ನೆಲ್ಯಾಡಿ : ಸಂತಜಾರ್ಜ್ ವಿದ್ಯಾಸಂಸ್ಥೆಯಲ್ಲಿ ವಾರ್ಷಿಕ ಸ್ನೇಹ ಸಮ್ಮಿಲನ-ಅಕ್ಷರ ಸಂತ ಪದ್ಮಶ್ರೀ ಹರೇಕಳ ಹಾಜಬ್ಬರಿಗೆ ಸನ್ಮಾನ

0

  • ಇಂಗ್ಲಿಷ್ ಬಾರದೇ ಮುಜುಗರಗೊಂಡಿರುವುದೇ ಶಿಕ್ಷಣ ಸಂಸ್ಥೆ ಆರಂಭಕ್ಕೆ ಪ್ರೇರಣೆ; ಹಾಜಬ್ಬ

ನೆಲ್ಯಾಡಿ: ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೀಲನ-2022 ಹಾಗೂ ಅಕ್ಷರ ಸಂತ ಪದ್ಮಶ್ರೀ ಹರೇಕಳ ಹಾಜಬ್ಬ, ನಿವೃತ್ತ ಮುಖ್ಯಶಿಕ್ಷಕ ಚಂದ್ರಶೇಖರ ಪೆರಾಲ್‌ರವರಿಗೆ ಅಭಿನಂದನಾ ಕಾರ್ಯಕ್ರಮ ಮಾ.2ರಂದು ನಡೆಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅಕ್ಷರ ಸಂತ ಪದ್ಮಶ್ರೀ ಹರೇಕಳ ಹಾಜಬ್ಬರವರು, ಕಿತ್ತಳೆ ಹಣ್ಣಿನ ಬೆಲೆಯನ್ನು ವಿದೇಶಿಗರು ಇಂಗ್ಲಿಷ್‌ನಲ್ಲಿ ಕೇಳಿದಾಗ ಅರ್ಥವಾಗದೆ ಮುಜುಗರಗೊಂಡ ವೇಳೆಯಲ್ಲಿಯೇ ಶಿಕ್ಷಣ ಸಂಸ್ಥೆ ಆರಂಭಿಸುವ ಕನಸು ಚಿಗುರೊಡೆಯಿತು. ಇದರ ಫಲವಾಗಿಯೇ ನ್ಯೂ ಪಡ್ಪುನಲ್ಲಿ ಸರಕಾರಿ ಶಾಲೆ ಆರಂಭಗೊಂಡಿದೆ. ಈಗ ಇಲ್ಲಿ ೧ ರಿಂದ ೧೦ನೇಯ ತನಕ ತರಗತಿ ನಡೆಯುತ್ತಿದ್ದು ೧.೩೩ ಎಕ್ರೆ ಜಾಗ ಶಾಲೆಯ ಹೆಸರಿನಲ್ಲಿದೆ. ಮುಂದೆ ಪಿಯುಸಿ ವಿಭಾಗ ಆರಂಭಗೊಳ್ಳಬೇಕೆಂಬುದು ನಮ್ಮ ಕನಸು ಆಗಿದೆ ಎಂದರು. ೧೯೭೮ರಿಂದ ೨೦೧೪ರ ತನಕ ಮಂಗಳೂರಿನ ಹಂಪನಕಟ್ಟೆಯಲ್ಲಿ ಕಿತ್ತಳೆ ಹಣ್ಣು ಮಾರಾಟ ಮಾಡಿದ್ದೇನೆ. ಈ ಸಂದರ್ಭದಲ್ಲಿ ನೆಲ್ಯಾಡಿ ಭಾಗದಿಂದಲೂ ಹಂಪನಕಟ್ಟೆಗೆ ಬರುತ್ತಿದ್ದ ನೂರಾರು ಮಂದಿ ನನ್ನಿಂದ ಕಿತ್ತಳೆ ಹಣ್ಣು ಖರೀದಿಸಿದ್ದಾರೆ ಎಂದು ನೆನಪಿಸಿಕೊಂಡ ಹಾಜಬ್ಬರವರು, ಇದೀಗ ನೆಲ್ಯಾಡಿಗೆ ಆಹ್ವಾನಿಸಿ ಸನ್ಮಾನಿಸಿರುವುದಕ್ಕೆ ಚಿರಋಣಿಯಾಗಿದ್ದೇನೆ. ನಾವು ಮಾಡುವ ಸೇವೆ ಇನ್ನೊಬ್ಬರಿಗೆ ದಾರಿದೀಪವಾಗಲಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೂ ಹಾಜಬ್ಬರವರು ಉತ್ತರಿಸಿದರು.

