ರೈಲ್ವೇ ಅಂಡರ್‌ಪಾಸ್ ನಿರ್ಮಾಣ – ಸಂಸದರ ಗಮನಕ್ಕೆ ತಂದು ಸ್ಥಳ ಫೈನಲ್

0

  • ರೈಲ್ವೇ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲಿಸಿ ಶಾಸಕ ಮಠಂದೂರು ಹೇಳಿಕೆ

ಪುತ್ತೂರು:ಎಪಿಎಂಸಿ ರಸ್ತೆಯಲ್ಲಿನ ರೈಲ್ವೇ ಅಂಡರ್‌ಪಾಸ್ ನಿರ್ಮಾಣಕ್ಕೆ ಸಂಬಂಧಿಸಿ ರೈಲ್ವೇ ಅಧಿಕಾರಿಗಳ ಈಗಿನ ಅಂದಾಜುಪಟ್ಟಿಯಂತೆ ರಸ್ತೆಯು ಸುಮಾರು 400 ಮೀಟರ್ ಸುತ್ತು ಬಳಸಿ ಬರಬೇಕಾಗುತ್ತದೆ. ನೇರವಾಗಿ ಅಂಡರ್‌ಪಾಸ್ ನಿರ್ಮಾಣವಾಗಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯ. ಹೀಗಾಗಿ ಸಂಸದರ ಗಮನಕ್ಕೆ ತಂದು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಎಪಿಎಂಸಿ ರಸ್ತೆಯ ರೈಲೇ ಅಂಡರ್‌ಪಾಸ್ ಕುರಿತು ವಿಸ್ತೃತವಾಗಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವ ನಿಟ್ಟಿನಲ್ಲಿ ಫೆ.11ರಂದು ಸಂಜೆ ರೈಲ್ವೇ ಅಽಕಾರಿಗಳೊಂದಿಗೆ ಭೇಟಿ ನೀಡಿ, ಯೋಜನೆಯ ವಿಸ್ತೃತ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದುಕೊಂಡ ಶಾಸಕರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.ಎಪಿಎಂಸಿ ರಸ್ತೆಯಲ್ಲಿ ರೈಲ್ವೇ ಅಂಡರ್ ಪಾಸ್ ನಿರ್ಮಾಣವಾಗಬೇಕು ಎಂಬ ಸಾರ್ವಜನಿಕರ ಬೇಡಿಕೆಯಂತೆ ಸಂಸದ, ಶಾಸಕರು, ಎಪಿಎಂಸಿ ಅಧ್ಯಕ್ಷರು ರೈಲ್ವೇ ಸಚಿವರ ಮೂಲಕ ಚರ್ಚಿಸಿ ಸುಮಾರು ರೂ.11.90ಕೋಟಿ ವೆಚ್ಚದ ಅಂದಾಜುಪಟ್ಟಿ ತಯಾರಿಸಲಾಗಿದ್ದು ಟೆಂಡರ್ ಹಂತದಲ್ಲಿದೆ. ಅಂಡರ್ ಪಾಸ್ ನಿರ್ಮಾಣಕ್ಕೆ ಸಂಬಂಧಿಸಿ ರೈಲ್ವೇ ಅಧಿಕಾರಿಗಳು ಮಣ್ಣು ಪರೀಕ್ಷೆ ಮಾಡಿ ಅಲ್ಲಿನ ನಗರ ಸಭಾ ಸಂಪರ್ಕ ರಸ್ತೆಗಳನ್ನು ಪರಿಶೀಲಿಸಿದ್ದಾರೆ. ಇಲ್ಲಿ ಮಣ್ಣಿನ ಗುಣ, ಮೂರು ಸಂಪರ್ಕ ರಸ್ತೆ ನಿರ್ಮಾಣ ಹಾಗೂ ಮಳೆಗಾಲದಲ್ಲಿ ನೀರು ನಿಂತು ಸಮಸ್ಯೆ ಆಗದಂತೆ ಅಂಡರ್‌ಪಾಸ್ ನಿರ್ಮಿಸುವುದು ರೈಲ್ವೇ ಅಽಕಾರಿಗಳ ಅಭಿಪ್ರಾಯವಾಗಿದೆ. ಈಗಿರುವ ರಸ್ತೆಯನ್ನು ಇನ್ನೂರು ಮೀಟರ್ ಮುಂದಕ್ಕೆ ಹೋಗಿ ಅಲ್ಲಿ ರೈಲ್ವೇ ಮೇಲ್ಸೇತುವ ಹಾಗೂ 4 ಪಥದ ರಸ್ತೆ ನಿರ್ಮಿಸುವ ಕುರಿತು ಅಂದಾಜು ಪಟ್ಟಿ ತಯಾರಿಸಿದ್ದಾರೆ. ಈ ರೀತಿಯಾದಲ್ಲಿ ವಾಹನ ಸವಾರರು ನೇರವಾಗಿ ಸಂಚರಿಸುವ ಬದಲು 400 ಮೀಟರ್ ಸುತ್ತು ಬಳಸಿ ಹೋಗಬೇಕಾಗುತ್ತದೆ. ನೇರವಾಗಿ ಈಗಿರುವ ಮಾದರಿಯಲ್ಲಿಯೇ ಮೇಲ್ಸೇತುವೆ ನಿರ್ಮಾಣವಾಗಬೇಕು ಎಂಬುದು ಸಾರ್ವಜನಿಕರ ಬೇಡಿಕೆಯಾಗಿದೆ. ಈಗಿನ ಅಂದಾಜುಪಟ್ಟಿಯಂತೆ ಕಾಮಗಾರಿ ನಡೆಯುವುದಾದರೆ 10 ದಿನದಲ್ಲಿ ಪ್ರಾರಂಭವಾಗಲಿದೆ ಎಂದು ಹೇಳಿದ ಶಾಸಕ ಮಠಂದೂರು, ಒಟ್ಟಿನಲ್ಲಿ ರೈಲ್ವೇ ಅಂಡರ್‌ಪಾಸ್ ಶಾಶ್ವತವಾಗಿ, ಜನೋಪಯೋಗಿಯಾಗಿ ಹಾಗೂ ಮಳೆಗಾಲದಲ್ಲಿ ಸಮಸ್ಯೆ ಆಗದ ರೀತಿಯಲ್ಲಿ ನಿರ್ಮಿಸಲಾಗುವುದು. ಜನರಿಗೆ ಅನುಕೂಲವಾಗುವ ರೀತಿಯಲ್ಲಿ ತಾಂತ್ರಿಕ ತೊಂದರೆಗಳನ್ನು ಸಂಸದ ಗಮನಕ್ಕೆ ತಂದು ಪರಿಹರಿಸಿಕೊಂಡು ರೈಲ್ವೇ ಅಂಡರ್‌ಪಾಸ್ ನಿರ್ಮಿಸಲಾಗುವುದು ಎಂದು ಹೇಳಿದರು.

