ಪತ್ನಿಯನ್ನು ಕೊಲೆಗೈದಿದ್ದ ಪ್ರಕರಣ: ಆರೋಪಿ ಪತಿ ದೋಷಮುಕ್ತ

0

ಪುತ್ತೂರು:  ಕಳಿಯ ಗ್ರಾಮದ ಗೇರುಕಟ್ಟೆ ಕಜೆ ಮನೆ ಎಂಬಲ್ಲಿ ಪತ್ನಿಯನ್ನು ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದ ಉಮ್ಮರ್ ಫಾರೂಕ್ ಎಂಬವರನ್ನು ಮಂಗಳೂರಿನ ನಾಲ್ಕನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.

ಘಟನೆ ವಿವರ:

ದಿನಾಂಕ 16/12/2019ರಂದು ಬೆಳ್ತಂಗಡಿ ತಾಲೂಕು ಕಳಿಯ ಗ್ರಾಮದ ಗೇರುಕಟ್ಟೆ ಕಜೆ ಮನೆ ಎಂಬಲ್ಲಿ ಸಮಯ ಸುಮಾರು 10:00 ಗಂಟೆಯಿಂದ ತಡರಾತ್ರಿ 02:00 ಗಂಟೆಯ ಸಮಯದಲ್ಲಿ ಉಮರ್ ಫಾರೂಕ್ ಎಂಬಾತ ತನ್ನ ಪತ್ನಿ ತಸ್ಮಿಯಾರವರನ್ನು ಕೊಲೆ ಮಾಡಿದ್ದ ಎಂದು ಆರೋಪಿಸಲಾಗಿತ್ತು. ಆಧಾರ್ ಕಾರ್ಡ್ ಮಾಡಿಸಿದ ವಿಚಾರದಲ್ಲಿ ಪತಿ ಮತ್ತು ಪತ್ನಿ ನಡುವೆ ಗಲಾಟೆ ನಡೆದು ನಂತರ ಪತ್ನಿಗೆ ಹಲ್ಲೆ ನಡೆಸಿ ಕೊಲೆಗೈಯ್ಯಲಾಗಿದೆ ಎಂದು ಮೃತರ ಅಕ್ಕ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನಂತೆ ಉಮ್ಮರ್ ಫಾರೂಕ್ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 302 ಮತ್ತು 201ರಂತೆ ಶಿಕ್ಷಾರ್ಹ ಅಪರಾಧವೆಸಗಿರುವುದಾಗಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ಪೊಲೀಸರು ಸುಮಾರು ಎರಡು ತಿಂಗಳ ಬಳಿಕ ಆರೋಪಿಯನ್ನು ಬಂಧಿಸಿ ಬೆಳ್ತಂಗಡಿಯ ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ತನಿಖೆ ಪೂರ್ಣಗೊಳಿಸಿದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಇದು ಗಂಭೀರ ಸ್ವರೂಪದ ಪ್ರಕರಣ ವಾಗಿದ್ದರಿಂದ ಈ ಪ್ರಕರಣವನ್ನು ಮಂಗಳೂರಿನ ನಾಲ್ಕನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಆರೋಪಿಯು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಜಾಮೀನು ಅರ್ಜಿ ತಿರಸ್ಕೃತಗೊಂಡಿತ್ತು. ನಂತರ ಈ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಾಲಯ ಸುಮಾರು 29 ಸಾಕ್ಷಿಗಳ ಪೈಕಿ 22 ಸಾಕ್ಷಿಗಳನ್ನು ತನಿಖೆ ನಡೆಸಿ ಪ್ರಾಸಿಕ್ಯೂಷನ್ ಈ ಪ್ರಕರಣವನ್ನು ಸಂಶಯಾತೀತವಾಗಿ ಸಾಬೀತುಪಡಿಸಲು ವಿಫಲಗೊಂಡಿದೆ ಎಂದು ತೀರ್ಮಾನಿಸಿದ್ದು ಆರೋಪಿಯನ್ನು ಬಿಡುಗಡೆಗೊಳಿಸಬೇಕೆಂದು ಆದೇಶಿಸಿದೆ.

