ಕೋಡಿಂಬಾಡಿ ಸಂಜೀವಿನಿ‌ ಒಕ್ಕೂಟದ ಎಂ.ಬಿ.ಕೆ. ಆಯ್ಕೆ ಅಸಿಂಧುಗೊಳಿಸಿ ತಾ.ಪಂ. ಇ.ಓ. ಆದೇಶ ನೀಡಿದ್ದ ಹಿನ್ನೆಲೆ: ಹೊಸ ಆಯ್ಕೆಗೆ ಅರ್ಜಿ ಆಹ್ವಾನ

0

ಪುತ್ತೂರು: ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಜೀವಿನಿ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರರ ಆಯ್ಕೆ  ಅಸಿಂಧು ಎಂದು ಪರಿಗಣಿಸಲಾಗಿದ್ದು ಮರು ಆಯ್ಕೆ ನಡೆಸಬೇಕು ಎಂದು ಪುತ್ತೂರು ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕಾಧಿಕಾರಿಯವರು ಆದೇಶಿಸಿದ್ದ ಹಿನ್ನೆಲೆಯಲ್ಲಿ  ಇದೀಗ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರರು ಮತ್ತು ಸ್ಥಳೀಯ ಸಂಪನ್ಮೂಲ ವ್ಯಕ್ತಿಯ ಆಯ್ಕೆಗೆ ಅರ್ಜಿ ಆಹ್ವಾನಿಸಲಾಗಿದೆ. 

ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಂಜೀವಿನಿ ಒಕ್ಕೂಟ ಕಾರ್ಯ ನಿರ್ವಹಿಸುತ್ತಿದೆ, ಸದ್ರಿ ಒಕ್ಕೂಟದ ಮುಖ್ಯ ಬರಹಗಾರರ(ಎಂ.ಬಿ.ಕೆ) ಆಯ್ಕೆಯಲ್ಲಿ ಗೊಂದಲ ಇದೆ. ಈ ಹಿಂದೆ ಆಯ್ಕೆಗೊಂಡು ತರಬೇತಿ ಪಡೆದ ದ್ವಿತೀಯ ಪದವಿಪೂರ್ವ ಶಿಕ್ಷಣದ ವಿದ್ಯಾರ್ಹತೆ ಹೊಂದಿರುವ ಪರಿಶಿಷ್ಟ ಜಾತಿಯ ಅಭ್ಯರ್ಥಿ ಇದ್ದರೂ ಇದ್ಯಾವ ಮಾನದಂಡಗಳನ್ನೂ ಪರಿಗಣಿಸದೇ ಕೇವಲ ಎಸ್.ಎಸ್.ಎಲ್.ಸಿ. ವಿದ್ಯಾರ್ಹತೆ ಮಾತ್ರ ಹೊಂದಿರುವ ಮೇಲ್ಜಾತಿಯ ಅಭ್ಯರ್ಥಿ ಆಯ್ಕೆಯಾಗಿರುತ್ತಾರೆ. ಇವರು ಈ ಹಿಂದೆ ಕೋಡಿಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದವರು. ಆ ಸಮಯದಲ್ಲಿ ನಡೆದ ಕಾಂಪೋಸ್ಟ್ ಪೈಪು ಹಗರಣದಲ್ಲಿ ಆರೋಪಿಯಾಗಿದ್ದರು. ಆದ್ದರಿಂದ ಸದ್ರಿ ಸ್ಥಾನಕ್ಕೆ ಮರು ಆಯ್ಕೆಗೊಳಿಸಬೇಕು ಅಥವಾ ಸೂಕ್ತ ಕ್ರಮ ಕೈಗೊಂಡು ಮೀಸಲಾತಿ ಅನ್ವಯ ಸಾಮಾಜಿಕ ನ್ಯಾಯ ಒದಗಿಸಿಕೊಡಬೇಕು ಎಂದು  ಕೋಡಿಂಬಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಜಗನ್ನಾಥ ಶೆಟ್ಟಿ‌‌ ನಡುಮನೆ, ಜಯಪ್ರಕಾಶ್ ಬದಿನಾರು, ಮಲ್ಲಿಕಾ ಅಶೋಕ್ ಪೂಜಾರಿ ಕಾಂತಳಿಕೆ, ಪೂರ್ಣಿಮಾ ಯತೀಶ್ ಶೆಟ್ಟಿ ಬರಮೇಲು ಮತ್ತು ಗೀತಾ ಮೊಗೇರ ಮೋನಡ್ಕರವರು ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಆದೇಶ ಹೊರಡಿಸಿದ್ದ ತಾ.ಪಂ.ಕಾರ್ಯ ನಿರ್ವಾಹಕಾಧಿಕಾರಿಯವರು, ಕೋಡಿಂಬಾಡಿಯ ಮಹಾಲಿಂಗೇಶ್ವರ ಸಂಜೀವಿನಿ ಒಕ್ಕೂಟಕ್ಕೆ ಆದೇಶ ಪತ್ರ ಜಾರಿಗೊಳಿಸಿದ್ದರು. ಮುಖ್ಯ ಪುಸ್ತಕ ಬರಹಗಾರರ ಆಯ್ಕೆಗೆ ೧೧ ಮಾನದಂಡಗಳು ಮತ್ತು ಪ್ರಕ್ರಿಯೆಗಳು ಒಳಗೊಂಡಿರುತ್ತದೆ. ಸದ್ರಿ ಪ್ರಕರಣದಲ್ಲಿ ಮುಖ್ಯ ಪುಸ್ತಕ ಬರಹಗಾರರ ಆಯ್ಕೆಯಲ್ಲಿ ಮಾರ್ಗಸೂಚಿ ಮತ್ತು ಆಯ್ಕೆ ಕಡತವನ್ನು ತುಲನಾತ್ಮಕವಾಗಿ ಪರಿಶೀಲಿಸಿದಾಗ ನ್ಯೂನತೆ ಕಂಡು ಬಂದಿರುತ್ತದೆ. ಪ್ರಮುಖ ಮೂರು ಅಂಶಗಳು ಅಲ್ಲದೆ ಉಳಿದ ಅಂಶಗಳ ಲ್ಯಾಪ್ಸ್ ಮಾಡಿ ಅಭ್ಯರ್ಥಿಯ ಆಯ್ಕೆ ಮಾಡಿರುವುದನ್ನು ಅಸಿಂಧು ಎಂದು ಪರಿಗಣಿಸಿ ನಿಯಮಾನುಸಾರ ಮುಖ್ಯ ಪುಸ್ತಕ ಬರಹಗಾರರ ಮರು ಆಯ್ಕೆಗೆ ಆದೇಶಿಸಿದೆ. ಸಾರ್ವಜನಿಕ ಹಾಗೂ ಆಡಳಿತ ಹಿತದೃಷ್ಠಿಯಿಂದ ಅಭ್ಯರ್ಥಿಯ ಮರು ಆಯ್ಕೆ ಆಗುವವರೆಗೆ ಈಗಿರುವ ಅಭ್ಯರ್ಥಿಯನ್ನೇ ಮುಂದುವರಿಸಲು ಸೂಚಿಸಿದೆ ಎಂದು ತಾ.ಪಂ.ಇ.ಓ. ತಮ್ಮ  ಆದೇಶದಲ್ಲಿ ತಿಳಿಸಿದ್ದರು.

