ಉಪ್ಪಿನಂಗಡಿ; ಬಸ್ ನಿಲ್ದಾಣದಲ್ಲಿ ಕಳ್ಳರ ಹಾವಳಿ

0

  • ಮಹಿಳೆಯೋರ್ವರ ಚಿನ್ನಾಭರಣ ಸಹಿತ ಮೊಬೈಲ್ ಕಳವು

ಉಪ್ಪಿನಂಗಡಿ: ಇಲ್ಲಿನ ಬಸ್ ನಿಲ್ದಾಣದ ಪರಿಸರದಲ್ಲಿ ಕಳ್ಳರ ಹಾವಳಿ ಮಿತಿ ಮೀರಿದ್ದು, ಮಹಿಳೆಯೋರ್ವರ ಕತ್ತಿನಿಂದ ಐದೂವರೆ ಪವನ್ ತೂಕದ ಚಿನ್ನಾಭರಣವನ್ನು ಕದ್ದೊಯ್ದರೆ, ಬಸ್ಸಿನಲ್ಲಿ ಸಂಚರಿಸ್ಯುತ್ತಿದ್ದ ವಿದ್ಯಾರ್ಥಿನಿಯರ ಸಹಿತ ಒಟ್ಟು ನಾಲ್ಕು ಮಂದಿಯ ಮೊಬೈಲ್ ಕಳವು ಮಾಡಲಾದ ಘಟನೆ ಬಗ್ಗೆ ವರದಿಯಾಗಿದೆ.

ತಣ್ಣೀರುಪಂತ ಗ್ರಾಮದ ಅಳಕೆ ಮನೆ ನಿವಾಸಿ ಕೆ. ಖಾಲಿದ್ ಎಂಬವರ ಪತ್ನಿ ಝರಿನಾ ಎಂಬವರು ತನ್ನ ಇಬ್ಬರು ಮಕ್ಕಳೊಂದಿಗೆ ಕಲ್ಲೇರಿಯಿಂದ ಉಪ್ಪಿನಂಗಡಿಗೆ ಬಸ್‌ನಲ್ಲಿ ಬಂದು ಇಳಿಯುತ್ತಿದ್ದಂತೆ ಆಕೆಯ ಕತ್ತಿನಲ್ಲಿದ್ದ ಐದೂವರೆ ಪವನ್ ತೂಕದ ಚಿನ್ನದ ನೆಕ್ಲೆಸ್ ಕಣ್ಮರೆಯಾಗಿದೆ. ಬಸ್ ನಿಲ್ದಾಣದಲ್ಲಿ ಇದ್ದ ಜನದಟ್ಟನೆಯ ದುರ್ಲಾಭ ಪಡೆದು ಕಳ್ಳರು ನೆಕ್ಲೆಸ್‌ನ್ನು ಲಪಟಾಯಿಸಿರುವ ಸಾಧ್ಯತೆ ವ್ಯಕ್ತವಾಗಿದ್ದು, ಈ ಬಗ್ಗೆ ಝರಿನಾ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ಇದೇ ವೇಳೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಕಾಲೇಜು ವಿದ್ಯಾರ್ಥಿನಿಯರ ಬೆಲೆ ಬಾಳುವ ಮೊಬೈಲ್‌ಗಳನ್ನು ಕಳ್ಳರು ಲಪಟಾಯಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ರಕ್ಷ, ಗೌರಿ, ವಂಶಿನಿ ಎಂಬ ಮೂವರು ವಿದ್ಯಾರ್ಥಿನಿಯರು ಉಪ್ಪಿನಂಗಡಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಅದಾಗ್ಯೂ ರಂಜಿತ್ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ತನ್ನ ಅಂಗಡಿಯಿಂದ ಒಂದು ಮೊಬೈಲ್ ಪೋನ್ ಕದ್ದೊಯ್ದಿರುವುದಾಗಿಯೂ ದೂರಿನಲ್ಲಿ ಆಪಾದಿಸಿದ್ದಾರೆ.

ಒಟ್ಟಾರೆ ಸೋಮವಾರದಂದು ಉಪ್ಪಿನಂಗಡಿ ಬಸ್ ನಿಲ್ದಾಣ ಪರಿಸರದಲ್ಲಿ ಕಳ್ಳರ ತಂಡವೊಂದು ಸಕ್ರಿಯವಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಈ ಕಳ್ಳರನ್ನು ಮಟ್ಟ ಹಾಕುವಂತೆ ಸಾರ್ವಜನಿಕರು ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here