ಇನ್ನೋರ್ವ ಸನ್ಮಾನಿತರಾದ ನಿವೃತ್ತ ಮುಖ್ಯಶಿಕ್ಷಕ, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರೂ ಆದ ಚಂದ್ರಶೇಖರ ಪೆರಾಲ್‌ರವರು ಮಾತನಾಡಿ, ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕ ವೃತ್ತಿ ಆರಂಭಿಸಿ ೧೦ ವರ್ಷ ಸೇವೆ ಸಲ್ಲಿಸಿದ್ದೇನೆ. ಇಲ್ಲಿ ವ್ಯಕ್ತಿತ್ವ ಬದಲಾವಣೆಗೆ ಸಂಪೂರ್ಣ ಸಹಕಾರ ಸಿಕ್ಕಿದೆ. ಸಂಸ್ಥೆಯ ಸಂಚಾಲಕರಾದ ಅಬ್ರಹಾಂ ವರ್ಗೀಸ್‌ರವರಿಂದ ಸಂಪೂರ್ಣ ಪ್ರೋತ್ಸಾಹ ಸಿಕ್ಕಿದೆ ಎಂದು ನೆನಪಿಸಿಕೊಂಡ ಅವರು, ವಿದ್ಯಾರ್ಥಿಗಳು ಸವಾಲುಗಳನ್ನು ಸ್ವೀಕರಿಸಿಕೊಂಡು ವಿವೇಕ, ನೈತಿಕತೆ ಬೆಳೆಸಿಕೊಂಡು ದೇಶದ ಸತ್ಪ್ರಜೆಗಳಾಗಿ ಬೆಳೆಯಬೇಕೆಂದು ಹೇಳಿದರು.

 

ಅಭಿನಂದಿಸಿ ಮಾತನಾಡಿದ ಸಂಸ್ಥೆಯ ಸಂಚಾಲಕ ಅಬ್ರಹಾಂ ವರ್ಗೀಸ್‌ರವರು, ಶಿಕ್ಷಣ ಸಂಸ್ಥೆ ಸ್ಥಾಪಿಸುವ ಕನಸು ಕಂಡು ಅದನ್ನು ನನಸು ಮಾಡಿದವರು ಹರೇಕಳ ಹಾಜಬ್ಬ. ಅವರ ಈ ಸಾಧನೆಗೆ ಭಾರತ ಸರಕಾರ ನೀಡುವ ನಾಲ್ಕನೇಯ ಅತಿದೊಡ್ಡ ನಾಗರಿಕ ಪ್ರಶಸ್ತಿ ಲಭಿಸಿದೆ. ೨೦೦೬ರಲ್ಲಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿಯೂ ಬಂದಿದೆ. ಸಿಎನ್‌ಎನ್-ಐಬಿಎನ್ ಪ್ರಶಸ್ತಿಯೂ ದೊರೆತಿದೆ. ಅವರು ನನಗೆ ಬಂದ ಪ್ರಶಸ್ತಿಯ ಮೊತ್ತವನ್ನು ಮನೆಗೆ, ಕುಟುಂಬಕ್ಕೆ ಉಪಯೋಗಿಸಿಲ್ಲ. ಶಾಲೆಯ ಅಭಿವೃದ್ಧಿಗೆ ಬಳಕೆ ಮಾಡಿದ್ದಾರೆ. ಅವರದ್ದು ನಿಸ್ವಾರ್ಥ ಸೇವೆ. ಅವರ ಜೀವನ ಚರಿತ್ರೆಯನ್ನು ವಿದ್ಯಾರ್ಥಿಗಳು ಆದರ್ಶವಾಗಿಟ್ಟುಕೊಳ್ಳಬೇಕೆಂದು ಹೇಳಿದರು.

