ನಗರ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ | ಬಿಜೆಪಿ , ಎಸ್‌ಡಿಪಿಐ ಒಳ ಒಪ್ಪಂದ ಮಾಡಿ ಜಿಲ್ಲೆಯ ಸೌಹಾರ್ದತೆಗೆ ಬೆಂಕಿ ಇಟ್ಟಿದೆ: ಯು.ಟಿ. ಖಾದರ್

0

  • ಪ್ರತಿಯೊಂದು ಇಲಾಖೆಯಲ್ಲೂ ಭ್ರಷ್ಟಾಚಾರ ಮಿತಿ ಮೀರಿದೆ: ಸೊರಕೆ

ಪುತ್ತೂರು; ಬಿಜೆಪಿ ಮತ್ತು ಎಸ್‌ಡಿಪಿಐ ಎರಡೂ ಕೋಮುವಾದಿ ಪಕ್ಷಗಳು, ಇಬ್ಬರ ಅಜೆಂಡಾ ಒಂದೇ ಆಗಿದ್ದು ಶಾಂತಿ ಮತ್ತು ಸೌಹಾರ್ದತೆಯನ್ನು ಕೆಡಿಸಿ ಅದರಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವವರಾಗಿದ್ದಾರೆ. ರಾಜ್ಯದ ಸೌಹಾರ್ದತೆಗೆ ಎರಡೂ ಪಕ್ಷಗಳು ಜಂಟಿಯಾಗಿ ಬೆಂಕಿ ಇಟ್ಟಿದೆ ಎಂದು ಮಾಜಿ ಸಚಿವರಾದ ಮಂಗಳೂರು ಶಾಸಕ ಯು ಟಿ ಖಾದರ್ ಆರೋಪಿಸಿದರು.

ಅವರು ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯ ಮೇಲ್ಛಾವಣಿಯ ಸಭಾಂಗಣದಲ್ಲಿ ನಡೆದ ಪುತ್ತೂರು ನಗರ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.

