ಕೋಡಿಂಬಾಡಿ ಸಂಜೀವಿನಿ ಒಕ್ಕೂಟದ ಪದಚ್ಯುತ ಎಂ.ಬಿ.ಕೆ. ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾ.ಪಂ. ಮಹಿಳಾ ಸದಸ್ಯರಿಂದ ಮನವಿ

0

ಪುತ್ತೂರು: ಪದಚ್ಯುತರಾದ ಕೋಡಿಂಬಾಡಿ ಸಂಜೀವಿನಿ ಒಕ್ಕೂಟದ ಎಂಬಿಕೆಯವರು ಪಂಚಾಯತ್ ಸದಸ್ಯರನ್ನು ಅವಮಾನಿಸುತ್ತಿರುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮ ಪಂಚಾಯತ್ ಸದಸ್ಯರಾದ ಗೀತಾ ಬಾಬು ಮೊಗೇರ, ಮಲ್ಲಿಕಾ ಅಶೋಕ್ ಪೂಜಾರಿ ಮತ್ತು ಪೂರ್ಣಿಮಾ ಯತೀಶ್ ಶೆಟ್ಟಿಯವರು ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಯವರ ಮೂಲಕ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರಿಗೆ ಫೆ.25ರಂದು ಮನವಿ ಸಲ್ಲಿಸಿದ್ದಾರೆ.

 

ಮನವಿಯ ವಿವರ: ಫೆ.22ರಂದು ನಾವುಗಳು ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಜೀವಿನಿ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರರರ ಆಯ್ಕೆಯ ಬಗ್ಗೆ ಇರುವ ಗೊಂದಲವನ್ನು ನಿವಾರಿಸುವಂತೆ ಪುತ್ತೂರು ತಾಲೂಕು ಪಂಚಾಯತಿನ ಕಾರ್ಯ ನಿರ್ವಹಣಾಧಿಕಾರಿಯವರಿಗೆ ಮನವಿ ನೀಡಿದ್ದೆವು. ಆ ಮನವಿಗೆ ಸಹೋದ್ಯೋಗಿಗಳಾದ ಜಗನ್ನಾಥ ಶೆಟ್ಟಿ ನಡುಮನೆ ಮತ್ತು ಜಯಪ್ರಕಾಶ್ ಬದಿನಾರುರವರ ಸಹಿತ ನಾವುಗಳು ಸಹಿ ಮಾಡಿದ್ದೆವು. ಆ ಮನವಿ ಪರಿಶೀಲಿಸಿ ಕಾರ್ಯನಿರ್ವಹಣಾಧಿಕಾರಿಯವರು ದಿನಾಂಕ 25.1.2022ರಂದು ಎಂಬಿಕೆ ಆಯ್ಕೆಯ ಮಾನದಂಡಗಳು, ಕ್ರ.ಸಂ. 2, ಕ್ರ. ಸಂ.10 ಪ್ರಕಾರ ಆಯ್ಕೆ ನಡೆದಿರುವ ಕಾರಣ ಕ್ರ.ಸಂ. ತಾಪಂಪು. ಕಾನಿಆ. 132/2021-22ರಂತೆ ಅಸಿಂಧು ಎಂದು ಆದೇಶ ಹೊರಡಿಸಿದ್ದಾರೆ.

ಆದರೆ ಪದಚ್ಯುತಿಗೊಂಡ ಮುಖ್ಯ ಪುಸ್ತಕ ಬರಹಗಾರರು ಸರಕಾರಿ ಅಧೀನದ ಸಂಘವನ್ನು ಸಂಘಟನೆಗೆ ರೂಪಾಂತರಗೊಳಿಸಿ ನಮ್ಮ ಸಹೋದ್ಯೋಗಿಗಳಾದ ಜಗನ್ನಾಥ ಶೆಟ್ಟಿ ಮತ್ತು ಜಯಪ್ರಕಾಶ್ ಬದಿನಾರು ಇವರನ್ನು ಪದೇ ಪದೇ ಅವಮಾನಿಸುತ್ತಿದ್ದಾರೆ. ನಾವು ಕೇಳಿರುವ ಸಾಮಾಜಿಕ ನ್ಯಾಯದಲ್ಲಿ ಮಹಿಳೆಯರಾದ ನಮ್ಮ ಹೆಸರನ್ನು ಬಿಟ್ಟು ಕೇವಲ ಪುರುಷ ಸದಸ್ಯರನ್ನು ಬೊಟ್ಟು ಮಾಡುತ್ತಿದ್ದಾರೆ. ಇದನ್ನು ಮಹಿಳಾ ಸದಸ್ಯರಾಗಿ ನಾವು ಖಂಡಿಸುತ್ತೇವೆ. ಮಹಿಳೆ ಎಂಬ ಮಾತ್ರಕ್ಕೆ ಪುರುಷರ ಮೇಲೆ ಸವಾರಿ ಮಾಡುವುದು ಸರಿಯಲ್ಲ.

