ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯಿಂದ 6ನೇ ವರ್ಷದ ಗುರುಪೂಜೆ, ಭಜನೆ, ಸನ್ಮಾನ, ಧಾರ್ಮಿಕ ಸಭಾ ಕಾರ್ಯಕ್ರಮ

0

  • ವಿದ್ಯೆಯಿಂದ ಪ್ರಪಂಚಕ್ಕೆ ಜ್ಞಾನದ ಬೆಳಕನ್ನು ನೀಡಿದವರು ನಾರಾಯಣಗುರುಗಳು-ರಾಜೇಶ್ ಬಲ್ಯ

ಪುತ್ತೂರು: ದಾರ್ಶನಿಕರಾದ ನಾರಾಯಣಗುರುಗಳು ಸಮಾಜ ಸುಧಾರಕರಾಗಿದ್ದಾರೆ. ಭಕ್ತಿ ಹಾಗೂ ಪೂಜೆಗಿಂತ ಮನಸ್ಸಿನ ಭಕ್ತಿಯಿಂದ ಪೂಜಿಸಿದಾಗ ದೇವರು ಖಂಡಿತಾ ಒಲಿಯುತ್ತಾನೆ ಜೊತೆಗೆ ವಿದ್ಯಾದೇಗುಲಗಳನ್ನು ನಿರ್ಮಿಸಿ ವಿದ್ಯೆ ನೀಡುವ ಮೂಲಕ ಪ್ರಪಂಚಕ್ಕೆ ಜ್ಞಾನದ ಬೆಳಕನ್ನು ನೀಡಿದವರು ನಾರಾಯಣಗುರುಗಳಾಗಿದ್ದಾರೆ ಎಂದು ನಿರೂಪಕರಾದ ರಾಜೇಶ್ ಎಸ್.ಬಲ್ಯರವರು ಹೇಳಿದರು.

ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ಇದರ ಆಶ್ರಯದಲ್ಲಿ ಫೆ.20 ರಂದು ಪರಕ್ಕಮೆ ದೇಯಿ ನಿಲಯದ ವಠಾರದಲ್ಲಿ ಜರಗಿದ ೬ನೇ ವರ್ಷದ ಗುರುಪೂಜಾ ಮತ್ತು ಭಜನಾ ಕಾರ್ಯಕ್ರಮ ಹಾಗೂ ಸನ್ಮಾನ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಗುರುಸಂದೇಶವನ್ನು ನೀಡುತ್ತಾ ಮಾತನಾಡಿದರು. ಒಂದೇ ಜಾತಿ, ಒಂದೇ ಮತ, ಒಂದೇ ದೇವರು, ವಿದ್ಯೆಯಿಂದ ಸ್ವತಂತ್ರರಾಗಿರಿ, ಸಂಘಟನೆಯಿಂದ ಬಲಯುತರಾಗಿರಿ ಮತ್ತು ಜಗತ್ತಿನಲ್ಲಿ ಮನುಷ್ಯ ಜಾತಿ ಮಾತ್ರ ಇರೋದು ಎಂದು ಪ್ರತಿಪಾದಿಸಿದವರು ನಾರಾಯಣಗುರುಗಳು. ಬಾಲ್ಯವಿವಾಹ, ಬಹುಪತ್ನಿತ್ವ ಮತ್ತು ಮದ್ಯಪಾನ ನಿಷೇಧವನ್ನು ತೊಡೆದು ಹಾಕಿದವರೂ ನಾರಾಯಣಗುರುಗಳಾಗಿದ್ದಾರೆ. ದೇವಸ್ಥಾನಗಳನ್ನು ನಿರ್ಮಿಸಿ ಕೆಳ ಜಾತಿಯವರನ್ನು ದೇವಸ್ಥಾನಕ್ಕೆ ಹೋಗಲು ಹಾಗೂ ವಿದ್ಯೆಗೋಸ್ಕರ ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸಿ ಸಮಾಜದ ಹರಿಕಾರ ಎನಿಸಿಕೊಂಡವರು ನಾರಾಯಣಗುರುಗಳಾಗಿದ್ದಾರೆ ಎಂದ ಅವರು ಸನಾತನ ಸಂಸ್ಕೃತಿ ಇರುವ ದೇಶ ನಮ್ಮ ಭಾರತವಾಗಿದ್ದು, ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಾಗಿದೆ. ನಂಬಿಕೆ ಬೇಕು ಆದರೆ ಮೂಢನಂಬಿಕೆ ಬೇಡ. ನಾರಾಯಣಗುರುಗಳ ಶಕ್ತಿ, ಪರಿವರ್ತನೆ ಹಾಗೂ ಸಂದೇಶಗಳನ್ನು ನಾವು ಮೊದಲಾಗಿ ತಿಳಿಯಬೇಕು ಎಂದು ಅವರು ಹೇಳಿದರು.

