ಕಾಂಗ್ರೆಸ್‌ನಿಂದ ಹಿಜಾಬ್ ವಿಚಾರದಲ್ಲಿ ದ್ವಂದ್ವ ನಿಲುವಿನೊಂದಿಗೆ ಸದನದಲ್ಲಿ ಧ್ವಜ ಸಂಹಿತೆ ಉಲ್ಲಂಘನೆ

0

  • ಕಾಂಗ್ರೆಸ್‌ನಿಂದ ಚುನಾವಣೆ ದೃಷ್ಟಿಯಿಂದ ಗದ್ದಲ – ಶಾಸಕ ಸಂಜೀವ ಮಠಂದೂರು ಆರೋಪ

ಪುತ್ತೂರು: ಹಿಜಾಬ್ ವಿಚಾರದಲ್ಲಿ ಕಾಂಗ್ರೆಸ್ ಇಬ್ಬಗೆ ಧೋರಣೆ ಹೊಂದಿದೆ. ಇದರ ಜೊತೆಗೆ ಸದನದಲ್ಲಿ ಧ್ವಜ ಸಂಹಿತೆ ಉಲ್ಲಂಘನೆ ಮಾಡುವ ಮೂಲಕ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡುವ ಕೆಲಸ ಮಾಡಿದ್ದಾರೆ ಎಂದು ಶಾಸಕ ಸಂಜೀವ ಮಠಂದೂರು ಕಾಂಗ್ರೆಸ್ ವಿರುದ್ಧ ಆರೋಪ ವ್ಯಕ್ತಪಡಿಸಿದ್ದಾರೆ.