ಇಲ್ಲಿನ ಮಣ್ಣು ಮೃದುವಾಗಿದೆ.ಜೊತೆಗೆ ಅಲ್ಲಿ ಮೂರು ಸಂಪರ್ಕ ರಸ್ತೆಗಳಿವೆ.ಅಲ್ಲದೆ ಮಳೆಗಾಲದಲ್ಲಿ ನೀರು ನಿಂತು ಸಮಸ್ಯೆ ಉಂಟಾಗಬಹುದು.ಈ ಎಲ್ಲಾ ದೃಷ್ಠಿಯಲ್ಲಿ ನೇರವಾಗಿ ಮೇಲ್ಸೇತುವೆ ನಿರ್ಮಿಸುವ ಬದಲು ಹೆಬ್ಬಾರಬೈಲಿನಲ್ಲಿ ನಿರ್ಮಿಸಲಾಗುವುದು.ರಾಷ್ಟ್ರೀಯ ಹೆದ್ದಾರಿ ಮಾದರಿಯಲ್ಲಿ ರಸ್ತೆಯ ತಳಭಾಗದಿಂದ 5.5 ಮೀಟರ್ ಎತ್ತರದಲ್ಲಿ ರೈಲ್ವೇ ಸೇತುವೆ ನಿರ್ಮಾಣವಾಗಲಿದೆ ಎಂದು ಮೈಸೂರು ವಿಭಾಗದ ರೈಲ್ವೇ ಹಿರಿಯ ಇಂಜಿನಿಯರ್ ರವಿಚಂದ್ರ ಮಾಹಿತಿ ನೀಡಿದರು. ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ಉಪಾಧ್ಯಕ್ಷ ಮಂಜುನಾಥ ಎನ್.ಎಸ್., ನಗರ ಸಭಾ ಅಧ್ಯಕ್ಷ ಜೀವಂಧರ್ ಜೈನ್, ಪೌರಾಯುಕ್ತ ಮಧು ಎಸ್.ಮನೋಹರ್, ಪ್ರೊಬೆಷನರಿ ಪೌರಾಯುಕ್ತ ಅಕ್ರಂ ಷಾ, ರೈಲ್ವೇ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ನೇರವಾಗಿ ನಡೆದರೆ ವಿಳಂಬ
ಈಗಿನ ಅಂದಾಜುಪಟ್ಟಿಯಂತೆ ಅಂಡರ್‌ಪಾಸ್ ನಿರ್ಮಾಣವಾದರೆ ಕಾಮಗಾರಿಯು ಆರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ.ಇದರ ಹೊರತಾಗಿ ಈಗಿರುವ ರಸ್ತೆಯಲ್ಲಿ ನೇರವಾಗಿ ಅಂಡರ್‌ಪಾಸ್ ನಿರ್ಮಾಣ ಮಾಡುವುದಾದರೆ ಹೊಸದಾಗಿ ಅಂದಾಜುಪಟ್ಟಿ ತಯಾರಿಸಬೇಕಾಗುತ್ತದೆ.ಹೀಗಾಗಿ ಕಾಮಗಾರಿ ಮತ್ತೆ ವಿಳಂಬವಾಗಲಿದೆ.ಅಲ್ಲದೆ ಅಲ್ಲಿ ರೈಲ್ವೇ ಕ್ರಾಸಿಂಗ್‌ಗಳಿದ್ದು, ಚತುಷ್ಪಥ ರಸ್ತೆಯ ಬದಲು ದ್ವಿಮುಖ ಅಂಡರ್‌ಪಾಸ್ ರಸ್ತೆ ಮಾತ್ರ ನಿರ್ಮಾಣವಾಗಲಿದೆ ಎಂದು ರೈಲ್ವೇ ಅಽಕಾರಿಗಳು ಮಾಹಿತಿ ನೀಡಿದರು.