ಸನ್ಮಾನಿತರನ್ನು ಸನ್ಮಾನಿಸಿ ಮಾತನಾಡಿದ ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿರವರು, ತಾಲೂಕು ಬಿಲ್ಲವ ಸಂಘದ 51 ಗ್ರಾಮ ಸಮಿತಿಗಳಲ್ಲಿ ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯು ಪ್ರತೀ ವಿಚಾರದಲ್ಲಿ ಮುಂಚೂಣಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಗುರುಪೂಜೆಗೆ ಹೆಚ್ಚಿನ ಹೊರೆ ಕಾಣಿಕೆ, ಭಜನಾ ಕಾರ್ಯಕ್ರಮ ಹೀಗೆ ಬೇರೆ ಬೇರೆ ಕಾರ್ಯಕ್ರಗಳಲ್ಲಿ ಸದಸ್ಯರು ಬಹಳ ಉತ್ಸುಕತೆಯಿಂದ ಭಾಗವಹಿಸುತ್ತಾರೆ. ನಾರಾಯಣ ಗುರುಗಳ ಸಂದೇಶವನ್ನು ಪ್ರತಿಪಾದಿಸುವ ಇಂತಹ ಕಾರ್ಯಕ್ರಮಗಳು ಹೆಚ್ಚು ಅರ್ಥಪೂರ್ಣವಾಗಿದ್ದು, ಇಂತಹ ಕಾರ್ಯಕ್ರಮಗಳು ಪ್ರತಿ ಗ್ರಾಮ ಗ್ರಾಮಗಳಲ್ಲಿ ನಡೆದಾಗ ಧಾರ್ಮಿಕ ಭಕ್ತಿ ದ್ವಿಗುಣಗೊಳ್ಳುತ್ತದೆ ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೈಸೂರು ವಲಯದ ಮೇಲ್ವಿಚಾರಕರಾದ ಶ್ರೀಮತಿ ಸವಿತಾ ಕುದ್ರೆಪ್ಪಾಡಿರವರು ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ, ಆಸ್ತಿ, ಸಂಪತ್ತು, ಹಣವಿದ್ದರೆ ಸಾಲದು. ಬದಲಿಗೆ ಬದುಕಲು ಆತ್ಮಾಭಿಮಾನ ಹಾಗೂ ಆತ್ಮಧೈರ್ಯವಿದ್ದರೆ ಏನನ್ನೂ ಸಾಧಿಸಬಹುದಾಗಿದೆ. ನಾರಾಯಣಗುರುಗಳು ಸಂಘಟನೆ ಮಾಡಿಕೊಂಡು, ದೇವಸ್ಥಾನ ನಿರ್ಮಿಸಿಕೊಂಡು ಎಲ್ಲಾ ಜಾತಿ ವರ್ಗದವರಿಗೆ ಪೂಜಿಸಲು ಅನುವು ಮಾಡಿಕೊಟ್ಟವರಾಗಿದ್ದಾರೆ. ನಮ್ಮಲ್ಲಿ ಗುರು ಹಾಗೂ ಗುರಿ ಇದ್ದಾಗ ಜೀವನವು ಪಾವನವಾಗುವುದು ಎಂದರು.

