ಗೋಳಿತ್ತೊಟ್ಟು ಗ್ರಾ.ಪಂ. ವಿಶೇಷ ಗ್ರಾಮಸಭೆ

0

  • ಸಾಮಾಜಿಕ ಪರಿಶೀಲನೆಗೆ ಕಡತ ನೀಡದೇ ಇರುವುದಕ್ಕೆ ಗ್ರಾಮಸ್ಥರ ಆಕ್ರೋಶ
  • ಅವ್ಯವಹಾರದ ಆರೋಪ-ಸಭೆ ಬಹಿಷ್ಕಾರ, ಜಿಪಂ ಸಿಇಒ ನೇತೃತ್ವದಲ್ಲಿ ಮತ್ತೆ ಸಭೆಗೆ ಒತ್ತಾಯ

 

ನೆಲ್ಯಾಡಿ: 14ನೇ ಹಣಕಾಸು ಯೋಜನೆ ಅನುದಾನದಲ್ಲಿ ನಿರ್ವಹಿಸಿದ ಕೆಲವೊಂದು ಕಾಮಗಾರಿಗಳಿಗೆ ಸಂಬಂಧಿಸಿದ ಕಡತಗಳನ್ನು ಸಾಮಾಜಿಕ ಪರಿಶೀಲನೆಗೆ ಗ್ರಾಮ ಪಂಚಾಯತ್‌ನಿಂದ ನೀಡದೇ ಇರುವುದಕ್ಕೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಈ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದ್ದು ಜಿ.ಪಂ.ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯವರ ನೇತೃತ್ವದಲ್ಲಿ ಮತ್ತೆ ವಿಶೇಷ ಗ್ರಾಮಸಭೆ ಕರೆಯುವಂತೆ ಒತ್ತಾಯಿಸಿ ಸಭೆ ಬಹಿಷ್ಕರಿಸಿ ತೆರಳಿದ ಘಟನೆ ಫೆ.24ರಂದು ನಡೆದ ಗೋಳಿತ್ತೊಟ್ಟು ಗ್ರಾ.ಪಂ.ನ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮಸಭೆಯಲ್ಲಿ ನಡೆದಿದೆ.

ಗೋಳಿತ್ತೊಟ್ಟು ಗ್ರಾ.ಪಂ.ನ 2020-21ನೇ ಸಾಲಿನ ದ್ವಿತೀಯ ಹಂತದ ಮತ್ತು 2021-22ನೇ ಸಾಲಿನ ಪ್ರಥಮ ಹಂತದ ಹಾಗೂ ಕೇಂದ್ರ 14ನೇ ಮತ್ತು ೧೫ನೇ ಹಣಕಾಸು ಯೋಜನೆಯ ವಿಶೇಷ ಗ್ರಾಮಸಭೆ ಫೆ.24ರಂದು ಬೆಳಿಗ್ಗೆ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಬೇಕಿದ್ದ ಸಾಮಾಜಿಕ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಪಿ.ಕೆ.ವಿದ್ಯಾರಾಣಿಯವರ ಗೈರು ಹಾಜರಿ ಹಿನ್ನೆಲೆಯಲ್ಲಿ ಹಿರಿಯ ಗ್ರಾಮಸ್ಥನ ನೆಲೆಯಲ್ಲಿ ಎಪಿಎಂಸಿ ಸದಸ್ಯ ಕುಶಾಲಪ್ಪ ಗೌಡ ಅನಿಲರವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