ಉಡುಪಿಯಲ್ಲಿ ಸೃಷ್ಟಿಯಾದ ವಿವಾದವನ್ನು ಸರಕಾರಕ್ಕೆ ಅಲ್ಲೇ ಬಗೆಹರಿಸಬಹುದಿತ್ತು, ಆ ಕೆಲಸವನ್ನು ಸರಕಾರ ಮಾಡಲಿಲ್ಲ. ಕುಂದಾಪುರದಲ್ಲಿ ನಡೆದ ಘಟನೆಯೇ ಬೇರೆ, ಉಡುಪಿಯಲ್ಲಿ ನಡೆದ ಘಟನೆಯೇ ಬೇರೆಯಾಗಿದೆ. ಸರಕಾರ ಈ ವಿಚಾರವನ್ನು ನ್ಯಾಯಾಲಯದ ಮುಂದೆ ಕೊಂಡೊಯ್ದಿದೆ, ಎಲ್ಲವನ್ನೂ ನ್ಯಾಯಾಲಯ ತೀರ್ಮಾನ ಮಾಡುವುದೇ ಆದರೆ ಸರಕಾರ ಯಾಕೆ ಎಂದು ಪ್ರಶ್ನಿಸಿದ ಖಾದರ್ ಅವರು, ಕೋವಿಡ್ ಲಸಿಕೆ ನೀಡಲು ನ್ಯಾಯಾಲಯ ಬೇಕಾಯಿತು, ಇತರೆ ಯಾವುದೇ ಯೋಜನೆ ಅನುಷ್ಠಾನಕ್ಕೆ ಅಥವಾ ಕಾರ್ಯರೂಪಕ್ಕೆ ತರಲು ನ್ಯಾಯಾಲಯವೇ ಬೇಕಾಗಿದೆ, ಸರಕಾರ ಮನಸ್ಸು ಮಾಡಿದರೆ ಕ್ಷಣ ಮಾತ್ರದಲ್ಲಿ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದಿತ್ತು. ಜಿಲ್ಲೆ, ರಾಜ್ಯದಲ್ಲಿ ಸೌರ್ಹಾರ್ದತೆ ಹಾಳುಮಾಡಬೇಕು ಎಂಬ ಅಜೆಂಡಾವನ್ನೇ ಮುಂದಿಟ್ಟು ಬಿಜೆಪಿ ಮತ್ತು ಎಸ್‌ಡಿಪಿಐ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಪ್ರತಿಯೊಂದು ಇಲಾಖೆಯಲ್ಲೂ ಭ್ರಷ್ಟಾಚಾರ ಮಿತಿ ಮೀರಿದೆ: ಸೊರಕೆ: ನಾಲ್ಕು ವರ್ಷದಲ್ಲಿ ಬಿಜೆಪಿ ಏನೂ ಅಭಿವೃದ್ದಿ ಕೆಲಸವನ್ನು ಮಾಡಿಲ್ಲ, ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟು ಜನರ ದಾರಿತಪ್ಪಿಸುವ ಕೆಲಸ ಮಾಡುತ್ತಿದೆ. ಬುದ್ದಿವಂತರ ಜಿಲ್ಲೆಯಲ್ಲಿ ಶಿಕ್ಷಣಕ್ಕೆ ಬೆಂಕಿ ಇಡುವ ಕೆಲಸ ಮಾಡುತ್ತಿದೆ. ಪ್ರತಿಯೊಂದು ಇಲಾಖೆಯಲ್ಲೂ ಭ್ರಷ್ಟಾಚಾರ ಮಿತಿಮೀರಿದೆ, ದಲ್ಲಾಳಿ ಇಲ್ಲದೆ ಕೆಲಸ ಆಗುವುದಿಲ್ಲ, ಶಾಸಕರುಗಳಿಗೆ ಮಾಮೂಲಿ ಕೊಡಬೇಕು, ಇಲ್ಲದೇ ಇದ್ದರೆ ವರ್ಗಾವಣೆ ಮಾಡುತ್ತಿದ್ದಾರೆ. ಜನ ಸಂಕಷ್ಟದಲ್ಲಿದ್ದಾರೆ, ಬಿಜೆಪಿಯವರು ಜನರ ನಡುವೆ ಧರ್ಮದ ಹೆಸರಲ್ಲಿ ಬೆಂಕಿ ಕೊಡುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು. ಮುಂದಿನ ಬಾರಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಬಿಜೆಪಿ ಜನರಿಗೆ ಬೇಡವಾಗಿದೆ, ಒಮ್ಮೆ ಹೋದರೆ ಸಾಕಿತ್ತು ಎನ್ನುವ ಭಾವನೆ ಜನರಲ್ಲಿ ವ್ಯಕ್ತವಾಗಿದೆ ಎಂದು ಹೇಳಿದ ಅವರು ಪುತ್ತೂರು ನಗರಸಭೆ, ಪುತ್ತೂರಿನ ಬೈಪಾಸ್ ರಸ್ತೆ, ಎಪಿಎಂಸಿ ರಸ್ತೆಯನ್ನು ಮಾಡಿದ್ದು ಕಾಂಗ್ರೆಸ್, ಕಾಂಗ್ರೆಸ್ ಅವಧಿಯಲ್ಲಿ ಬಿಡುಗಡೆಯಾದ ಅನುದಾನದ ಕಾಮಗಾರಿಗಳು ಈಗಲೂ ನಡೆಯುತ್ತಿದೆ ಎಂದು ಹೇಳಿದರು. ಕೋವಿಡ್ ಸಮಯದಲ್ಲಿ ಜನರು ಕಷ್ಟದಲ್ಲಿರುವಾಗ ಅವರ ಅಂಗಡಿ, ಮನೆಯನ್ನು ಜೆಸಿಬಿ ಮುಲಕ ಒಡೆದು ಹಾಕಿದ್ದೇ ಬಿಜೆಪಿ ಸಾಧನೆಯಾಗಿದೆ. ಕಾಂಗ್ರೆಸ್ ಜನರ ನೋವಿಗೆ ಸ್ಪಂದಿಸುವ ಪಕ್ಷವಾಗಿದೆ ಎಲ್ಲರೂ ತಳಮಟ್ಟದಿಂದ ಪಕ್ಷವನ್ನು ಕಟ್ಟುವ ಕೆಲಸವಾಗಲಿ ಎಂದು ಹೇಳಿದರು.