ಕೈಪಂಗಳ ದೋಳ ಬ್ರಹ್ಮಬೈದೆರ್ಕಳ ಗರಡಿ ಅಧ್ಯಕ್ಷ ವೇದನಾಥ ಸುವರ್ಣರವರು ಮಾತನಾಡಿ, ಉಪಾಧ್ಯಕ್ಷನಾಗಿದ್ದಾಗ ಬಿಲ್ಲವ ಸಂಘದ ಪ್ರತೀ ಗ್ರಾಮ ಸಮಿತಿಗೆ ನಾನು ಹೋಗಿದ್ದೇನೆ. ಇಲ್ಲಿನ ಗ್ರಾಮ ಸಮಿತಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದು ಅಭಿನಂದನೀಯ. ನಾರಾಯಣಗುರು, ಅಂಬೇಡ್ಕರ್ ಹಾಗೂ ಬಸವಣ್ಣರವರು ಕೆಳ ವರ್ಗದ ಜನರಿಗೆ ಅವಕಾಶ ನೀಡಿ ಅವರನ್ನು ಉನ್ನತ ಹುದ್ದೆಗಳಿಗೆ ಹೋಗುವಂತಾಗಲು ಶ್ರಮಿಸಿರುವವರಾಗಿದ್ದಾರೆ. ಜೀವನದಲ್ಲಿ ನಂಬಿಕೆ ಬೇಕು ಆದರೆ ಅತಿಯಾದ ಮೂಢನಂಬಿಕೆ ಇದ್ದಾಗ ಅಭಿವೃದ್ಧಿ ಆಗೋದಿಲ್ಲ ಎಂದರು.

ಪುತ್ತೂರು ಬಿಲ್ಲವ ಸಂಘದ ಗುರುಮಂದಿರದ ಕಾರ್ಯನಿರ್ವಹಣಾಧಿಕಾರಿ ಹೊನ್ನಪ್ಪ ಪೂಜಾರಿ ಕೈಂದಾಡಿರವರು ಮಾತನಾಡಿ, ಬಿಲ್ಲವ ಸಂಘದ ಗುರುಮಂದಿರದ ಕಾರ್ಯನಿರ್ವಹಣಾಧಿಕಾರಿಯಾಗಿ ಆಯ್ಕೆಗೊಳ್ಳಲು ನಮ್ಮ ಗ್ರಾಮದ ಜನತೆಯ ಆಶೀರ್ವಾದವಾಗಿದೆ. ನಾರಾಯಣ ಗುರುಮಂದಿರದಲ್ಲಿ ಶಾಶ್ವತ ಪೂಜೆ ಅಥವಾ ಇನ್ನಿತರ ಕಾರ್ಯಕ್ರಮಗಳಿಗೆ ಶಾಂತಿಗೋಡು ಗ್ರಾಮ ಸಮಿತಿ ಹೆಚ್ಚಿನ ಸಹಕಾರ ನೀಡುತ್ತಲೇ ಬಂದಿದೆ. ಅದರಂತೆ ಮುಂದಿನ ದಿನಗಳಲ್ಲಿ ನಾರಾಯಣ ಗುರುಮಂದಿರದಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮಗಳಿಗೆ ಭಕ್ತರ ಸಹಕಾರ ಬೇಕಾಗಿದೆ ಎಂದರು.

