ಲೈಸೆನ್ಸ್ ಪಡೆಯದೇ ವ್ಯಾಪಾರ ಮಾಡುತ್ತಿರುವವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ

0

  • ನೆಟ್ಟಣಿಗೆ ಮುಡ್ನೂರು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ತೀರ್ಮಾನ

ಪುತ್ತೂರು: ಪರವಾನಿಗೆ ಇಲ್ಲದೇ ಗ್ರಾ.ಪಂ ವ್ಯಾಪ್ತಿಯಲ್ಲಿ ವ್ಯಾಪಾರ ಮಾಡುವುದರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ನೆ.ಮುಡ್ನೂರು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಯಿತು.

 

ಸಭೆ ಗ್ರಾ.ಪಂ ಅಧ್ಯಕ್ಷ ರಮೇಶ್ ರೈ ಸಾಂತ್ಯರವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು. ಗ್ರಾ.ಪಂಗೆ ಆದಾಯ ಹೆಚ್ಚಿಸುವ ವಿಚಾರದಲ್ಲಿ ಚರ್ಚೆ ನಡೆಯಿತು. ಸದಸ್ಯ ಇಬ್ರಾಹಿಂ ಪಳ್ಳತ್ತೂರು ಮಾತನಾಡಿ ಗ್ರಾ.ಪಂ ವ್ಯಾಪ್ತಿಯಲ್ಲಿ ಅಭಿವೃದ್ಧಿ ವಿಚಾರದಲ್ಲಿ ಗ್ರಾ.ಪಂನ ಆದಾಯವನ್ನು ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸಬೇಕು ಎಂದು ಹೇಳಿದರು. ಈಶ್ವರಮಂಗಲ ಪೇಟೆಯಲ್ಲಿ ಸಾಕಷ್ಟು ವ್ಯಾಪಾರಸ್ಥರು ವ್ಯಾಪಾರ ಲೈಸೆನ್ಸ್ ಪಡೆಯದೇ ವ್ಯಾಪಾರ ಮಾಡುತ್ತಿದ್ದು ಈ ಬಗ್ಗೆ ಗ್ರಾ.ಪಂಗೆ ಮಾಹಿತಿ ಇದೆಯೇ ಎಂದು ಕೆಲವು ಸದಸ್ಯರು ಪ್ರಶ್ನಿಸಿದರು. ಸದಸ್ಯರಾದ ಶ್ರೀರಾಂ ಪಕ್ಕಳ ಮಾತನಾಡಿ ಪರವಾನಿಗೆ ಪಡೆಯದೇ ವ್ಯಾಪಾರ ನಡೆಸುತ್ತಿರುವವರು ವ್ಯಾಪಾರ ಪರವಾನಿಗೆಯನ್ನು ಪಡೆದು ವ್ಯಾಪಾರ ನಡೆಸಬೇಕು ಎಂದು ಹೇಳಿದರು. ಸದಸ್ಯ ಸಂಶುದ್ದೀನ್ ಮಾತನಾಡಿ ಟ್ರೇಡ್ ಲೈಸೆನ್ಸ್ ಪಡೆದವರಿಗೆ ವ್ಯಾಪಾರಕ್ಕೆ ಅವಕಾಶ ನೀಡಿದರೆ ಉತ್ತಮ ಎಂದು ಹೇಳಿದರು.

ಅಧ್ಯಕ್ಷ ರಮೇಶ್ ರೈ ಸಾಂತ್ಯ ಉತ್ತರಿಸಿ ಗ್ರಾ.ಪಂನ್ನು ಗಣನೆಗೆ ತೆಗೆದುಕೊಳ್ಳದೇ ಬೇಕಾಬಿಟ್ಟಿಯಾಗಿ ವ್ಯಾಪಾರ ನಡೆಸುವವರಿಗೆ ಲೀಗಲ್ ನೊಟೀಸು ನೀಡಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಸದಸ್ಯ ಚಂದ್ರಹಾಸ ಮಾತನಾಡಿ ವ್ಯಾಪಾರ ಲೈಸೆನ್ಸ್ ಪಡೆಯದೇ ವ್ಯಾಪಾರ ನಡೆಸುವವರಿಗೆ ದಂಡ ವಿಧಿಸಬೇಕು, ರಸ್ತೆ ಬದಿ ವ್ಯಾಪಾರ ಮಾಡುವವರಿಗೆ ತೆರಿಗೆ ವಿಧಿಸಬೇಕು ಎಂದು ಹೇಳಿದರು.