ಸಂತಜಾರ್ಜ್ ವಿದ್ಯಾಸಂಸ್ಥೆಗಳ ಆಡಳಿತ ಸಮಿತಿ ಅಧ್ಯಕ್ಷ ಬಿಷಪ್ ಮಾರ್ಕೋಸ್ ಮೋರ್ ಕ್ರಿಸೋಸ್ಟಮಸ್‌ರವರು ಆಶೀರ್ವಚನ ನೀಡಿದರು. ಆಡಳಿತ ಮಂಡಳಿ ಉಪಾಧ್ಯಕ್ಷ ವೆ|ರೆ|ಜಾನ್ ವರ್ಗೀಸ್ ಕೋರ್ ಎಪಿಸ್ಕೋಪ ಅಧ್ಯಕ್ಷತೆ ವಹಿಸಿದ್ದರು. ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷೆ ಚೇತನಾ, ಸಂಸ್ಥೆಯ ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎನ್.ಇಸ್ಮಾಯಿಲ್‌ರವರು ಶುಭಹಾರೈಸಿದರು.

ಬಹುಮಾನ ವಿತರಣೆ:
ಶಾಲಾ ವಿದ್ಯಾರ್ಥಿಗಳಿಗೆ ನಡೆದ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಣೆ ಮಾಡಲಾಯಿತು. ಶಿಕ್ಷಕಿ ಭವ್ಯ, ದೈಹಿಕ ಶಿಕ್ಷಣ ನಿರ್ದೇಶಕ ಮಹಮ್ಮದ್ ಹ್ಯಾರಿಸ್‌ರವರು ವಿಜೇತರ ಪಟ್ಟಿ ವಾಚಿಸಿದರು. ಸಂಸ್ಥೆಯ ಪ್ರೌಢಶಾಲಾ ಕನ್ನಡ ಮಾಧ್ಯಮ ವಿಭಾಗದ ಮುಖ್ಯಶಿಕ್ಷಕ ತೋಮಸ್ ಎಂ.ಐ.ಸ್ವಾಗತಿಸಿದರು. ಆಂಗ್ಲಮಾಧ್ಯಮ ವಿಭಾಗದ ಮುಖ್ಯಶಿಕ್ಷಕ ಹರಿಪ್ರಸಾದ್ ವಂದಿಸಿದರು. ಉಪನ್ಯಾಸಕ ಚೇತನ್ ಆನೆಗುಂಡಿ, ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ಟಿ.,ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಸಮಾರಂಭದಲ್ಲಿ ಹರೇಕಳ ಹಾಜಬ್ಬರವರ ಜೀವನ ಚರಿತ್ರೆಯ ಕಿರು ಚಿತ್ರ ಪ್ರದರ್ಶಿಸಲಾಯಿತು. ಕಾರ್ಯಕ್ರಮಕ್ಕೂ ಮೊದಲು ಹಾಜಬ್ಬ ಹಾಗೂ ಅತಿಥಿಗಳನ್ನು ಶಾಲಾ ದ್ವಾರದ ಬಳಿಯಿಂದ ಮೆರವಣಿಗೆ ಮೂಲಕ ಸಭಾಂಗಣಕ್ಕೆ ಕರೆತರಲಾಯಿತು.