ನರಿಮೊಗರು ಸಿಎ ಬ್ಯಾಂಕ್‌ನ ಮಾಜಿ ನಿರ್ದೇಶಕ ಮೋಹನ್ ಗೌಡ ಪಾದೆರವರು ಮಾತನಾಡಿ, ನಾರಾಯಣಗುರುಗಳು ಬರೀ ಧರ್ಮಗುರು ಅಲ್ಲ, ಅವರೊರ್ವ ಕರ್ಮಗುರುವಾಗಿದ್ದಾರೆ. ಸಮಾಜದಲ್ಲಿನ ದೀನ ದಲಿತರನ್ನು, ಶೋಷಿತರನ್ನು ಮುಖ್ಯವಾಹಿನಿಗೆ ತರುವಲ್ಲಿ ನಾರಾಯಣಗುರುಗಳು ಕಾರಣಕರ್ತರಾಗಿದ್ದು ನಿಜಕ್ಕೂ ಅವರು ಕರ್ಮಗುರುವಾಗಿದ್ದಾರೆ. ನಾರಾಯಣಗುರುಗಳು ಕೇವಲ ಒಂದೇ ಜಾತಿಗೆ ಸೀಮಿತರಲ್ಲ. ಅವರ ತತ್ವಗಳು, ಸಿದ್ಧಾಂತಗಳು ಎಲ್ಲಾ ಜಾತಿ-ಧರ್ಮದವರು ಅನುಸರಿಸುವವರಾಗಿದ್ದಾರೆ ಎಂದರು.

ಪುತ್ತೂರು ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷೆ ಶ್ರೀಮತಿ ಚಂದ್ರಕಲಾ ಮುಕ್ವೆರವರು ಮಾತನಾಡಿ, ಯಾವ ಕ್ಷೇತ್ರದಲ್ಲಿ ಭಜನೆ, ಅನ್ನದಾನ ಹಾಗೂ ಪೂಜೆ ಇರುತ್ತದೋ ಆ ಕ್ಷೇತ್ರ ನಿಜವಾಗಿಯೂ ಬೆಳಗುತ್ತದೆ. ದೇವರು ಯಾರಿಗೂ ಬೇಧಭಾವ ಮಾಡೋದಿಲ್ಲ. ಯಾರು ಧರ್ಮ ಹಾಗೂ ಕರ್ಮವನ್ನು ಪಾಲನೆ ಮಾಡುತ್ತಾರೋ ಅವರಿಗೆ ಪುಣ್ಯದ ಫಲ ಸಿಗುತ್ತದೆ. ಈ ನಿಟ್ಟಿನಲ್ಲಿ ಈ ಗ್ರಾಮವು ಧರ್ಮ ಹಾಗೂ ಕರ್ಮವನ್ನು ನಿರಂತರವಾಗಿ ಮಾಡಿಕೊಂಡು ಬಂದಿದ್ದು ತಾಲೂಕಿನಲ್ಲಿ ಮಾದರಿ ಗ್ರಾಮವಾಗಿರುತ್ತದೆ ಎಂದರು.

ನರಿಮೊಗರು ವಲಯ ಸಂಚಾಲಕ ಮಹೇಶ್ಚಂದ್ರ ಸಾಲ್ಯಾನ್ ನಡುಬೈಲುರವರು ಮಾತನಾಡಿ, ಇಲ್ಲಿನ ಶಾಂತಿಗೋಡು ಗ್ರಾಮ ಸಮಿತಿಯಲ್ಲಿನ ಸದಸ್ಯರಲ್ಲಿನ ಸಮಾನ ಮನಸ್ಕತೆಯುಳ್ಳ ಭಾವನೆಯೇ ಈ ಕ್ಷೇತ್ರದಲ್ಲಿ ಉತ್ತಮ ಕೆಲಸವಾಗುವಂತೆ ಮಾಡಿದೆ. ಮಂಗಳೂರಿನ ಕುದ್ರೋಳಿ ದೇವಸ್ಥಾನಕ್ಕಾಗಲಿ, ಪುತ್ತೂರು ಬಿಲ್ಲವ ಸಂಘಕ್ಕಾಗಲಿ ಇಲ್ಲಿನ ಗ್ರಾಮ ಸಮಿತಿಯ ದೇಣಿಗೆಯಂತೂ ಬಹಳಷ್ಟಿದೆ. ಮುಂದಿನ ದಿನಗಳಲ್ಲಿ ಹದಿನಾಲ್ಕು ವರ್ಷದಲ್ಲಿ ನಡೆಯುವ ಶಾಶ್ವತ ಪೂಜೆಗಳು ಎರಡೇ ವರ್ಷದಲ್ಲಿ ನಡೆಯುವಂತಾಗಲಿ ಎಂದರು.