ಉಪಾಧ್ಯಕ್ಷೆ ಫೌಝಿಯಾ ಮಾತನಾಡಿ ನೀರು, ಮನೆ ತೆರಿಗೆ, ವಾಣಿಜ್ಯ ತೆರಿಗೆ ಇತ್ಯಾದಿಗಳ ವಸೂಲಿ ವಿಚಾರದಲ್ಲಿ ಸಿಬ್ಬಂದಿಗಳು ಕ್ಯಾರ್‌ಲೆಸ್ ಮಾಡಬಾರದು ಎಂದು ಹೇಳಿದರು.
ಅಧ್ಯಕ್ಷ ರಮೇಶ್ ರೈ ಸಾಂತ್ಯ ಮಾತನಾಡಿ ಲೈಸೆನ್ಸ್ ಇಲ್ಲದೇ ವ್ಯಾಪಾರ ಮಾಡುವವರಿಗೆ ನೊಟೀಸು ನೀಡಿ ನಂತರ ದಂಡ ವಿಧಿಸಲಾಗುವುದು ಎಂದು ಹೇಳಿದರು. ಇದಕ್ಕೆ ಸದಸ್ಯರು ಸಹಮತ ಸೂಚಿಸಿದರು.

ಡಿ.ಸಿ ಮನ್ನಾ ಭೂಮಿ ಗಡಿ ಗುರುತು ಮಾಡಿ:
ಸದಸ್ಯ ರಾಮ ಮೇನಾಲ ಮಾತನಾಡಿ ಗ್ರಾ.ಪಂ ವ್ಯಾಪ್ತಿಯ ಡಿ.ಸಿ ಮನ್ನಾ ಭೂಮಿಯನ್ನು ಸರ್ವೆ ಮಾಡಿ ಗಡಿ ಗುರುತು ಮಾಡಬೇಕು ಎಂದು ಆಗ್ರಹಿಸಿದರು. ಗ್ರಾಮ ಕರಣಿಕ ಉಮೇಶ್ ಕಾವಡಿ ಮಾತನಾಡಿ ದಾಖಲೆಗಳನ್ನು ಪರಿಗಣಿಸಿ ನಾವು ಕೆಲಸ ನಿರ್ವಹಿಸಬೇಕಾಗಿದ್ದು ದಾಖಲೆ ಇಲ್ಲದಿದ್ದರೆ ನಮಗೇನೂ ಮಾಡಲು ಸಾಧ್ಯವಾಗುವುದಿಲ್ಲ. ಡಿ.ಸಿ ಮನ್ನಾ ಭೂಮಿ ಸರ್ವೆ ವಿಚಾರದಲ್ಲಿ ದಾಖಲೆ ಪರಿಶೀಲಿಸಿ ಮುಂದಿನ ಹೆಜ್ಜೆ ಇಡಲಾಗುವುದು ಎಂದು ಹೇಳಿದರು.