ಪುತ್ತೂರು ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಪತ್ರಿಕಾ ಮಾದ್ಯಮದವರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಫೆ.15 ರಿಂದ 25ರವರೆಗೆ ರಾಜ್ಯಪಾಲರ ಜಂಟಿ ಅಧಿವೇಶನ ನಿಗದಿಯಾಗಿತ್ತು. ಇಡೀ ರಾಜ್ಯದ ಅಭಿವೃದ್ಧಿಯ ಮುನ್ನೋಟವನ್ನು ಆ ಅಧಿವೇಶನದಲ್ಲಿ ರಾಜ್ಯಪಾಲರು ಮಂಡಿಸುತ್ತಾರೆ. ಈ ಬಾರಿ ಫೆ.14ರಂದು ರಾಜ್ಯಪಾಲರ ಜಂಟಿ ಅಧಿವೇಶನ ನಡೆದು, ವಂದನಾ ನಿರ್ಣಯ ಸಲ್ಲಿಸುವ ಅಜೆಂಡಾವನ್ನು ಸಭಾಧ್ಯಕ್ಷರು ಇಟ್ಟುಕೊಂಡಿದ್ದರು. 10 ದಿನದ ಅಧಿವೇಶನದಲ್ಲಿ ಮೊದಲ ದಿನ ರಾಜ್ಯಪಾಲರ ಭಾಷಣ, ಮರುದಿನ ನಿಧನರಾದ ಮಾಜಿ ಶಾಸಕರು, ಸಚಿವರಿಗೆ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮ ನಡೆದಿದೆ. ೩ನೇ ದಿನ ಕಾಂಗ್ರೆಸ್ ಸದಸ್ಯರು ಏಕಾಏಕಿ ಧರಣಿ ಕೂರಲು ಆರಂಭಿಸಿದರು. ರಾಜ್ಯದ ಬರ, ರೈತರ ಸಮಸ್ಯೆಗಳು, ಕೋವಿಡ್ ಇತ್ಯಾದಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾದ ವಿಧಾನಸಭೆ, ಪರಿಷತ್‌ನಲ್ಲಿ ಕಾಂಗ್ರೆಸ್‌ನವರು ಯಾವುದೇ ವಿಚಾರವಿಲ್ಲದೆ ಒಟ್ಟು ರಾಜಕೀಯ ಅಜೆಂಡಾದಿಂದ, ಮುಂದಿನ ಚುನಾವಣೆಯ ದೃಷ್ಟಿಯಿಂದ ಗದ್ದಲ ಮಾಡಿದರು. ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ರಾಜ್ಯದ ಹಿಜಾಬ್ ಸಹಿತ ಹಲವು ಜ್ವಲಂತ ಸಮಸ್ಯೆಯ ಬಗ್ಗೆ ಚರ್ಚೆ ಮಾಡಬೇಕಿತ್ತು. ಸಲಹೆ ಸೂಚನೆ ನೀಡಬೇಕಿತ್ತು. ಆದರೆ ಇದನ್ನು ಚರ್ಚಿಸಿದರೆ ನಮಗೆ ಹಿನ್ನಡೆಯಾಗಬಹುದು, ಅಲ್ಪಸಂಖ್ಯಾತರು ನಮ್ಮ ಕೈಬಿಡಬಹುದು ಎನ್ನುವ ಏಕೈಕ ಉದ್ದೇಶದಿಂದ ಈಶ್ವರಪ್ಪರ ವಿಚಾರ, ರಾಷ್ಟ್ರಧ್ವಜದ ವಿಚಾರವನ್ನಿಟ್ಟುಕೊಂಡು, ರಾಷ್ಟ್ರಧ್ವಜಕ್ಕೆ ಅಪಮಾನ ಮಾಡುವ ಕೆಲಸ ಮಾಡಿದ್ದಾರೆ. ರಾಷ್ಟ್ರಧ್ವಜದ ಹೆಸರಿನಲ್ಲಿ ರಾಜಕಾರಣ ಮಾಡಿದರು. ಪವಿತ್ರವಾದ ವಿಧಾನಸಭೆ ಮತ್ತು ಲೋಕಸಭೆಯನ್ನು ಅಪವಿತ್ರಗೊಳಿಸುವ ಕೆಲಸವನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ. ಕಾಂಗ್ರೆಸ್ ಒಡೆದ ಮನೆಯಾಗಿದೆ. ಸಿದ್ಧರಾಮಯ್ಯ ಉತ್ತರ ದಿಕ್ಕಿಗೆ ಹೋದರೆ ಡಿಕೆ ಶಿವಕುಮಾರ್ ದಕ್ಷಿಣಕ್ಕೆ ಹೋಗುತ್ತಾರೆ. ಮೇಕೆದಾಟು ವಿಚಾರದಲ್ಲಿ ಇದನ್ನು ಗಮನಿಸಿದ್ದೇವೆ. ಅದನ್ನು ವಿಧಾನಸಭೆಯಲ್ಲೂ ನಾನು ಗಮನಿಸಿದ್ದೇನೆ. ಧರಣಿ ವಿಚಾರದಲ್ಲೂ ನಮಗೆ ಗೊತ್ತಾಗಿದೆ. ಬಿಜೆಪಿ ಹಿಜಾಬ್ ವಿಚಾರದಲ್ಲಿ ಸ್ಪಷ್ಟ ನಿಲುವನ್ನು ಹೊಂದಿದ್ದರೂ ಕಾಂಗ್ರೆಸ್ ದ್ವಂದ್ವ ನಿಲುವು ಧೋರಣೆಯನ್ನು ಹೊಂದಿದೆ. ಜೊತೆಗೆ ಸದನದಲ್ಲಿ ಧ್ವಜ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್‌ಗೆ ಗೆಲ್ಲುವುದಿಲ್ಲವೆಂಬ ಹತಾಶ ಮನೋಭಾವನೆ:
ಶಿವಮೊಗ್ಗದಲ್ಲಿ ನಡೆದ ಹಿಂದೂ ಸಂಘಟನೆ ಕಾರ್ಯಕರ್ತ ಹರ್ಷ ಕೊಲೆಯನ್ನು ಮುಸ್ಲಿಂ ಮೂಲಭೂತವಾದಿಗಳು ಮಾಡಿದ್ದಾರೆ ಎಂದು ಸಚಿವ ಈಶ್ವರಪ್ಪ ನೀಡಿದ ಹೇಳಿಕೆಯನ್ನು ವಿವಾದ ಮಾಡಲಾಯಿತು. ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ಅವರು ಈಶ್ವರಪ್ಪರವರನ್ನು ದೇಶದ್ರೋಹದ ವಿಚಾರದಲ್ಲಿ ದೂಶಿಸುವ ಕೆಲಸ ಮಾಡಿದ್ದಾರೆ. ಆದರೆ ಈಶ್ವರಪ್ಪ ಅವರು ಹೇಳಿದ ಮಾತು ಸತ್ಯ ಎಂಬುದು ಸಾಬೀತಾಗಿದೆ. ಕೊಲೆ ಆರೋಪಿಗಳಾದ ಮುಸ್ಲಿಂ ಮೂಲಭೂತವಾದಿ ಯುವಕರನ್ನು ಬಂಧಿಸಲಾಗಿದೆ. ಈ ನಿಟ್ಟಿನಲ್ಲಿ ಬಿ.ಕೆ ಹರಿಪ್ರಸಾದ್ ಅವರ ಹೇಳಿಕೆಯನ್ನು ನಾವು ಖಂಡಿಸುತ್ತೇವೆ ಎಂದ ಅವರು ಕಾಂಗ್ರೆಸ್ ಯಾವ ರೀತಿಯಲ್ಲಿ ದೇಶದ್ರೋಹದ ಕೆಲಸ ಮಾಡಿದೆ, ಯಾವ ರೀತಿ ತುರ್ತು ಪರಿಸ್ಥಿತಿ ಮಾಡಿದೆ. ಎಷ್ಟು ಜನ ನಿರಪರಾಧಿಗಳನ್ನು ಜೈಲಿಗೆ ಹಾಕಿದೆ ಎಂಬುದನ್ನು ಇತಿಹಾಸದ ಪುಟವನ್ನು ಕಾಂಗ್ರೆಸ್‌ನ ನಾಯಕರು ನೋಡಬೇಕು. ಇಡೀ ಕಾಂಗ್ರೆಸ್ ದೇಶದಲ್ಲಿ ಮತ್ತೊಮ್ಮೆ ಸೋಲುತ್ತದೆ ಎಂಬ ಹತಾಶ ಮನೋಭಾವದಿಂದ ಇಂತಹ ಕೆಲಸ ಮಾಡುತ್ತಿದೆ ಎಂದು ಸಂಜೀವ ಮಠಂದೂರು ಹೇಳಿದರು.

