ನೆಲ್ಯಾಡಿ: ಗ್ರಾ.ಪಂ.ಗ್ರಂಥಾಲಯ, ಗೋದಾಮು ಕಟ್ಟಡ ಉದ್ಘಾಟನೆ

0

  • ಗ್ರಾಮ ಪಂಚಾಯತ್ ಕೋಲ್ಡ್ ಸ್ಟೋರೇಜ್ ವ್ಯವಸ್ಥೆ ಮಾಡಿಕೊಳ್ಳಬೇಕು; ಎಸ್.ಅಂಗಾರ

 

ನೆಲ್ಯಾಡಿ: ನೆಲ್ಯಾಡಿ ಗ್ರಾಮ ಪಂಚಾಯತ್‌ನ ಗೋದಾಮು ಕಟ್ಟಡ, ಗ್ರಂಥಾಲಯ ಕಟ್ಟಡ ಹಾಗೂ ಪುಸ್ತಕಗೂಡು ಮಾ.2ರಂದು ಉದ್ಘಾಟನೆಗೊಂಡಿತು. ಮೀನುಗಾರಿಕೆ, ಬಂದರು ಹಾಗೂ ಒಳನಾಡು ಸಾರಿಗೆ ಸಚಿವ ಎಸ್.ಅಂಗಾರರವರು ಉದ್ಘಾಟಿಸಿದರು. ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ರೈತರು ತಾವು ಬೆಳೆದ ಉತ್ಪನ್ನಗಳಿಗೆ ತಾವೇ ಮಾರುಕಟ್ಟೆ ಮಾಡಿಕೊಳ್ಳಬೇಕು. ಇದರಿಂದ ಹೆಚ್ಚಿನ ಲಾಭ ಪಡೆದು ರೈತರು ಆರ್ಥಿಕವಾಗಿಯೂ ಬಲಗೊಳ್ಳಬಹುದು. ಇದಕ್ಕಾಗಿ ಗ್ರಾಮ ಪಂಚಾಯತ್‌ನ ಗೋದಾಮು ಕಟ್ಟಡಗಳ ಸದ್ಬಳಕೆ ಮಾಡಿಕೊಳ್ಳಬೇಕು. ಪಂಚಾಯತ್‌ಗಳಿಗೂ ಗೋದಾಮು ಕಟ್ಟಡಗಳಿಂದ ಆದಾಯ ಬರಬೇಕು. ಆದ್ದರಿಂದ ಗ್ರಾಮ ಪಂಚಾಯಿತಿ ಗೋದಾಮುಗಳಲ್ಲಿ ಕೋಲ್ಡ್ ಸ್ಟೋರೇಜ್ ವ್ಯವಸ್ಥೆ ಮಾಡಬೇಕು. ಇದರಿಂದ ತರಕಾರಿಗಳ ಸಂಗ್ರಹ, ಗುಣಮಟ್ಟ ಕಾಪಾಡಲು ಸಾಧ್ಯವಿದೆ ಎಂದರು. ಕೇಂದ್ರ ಸರಕಾರ ಆರ್ಥಿಕ ಉತ್ತೇಜನಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಸ್ವ ಉದ್ಯೋಗಕ್ಕೆ ಹೆಚ್ಚಿನ ಮಹತ್ವ ನೀಡುವ ನಿಟ್ಟಿನಲ್ಲಿ ಪ್ರಧಾನಿಯವರು ಯೋಜನೆ ಅಳವಡಿಸಿಕೊಂಡಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಬರುವ ಯೋಜನೆಗಳನ್ನು ಜನರಿಗೆ ಮುಟ್ಟಿಸುವಲ್ಲಿ ಎಲ್ಲರೂ ಪ್ರಾಮಾಣಿಕ ಕೆಲಸ ನಿರ್ವಹಿಸಬೇಕೆಂದು ಹೇಳಿದ ಎಸ್.ಅಂಗಾರರವರು, ಗ್ರಂಥಾಲಯದಿಂದ ಓದುಗರ ಸಂಖ್ಯೆ ಹೆಚ್ಚಾಗಿ ಜನರಲ್ಲಿ ಜ್ಞಾನವೂ ವೃದ್ಧಿಯಾಗಲಿ ಎಂದು ಎಸ್.ಅಂಗಾರರವರು ಹೇಳಿದರು. ಗ್ರಾ.ಪಂ.ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್‌ರವರು ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು. ಗ್ರಾ.ಪಂ.ಅಧ್ಯಕ್ಷೆ ಚೇತನ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಎಪಿಎಂಸಿ ಸದಸ್ಯ ಬಾಲಕೃಷ್ಣ ಬಾಣಜಾಲು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ ಎಸ್.ಗೌಡ, ತಾ.ಪಂ.ಮಾಜಿ ಸದಸ್ಯೆ ಉಷಾ ಅಂಚನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