ಮುಂದಿನ ಚುನಾವಣೆಗೆ ಸಿದ್ಧರಾಗಿ: ಕೆ. ಹರೀಶ್‌ಕುಮಾರ್: ಮುಂಬರುವ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲ್ಲಬೇಕು, ಬೂತ್‌ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರನ್ನು ಈಗಿಂದೀಗಲೇ ಪ್ರಚಾರಕ್ಕೆ ಸಿದ್ಧಪಡಿಸಬೇಕು. ರಾಜ್ಯ ಸರಕಾರದ ವೈಫಲ್ಯಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಕೆಲಸವನ್ನು ಮಾಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ. ಹರೀಶ್‌ಕುಮಾರ್ ಹೇಳಿದರು.

ಕಳೆದ ನಾಲ್ಕು ವರ್ಷಗಳಿಂದ ರಾಜ್ಯದಲ್ಲಿ ಬಡವರಿಗೆ ಒಂದೇ ಒಂದು ಮನೆಯನ್ನು ನೀಡಿಲ್ಲ, ರೇಶನ್ ಕಾರ್ಡು ನೀಡುವಲ್ಲಿ ವಿಫಲ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಸರಕಾರ ವಿಫಲವಾಗಿದೆ. ಈ ವೈಫಲ್ಯಗಳನ್ನು ಮುಚ್ಚಿ ಹಾಕಲು ಕೋಮುವಿಷ ಬೀಜವನ್ನು ಬಿತ್ತುವ ಕೆಲಸವನ್ನು ಮಾಡುತ್ತಿದೆ. ಕಾಂಗ್ರೆಸ್ ದೇಶಕ್ಕೆ ಸ್ವಾತಂತ್ರ್ಯ ಕೊಟ್ಟ ಪಕ್ಷವಾಗಿದೆ. ದೇಶದಲ್ಲಿ ಸುಭದ್ರ ಆಡಳಿತ ನೀಡಲು ಕಾಂಗ್ರೆಸ್‌ಗೆ ಮಾತ್ರ ಸಾಧ್ಯ ಎಂಬುದು ಕಳೆದ ಏಳು ವರ್ಷಗಳಿಂದ ಜನರಿಗೆ ಗೊತ್ತಾಗಿದೆ. ಕಾಂಗ್ರೆಸ್ ಇದ್ದರೆ ಮಾತ್ರ ಪ್ರತಿಯೊಂದು ಸಮುದಾಯ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಲಿದೆ ಎಂಬುದು ಗೊತ್ತಾಗಿದೆ.ಬಿಜೆಪಿ ಸಹವಾಸ ಸಾಕು ಎನ್ನುವಷ್ಟರ ಮಟ್ಟಿಗೆ ಜನತೆಗೆ ರೋಸಿ ಹೋಗಿದೆ. ಬೆಲೆ ಏರಿಕೆ, ದೊಂಬಿ, ಗಲಾಟೆಗಳಿಂದ ಜನ ನಿತ್ರಾಣಗೊಂಡಿದ್ದಾರೆ ಎಂದು ಹೇಳಿದರು.

ಪಕ್ಷಕ್ಕೆ ಕಾರ್ಯಕರ್ತರನ್ನು ಕರೆ ತನ್ನಿ; ಭಂಡಾರಿ: ಕಾಂಗ್ರೆಸ್ ಪಕ್ಷಕ್ಕೆ ಹೊಸ ಕಾರ್ಯಕರ್ತರನ್ನು ಕರೆ ತಂದು ಪಕ್ಷವನ್ನು ಬೆಳೆಸಬೇಕು. ಪ್ರತೀ ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರಿಸುವ ಕೆಲಸವನ್ನು ಮಾಡುತ್ತಲೇ ಇರಬೇಕು ಆಗ ಮಾತ್ರ ಪಕ್ಷ ಬೆಳೆಯುತ್ತದೆ ಎಂದು ವಿಧಾನಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಹೇಳಿದರು.