400 ಮೀಟರ್ ಸುತ್ತು…!
ಅಂಡರ್‌ಪಾಸ್ ಕುರಿತ ರೈಲ್ವೇ ಇಲಾಖೆಯ ಈಗಿನ ಅಂದಾಜುಪಟ್ಟಿಯಂತೆ, ರೈಲ್ವೇ ಟ್ರಾಕ್ ಬಳಿಯ ಹೆಬ್ಬಾರಬೈಲು ಕ್ರಾಸ್ ಮೂಲಕ ನೇರವಾಗಿ ಸುಮಾರು ೨೦೦ ಮೀಟರ್ ಮುಂದೆ ಹೋಗಿ ಅಲ್ಲಿ ಮೇಲ್ಸೇತುವ ನಿರ್ಮಾಣವಾಗಲಿದೆ.ಸೇತುವೆ ಬಳಿಯಿಂದ ಸೂತ್ರಬೆಟ್ಟು ಕ್ರಾಸ್ ಬಳಿ ಹೊಸ ರಸ್ತೆ ಸಂಪರ್ಕಗೊಳ್ಳಲಿದೆ.ಅಲ್ಲಿ ೪ ಪಥದ ರಸ್ತೆ ನಿರ್ಮಾಣವಾಗಲಿದೆ. ಈ ಯೋಜನೆಯಂತೆ ಅಂಡರ್‌ಪಾಸ್ ನಿರ್ಮಾಣವಾದರೆ ವಾಹನ ಸವಾರರಿಗೆ ೪೦೦ ಮೀಟರ್ ಸುತ್ತು ಬಳಸಿ ಹೋಗಬೇಕಾಗುತ್ತದೆ.

LEAVE A REPLY

Please enter your comment!
Please enter your name here