ಪುತ್ತೂರು ಯುವವಾಹಿನಿ ಘಟಕದ ಅಧ್ಯಕ್ಷ ಅನೂಪ್ ಕೂಡುರಸ್ತೆರವರು ಮಾತನಾಡಿ, ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ, ಶಾಂತಿಗೋಡು ಯುವವಾಹಿನಿ ಗ್ರಾಮ ಸಮಿತಿ, ಶಾಂತಿಗೋಡು ಬಿಲ್ಲವ ವಿದ್ಯಾರ್ಥಿ ಸಂಘ, ಶಾಂತಿಗೋಡು ಬಿಲ್ಲವ ಮಹಿಳಾ ವೇದಿಕೆಯು ಸ್ಫೂರ್ತಿ ಹಾಗೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದೆ. ಈ ಭಾಗದ ಯುವಸಮೂಹವು ಯುವವಾಹಿನಿ ಸಂಘಟನೆಯಲ್ಲಿ ಗುರುತಿಸಿಕೊಂಡು ಯುವವಾಹಿನಿ ಸಂಘಟನೆಯ ಬಲವರ್ಧನೆಗೆ ನೆರವಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯ ಅಧ್ಯಕ್ಷ ನಾಗೇಶ್ ಸಾರಕರೆರವರು ಮಾತನಾಡಿ, ಪುತ್ತೂರು ಬಿಲ್ಲವ ಸಂಘದ ೫೧ ಗ್ರಾಮ ಸಮಿತಿಗಳ ಪೈಕಿ ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ನಂಬರ್ ವನ್ ಎನಿಸಿಕೊಳ್ಳಲು ನಮ್ಮ ಸಮಿತಿಯ ಎಲ್ಲಾ ಸದಸ್ಯರೇ ಕಾರಣರಾಗಿದ್ದಾರೆ ಎಂದರು.

ಅಭಿನಂದನೆ:
ಚಿಕ್ಕಮುಡ್ನೂರು ಬಿಲ್ಲವ ಗ್ರಾಮ ಸಮಿತಿಯ ಅಧ್ಯಕ್ಷ ಅಣ್ಣಿ ಪೂಜಾರಿ, ಮಂಗಳೂರಿನ ತಾಂತ್ರಿಕ ಶಾಲೆಯ ಹಿರಿಯ ತರಬೇತಿ ಅಧಿಕಾರಿ ಯೋಗೀಶ್ ನಾಯ್ಕ್, ಅರ್ಚಕ ಜಗದೀಶ್ ಶಾಂತಿ, ಶಾಂತಿಗೋಡು ದ.ಕ.ಹಿ.ಪ್ರಾ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಸಿದ್ಧಲಿಂಗಮ್ಮ, ಹಿರಿಯ ಮುಖಂಡ ದೇವಪ್ಪ ಗೌಡ ಓಲಾಡಿ, ನರಿಮೊಗರು ಗ್ರಂಥಪಾಲಕ ವರುಣ್ ಗೌಡ ಓಲಾಡಿ, ಆನಡ್ಕ ಬಿಲ್ಲವ ಗ್ರಾಮ ಸಮಿತಿಯ ಅಧ್ಯಕ್ಷ ವಿನಯಕುಮಾರ್ ಮರಕ್ಕೂರು, ಧಾರ್ಮಿಕ ಕಾರ್ಯಕ್ರಮಕ್ಕೆ ಸ್ಥಳಾವಕಾಶ ನೀಡಿರುವ ಚಂದ್ರಶೇಖರ್ ಪೂಜಾರಿ, ಶಾಂತಿಗೋಡು ಭಜನಾ ಮಂಡಳಿಯ ಸದಸ್ಯರಿಗೆ, ಕಾಣಿಕೆ ಡಬ್ಬಿ ಮೂಲಕ ಹೆಚ್ಚಿನ ಹಣ ಸಂಗ್ರಹಿಸಿದ ರಾಘವ ಪೂಜಾರಿ ಬೊಳ್ಳೆಕ್ಕು, ಪತ್ರಿಕಾ ವರದಿಗಾರ ಸುದ್ದಿ ಬಿಡುಗಡೆಯ ಸಂತೋಷ್ ಮೊಟ್ಟೆತ್ತಡ್ಕರವರನ್ನು ಶಾಲು ಹೊದಿಸುವ ಮೂಲಕ ಅಭಿನಂದಿಸಲಾಯಿತು.

