ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಮೈದಾನದಲ್ಲಿ ರಾಷ್ಟ್ರಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಉದ್ಘಾಟನೆ

0

  • ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಾಜಬ್ಬ, ಮಹಾಲಿಂಗ ನಾಯ್ಕರಿಗೆ ಸನ್ಮಾನ

ಚಿತ್ರ: ಯೂಸುಫ್ ರೆಂಜಲಾಡಿ

 

 

ಪುತ್ತೂರು: ಆಟದಲ್ಲಿ ಸೋಲು ಗೆಲುವು ಸಾಮಾನ್ಯ, ಆದರೆ ಗೆಲುವಿಗಾಗಿ ಆಟಗಾರರು ನೂರಕ್ಕೆ ನೂರು ಪ್ರಯತ್ನ ನಡೆಸಬೇಕು ಜೊತೆಗೆ ಕ್ರೀಡಾ ಸ್ಪೂರ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರಾದ ಗಿರೀಶ್ ನಂದನ್ ಹೇಳಿದರು.

ದ.ಕ ಜಿಲ್ಲಾ ವಾಲಿಬಾಲ್ ಅಸೋಸಿಯೇಶನ್, ಪುತ್ತೂರು ತಾಲೂಕು ವಾಲಿಬಾಲ್ ಅಸೋಸಿಯೇಶನ್, ಹಾಗೂ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳು, ವಿದ್ಯಾ ಗಂಗೋತ್ರಿ ಸವಣೂರು, ನೇತಾಜಿ ಯುವಕ ಮಂಡಲ ಕೂಡುರಸ್ತೆ ನರಿಮೊಗರು ಇವುಗಳ ಸಂಯುಕ್ತ ಆಶ್ರಯದಲ್ಲಿ ಮೂರು ದಿನಗಳ ಕಾಲ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಮೈದಾನದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಆಯ್ದ ಯೂನಿವರ್ಸಿಟಿ ಪುರುಷರ ಆರು ತಂಡಗಳ ಹಾಗೂ ಆಹ್ವಾನಿತ ಮಹಿಳೆಯರ ನಾಲ್ಕು ತಂಡಗಳ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾ.11ರಂದು ಅವರು ಮಾತನಾಡಿದರು. ರಾಷ್ಟ್ರಮಟ್ಟದ ಪಂದ್ಯಾಟವನ್ನು ಗ್ರಾಮೀಣ ಭಾಗದಲ್ಲಿ ಸುಸಜ್ಜಿತವಾಗಿ ಏರ್ಪಡಿಸಿದ ಸಂಘಟಕರನ್ನು ಸಹಾಯಕ ಆಯುಕ್ತರು ಶ್ಲಾಘಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

 

ಆಟ ಗೆಲುವಿಗಾಗಿ ಮಾತ್ರ ಇರುವುದಲ್ಲ-ಭಾಸ್ಕರ ಆಚಾರ್
ಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಸಾಂದೀಪನಿ ವಿದ್ಯಾಸಂಸ್ಥೆಯ ಸಂಚಾಲಕ ಭಾಸ್ಕರ ಆಚಾರ್ ಹಿಂದಾರು ಮಾತನಾಡಿ ಆಟ ಕೇವಲ ಗೆಲುವಿಗಾಗಿ ಮಾತ್ರ ಇರುವುದಲ್ಲ, ಪ್ರಯತ್ನ ನಿರಂತರವಾಗಿರಬೇಕು. ಸ್ವಶಕ್ತಿಯಿಂದ ವೈಯಕ್ತಿಕ ಸಾಧನೆಗೆ ಆಟಗಾರರು ಹೆಚ್ಚು ಆದ್ಯತೆ ಕೊಟ್ಟಾಗ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಸತತ ಪ್ರಯತ್ನದಿಂದ ಸಾಧನೆ ಸಾಧ್ಯ-ದಿವ್ಯಪ್ರಭಾ
ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ ಮಾತನಾಡಿ ಆಟಗಾರರು ಸತತ ಪ್ರಯತ್ನದಿಂದ ಸಾಧನೆ ಮಾಡಲು ಸಾಧ್ಯ, ಕ್ರೀಡಾ ಸ್ಪೂರ್ತಿಯಿಂದ ಆಡುವುದೇ ನಿಜವಾದ ಗೆಲುವಾಗಿದೆ ಎಂದು ಅವರು ಹೇಳಿದರು.