ಪಕ್ಷಕ್ಕೆ ಸೇವೆ ಸಲ್ಲಿಸಿದ ಹಿರಿಯರನ್ನು ಗೌರವಿಸುವ ಕೆಲಸ ಪಕ್ಷದಿಂದ ನಡೆಯಬೇಕು. ಬೇರೆ ಪಕ್ಷದ ಕಾರ್ಯಕರ್ತರನ್ನು ಪಕ್ಷಕ್ಕೆ ಸ್ವಾಗತಿಸಿಕೊಳ್ಳಿ, ಯುವಕರು, ವಿದ್ಯಾರ್ಥಿಗಳು, ಯುವತಿಯರನ್ನು ಪಕ್ಷಕ್ಕೆ ಸ್ವಾಗತಿಸಿಕೊಳ್ಳಿ ಎಂದು ಕಾರ್ಯಕರ್ತರಿಗೆ ಅವರು ಸಲಹೆ ನೀಡಿದರು.

ಎರಡನೇ ಮಟ್ಟದ ನಾಯಕರನ್ನು ಬೆಳೆಸಬೇಕು: ಟಿ ಪಿ ರಮೇಶ್: ಪಕ್ಷದಲ್ಲಿ ಎರಡನೇ ಮಟ್ಟದ ನಾಯಕರನ್ನು ಬೆಳೆಸುವ ಅಗತ್ಯವಿದೆ. ಮುಂದಿನ ಚುನಾವಣೆಯಲ್ಲಿ ಪಕ್ಷ ಇನ್ನಷ್ಟು ಗಟ್ಟಿಗೊಳ್ಳಬೇಕಿದೆ. ಬಿಜೆಪಿಯಿಂದ ಜನ ಅಂತರ ಕಾಯ್ದುಕೊಳ್ಳುವ ಕಾಲ ಬಂದಿದೆ, ಬಿಜೆಪಿ ಕೋಮುವಾದಿ ಪಕ್ಷವಾಗಿದೆ. ಜನರ ನಡುವೆ ಕಲಹವನ್ನು ಸೃಷ್ಟಿಸಿ ಅದರಿಂದ ರಾಜಕೀಯ ಲಾಭ ಪಡೆಯವುದೇ ಬಿಜೆಪಿ ಉದ್ದೇಶವಾಗಿದೆ. ಪ್ರತೀ ಚುನಾವಣೆಯ ವೇಳೆ ಭಾವನಾತ್ಮ ವಿಚಾರಗಳನ್ನು ಮುಂದಿಟ್ಟು ಧರ್ಮ ಧರ್ಮಗಳ ನಡುವೆ ಗಲಭೆಯನ್ನು ಸೃಷ್ಟಿಸಿ ಆಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದೆ. ಅಭಿವೃದ್ಧಿ ಮಾಡಲು ಬಿಜೆಪಿಗೆ ಗೊತ್ತಿಲ್ಲ, ಕೋಮುಗಲಭೆ ಮಾಡಿದರೆ ಸಾಕು ನಾವು ಗೆಲ್ಲುತ್ತೇವೆ ಎಂಬ ನಂಬಿಕೆ ಬಿಜೆಪಿಗಿದೆ. ಜನ ಕೋಮುವಾದವನ್ನು ಸೋಲಿಸುವ ಕಾಲ ಬಂದಿದೆ ಎಂದು ಪುತ್ತೂರು ಬ್ಲಾಕ್ ಉಸ್ತುವಾರಿ ಟಿ ಪಿ ರಮೇಶ್ ಕೊಡಗುರವರು ಹೇಳಿದರು.