ಉದ್ಘಾಟನೆ/ಧಾರ್ಮಿಕ ವಿಧಿವಿಧಾನ:
ಆರಂಭದಲ್ಲಿ ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯರಾದ ಪಿ.ಎಸ್ ಶೇಖರ ಪೂಜಾರಿ ಪರಕ್ಕಮೆರವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಶುಭಕೋರಿದರು. ಬೆಳಿಗ್ಗೆ ಅರ್ಚಕರಾದ ಜಗದೀಶ್ ಶಾಂತಿರವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೇರಿತು.

ಶ್ರೀಮತಿ ಗೌರಿ ಹೊನ್ನಪ್ಪ ಪೂಜಾರಿ ಕೈಂದಾಡಿ ಪ್ರಾರ್ಥಿಸಿದರು. ನವ್ಯ ದಾಮೋದರ ಪೂಜಾರಿರವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸತೀಶ್ ಪರಕ್ಕಮೆ, ಕೊರಗಪ್ಪ ಸಾಲ್ಯಾನ್, ನಾರಾಯಣ ಪೂಜಾರಿ ಬೇರಿಕೆ, ರೂಪ ಪರಕ್ಕಮೆ, ದಿನೇಶ್ ಕರ್ಪುದಮೂಲೆ, ಸುರೇಶ್ ಸಾಲ್ಯಾನ್ ಕೊಡಂಕೀರಿ, ಸವಿತಾ ಪರಕ್ಕಮೆ, ನಾರಾಯಣ ಪೂಜಾರಿ, ಕೃಷ್ಣಪ್ಪ ಪೂಜಾರಿ ಕೈಂದಾಡಿರವರು ಅತಿಥಿಗಳಿಗೆ ಶಾಲು ಹೊದಿಸಿ, ವೀಳ್ಯದೆಲೆ ನೀಡಿ ಸ್ವಾಗತಿಸಿದರು. ಶಾಂತಿಗೋಡು ಬಿಲ್ಲವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರಾಕ್ಷ ಪೇರಡ್ಕ ವಂದಿಸಿದರು. ಬಿಲ್ಲವ ಪುತ್ತೂರು ನಗರ ಸಮಿತಿ ಅಧ್ಯಕ್ಷ ಅವಿನಾಶ್ ಹಾರಾಡಿ ಕಾರ್ಯಕ್ರಮ ನಿರೂಪಿಸಿದರು. ಶಾಂತಿಗೋಡು ಯುವವಾಹಿನಿ ಗ್ರಾಮ ಸಮಿತಿ ಅಧ್ಯಕ್ಷ ರಾಘವ ಬೊಳ್ಳೆಕ್ಕು, ಶಾಂತಿಗೋಡು ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷೆ ಶ್ರೀಮತಿ ಆಶಾ ಸಚೀಂದ್ರ ಬೊಳ್ಳೆಕ್ಕು ಸಹಿತ ಹಲವರು ಸಹಕರಿಸಿದರು.