ಪದಚ್ಯುತಿಗೊಂಡ ಸಂಧ್ಯಾ ರಾಮಚಂದ್ರರವರು ತಾವು ಸಲ್ಲಿಸಿರುವ ಅರ್ಜಿಯಲ್ಲಿ ಪಿ.ಯು.ಸಿ. ಅಂಕಪಟ್ಟಿ ಇದೆ ಎಂದು ಬರೆದಿದ್ದಾರೆ. ಆದರೆ ಇದು ಸುಳ್ಳು. ಎಕ್ರೆಗಟ್ಟಲೆ ಕೃಷಿ ಭೂಮಿ ಹೊಂದಿರುವ ಇವರ ಕುಟುಂಬದ ವಾರ್ಷಿಕ ಆದಾಯ ಕೇವಲ ರೂ. 20,000/- ಎಂದು ಬರೆದಿದ್ದಾರೆ. ಇದು ಸುಳ್ಳು. ಇವರು ದೃಢೀಕರಣ ಪತ್ರ ಕೊಟ್ಟಿರುವುದಿಲ್ಲ.

ಎಂ.ಬಿ.ಕೆ ಆಯ್ಕೆಯ ಬಗ್ಗೆ ಸರಕಾರದಿಂದ ಬಂದ ಸುತ್ತೋಲೆಯಂತೆ ದೊಡ್ಡ ಪ್ರಮಾಣದ ಹಣದ ವ್ಯವಹಾರಗಳು ನಡೆಯಲಿರುವುದರಿಂದ ಮತ್ತು ಕೆಳಸ್ತರದ ಸಂಘಗಳ ಲೆಕ್ಕ ಪರಿಶೋಧನೆ ಮಾಡಬೇಕಾಗಿರುವುದರಿಂದ ಕನಿಷ್ಠ ಪಿ.ಯು.ಸಿ ವಿದ್ಯಾರ್ಥಿ ವಿದ್ಯಾಭ್ಯಾಸ ಹೊಂದಿರಬೇಕು. ಇತರ ಯಾವುದೇ ಹುದ್ದೆಗಳಲ್ಲಿರಬಾರದು. ಪ್ರಾಮಾಣಿಕರಾಗಿರಬೇಕು. ಅಂಗವಿಕಲ, ವಿಧವೆ, ಎಸ್.ಸಿ., ಎಸ್.ಟಿ. ಗಳಿಗೆ ಆದ್ಯತೆ ನೀಡಬೇಕು ಎಂದಿರುತ್ತದೆ. ಇವರು ಕೋಡಿಂಬಾಡಿ ಗ್ರಾಮ ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷರಾಗಿದ್ದು ಈ ಸಂದರ್ಭದಲ್ಲಿ ನಡೆದ ಕಾಂಪೋಸ್ಟ್ ಪೈಪು ಹಗರಣದಲ್ಲಿ ಆರೋಪಿಯಾಗಿರುತ್ತಾರೆ. ಆ ಪ್ರಕರಣ ಇನ್ನೂ ಇತ್ಯರ್ಥವಾಗಿರುವುದಿಲ್ಲ.