ಒಂದೇ ತಾಯಿಯ ಮಕ್ಕಳಂತೆ ಬಾಳೋಣ; ಶಕುಂತಳಾ ಶೆಟ್ಟಿ: ನಾವೆಲ್ಲರೂ ಒಂದೇ ತಾಯಿಯ ಮಕ್ಕಳಂತೆ ಬಾಳೋಣ, ನಮ್ಮ ನಡುವೆ ಬೆಂಕಿ ಇಡುವವರು ಬಂದರೆ ನಾವು ಶಾಂತಿಯಿಂದ, ಸೌಹಾರ್ದತೆಯಿಂದ ಅದನ್ನು ನಂದಿಸೋಣ ಎಂದು ಪುತ್ತೂರಿನ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು. ಕಾರ್ಯಕರ್ತರಾಗಿ ಕೆಲಸ ಮಾಡಿದರೆ ಮುಂದೆ ತನ್ನಿಂತಾನೆ ನಾಯಕರಾಗಿ ರೂಪುಗೊಳ್ಳುತ್ತಾರೆ, ಯುವಕರನ್ನು ಪಕ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಿಕೊಳ್ಳಬೇಕು. ಯುವಕರು ಮಸನ್ಸು ಮಾಡಿದರೆ ಏನೂ ಮಾಡಬಹುದು ಎಂಬುದಕ್ಕೆ ಇವತ್ತಿನ ಜನಸ್ತೋಮವೇ ಸಾಕ್ಷಿಯಾಗಿದೆ ಎಂದು ಹೇಳಿದ ಅವರು ಬೆಂಕಿ ಇಡುವವರ ಮುಂದೆ ನಾವು ಬೆಂಕಿ ಆರಿಸುವ ಕೆಲಸವನ್ನು ಮಾಡಿ ಉತ್ತಮ ಸಮಾಜ ನಿರ್ಮಾಣದ ಕಡೆ ಕೆಲಸ ಮಾಡಬೇಕು. ಇಲ್ಲಿರುವ ಪ್ರತಿಯೊಬ್ಬರೂ ನೆಮ್ಮದಿಯ ಜೀವನ ನಡೆಸಲು ನಾವು ಕಾರಣಕರ್ತರಾಗೋಣ ಎಂದು ಹೇಳಿದರು.

ಕಾಂಗ್ರೆಸ್ ಅವಧಿಯಲ್ಲಿ ೧೫೦೦ ಕೋಟಿ ಅನುದಾನ-ಬಡಗನ್ನೂರು: ಶಕುಂತಳಾ ಶೆಟ್ಟಿಯವರು ಶಾಸಕಿಯಾಗಿದ್ದ ವೇಳೆ ಪುತ್ತೂರಿಗೆ ೧೫೦೦ ಕೋಟಿ ಅನುದಾನ ಬಂದಿದೆ, ಆ ಕಾಮಗಾರಿ ಈಗಲೂ ನಡೆಯುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಮ್ಮದ್ ಬಡಗನ್ನೂರು ಹೇಳಿದರು. ಪುತ್ತೂರು ಕ್ಷೇತ್ರಕ್ಕೆ ಮಾಜಿ ಶಾಸಕ ವಿನಯಕುಮಾರ್ ಸೊರಕೆ ಕೊಡುಗೆ ಅಪಾರವಾಗಿದೆ, ಏನೂ ಇಲ್ಲದೇ ಇದ್ದ ಪುತ್ತೂರಿಗೆ ಅಂದಿನ ಕಾಲದಲ್ಲಿ ಎಲ್ಲವನ್ನೂ ಕೊಡಿಸಿದವರು ಸೊರಕೆಯವರಾಗಿದ್ದರು. ಆ ಬಳಿಕ ಶಕುಂತಳಾ ಶೆಟ್ಟಿ ಅವಧಿಯಲ್ಲಿ ಸಾಕಷ್ಟು ಕೆಲಸಗಳು ನಡೆದಿದೆ. ಕೇವಲ ಆಶ್ವಾಸನೆ ಮಾತ್ರ ಕಾಂಗ್ರೆಸ್ ಕೊಟ್ಟಿಲ್ಲ, ಕೆಲಸ ಮಾಡಿ ತೋರಿಸಿದೆ. ಕಾಂಗ್ರೆಸ್ ಪಕ್ಷಕ್ಕೆ ಕಾರ್ಯಕರ್ತರ ಕೊರತೆಯಿಲ್ಲ ಎಲ್ಲರೂ ಒಟ್ಟಾಗಿ ಕೆಲಸ ಮಾಡಿದರೆ ನಮ್ಮನ್ನು ಅಲುಗಾಡಿಸಲು ಯಾರಿಗೂ ಸಾಧ್ಯವಿಲ್ಲ ಎಂದು ಹೇಳಿದರು.