ಸನ್ಮಾನ:
ಅಕ್ಷರ ಸಂತ ಹರೇಕಳ ಹಾಜಬ್ಬರವರನ್ನು ಸಂತಜಾರ್ಜ್ ವಿದ್ಯಾಸಂಸ್ಥೆ ವತಿಯಿಂದ ಪೇಟ,ಶಾಲು,ಹಾರ, ಫಲತಾಂಬೂಲ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಂಸ್ಥೆಯ ವಿದ್ಯಾರ್ಥಿಗಳು ಸಂಗ್ರಹಿಸಿದ ದೇಣಿಗೆ ಮೊತ್ತವನ್ನು ವಿದ್ಯಾರ್ಥಿ ನಾಯಕರು ಹಸ್ತಾಂತರಿಸಿದರು. ಪೂರ್ವ ವಿದ್ಯಾರ್ಥಿ ಸಂಘ, ಸೀನಿಯರ್ ಛೇಂಬರ್ ನೆಲ್ಯಾಡಿ, ಜೆಸಿಐ ನೆಲ್ಯಾಡಿ, ನೆಲ್ಯಾಡಿ ವಿವಿ ಘಟಕ ಕಾಲೇಜು, ನೆಲ್ಯಾಡಿ ರಿಕ್ಷಾ ಚಾಲಕ-ಮಾಲಕರ ಸಂಘ, ನೆಲ್ಯಾಡಿ ಬೆಥನಿ ವಿದ್ಯಾಸಂಸ್ಥೆ, ಕೊಣಾಲು ಚರ್ಚ್, ಗೆಳೆಯರ ಬಳಗ ಗಾಂಧಿಮೈದಾನ ನೆಲ್ಯಾಡಿ, ಗ್ರಾಮ ಪಂಚಾಯತ್ ನೆಲ್ಯಾಡಿ, ವರ್ತಕ ಸಂಘ ನೆಲ್ಯಾಡಿ, ಮೆಸ್ಕಾಂ ನೆಲ್ಯಾಡಿ ಶಾಖೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಅಕ್ಷರ ಸಂತ ಹರೇಕಳ ಹಾಜಬ್ಬರನ್ನು ಸನ್ಮಾನಿಸಲಾಯಿತು. ನಿವೃತ್ತ ಮುಖ್ಯಗುರು, ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಪೆರಾಲ್‌ರವರನ್ನು ಸಂತಜಾರ್ಜ್ ವಿದ್ಯಾಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.

ಹಾಜಬ್ಬರಿಂದ ಸನ್ಮಾನ;
ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯ ಆಡಳಿತ ಸಮಿತಿ ಅಧ್ಯಕ್ಷ ಬಿಷಪ್ ಮಾರ್ಕೋಸ್ ಮೋರ್ ಕ್ರಿಸೋಸ್ಟಮಸ್, ಸಂಚಾಲಕ ಅಬ್ರಹಾಂ ವರ್ಗೀಸ್ ಹಾಗೂ ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಇಸ್ಮಾಯಿಲ್‌ರವರನ್ನು ಅಕ್ಷರ ಸಂತ ಹಾಜಬ್ಬರವರು ಈ ಸಂದರ್ಭದಲ್ಲಿ ಸನ್ಮಾನಿಸಿದರು. ೭೫ನೇ ವಸಂತಕ್ಕೆ ಕಾಲಿಟ್ಟ ಸಂಸ್ಥೆಯ ಸಂಚಾಲಕ ಅಬ್ರಹಾಂ ವರ್ಗೀಸ್‌ರವರ ಹುಟ್ಟುಹಬ್ಬವನ್ನು ಈ ಸಂದರ್ಭದಲ್ಲಿ ಕೇಕ್ ಕತ್ತರಿಸಿ ಆಚರಿಸಲಾಯಿತು.

LEAVE A REPLY

Please enter your comment!
Please enter your name here