 

ಗ್ರಾ.ಪಂ.ಸದಸ್ಯ ಜಯಾನಂದ ಬಂಟ್ರಿಯಾಲ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪಿಡಿಒ ಮಂಜುಳ ಎನ್. ವಂದಿಸಿದರು. ಗ್ರಾ.ಪಂ.ಸದಸ್ಯರುಗಳಾದ ಶ್ರೀಲತಾ, ರೇಷ್ಮಾಶಶಿ, ಉಷಾಜೋಯಿ, ಜಯಂತಿ, ಜಯಲಕ್ಷ್ಮೀ ಪ್ರಸಾದ್, ರವಿಪ್ರಸಾದ್ ಶೆಟ್ಟಿ, ಅಬ್ದುಲ್ ಸಲಾಂ, ಆನಂದ ಪಿಲವೂರು, ಪ್ರಕಾಶ್ ಪೂಜಾರಿ, ಮೊಹಮ್ಮದ್ ಇಕ್ಬಾಲ್, ಜಿ.ಪಂ.ಮಾಜಿ ಸದಸ್ಯ ಸರ್ವೋತ್ತಮ ಗೌಡ, ಮಾಜಿ ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆ, ಮಾಜಿ ಸದಸ್ಯರಾದ ಚಿತ್ರಾ ರಾಮನಗರ, ತೀರ್ಥೇಶ್ವರ ಉರ್ಮಾನು, ಮೋಹಿನಿ, ಲೈಲಾತೋಮಸ್, ನೋಟರಿ ನ್ಯಾಯವಾದಿ ಇಸ್ಮಾಯಿಲ್, ಕೌಕ್ರಾಡಿ ಗ್ರಾ.ಪಂ.ಸದಸ್ಯ ಲೋಕೇಶ್ ಬಾಣಜಾಲು, ನೆಲ್ಯಾಡಿ ಸರಕಾರಿ ಉ.ಹಿ.ಪ್ರಾ.ಶಾಲಾ ಮುಖ್ಯಶಿಕ್ಷಕ ಆನಂದ ಅಜಿಲ, ರಮೇಶ್ ಶೆಟ್ಟಿ ಬೀದಿ, ಅಣ್ಣಿ ಎಲ್ತಿಮಾರ್ ಮತ್ತಿತರರು ಉಪಸ್ಥಿತರಿದ್ದರು.

 


ಅನುದಾನದ ಭರವಸೆ:
ನಾದುರಸ್ತಿಯಲ್ಲಿರುವ ಹೊಸವೊಕ್ಲು ಎಂಬಲ್ಲಿನ ಸೇತುವೆ ಪುನರ್ ನಿರ್ಮಾಣ, ಜನತಾ ಕಾಲೋನಿ ರಸ್ತೆ ಅಭಿವೃದ್ಧಿ, ಎಸ್‌ಸಿ,ಎಸ್‌ಟಿ ಕಾಲೋನಿ ರಸ್ತೆಗಳ ಅಭಿವೃದ್ಧಿ, ಪುತ್ಯೆ ರಸ್ತೆ ಅಭಿವೃದ್ಧಿ, ನೆಲ್ಯಾಡಿ ಸರಕಾರಿ ಉನ್ನತ ಹಿ.ಪ್ರಾ.ಶಾಲೆಗೆ ಕೊಠಡಿ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಅನುದಾನ ಒದಗಿಸಿಕೊಡುವುದಾಗಿ ಸಚಿವ ಎಸ್.ಅಂಗಾರ ಅವರು ಈ ವೇಳೆ ಭರವಸೆ ನೀಡಿದರು.

 


ಸನ್ಮಾನ:
ಗ್ರಂಥಾಲಯ ಕಟ್ಟಡ ನಿರ್ಮಾಣದ ಕಾಮಗಾರಿ ನಿರ್ವಹಿಸಿದ ನಿರ್ಮಿತಿ ಕೇಂದ್ರದ ಇಂಜಿನಿಯರ್ ಹರೀಶ್, ಗೋದಾಮು ಕಟ್ಟಡದ ಕಾಮಗಾರಿ ನಿರ್ವಹಣೆ ಮಾಡಿದ ಉದ್ಯೋಗ ಖಾತರಿ ಯೋಜನೆಯ ಇಂಜಿನಿಯರ್‌ಗಳಾದ ಮನೋಜ್, ಶ್ರೀಲಕ್ಷ್ಮೀ, ಪಿಡಬ್ಲ್ಯುಡಿ ಗುತ್ತಿಗೆದಾರ ಪಾಪಚ್ಚನ್‌ರವರಿಗೆ ಶಾಲುಹಾಕಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here