ಬ್ಲಾಕ್ ಗಮನಕ್ಕೆ ತಾರದೆ ಅಧಿಕಾರ, ಹುದ್ದೆ ನೀಡಬೇಡಿ: ಎಂ.ಬಿ. ವಿಶ್ವನಾಥ್ ರೈ: ಪಕ್ಷದಲ್ಲಿ ಯಾರನ್ನೇ ಆಗಲಿ ಪದಾಧಿಕಾರಿಗಳನ್ನಾಗಿ ನೇಮಿಸುವಾಗ ಅದನ್ನು ಬ್ಲಾಕ್ ಸಮಿತಿ ಗಮನಕ್ಕೆ ತರಬೇಕು. ಬ್ಲಾಕ್‌ನಿಂದ ಪತ್ರ ಪಡೆದೇ ಪದಾಧಿಕಾರಿಗಳ ನೇಮಕವನ್ನು ಮಾಡಬೇಕು. ಕಳೆದ ಕೆಲವು ದಿನಗಳ ಹಿಂದೆ ಕೆಪಿಸಿಸಿಗೆ ಪುತ್ತೂರಿನಿಂದ ಕೆಲವರನ್ನು ನೇಮಕ ಮಾಡಲಾಗಿದೆ ಅವರು ಯಾರೂಂತ ನಮಗೆ ಗೊತ್ತಿಲ್ಲ. ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಬರುತ್ತಿಲ್ಲ, ಪಕ್ಷದ ಕಾರ್ಯಕರ್ತರ ಸಭೆಗೂ ಅವರು ಬರುತ್ತಿಲ್ಲ. ಮುಂದಿನ ದಿನಗಳಲ್ಲಿ ಯಾವುದೇ ಹುದ್ದೆ ನೀಡುವಾಗಲೂ ಬ್ಲಾಕ್ ಸಮಿತಿಯಿಂದ ಪತ್ರ ಪಡೆಯುವ ಕಾರ್ಯ ನಡೆಸಬೇಕು. ಪಕ್ಷದ ಕಾರ್ಯಕರ್ತರ ಸಭೆಗೆ ಅಡ್ಡಪಡಿಸುವವರ ವಿರುದ್ಧವೂ ಕ್ರಮಕೈಗೊಳ್ಳುವ ಕುರಿತು ಕೆಪಿಸಿಸಿ ಮತ್ತು ಪಕ್ಷದ ಹೈಕಮಾಂಡ್‌ಗೆ ನಾವು ಪತ್ರ ಬರೆದಿದ್ದೇವೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ್ ರೈ ಹೇಳಿದರು. ಬಳಿಕ ಈ ಕುರಿತು ಹೈಕಮಾಂಡ್ ಗಮನಕ್ಕೆ ತರುವಂತೆ ಶಾಸಕ ಯು ಟಿ ಖಾದರ್ ಅವರಿಗೆ ಮನವಿ ಮಾಡಿದರು.

೪೫ ಜನರ ತಂಡ ನಗರದಲ್ಲಿದೆ; ಆಲಿ: ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿದ ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದ್ ಆಲಿ ಪುತ್ತೂರು ನಗರ ಕಾಂಗ್ರೆಸ್ ಸಮಿತಿಗೆ ೪೫ ಜನರ ತಂಡವನ್ನು ರಚನೆ ಮಾಡಿದ್ದೇವೆ. ನಾವು ಜನರ ಸಮಸ್ಯೆಗೆ ಸ್ಪಂದಿಸಿದ್ದೇವೆ. ಕೋವಿಡ್ ಕಾಲದಲ್ಲಿ ಕಿಟ್, ರಕ್ತದಾನ ಮಾಡಿದ್ದೇವೆ. ಇಂಧನ ಬೆಲೆ ಏರಿಕೆ ವಿರುದ್ದ ಸೈಕಲ್ ಜಾಥಾ, ಬೆಲೆ ಏರಿಕೆ ವಿರುದ್ದ ಪ್ರತಿಭಟನೆ ಮಾಡಿ ಜನರ ನೋವಿಗೆ ಸ್ಪಂದಿಸುವಂತೆ ಎಚ್ಚರಿಕೆ ನೀಡುವ ಕೆಲಸವನ್ನು ಮಾಡಿದ್ದೇವೆ. ಗ್ರಾಮ ಸ್ವರಾಜ್ಯ ಕಾರ್ಯಕ್ರಮ ನಡೆಸಿದ್ದೇವೆ . ಕ್ಷೇತ್ರದ ಪ್ರತೀ ಬೂತ್, ವಲಯ ಮಟ್ಟದಲ್ಲಿ ಮಾಸಿಕ ಸಭೆ ನಡೆಸಿ ಪಕ್ಷವನ್ನು , ಕಾರ್ಯಕರ್ತರನ್ನು ಸಂಘಟಿಸುವ ಕೆಲಸವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದು ಪಕ್ಷಕ್ಕಾಗಿ ಕೆಲಸ ಮಾಡುವ ಉತ್ತಮ ತಂಡವನ್ನು ರೂಪಿಸಿಕೊಂಡಿದ್ದೇವೆ. ಎಲ್ಲರನ್ನೂ ಒಗ್ಗೂಡಿಸಿ ಮುಂದಿನ ದಿನಗಳಲ್ಲಿ ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸುವಲ್ಲಿ ಶ್ರಮವಹಿಸಲಿದ್ದೇವೆ. ಬ್ಲಾಕ್ ಸಮಿತಿ ಅಧ್ಯಕ್ಷರ ಹಾಗೂ ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರ ಸಲಹೆ ಸೂಚನೆಯಂತೆ ಎಲ್ಲಾ ಕಾರ್ಯಕ್ರಮಗಳು ನಡೆಯುತ್ತಿದೆ ಎಂದು ಹೇಳಿದರು.