ಫೆ. 28ಕ್ಕೆ ಕೇಂದ್ರ ಸಚಿವರು ಮಂಗಳೂರಿಗೆ ಪುತ್ತೂರಿನಿಂದ 1,500 ಮಂದಿ ಪಾಲ್ಗೊಳ್ಳೂವಿಕೆ

ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 1800 ಕೋಟಿ ರೂ ಯೋಜನೆ, ಬಿಸಿರೋಡ್‌ನಿಂದ ಅಡ್ಡಹೊಳೆಯವರೆಗೆ ಕಾಮಗಾರಿಗಳು ನಡೆಯುತ್ತಿದೆ. ಇದಕ್ಕೆ ವೇಗ ಕೊಡುವ ದೃಷ್ಟಿಯಿಂದ, ಕಾಲಮಿತಿಯಲ್ಲಿ ಮುಗಿಸಬೇಕೆನ್ನುವ ನಿಟ್ಟಿನಲ್ಲಿ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ, ಮುಖ್ಯಮಂತ್ರಿಗಳು, ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್‌ರ ಉಪಸ್ಥಿತಿಯಲ್ಲಿ ಫೆ.28ರಂದು ಸಂಜೆ 4ಗಂಟೆಗೆ ಮಂಗಳೂರಿನ ಕುಲಶೇಖರದಲ್ಲಿರುವ ಕೊರ್ಡೆಲ್ ಹಾಲ್ ಮೈದಾನದಲ್ಲಿ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ. ಮಂಗಳೂರಿನಿಂದ ಚೆನ್ನೈಪೋರ್ಟ್  ಸಂಪರ್ಕ ಕಲ್ಪಿಸುವ ಹೆದ್ದಾರಿಗೆ ಸಂಪರ್ಕಿಸುವ ಶಿರಾಡಿ ಘಾಟ್‌ನಲ್ಲಿ ಸುರಂಗ ಮಾರ್ಗವನ್ನು ಶೀಘ್ರ ನಿರ್ಮಿಸುವ   ಬಗ್ಗೆ  ಒತ್ತಡ ತರಲು, ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥಗೊಳಿಸಬೇಕು, ಮಂಗಳೂರು ಮೂಡುಬಿದಿರೆ ಶಿವಮೊಗ್ಗ ರಸ್ತೆ, ಮಂಗಳೂರು-ಬೆಳ್ತಂಗಡಿ-ಚಾರ್ಮಾಡಿ ಹೆದ್ದಾರಿ ಅಭಿವೃದ್ಧಿಗೆ ಹೆಚ್ಚುವರಿ ಅನುದಾನವನ್ನು ಪಡೆದುಕೊಳ್ಳಲು ದೊಡ್ಡ ಕಾರ್ಯಕ್ರಮವನ್ನು ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಸುಮಾರು  10 ಸಾವಿರ ಜನರು ಭಾಗವಹಿಸುತ್ತಿದ್ದಾರೆ. ಪುತ್ತೂರು ವಿಧಾನಸಭಾ ಕ್ಷೇತ್ರದಿಂದ 1,500 ಜನರು ಭಾಗವಹಿಸಲಿದ್ದಾರೆ  . 25 ಬಸ್‌ಗಳನ್ನು ನಿಗದಿ ಮಾಡಲಾಗಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷ ಜೀವಂಧರ ಜೈನ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜಾ ರಾಧಾಕೃಷ್ಣ ಆಳ್ವಾ, ನಗರ ಮಂಡಲ ಅಧ್ಯಕ್ಷ ಪಿ.ಜಿ. ಜಗನ್ನಿವಾಸ ರಾವ್, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಯುವರಾಜ್ ಪೆರಿಯತ್ತೋಡಿ, ಪುರುಷೋತ್ತಮ ಮುಂಗ್ಲಿಮನೆ, ನಿತೀಶ್ ಕುಮಾರ್ ಶಾಂತಿವನ, ಜಯಶ್ರೀ ಎಸ್ ಶೆಟ್ಟಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here