ನೆಲ್ಯಾಡಿ: ನಿರ್ಮಾಣ ಹಂತದ ಮನೆ ಮೇಲಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಮೃತ್ಯು

0

ನೆಲ್ಯಾಡಿ: ಐದು ದಿನದ ಹಿಂದೆ ನಿರ್ಮಾಣ ಹಂತದ ಕಟ್ಟಡದ ಮೇಲಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ನೆಲ್ಯಾಡಿ ನಿವಾಸಿಯೋರ್ವರು ಚಿಕಿತ್ಸೆಗೆ ಸ್ಪಂದಿಸದೆ ಮಾ.9ರಂದು ನಿಧನರಾಗಿದ್ದಾರೆ.

        ಸಿಲ್ವೆಸ್ಟರ್                                                       ಸೈಮನ್ ಡಿ.ಸೋಜ                                    ತೆರೆಸಾ ಡಿ.ಸೋಜ

ನೆಲ್ಯಾಡಿ ಗ್ರಾಮದ ಪಡುಬೆಟ್ಟು ತೊಟ್ಟಿಲಗುಂಡಿ ನಿವಾಸಿ, ಕೃಷಿಕ ಸಿಲ್ವೆಸ್ಟರ್ ಡಿ.ಸೋಜ(51ವ.) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಸಿಲ್ವೆಸ್ಟರ್‌ರವರ ನೂತನ ಮನೆ ನಿರ್ಮಾಣ ಕೆಲಸ ನಡೆಯುತ್ತಿದ್ದು ಗೋಡೆಯ ಹಂತದ ತನಕ ಕಾಮಗಾರಿ ಪೂರ್ಣಗೊಂಡಿದೆ. ಸಿಲ್ವೆಸ್ಟರ್‌ರವರು ಮಾ.೬ರಂದು ಸಂಜೆ ವೇಳೆಗೆ ಗೋಡೆಯ ಮೇಲೆ ಹತ್ತಿದವರು ಆಕಸ್ಮಿಕವಾಗಿ ಕಾಲು ಜಾರಿ ಕೆಳಕ್ಕೆ ಬಿದ್ದು ತಲೆಗೆ ಗಂಭೀರ ಗಾಯಗೊಂಡಿದ್ದರು. ಮನೆಯವರು ತಕ್ಷಣ ಅವರನ್ನು ನೆಲ್ಯಾಡಿಯ ಅಶ್ವಿನಿ ಆಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಉಜಿರೆ ಎಸ್‌ಡಿಎಂ ಆಸ್ಪತ್ರೆಗೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆಗಾಗಿ ಅದೇ ದಿನ ಮಂಗಳೂರಿನ -ದರ್ ಮುಲ್ಲಾರ್ ಆಸ್ಪತ್ರೆಗೆ ದಾಖಲಿಸಿದ್ದರು. ತಲೆಗೆ ಗಂಭೀರ ಗಾಯಗೊಂಡಿದ್ದ ಸಿಲ್ವೆಸ್ಟರ್‌ರವರು ಚಿಕಿತ್ಸೆಗೆ ಸ್ಪಂದಿಸದೆ ಮಾ.೯ರಂದು ಸಂಜೆ ವೇಳೆ ಮೃತಪಟ್ಟಿದ್ದಾರೆ.

ಮೃತರು ಪತ್ನಿ ಲೀನಾ ಡಿ.ಸೋಜ, ಪುತ್ರ ರೋಹಿತ್ ಡಿ.ಸೋಜ, ಪುತ್ರಿ ರೋಹಿತಾ ಡಿ.ಸೋಜ, ಅಳಿಯ ಪ್ರಶಾಂತ್ ಡಿ.ಸೋಜ, ಮೊಮ್ಮಗಳು ರೆನಿಷಾ, ಸಹೋದರರಾದ ಲಾರೆನ್ಸ್ ಡಿ.ಸೋಜ, ಹಿಲರಿ ಡಿ.ಸೋಜ, ಸಹೋದರಿಯರಾದ ಪ್ಲೆವಿನಾ ಡಿ.ಸೋಜ, ಅಲಿಸಾ ಡಿ.ಸೋಜರವರನ್ನು ಅಗಲಿದ್ದಾರೆ. ಜಿ.ಪಂ.ಮಾಜಿ ಸದಸ್ಯ ಸರ್ವೋತ್ತಮ ಗೌಡ, ಎಪಿಎಂಸಿ ಸದಸ್ಯ ಬಾಲಕೃಷ್ಣ ಬಾಣಜಾಲು, ನೆಲ್ಯಾಡಿ ಗ್ರಾ.ಪಂ.ಸದಸ್ಯ ರವಿಪ್ರಸಾದ್ ಶೆಟ್ಟಿ, ಜಯಾನಂದ ಬಂಟ್ರಿಯಾಲ್, ಯಾಕೂಬ್ ಸಲಾಂ, ಪಡುಬೆಟ್ಟು ಸರಕಾರಿ ಪ್ರೌಢಶಾಲಾ ಎಸ್‌ಡಿಎಂಸಿ ಉಪಾಧ್ಯಕ್ಷ ಬಿ.ರಮೇಶ್ ಶೆಟ್ಟಿ ಬೀದಿ, ಪಡುಬೆಟ್ಟು ಸರಕಾರಿ ಹಿ.ಪ್ರಾ.ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಶಿವಪ್ರಸಾದ್ ಬೀದಿಮಜಲು ಮತ್ತಿತರರು ಮೃತರ ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.

40 ದಿನದಲ್ಲಿ ಕುಟುಂಬದ ಮೂವರು ಸಾವು 

ಸಿಲ್ವೆಸ್ಟರ್ ಸಾವು ಅವರ ಕುಟುಂಬಕ್ಕೆ 40 ದಿನದ ಅಂತರದಲ್ಲಿನ ೩ನೇ ಆಘಾತವಾಗಿದೆ. ತೊಟ್ಟಿಲಗುಂಡಿ ನಿವಾಸಿ ದಿ. ಅಂತೋನಿ ಡಿ.ಸೋಜ ಹಾಗೂ ದಿ.ರೆಖೆಲಾ ದಂಪತಿಗೆ ಸಿಲ್ವೆಸ್ಟರ್ ಸೇರಿ 7 ಮಕ್ಕಳು. ಸಿಲ್ವೆಸ್ಟರ್ ಸಹೋದರಿ ಬೆಳ್ತಂಗಡಿ ಸವಣಾಲು ನಿವಾಸಿಯಾಗಿದ್ದ ತೆರೆಸಾ ಡಿ.ಸೋಜ(೬೫ವ.)ರವರು ಜ.29ರಂದು ಹೃದಯಾಘಾತದಿಂದ ನಿಧನರಾಗಿದ್ದರು. ಇದಾದ ಬಳಿಕ ಅನಾರೋಗ್ಯದಿಂದ ಬಳಲುತ್ತಿದ್ದ ಸಹೋದರ ಸೈಮನ್ ಡಿ.ಸೋಜ(55ವ.)ರವರು ಫೆ.೨೬ರಂದು ಮನೆಯಲ್ಲಿಯೇ ನಿಧನರಾಗಿದ್ದರು. ಇದೀಗ ಸಿಲ್ವೆಸ್ಟರ್‌ರವರು ಆಕಸ್ಮಿಕವಾಗಿ ಮೃತಪಟ್ಟಿದ್ದು ಅವರ ಕುಟುಂಬಕ್ಕೆ 3ನೇ ಆಘಾತವಾಗಿದೆ.

LEAVE A REPLY

Please enter your comment!
Please enter your name here