ತಾಲೂಕಿಗೆ ಶ್ರೇಯಸ್ಸು-ಲೋಕೇಶ್ ಸಿ
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ ಮಾತನಾಡಿ ತಾಲೂಕಿಗೆ ಶ್ರೇಯಸ್ಸು ತರುವ ಕೆಲಸ ಈ ವಾಲಿಬಾಲ್ ಪಂದ್ಯಾಟದ ಮೂಲಕ ಇಲ್ಲಿ ಆಗಿದೆ. ಸೋಲಿನಿಂದ ಆಟಗಾರರು ನಿರಾಶರಾಗಬಾರದು, ಎಲ್ಲರೂ ಗೆಲ್ಲುವುದಿಲ್ಲ, ಸೋಲು ಮುಂದಕ್ಕೆ ಯಶಸ್ಸು ತಂದು ಕೊಡುತ್ತದೆ ಎಂದು ಹೇಳಿದರು.

ಎಲ್ಲ ವ್ಯವಸ್ಥೆಗಳನ್ನೂ ಅಚ್ಚುಕಟ್ಟಾಗಿ ಮಾಡಲಾಗಿದೆ-ಸೀತಾರಾಮ ರೈ
ಅಧ್ಯಕ್ಷತೆ ವಹಿಸಿದ್ದ ಸವಣೂರು ವಿದ್ಯಾರಶ್ಮಿ ಸಮೂಹ ಸಂಸ್ಥೆಗಳ ಸಂಚಾಲಕ ಸೀತಾರಾಮ ರೈ ಸವಣೂರು ಮಾತನಾಡಿ ಸವಣೂರಿನಲ್ಲಿ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಆಯೋಜನೆಗೊಂಡು ಅದನ್ನು ನೋಡುವ ಯೋಗ ಇಲ್ಲಿನ ನಾಗರಿಕರಿಗೆ ಸಿಕ್ಕಿದೆ. ಎಲ್ಲ ವ್ಯವಸ್ಥೆಗಳನ್ನೂ ಇಲ್ಲಿ ಅಚ್ಚುಕಟ್ಟಾಗಿ ಮಾಡಲಾಗಿದೆ ಎಂದು ಹೇಳಿದರು. ಸೋಲು ಗೆಲುವು ಸಾಮಾನ್ಯ. ಬಹುಮಾನ ಮುಖ್ಯ ಅಲ್ಲ. ಪ್ರದರ್ಶನ ಮತ್ತು ಪ್ರಯತ್ನ ಮುಖ್ಯ ಎಂದು ಅವರು ಹೇಳಿದರು.

 


ಜಿಲ್ಲಾ ಅಸೋಸಿಯೇಶನ್‌ವರ ಪರಿಶ್ರಮ ಈಗ ಫಲ ನೀಡುತ್ತಿದೆ-ಸತೀಶ್ ಕುಮಾರ್
ಪ್ರಾಸ್ತಾವಿಕವಾಗಿ ಮಾತನಾಡಿದ ದ.ಕ ಜಿಲ್ಲಾ ವಾಲಿಬಾಲ್ ಅಸೋಸಿಯೇಶನ್ ಅಧ್ಯಕ್ಷ ಸತೀಶ್ ಕುಮಾರ್ ಬಿ.ಎಸ್ ಮಾತನಾಡಿ ಜಿಲ್ಲಾ ವಾಲಿಬಾಲ್ ಅಸೋಸಿಯೇಶನ್ ಅಧಿನದಲ್ಲಿ ನಡೆಸುತ್ತಿರುವ ಪಂದ್ಯಾಟ ಮತ್ತು ಹಾಕಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಜಿಲ್ಲಾ ಅಸೋಸಿಯೇಶನ್‌ವರ ಪರಿಶ್ರಮ ಈಗ ಫಲ ನೀಡುತ್ತಿದೆ. ಎಲ್ಲ ತಾಲೂಕಿನಲ್ಲೂ ಅಸೋಸಿಯೇಶನ್ ಕಾರ್ಯಚಟುವಟಿಕೆಗಳು ನಡೆಯುತ್ತಿದ್ದು ಹಲವರ ಬೆಂಬಲ, ಪ್ರೋತ್ಸಾಹ ಸಿಗುತ್ತಿದೆ ಎಂದು ಹೇಳಿದರು.

 

ಹಾಜಬ್ಬ, ಮಹಾಲಿಂಗ ನಾಯ್ಕರಿಗೆ ಸನ್ಮಾನ:
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ ಹಾಗೂ ಮಹಾಲಿಂಗ ನಾಯ್ಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ನಿಕಟಪೂರ್ವ ಯುವಜನ ಸೇವಾ ಕ್ರೀಡಾಧಿಕಾರಿ ಜಯರಾಮ ಗೌಡರವರು ಸನ್ಮಾನ ಪತ್ರ ವಾಚಿಸಿದರು.