2020-21ನೇ ಸಾಲಿನ 14ನೇ ಹಣಕಾಸು ಯೋಜನೆಯ ಅನುದಾನದಲ್ಲಿ ನಡೆದ ಕಾಮಗಾರಿಗಳ ವಿವರಗಳನ್ನು ಗ್ರಾಮ ಸಂಪನ್ಮೂಲ ವ್ಯಕ್ತಿ ಸಭೆಗೆ ಮಂಡಿಸಿದರು. ಇದರಲ್ಲಿ ಬಹುತೇಕ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಪರಿಶೀಲನೆಗೆ ಕಡತ ನೀಡಿರುವುದಿಲ್ಲ ಎಂದು ಷರಾ ಬರೆಯಲಾಗಿತ್ತು. ಈ ವಿಚಾರವನ್ನು ಸಭೆಯಲ್ಲಿ ಪ್ರಸ್ತಾಪಿಸಿದ ಗ್ರಾಮಸ್ಥರಾದ ಅಬ್ದುಲ್ ಕುಂಞಿ ಕೊಂಕೋಡಿ, ರಘು ಪಾಲೇರಿ, ಕೆ.ಪಿ.ಪ್ರಸಾದ್ ಸುಲ್ತಾಜೆ, ಜಯಂತ ಅಂಬರ್ಜೆ ಮತ್ತಿತರರು, ಕಡತ ನೀಡದೇ ಇರುವುದಕ್ಕೆ ಕಾರಣಗಳೇನು ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನರೇಗಾ ಯೋಜನೆಯ ಕಡಬ ತಾಲೂಕು ಸಂಯೋಜಕ ಪ್ರವೀಣ್‌ರವರು, ಕಾಮಗಾರಿಯ ಪರಿಶೋಧನೆಯ ಸಂದರ್ಭದಲ್ಲಿ ಕಡತ ಸಿಕ್ಕಿರುವುದಿಲ್ಲ. ಈ ಬಗ್ಗೆ ಷರಾ ಬರೆಯಲಾಗಿದೆ. ಇದನ್ನು ನಿರ್ಣಯ ಪುಸ್ತಕದಲ್ಲೂ ಉಲ್ಲೇಖಿಸಲಾಗುವುದು ಎಂದರು. ಆದರೂ ಸಮಾಧಾನಗೊಳ್ಳದ ಗ್ರಾಮಸ್ಥರು, ವರದಿಯಲ್ಲಿ ಉಲ್ಲೇಖಿಸಿರುವ ಕೆಲವೊಂದು ಕಾಮಗಾರಿಗಳನ್ನು ಪ್ರಸ್ತಾಪಿಸಿ ಅದಕ್ಕೆ ಸಂಬಂಧಿಸಿದ ಕಡತ ಸಭೆಗೆ ಮಂಡಿಸುವಂತೆ ಒತ್ತಾಯಿಸಿದರು. ಈ ಬಗ್ಗೆ ಚರ್ಚೆ ನಡೆಯುತ್ತಿದ್ದಂತೆ ಸಭೆಗೆ ಆಗಮಿಸಿ ಪ್ರತಿಕ್ರಿಯಿಸಿದ ಸಿಬ್ಬಂದಿ ಬಾಬು ನಾಯ್ಕ್‌ರವರು ಕಾಮಗಾರಿಗಳ ಕಡತ ಆಡಿಟ್‌ಗೆ ನೆಲ್ಯಾಡಿಗೆ ಕೊಂಡೊಯ್ಯಲಾಗಿದೆ. ಸಂಜೆ ವೇಳೆಗೆ ಕಚೇರಿಗೆ ಬಂದಲ್ಲಿ ಕಡತ ಪರಿಶೀಲಿಸಬಹುದೆಂದು ಹೇಳಿದರು. ಇದಕ್ಕೆ ಗ್ರಾಮಸ್ಥರಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು.

8 ತಿಂಗಳ ಹಿಂದಿನ ಆಡಿಟ್:
ಈಗ ಸಭೆಗೆ ಮಂಡಿಸಿರುವ ವರದಿ 8 ತಿಂಗಳ ಹಿಂದೆ ನಡೆದಿರುವ ಆಡಿಟ್ ವರದಿಯಾಗಿದೆ. ಆಗಲೇ ಕಡತ ಸಿಗಲಿಲ್ಲವಾಗಿದ್ದರೇ ಈಗ ಕಡತ ಎಲ್ಲಿಂದ ಸಿಗುತ್ತದೆ. ಕಡತವೇ ಇಲ್ಲ ಎಂದಾದರೇ ಬಿಲ್ಲು ಹೇಗೆ ಪಾವತಿಯಾಗಿದೆ. ಇನ್ನು ಹೊಸ ಕಡತ ಸಿದ್ಧಪಡಿಸಲಾಗುತ್ತದೆಯೇ ಎಂದು ಗ್ರಾಮಸ್ಥರು ಪ್ರಶ್ನಿಸಿದರು.

