಯಲ್ಲಿ ನಡೆಯುತ್ತಿದೆ. ಇದರ ಉಸ್ತುವಾರಿಯನ್ನು ಮಾತ್ರ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ನೋಡಿಕೊಳ್ಳುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ಸಿಬಂದಿಗಳು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ ೪ ದಿನಗಳ ಹಿಂದೆ ೩ ಮೆಷಿನ್ ಕೆಟ್ಟು ಹೋಗಿತ್ತು. ಈ ಪೈಕಿ ಒಂದು ದುರಸ್ಥಿಗೊಂಡಿದ್ದು, ಇದೀಗ ೨ ಡಯಾಲಿಸಿಸ್ ಮೆಷಿನ್ ದುರಸ್ಥಿಯಾಗಬೇಕಾಗಿದೆ. ಆದರೆ ಮೆಷಿನ್ ದುರಸ್ತಿಗೆ ಬರಬೇಕಾದ ತಜ್ಞರು ಬಂದು ಕೆಟ್ಟು ಹೋದ ಬಿಡಿಭಾಗಗಳ ಪರಿಶೀಲಿಸಿ ಟೆಂಡರ್ ಆದ ಬಳಿಕ ದುರಸ್ಥಿ ಕಾರ್ಯ ನಡೆಯಬೇಕಾಗಿದೆ. ಆದರೆ ಡಯಾಲಿಸಿಸ್ ಸಮಸ್ಯೆಯಿಂದ ತೊಂದರೆಗೊಳಗಾದ ರೋಗಿಗಳು ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರಿಗೆ ಸಮಸ್ಯೆಯನ್ನು ದೂರಿಕೊಂಡಿದ್ದ ಹಿನ್ನೆಲೆಯಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರು ಪುತ್ತೂರು ಸರಕಾರಿ ಸಾರ್ವಜನಿಕ ಅಸ್ಪತ್ರೆಗೆ ಭೇಟಿ ನೀಡಿದರು. ಅಲ್ಲಿ ಆಡಳಿತ ವೈದ್ಯಾಧಿಕಾರಿಯವರು ಅನ್ಯ ಕಾರ್ಯದ ನಿಮಿತ್ತ ತೆರಳಿದ್ದರಿಂದ ಅವರಿಗೆ ಪೋನ್ ಮಾಡಿ ಮಾಹಿತಿಯನ್ನು ಪಡದರು. ಟೆಂಡರ್ ಆದ ಬಳಿಕ ದುರಸ್ಥಿ ಕುರಿತು ಮಾಹಿತೆ ಲಭ್ಯವಾದ ಹಿನ್ನೆಲೆಯಲ್ಲಿ ಅಲ್ಲಿನ ತನಕ ರೋಗಿ ಏನು ಮಾಡಬೇಕೆಂದು ಪ್ರಶ್ನಿಸಿದರು. ಬಳಿಕ ಅವರು ಜಿಲ್ಲಾ ಆರೋಗ್ಯಾಧಿಕಾರಿಗೆ ಪೋನಾಯಿಸಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮೆಷಿನ್ ಕೆಟ್ಟು ಹೋಗಿದ್ದರೆ ತಕ್ಷಣ ದುರಸ್ಥಿ ಮಾಡಬೇಕು. ಅದಕ್ಕಾಗಿ ಕೊಟೇಷನ್‌ಗಾಗಿ ಕಾದು ಕೂತರೆ ಸರಕಾರಿ ಆಸ್ಪತ್ರೆಗೆ. ಬರುವ ಬಡವರ ಗತಿ ಏನು. ಮುಂದೆ ಐದು ಮೆಷಿನ್ ಕೆಟ್ಟು ಹೋದರೆ ಏನು ಮಾಡುತ್ತೀರಿ. ನಾಳೆಗೆ ಎಲ್ಲಾ ರೋಗಿಗಳಿಗೆ ವ್ಯವಸ್ಥೆ ಆಗುವಂತೆ ಆಗಬೇಕೆಂದರು. ಬಳಿಕ ಅವರು ಡಯಾಲಿಸಿಸ್ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಡಯಾಲಿಸಿಸ್ ಘಟಕದ ಉಸ್ತುವಾರಿ ಸಿಬ್ಬಂದಿಗಳೊಂದಿಗೆ ಮಾತನಾಡಿ ಸಮಸ್ಯೆಗಳ ಕುರಿತು ಮಾಹಿತಿ ಪಡೆದು ಕೊಂಡರು. ಇದೇ ವೇಳೆ ಡಿಹೆಚ್‌ಒ ಅವರು ನಾಳೆಯೇ ದುರಸ್ಥಿ ಮಾಡಿಸುವ ಕುರಿತು ಭರವಸೆ ನೀಡಿರುವುದಾಗಿ ಶಕುಂತಳಾ ಶೆಟ್ಟಿ ತಿಳಿಸಿದ್ದಾರೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್.ಮಹಮ್ಮದ್ ಆಲಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮಳರಾಮಚಂದ್ರ, ಉಪಾಧ್ಯಕ್ಷ ಮೌರೀಸ್ ಮಸ್ಕರೇನಸ್, ಕಾರ್ಯದರ್ಶಿ ರೋಶನ್ ರೈ ಬನ್ನೂರು, ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿರುವ ಎಪಿಎಂಸಿ ಸದಸ್ಯ ಅಬ್ದುಲ್ ಶಕೂರ್ ಹಾಜಿ, ಎಸ್ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ್, ಎಸ್ಸಿ ಘಟಕದ ಅಧ್ಯಕ್ಷ ಕೇಶವ ಪಡೀಲ್, ಕಾರ್ಮಿಕ ಘಟಕದ ಅಧ್ಯಕ್ಷ ಶರೂನ್ ಸಿಕ್ವೇರಾ ಸೇರಿದಂತೆ ಹಲವಾರು ಮಂದಿ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