ಸದ್ರಿಯವರು ಗ್ರಾಮ ಪಂಚಾಯತ್‌ನಿಂದ ತಮಗೆ ನೀಡಿರುವ ಕಛೇರಿಯಲ್ಲಿ ಇರದೇ ದಿನವಿಡೀ ಗ್ರಾಮ ಪಂಚಾಯತ್‌ದಲ್ಲಿ ಕುಳಿತು ಹಸ್ತಕ್ಷೇಪ ಮಾಡುತ್ತಿರುತ್ತಾರೆ. ಇದು ಚುನಾಯಿತ ಸದಸ್ಯರಿಗೆ ಅವಮಾನ. ಕೆಲಸ ಕಾರ್ಯಗಳಿಗೆ ಬಂದ ಸಾರ್ವಜನಿಕರಲ್ಲಿ ಮಧ್ಯವರ್ತಿಯಂತೆ ವರ್ತಿಸುತ್ತಾರೆ.

ಕಳೆದ ಚುನಾವಣೆಯಲ್ಲಿ ಅಭ್ಯರ್ಥಿಯೊಬ್ಬರ ಪರ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಉಪಸ್ಥಿತರಿದ್ದು, ಚುನಾವಣೆ ಪ್ರಚಾರ ಕೂಡ ಮಾಡಿರುತ್ತಾರೆ. (ಫೋಟೋ ಅಳವಡಿಸಿದೆ) ಆ ಫೋಟೋದಲ್ಲಿ ರಾಜಕೀಯ ಪಕ್ಷದ ಅಂದಿನ ಜನಪ್ರತಿನಿಧಿಯೊಬ್ಬರು ಇದ್ದಾರೆ. ಕಾರ್ಯನಿರ್ವಹಣಾಧಿಕಾರಿಯವರ ಆದೇಶದ ವಿರುದ್ಧ ಕಾರ್ಯ ನಿರ್ವಹಣಾಧಿಕಾರಿಯವರಿಗೆ ನೀಡುವುದು ನ್ಯಾಯವೇ? ಅಧಿಕಾರಿಗಳ ಅಂಕಿತಕ್ಕೆ ಗೌರವವಿಲ್ಲವೇ? ಆದೇಶವನ್ನು ಅಲ್ಲಗೆಳೆದು ಪತ್ರಿಕಾ ಹೇಳಿಕೆ ನೀಡಿರುವುದು ಸರಿಯೇ? ಗೌರವಾನ್ವಿತ ನಮ್ಮ ಸಹೋದ್ಯೋಗಿಗಳಾದ ಹಿರಿಯ ಜನಪ್ರತಿನಿಧಿ, ಜನಹಿತಕ್ಕಾಗಿ ಸ್ಪಂದಿಸುವ, ಸಾಮಾಜಿಕ ಕಳಕಳಿಯ ಗ್ರಾಮ ಪಂಚಾಯತ್ ಸದಸ್ಯರಾದ ಜಗನ್ನಾಥ ಶೆಟ್ಟಿ ಮತ್ತು ಜಯಪ್ರಕಾಶ್ ಬದಿನಾರುರವರನ್ನು ಬೊಟ್ಟು ಮಾಡಿ ಮಾಧ್ಯಮಗಳಲ್ಲಿ ಹೇಳಿಕೆ ನೀಡುತ್ತಿರುವುದು ನ್ಯಾಯವೇ?
ಸದ್ರಿಯವರು ಸರಕಾರಕ್ಕೆ ನೀಡಿದ ಸುಳ್ಳು ದಾಖಲೆಗಳ ಮೋಸದ ಜಾಲವನ್ನು ಮುಚ್ಚಿ ಹಾಕಲು ಮಹಿಳೆ ಎಂದು ಹೇಳಿಕೊಂಡು ಪುರುಷರ ಮೇಲೆ ಸವಾರಿ ಮಾಡುವುದು ಯಾವ ನ್ಯಾಯ? ಆದುದರಿಂದ ತಾವುಗಳು ಪರಿಶೀಲಿಸಿ ನಮಗೆ ಸಾಮಾಜಿಕ ನ್ಯಾಯ ಒದಗಿಸಿ ಕೊಡಬೇಕಾಗಿ ಈ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

LEAVE A REPLY

Please enter your comment!
Please enter your name here