ಬಳಿಕ ಪರ ವಿರೋಧ ಮನವಿ‌ ಸಲ್ಲಿಕೆಯಾಗಿತ್ತು. ಮುಖ್ಯ ಪುಸ್ತಕ ಬರಹಗಾರರು ರಾಜೀನಾಮೆ ನೀಡಬೇಕು ಎಂದೂ, ಅವರು ರಾಜೀನಾಮೆ ನೀಡಬಾರದು ಎಂದೂ ಭಾರೀ ಚರ್ಚೆ ಉಂಟಾಗಿತ್ತು.‌ ಈ‌ ಹಿನ್ನೆಲೆಯಲ್ಲಿ ಕೋಡಿಂಬಾಡಿಗೆ ಆಗಮಿಸಿದ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿಯವರು ಗ್ರಾ.ಪಂ.ಅಧ್ಯಕ್ಷ ಕೆ.ರಾಮಚಂದ್ರ ಪೂಜಾರಿಯವರ ಉಪಸ್ಥಿತಿಯಲ್ಲಿ ಸಂಜೀವಿನಿ‌ ಒಕ್ಕೂಟದವರೊಂದಿಗೆ ಸಭೆ ನಡೆಸಿದ್ದಾರೆ. ಸಭೆಯಲ್ಲಿ‌ ಭಾರೀ ಚರ್ಚೆ ನಡೆದ ಬಳಿಕ ಮುಖ್ಯ ಪುಸ್ತಕ ಬರಹಗಾರರಾದ ಸಂಧ್ಯಾ ರಾಮಚಂದ್ರರವರು ಮುಖ್ಯ ಪುಸ್ತಕ ಬರಹಗಾರರ ಹುದ್ದೆಗೆ  ರಾಜೀನಾಮೆ ನೀಡಿದ್ದಾರೆ.‌ ಇದರ ಬೆನ್ನಿಗೇ ಪ್ರಕಟಣೆ ಹೊರಡಿಸಲಾಗಿದ್ದು  

‘ಮಹಾಲಿಂಗೇಶ್ವರ ಸಂಜೀವಿನಿ  ಒಕ್ಕೂಟಕ್ಕೆ ಮುಖ್ಯ ಪುಸ್ತಕ ಬರಹಗಾರರು ಮತ್ತು ಒಂದು ಸ್ಥಳೀಯ ಸಂಪನ್ಮೂಲ ವ್ಯಕ್ತಿಯ ಆಯ್ಕೆಗೆ ಅರ್ಜಿ ಆಹ್ವಾನಿಸಲಾಗಿದೆ.  ಸಂಬಂಧಪಟ್ಟ ದಾಖಲೆಯೊಂದಿಗೆ ಒಕ್ಕೂಟದ ಅಧ್ಯಕ್ಷರು/ಕಾರ್ಯದರ್ಶಿಯವರಿಗೆ ಮಾ.೧೯ರೊಳಗೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಲಾಗಿದೆ.

LEAVE A REPLY

Please enter your comment!
Please enter your name here