ನಾಳೆಯೇ ದುರಸ್ಥಿ ಮಾಡುತ್ತಾರೆಂದು ಡಿಹೆಚ್‌ಒ ಭರವಸೆ ಕೊಟ್ಟಿದ್ದಾರೆ
ಡಯಾಲಿಸಿಸ್ ಕೆಟ್ಟು ಹೋಗಿರುವ ವಿಚಾರಕ್ಕೆ ಸಂಬಂಧಿಸಿ ರೋಗಿಗಳು ನನಗೆ ಕರೆ ಮಾಡಿದ್ದರು. ಈ ನಿಟ್ಟಿನಲ್ಲಿ ನಾನು ಆಸ್ಪತ್ರೆಗೆ ಭೇಟಿ ನೀಡಿ ವಿಚಾರಿಸಿದ್ದೇನೆ. ರೋಗಿ ಒಂದಲ್ಲದಿದ್ದರೆ ಇನ್ನೊಂದು ಅಸ್ಪತ್ರೆಗೆ ಹೋಗುತ್ತೇನೆಂದು ಡಯಾಲಿಸಿಸ್ ಮೆಷಿನ್ ಕೆಟ್ಟು ಹೋದಾಗ ರೋಗಿಗೆ ಬೇರೊಂದು ಕಡೆಗೆ ಹೋಗಿ ಡಯಾಲಿಸಿಸ್ ಮಾಡಿಸುವುದು ಸುಲಭವಲ್ಲ. ಅದಕ್ಕೆ ಚಿಕಿತ್ಸಾ ಪರೀಕ್ಷೆ ನಡೆಯಬೇಕು. ಈ ನಿಟ್ಟಿನಲ್ಲಿ ಕೆಟ್ಟು ಹೋದ ಡಯಾಲಿಸಿಸ್ ಮೆಷಿನ್ ಅನ್ನು ತಕ್ಷಣ ದುರಸ್ಥಿ ಮಾಡುವಂತೆ ಜಿಲ್ಲಾ ಆರೋಗ್ಯಾಧಿಕಾರಿಗೆ ತಿಳಿಸಿದ್ದೇನೆ. ಅವರು ನಾಳೆಯೇ ದುರಸ್ಥಿ ಮಾಡುವ ಕುರಿತು ಭರವಸೆ ನೀಡಿದ್ದಾರೆ. ಆಸ್ಪತ್ರೆಯಲ್ಲಿ ರೋಗಿಗೆ ಸರಿಯಾದ ಸೌಲಭ್ಯ ಸಿಗಬೇಕೆಂದು ಜನರ ಪರವಾಗಿ ನಾವು ಮಾತನಾಡಬೇಕಾಗಿ ಬಂದಿದೆ- ಶಕುಂತಳಾ ಶೆಟ್ಟಿ, ಮಾಜಿ ಶಾಸಕರು ಪುತ್ತೂರು

LEAVE A REPLY

Please enter your comment!
Please enter your name here