ಸನ್ಮಾನ: ಪಕ್ಷಕ್ಕಾಗಿ ಸೇವೆ ಸಲ್ಲಿಸಿದ ಹಿರಿಯ ಮುಖಂಡರಾದ ಚಿಕ್ಕಪ್ಪ ನಾಯಕ್ ಅರಿಯಡ್ಕ, ಜನಾರ್ದನ ಬಂಗೇರ ಕೇಪುಳು ಹಾಗೂ ಅಬ್ದುಲ್ ರಹಿಮಾನ್ ಬನ್ನೂರುರವರುಗಳನ್ನು ಅತಿಥಿಗಳು ಶಾಲು ಹೊದಿಸಿ, ಸ್ಮರಣಿಕೆ ಫಲಪುಷ್ಪಗಳನ್ನು ನೀಡಿ ಸನ್ಮಾನಿಸಿದರು.
ಇದೇ ಸಂದರ್ಭದಲ್ಲಿ ಮಾಜಿ ಸಚಿವ ವಿನಯಕುಮಾರ್ ಸೊರಕೆಯವರು ಪ್ರಜಾಪ್ರತಿನಿಧಿ ಪುಸ್ತಕ ಬಿಡುಗಡೆಮಾಡಿದರು.

ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ಶಿವರಾಮ ಆಳ್ವರನ್ನು ಈ ಸಂದರ್ಭದಲ್ಲಿ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ವಿಧಾನಪರಿತ್ ಸದಸ್ಯರಾಗಿ ಆಯ್ಕೆಯಾದ ಮಂಜುನಾಥ ಭಂಡಾರಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಪದಗ್ರಹಣ ಸಮಾರಂಭ: ಕಾರ್ಯಕ್ರಮದಲ್ಲಿ ನಗರ ಕಾಂಗ್ರೆಸ್‌ನ ವಿವಿಧ ಪದಾಧಿಕಾರಿಗಳ ಪದಗ್ರಹಣ ನಡೆಯಿತು. ಪದಾಧಿಕಾರಿಗಳಿಗೆ ಪ್ರಮಾಣಪತ್ರ ಮತ್ತು ಶಾಲು ಹೊದಿಸಿ ಅತಿಥಿಗಳು ಗೌರವಿಸಿದರು.