ಪಿಡಿಒ ಫೋನ್ ಕರೆ:
ಫೈಲ್ ಇಲ್ಲದೇ ಇರುವ ವಿಚಾರದ ಕುರಿತು ಸಭೆಯಲ್ಲಿ ಗಂಭೀರ ಚರ್ಚೆ ನಡೆಯುತ್ತಿದ್ದಂತೆ ಗ್ರಾ.ಪಂ.ನಲ್ಲಿ ಈ ಹಿಂದೆ ಸೇವೆ ಸಲ್ಲಿಸಿದ ಪಿಡಿಒ ಒಬ್ಬರು ಗ್ರಾಮಸ್ಥ ಅಬ್ದುಲ್ ಕುಂಞಿಯವರ ಮೊಬೈಲ್‌ಗೆ ಕರೆ ಮಾಡಿ ಫೈಲ್‌ಗಳು ಇವೆ ಎಂದು ಹೇಳಿದರು. ಈ ವಿಚಾರವನ್ನು ಅಬ್ದುಲ್ ಕುಂಞಿಯವರು ಸಭೆಯ ಗಮನಕ್ಕೆ ತಂದರು. ಈ ಬಗ್ಗೆಯೂ ಚರ್ಚೆ ನಡೆಯಿತು. ಒಟ್ಟಿನಲ್ಲಿ ಇಲ್ಲಿ ನಡೆದ ಕೆಲವೊಂದು ಕಾಮಗಾರಿಗಳು ಪಾರದರ್ಶಕವಾಗಿಲ್ಲ. ಗೋಲ್‌ಮಾಲ್ ಎಸಗಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಉನ್ನತ ಮಟ್ಟದ ತನಿಖೆಯೂ ಆಗಬೇಕು. ಆದ್ದರಿಂದ ಇಂದಿನ ಸಭೆಯನ್ನು ಮೊಟಕುಗೊಳಿಸಿ ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ನೇತೃತ್ವದಲ್ಲಿ ಮತ್ತೆ ಸಭೆ ನಡೆಸಬೇಕು ಹಾಗೂ 2020-21ನೇ ಅವಧಿಯಲ್ಲಿ ಪಿಡಿಒ ಆಗಿದ್ದವರನ್ನೂ ಸಭೆಗೆ ಕರೆಸಬೇಕೆಂದು ಒತ್ತಾಯಿಸಿ ಸಭೆಯಿಂದ ಗ್ರಾಮಸ್ಥರು ಹೊರ ನಡೆದರು. ಸಭೆ ಆರಂಭದಲ್ಲಿಯೇ ನೋಡೆಲ್ ಅಧಿಕಾರಿಯವರ ಗೈರು ಹಾಜರಿಯಲ್ಲಿ ಎಪಿಎಂಸಿ ಸದಸ್ಯ ಕುಶಾಲಪ್ಪ ಗೌಡರವರ ಅಧ್ಯಕ್ಷತೆಯಲ್ಲಿ ಸಭೆ ನಡೆಸುವುದಕ್ಕೂ ಆಕ್ಷೇಪ ವ್ಯಕ್ತವಾಯಿತು. ಈ ಬಗ್ಗೆ ನರೇಗಾ ತಾಲೂಕು ಸಂಯೋಜಕ ಪ್ರವೀಣ್‌ರವರು ಸಮಾಜಾಯಿಷಿಕೆ ನೀಡಿದ ಬಳಿಕ ಸಭೆ ಮುಂದುವರಿಸಲಾಯಿತು.

ಗ್ರಾ.ಪಂ. ಅಧ್ಯಕ್ಷ ಜನಾರ್ದನ ಗೌಡ, ಉಪಾಧ್ಯಕ್ಷೆ ಶೋಭಾಲತಾ, ಪಿಡಿಒ ಜಗದೀಶ್ ನಾಯ್ಕ್, ಕಾರ್ಯದರ್ಶಿ ಚಂದ್ರಾವತಿ ಎನ್., ತಾಂತ್ರಿಕ ಸಹಾಯಕ ಅಭಿಯಂತರ ಮನೋಜ್‌ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸದಸ್ಯರುಗಳಾದ ವಿ.ಸಿ.ಜೋಸೆಫ್, ಹೇಮಲತಾ, ಎ.ಬಾಲಕೃಷ್ಣ ಗೌಡ, ಕೆ.ಬಾಬು ಪೂಜಾರಿ, ಶಿವಪ್ರಸಾದ್ ಎಸ್.ಎಸ್., ವಾರಿಜಾಕ್ಷಿ, ಪ್ರಜಲ, ಸವಿತಾ ಕೆ., ಗುಲಾಬಿ, ಜೀವಿತಾ, ಜಾನಕಿ, ಸಂಧ್ಯಾ, ನೋಣಯ್ಯ ಗೌಡ, ಪದ್ಮನಾಭ ಪೂಜಾರಿ, ಶೃತಿ ಸಭೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಚಂದ್ರಾವತಿ ಎನ್.,ಸ್ವಾಗತಿಸಿದರು. ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here