ಕೊಲೆ ನಡೆದಿದೆ ಎಂಬುದಕ್ಕೆ ಪೂರಕವಾದ ಸಾಕ್ಷ್ಯಾಧಾರಗಳು ಲಭ್ಯವಿರುವುದಿಲ್ಲ. ನ್ಯಾಯಾಲಯದ ಮುಂದೆ ಸಾಕ್ಷಿಗಳು ನೀಡಿರುವ ವ್ಯತಿರಿಕ್ತ ಹೇಳಿಕೆಗಳು, ಆರೋಪಿಯ ಇರುವಿಕೆಯ ಬಗೆಗಿನ ಸಂಶಯಗಳು, ಸಾಕ್ಷ್ಯಾಧಾರಗಳ ಕೊರತೆಗಳನ್ನು ಗಮನಿಸಿದಾಗ, ಆರೋಪಿಯು ಕೊಲೆ ನಡೆಸಿದ್ದಾರೆ ಎಂಬುವುದಕ್ಕೆ ಸಂಬಂಧಿಸಿದಂತೆ ಯಾವುದೇ ಸಾಂದರ್ಭಿಕ ಸಾಕ್ಷ್ಯಾಧಾರಗಳು ಲಭ್ಯವಿರುವುದಿಲ್ಲ. ಕೊಲೆ ನಡೆದಿದೆ ಎನ್ನಲಾದ ಸ್ಥಳದಲ್ಲಿ ಯಾವುದೇ ಕುರುಹುಗಳು ಕಂಡು ಬಂದಿರುವುದಿಲ್ಲ. ಪ್ರಮುಖ ವಿಚಾರ ಏನೆಂದರೆ ಪೊಲೀಸರ ವಿರುದ್ಧ ಉಮ್ಮರ್ ಫಾರೂಕ್ ಲೋಕಾಯುಕ್ತಕ್ಕೆ 2009ನೇ ಇಸವಿಯಲ್ಲಿ ದೂರು ಸಲ್ಲಿಸಿದ್ದರು. ಈ ಲೋಕಾಯುಕ್ತ ಪ್ರಕರಣದಲ್ಲಿ ವಿಚಾರಣೆಯ ನಂತರ ಪೊಲೀಸರಿಗೆ ಶಿಕ್ಷೆಯಾಗಿತ್ತು. ಇದೇ ದ್ವೇಷದಿಂದ ಪೊಲೀಸರು ಉಮ್ಮರ್ ಫಾರೂಕ್ ವಿರುದ್ಧ ಈ ರೀತಿ ಸುಳ್ಳು ದೂರನ್ನು ದಾಖಲಿಸಿರುವುದಾಗಿದೆ ಎಂಬಿತ್ಯಾದಿ ಅಂಶಗಳ ಬಗ್ಗೆ ಆರೋಪಿ ಪರ ವಕೀಲರು ನ್ಯಾಯಾಧೀಶರ ಗಮನ ಸೆಳೆದಿದ್ದರು.

ವಾದ- ಪ್ರತಿವಾದ ಆಲಿಸಿದ ಮಂಗಳೂರಿನ ನಾಲ್ಕನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಬಿ.ಆರ್.ಪಲ್ಲವಿಯವರು ಆರೋಪಿಯನ್ನು ನಿರಪರಾಧಿ ಎಂದು ಆದೇಶಿಸಿ ಬಿಡುಗಡೆಗೊಳಿಸಿದ್ದಾರೆ. ಆರೋಪಿ ಪರ ಪುತ್ತೂರಿನ ಖ್ಯಾತ ವಕೀಲ ಮಹೇಶ್ ಕಜೆ ವಾದಿಸಿದ್ದರು.

LEAVE A REPLY

Please enter your comment!
Please enter your name here