ಬಿಜೆಪಿಯಿಂದ ಕಾಂಗ್ರೆಸ್‌ಗೆ ಸೇರ್ಪಡೆ: ಇದೇ ವೇಳೆ ಕೆದಂಬಾಡಿ ಹಾಗೂ ಮುಂಡೂರು ಗ್ರಾಮದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹರೀಶ್‌ಕುಮಾರ್‌ರವರು ಪಕ್ಷದ ಧ್ವಜ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಲಾರೆನ್ಸ್ ಡಿಸೋಜಾ, ಮಂಗಳೂರಿನ ಮಾಜಿ ಮೇಯರ್ ಮಹಾಬಲ ಮಾರ್ಲ, ಕಾಂಗ್ರೆಸ್ ಮುಖಂಡ ಎ ಸಿ ಜಯರಾಜ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಗಳಾದ ನ್ಯಾಯವಾದಿ ಫಝಲ್ ರಹೀಂ, ಮಹೇಶ್ ರೈ ಅಂಕೊತ್ತಿಮಾರ್, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಸಮಿತಿ ಅಧ್ಯಕ್ಷ ಡಾ. ರಾಜಾರಾಂ ಕೆ ಬಿ, ಬ್ಲಾಕ್ ಪ್ರ. ಕಾರ್ಯದರ್ಶಿ ಅಮಲ ರಾಮಚಂದ್ರ,ರಾಜ್ಯ ಹಿಂದಳಿದ ಘಟಕದ ರಾಜ್ಯ ಕಾರ್ಯದರ್ಶಿ ಉಷಾ ಅಂಚನ್, ಡಾ. ರಘು ಬೆಳ್ಳಿಪ್ಪಾಡಿ, ಬ್ಲಾಕ್ ಉಪಾಧ್ಯಕ್ಷ ಮೌರಿಸ್ ಮಸ್ಕರೇನಸ್, ಎಸ್ ಕೆ ಇಲ್ಯಾಸ್, ವೇದನಾಥ ಸುವರ್ಣ, ಬನ್ನೂರು ಸಿ ಎಬ್ಯಾಂಕ್ ಅಧ್ಯಕ್ಷ ಈಶ್ವರಭಟ್ ಪಂಜಿಗುಡ್ಡೆ, ಪುತ್ತೂರು ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಕೂರ್ ಹಾಜಿ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಬ್ಲಾಕ್ ಮಹಿಳಾ ಘಟಕದ ಅಧ್ಯಕ್ಷೆ ಶಾರದಾ ಅರಸ್, ಹಿಂದುಳಿದ ಘಟಕದ ಹರೀಶ್ ಕೋಟ್ಯಾನ್, ಸೇವಾದಳದ ವಿಶ್ವಜಿತ್ ಅಮ್ಮುಂಜ, ಅಸಂಘಟಿತ ಕಾರ್ಮಿಕ ಘಟಕದ ಮೆಲ್ವಿನ್ ಮೊಂತೆರೋ, ರಾಜೀವಗಾಂಧಿ ಸೇವಾ ಘಟಕದ ಸಂತೋಷ್‌ರೈ ಚಿಲ್ಮೆತ್ತಾರು, ಪೂರ್ಣೇಶ್ ಭಂಡಾರಿ, ನ್ಯಾಯವಾದಿ ಜಗನ್ನಿವಾಸ್ ರಾವ್, ಜಿಪಂ ಮಾಜಿ ಸದಸ್ಯ ಪಿ ಪಿ ವರ್ಗಿಸ್, ನ್ಯಾಯವಾದಿಗಳಾದ ಸಿದ್ದಿಕ್, ನೂರುದ್ದೀನ್ ಸಾಲ್ಮರ, ಜಗನ್ನಾಥ ಪಾಟ್ರಕೋಡಿ, ದೇಲಂಪಾಡಿ ಸದಾಶಿವ ರೈ ಬೆಳ್ಳಿಪ್ಪಾಡಿ, ಜಯಪ್ರಕಾಶ್ ಬದಿನಾರು, ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್‌ಕೆಡೆಂಜಿ, ನಝೀರ್ ಮಠ, ಒಳಮೊಗ್ರು ವಲಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರಿ ಬೊಳ್ಳಾಡಿ, ಹಬೀಬ್ ಕಣ್ಣೂರು ಸೇರಿದಂತೆ ವಲಯ ಮಟ್ಟದ ಅಧ್ಯಕ್ಷರು, ಕಾರ್ಯದರ್ಶಿಗಳು, ಬೂತ್ ಮಟ್ಟದ ಪದಾಧಿಕಾರಿಗಳು, ಗ್ರಾಪಂ ಸದಸ್ಯರುಗಳು, ನಗರ ಸಮಿತಿಯ ಪದಾಧಿಕಾರಿಗಳು, ಬ್ಲಾಕ್ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.ಮಧ್ಯಾಹ್ನ ಕಾರ್ಯಕರ್ತರಿಗೆ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

LEAVE A REPLY

Please enter your comment!
Please enter your name here