ಮೂವರಿಗೆ ಸನ್ಮಾನ
ನಾಟಿವೈದ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ನಾಟಿವೈದ್ಯೆ ಶೇಷಮ್ಮ ಪಾದೆ, ಯುವವಾಹಿನಿ ಪುತ್ತೂರು ಘಟಕದ ಮಾಜಿ ಅಧ್ಯಕ್ಷರಾಗಿ, ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷರಾಗಿ ಪ್ರಸ್ತುತ ಪುತ್ತೂರು ಬಿಲ್ಲವ ಸಂಘದ ಗುರುಮಂದಿರದ ಕಾರ್ಯನಿರ್ವಹಣಾಧಿಕಾರಿಯಾಗಿ ಆಯ್ಕೆಯಾಗಿರುವ ಹೊನ್ನಪ್ಪ ಪೂಜಾರಿ ಕೈಂದಾಡಿ, ಶಾಂತಿಗೋಡು ಶಾಲೆಯ ಎಸ್‌ಡಿಎಂಸಿ ಸದಸ್ಯರಾಗಿ, ಕರ್ನಾಟಕ ಸ್ಟೇಟ್ ಟೈಲರ್‍ಸ್ ಎಸೋಸಿಯೇಶನ್ ಇದರ ನರಿಮೊಗರು ವಲಯ ಸಮಿತಿಯ ಉಪಾಧ್ಯಕ್ಷರಾಗಿ, ಸ್ವ-ಸಹಾಯ ಸಂಘಗಳ ಅಧ್ಯಕ್ಷ/ಕಾರ್ಯದರ್ಶಿಯಾಗಿ, ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯ ಕೋಶಾಧಿಕಾರಿಯಾಗಿ ೨೦೦೧ರಿಂದ ಕಾರ್ಯನಿರ್ವಹಿಸಿಕೊಂಡು ಬಂದಿರುವ ಕೊರಗಪ್ಪ ಪೂಜಾರಿರವರನ್ನು ಗುರುತಿಸಿ ಸನ್ಮಾನಿಸಲಾಯಿತು.

ಸ್ಪರ್ಧೆಗಳು
ಫೆ.19 ರಂದು ಅಪರಾಹ್ನ ಶಾಂತಿಗೋಡು ಗ್ರಾಮ ಸಮಿತಿಯ ವ್ಯಾಪ್ತಿಗೊಳಪಟ್ಟ ಪುರುಷರಿಗೆ, ಮಹಿಳೆಯರಿಗೆ ವಿವಿಧ ಮುಕ್ತ ಸ್ಪರ್ಧೆಗಳು ಮತ್ತು 1 ರಿಂದ 4, 5ರಿಂದ 7 ಮತ್ತು 8 ರಿಂದ 10 ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಭಾಷಣ(ವಿಷಯ-ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ ಮತ್ತು ತತ್ವಗಳು) ಮತ್ತು ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಗಳ ಶಿಕ್ಷಕಿ ಗೀತಾ ಕುಮಾರಿ ಎಚ್.ಎಸ್‌ರವರು ಉದ್ಘಾಟಿಸಿದರು. ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯ ಅಧ್ಯಕ್ಷ ನಾಗೇಶ್ ಸಾರಕರೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಪುತ್ತೂರು ನಗರ ಸಮಿತಿ ಅಧ್ಯಕ್ಷ ಅವಿನಾಶ್ ಹಾರಾಡಿ, ಶಾಂತಿಗೋಡು ದ.ಕ.ಹಿ.ಪ್ರಾ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಸಿದ್ಧಲಿಂಗಮ್ಮರವರು ಭಾಗವಹಿಸಿದರು.

LEAVE A REPLY

Please enter your comment!
Please enter your name here