ಸುರುಳಿಮೂಲೆಯಲ್ಲಿ ಡಿಗ್ರಿ ಕಾಲೇಜಿಗೆ ಜಾಗ ಕಾಯ್ದಿರಿಸಬೇಕು:
ಸುರುಳಿಮೂಲೆ ಪ್ರೌಢ ಶಾಲೆಗೆ ಪದವಿಪೂರ್ವ ಕಾಲೇಜು ಮಂಜೂರಾಗಿದ್ದು ಮುಂದಕ್ಕೆ ಅಲ್ಲಿ ಡಿಗ್ರಿ ಕಾಲೇಜು ಆಗುವ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮ ವಹಿಸಬೇಕು, ಅದಕ್ಕಾಗಿ ಈಗಾಗಲೇ ಅಲ್ಲಿ ಜಾಗ ಕಾಯ್ದಿರಿಸುವ ಪ್ರಕ್ರಿಯೆಯೂ ಆಗಬೇಕು ಎಂದು ಸದಸ್ಯ ಶ್ರೀರಾಂ ಪಕ್ಕಳ ಹೇಳಿದರು. ಧ್ವನಿಗೂಡಿಸಿದ ಚಂದ್ರಹಾಸ ಮಾತನಾಡಿ ಈ ಭಾಗದ ಮಕ್ಕಳು ಕಾಲೇಜಿಗೆ ದೂರದೂರಿಗೆ ಹೋಗುತ್ತಿದ್ದು ಈ ನಿಟ್ಟಿನಲ್ಲಿ ಸುರುಳಿಮೂಲೆಯಲ್ಲಿ ಡಿಗ್ರಿ ಕಾಲೇಜು ಆದರೆ ಬಹಳ ಉಪಯುಕ್ತವಾಗಲಿದೆ ಎಂದು ಹೇಳಿದರು. ಸದಸ್ಯರು ಸಹಮತ ವ್ಯಕ್ತಪಡಿಸಿದರು.

ಅರ್ಜಿಗಳನ್ನು ವಾರ್ಡ್ ಸದಸ್ಯರ ಗಮನಕ್ಕೆ ತರಬೇಕು:
ಗ್ರಾ.ಪಂಗೆ ಬರುವ ಸಾರ್ವಜನಿಕ ಅರ್ಜಿಗಳನ್ನು ಆಯಾ ವಾರ್ಡ್‌ನ ಸದಸ್ಯರ ಗಮನಕ್ಕೆ ತರಬೇಕು ಎಂದು ಸದಸ್ಯ ಇಬ್ರಾಹಿಂ ಪಳ್ಳತ್ತೂರು ಹೇಳಿದರು. ಚಂದ್ರಹಾಸ ಧ್ವನಿಗೂಡಿಸಿದರು. ಅಧ್ಯಕ್ಷ ರಮೇಶ್ ರೈ ಸಾಂತ್ಯ ಉತ್ತರಿಸಿ ಮುಂದಿನ ದಿನಗಳಲ್ಲಿ ಅರ್ಜಿಗಳನ್ನು ಆಯಾ ವಾರ್ಡ್‌ನ ಸದಸ್ಯರ ಗಮನಕ್ಕೆ ತಂದು ಮುಂದಿನ ಕಾರ್ಯವನ್ನು ಮುಂದುವರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಪಿಡಿಓ ಸಂದೇಶ್, ಕಾರ್ಯದರ್ಶಿ ಶಾರದಾ, ಗ್ರಾ.ಪಂ ಸದಸ್ಯರಾ ಪ್ರದೀಪ್ ಕುಮಾರ್ ರೈ, ಜಾಫರ್, ವೆಂಕಪ್ಪ ನಾಯ್ಕ, ಕುಸುಮ, ಪ್ರಫುಲ್ಲ ರೈ, ಕುಮಾರನಾಥ, ವತ್ಸಲ, ಲಲಿತಾ ಸುಧಾಕರ, ಲಲಿತಾ ಶೆಟ್ಟಿ, ಶಶಿಕಲಾ ರೈ, ಪೂರ್ಣೇಶ್ವರಿ ಆರ್.ಎಸ್, ಸವಿತಾ ಉಪಸ್ಥಿತರಿದ್ದರು. ಸಿಬ್ಬಂದಿಗಳಾದ ಶೀನಪ್ಪ ನಾಯ್ಕ, ಮಲ್ಲೇಶ, ಅಬ್ದುಲ್ ರಹಿಮಾನ್ ಸಹಕರಿಸಿದರು.

LEAVE A REPLY

Please enter your comment!
Please enter your name here