ಕಣ್ಮನ ಸೆಳೆದ ಸುಡುಮದ್ದು ಪ್ರದರ್ಶನ:
ಪಂದ್ಯಾಟ ಉದ್ಘಾಟನೆಗೊಂಡ ಸಂದರ್ಭದಲ್ಲಿ ಆಕರ್ಷಕ ಸುಡು ಮದ್ದು ಪ್ರದರ್ಶನ ಗಮನ ಸೆಳೆಯಿತು. ಅತಿಥಿಗಳು ಬಲೂನನ್ನು ಹಾರಿ ಬಿಡುವ ಮೂಲಕ ಪಂದ್ಯಾಟವನ್ನು ಔಪಚಾರಿಕವಾಗಿ ಉದ್ಘಾಟಿಸಲಾಯಿತು.

ಪಂದ್ಯಾಟ, ಅಂಕಣ ಉದ್ಘಾಟನೆ:
ವಾಲಿಬಾಲ್ ಪಂದ್ಯಾಟದ ಕ್ರೀಡಾಂಗಣ ಉದ್ಘಾಟನೆಯನ್ನು ಸಹಾಯಕ ಆಯುಕ್ತರಾದ ಗಿರೀಶ್ ನಂದನ್ ಅವರು ತೆಂಗಿನ ಕಾಯಿ ಒಡೆಯುವ ಮೂಲಕ ಉದ್ಘಾಟಿಸಿದರು. ತಾ.ಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಅವರು ವಾಲಿಬಾಲ್ ಪಂದ್ಯಾಟವನ್ನು ಉದ್ಘಾಟಿಸಿದರು.

ದ.ಕ ಜಿಲ್ಲಾ ವಾಲಿಬಾಲ್ ಅಸೋಸಿಯೇಶನ್ ಕಾರ್ಯದರ್ಶಿ ಶಂಕರ ಶೆಟ್ಟಿ ಬಿ.ಸಿ ರೋಡ್, ಬೆಳ್ಳಾರೆ ಪೊಲೀಸ್ ಠಾಣಾ ಎಸ್ಸೈ ಆಂಜನೇಯ ರೆಡ್ಡಿ, ಕಡಬ ಎಸ್.ಐ ರುಕ್ಮ ನಾಯ್ಕ, ಸವಣೂರು ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಸೀತಾರಾಮ ಕೇವಳ, ವಿದ್ಯಾರಶ್ಮಿ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಅಶ್ವಿನಿ ಎಲ್ ಶೆಟ್ಟಿ, ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪದವಿ ಕಾಲೇಜಿನ ಪ್ರಾಂಶುಪಾಲೆ ರಾಜಲಕ್ಷ್ಮೀ, ವಾಲಿಬಾಲ್ ಅಸೋಸಿಯೇಶನ್ ರಾಜ್ಯ ಉಪಾಧ್ಯಕ್ಷ ಜಯಪ್ರಕಾಶ್, ಎನ್.ಎ ರಾಮಚಂದ್ರ, ಸವಣೂರು ಯುವಕ ಮಂಡಲದ ಅಧ್ಯಕ್ಷ ಪ್ರಕಾಶ್ ಮಾಲೆತ್ತಾರು, ವಾಲಿಬಾಲ್ ಅಸೋಸಿಯೇಶನ್ ಪುತ್ತೂರು ತಾಲೂಕು ಅಧ್ಯಕ್ಷ ಬೇಬಿ ಜೋನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪುತ್ತೂರು ತಾಲೂಕು ನಿಕಟಪೂರ್ವ ಯುವಜನ ಸೇವಾ ಕ್ರೀಡಾಧಿಕಾರಿ ಜಯರಾಮ ಗೌಡ ಸ್ವಾಗತಿಸಿದರು. ವಾಲಿಬಾಲ್ ಅಸೋಸಿಯೇಶನ್ ಪುತ್ತೂರು ತಾಲೂಕು ಅಧ್ಯಕ್ಷ ಬೇಬಿ ಜೋನ್ ಅತಿಥಿಗಳಿಗೆ ಶಾಲು ಹಾಕಿ ಗೌರವಿಸಿದರು. ಪಂದ್ಯಾಟ ಸಮಿತಿಯ ಕಾರ್ಯದರ್ಶಿ ಮೋನಪ್ಪ ಎಂ ಹಾಗೂ ಖಜಾಂಜಿ ಶ್ರೀಕಾಂತ ನಾಯ್ಕ ಎಂ ಅತಿಥಿಗಳಿಗೆ ಸ್ಮರಣಿಕೆ ನೀಡಿದರು. ಸಹ ಖಜಾಂಜಿ ಬಾಬು ಎಂ ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು. ವಾಲಿಬಾಲ್ ಪಂದ್ಯಾಟ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಹಲವರು ಸಹಕರಿಸಿದರು.

LEAVE A REPLY

Please enter your comment!
Please enter your name here