ಕಾಂಚನ ಪೆರ್ಲ ಶ್ರೀ ಷಣ್ಮುಖ ದೇವಸ್ಥಾನದ ಬ್ರಹ್ಮಕಲಶೋತ್ಸವ, ಧಾರ್ಮಿಕ ಸಭೆ

0

  • ಪಠ್ಯದಲ್ಲಿ ಭಗವದ್ಗೀತೆಯೂ ಸೇರಿರಲಿ; ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ

 

ನೆಲ್ಯಾಡಿ: ಪಠ್ಯ ಪುಸ್ತಕಗಳಲ್ಲಿ ಭಗವದ್ಗೀತೆಯೂ ಸೇರಿರಬೇಕು. ಮಕ್ಕಳಿಗೆ ಭಗವದ್ಗೀತೆ ವಿಚಾರ ತಿಳಿಸುವುದರಿಂದ ಮುಂದೆ ಉತ್ತಮ ಸಮಾಜ ನಿರ್ಮಾಣ ಆಗಲಿದೆ. ಈ ನಿಟ್ಟಿನಲ್ಲಿ ಒಡಿಯೂರು ಕ್ಷೇತ್ರದಿಂದ 1 ಲಕ್ಷ ಭಗವದ್ಗೀತೆ ಮನೆ ಮನೆಗಳಿಗೆ ಹಂಚಲಾಗಿದೆ. ವರ್ಷಕ್ಕೊಮ್ಮೆ ಮಕ್ಕಳಿಗೆ ಭಗವದ್ಗೀತೆಯ ಬಗ್ಗೆ ಪರೀಕ್ಷೆಯೂ ನಡೆಸಿ ಉತ್ತಮ ಅಂಕ ಪಡೆದವರನ್ನು ಗೌರವಿಸಲಾಗುವುದು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್‌ನ ಶ್ರೀ ಗುರುದೇವಾನಂದ ಸ್ವಾಮೀಜಿಯವರು ನುಡಿದರು.

 

ಅವರು ಕಡಬ ತಾಲೂಕಿನ ಆಲಂತಾಯ ಗ್ರಾಮದ ಕಾಂಚನ ಪೆರ್ಲ ಶ್ರೀ ಷಣ್ಮುಖ ದೇವಸ್ಥಾನದಲ್ಲಿ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವದ 2ನೇ ದಿನವಾದ ಮಾ.23ರಂದು ಸಂಜೆ ಕೀರ್ತಿಶೇಷ ಕೊರಗಪ್ಪ ಪೂಜಾರಿ ಪಾಲೇರಿ ಸಭಾಂಗಣದ ಕೀರ್ತಿಶೇಷ ಬ್ರಹ್ಮರಾಜ ಹೆಗ್ಡೆ ಶಾಂತಿಮಾರು ವೇದಿಕೆಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಪ್ರತಿಯೋರ್ವರಲ್ಲೂ ಧರ್ಮ ಶ್ರದ್ಧೆ ಜಾಗೃತವಾಗಿರಬೇಕು. ದೇವಸ್ಥಾನಗಳಲ್ಲಿ ಧರ್ಮ, ಸಂಸ್ಕೃತಿ ಮೇಳೈಸಲಿ. ಷಣ್ಮುಖ ಸುಬ್ರಹ್ಮಣ್ಯ ದೇವರು ಎಲ್ಲರನ್ನೂ ಅನುಗ್ರಹಿಸಲಿ ಎಂದು ಒಡಿಯೂರು ಶ್ರೀ ಹೇಳಿದರು. ತುಳುನಾಡಿನ ಧಾರ್ಮಿಕ ಆಚರಣೆ ಮತ್ತು ವೈಶಿಷ್ಟ್ಯತೆ ಕುರಿತು ಧಾರ್ಮಿಕ ಉಪನ್ಯಾಸ ನೀಡಿದ ಮಂಗಳೂರು ಸೈಂಟ್ ಆಗ್ನೇಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಅರುಣ್ ಉಳ್ಳಾಲ್‌ರವರು, ನಾಗಾರಾಧನೆ, ದೈವಾರಾಧನೆ, ದೇವತಾರಾಧನೆ ತುಳುನಾಡಿನ ಶಕ್ತಿಯಾಗಿದೆ. ಧಾರ್ಮಿಕ ಪ್ರಜ್ಞೆ ಬೆಳೆಯಲು ದೇವಸ್ಥಾನಗಳ ಅಗತ್ಯವಿದೆ. ತುಳುನಾಡು ಸ್ಮಾರ್ಟ್ ಸಿಟಿಯಾಗುತ್ತಿದೆ. ಆಂಗ್ಲ ಭಾಷೆಯ ವ್ಯಾಮೋಹದಿಂದ ಮಕ್ಕಳು ಸ್ವಾಭಾವಿಕವಾಗಿ ಆಂಗ್ಲ ಸಂಸ್ಕೃತಿಗೆ ಮಾರು ಹೋಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸುವ ಕೆಲಸ ಧರ್ಮಕೇಂದ್ರಗಳಿಂದ ಆಗಬೇಕು. ದೇವಸ್ಥಾನಗಳಲ್ಲಿ ಮಕ್ಕಳ ತಂಡ ರಚನೆ ಮಾಡಬೇಕೆಂದು ಹೇಳಿದರು.

ರಾಮಕುಂಜ ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ಕೆ.ಎಸ್.ರಾಧಾಕೃಷ್ಣ ಕುವೆಚ್ಚಾರುರವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿದ್ದ ಪುತ್ತೂರು ಮಹಾವೀರ ಆಸ್ಪತ್ರೆಯ ಡಾ.ಸುರೇಶ್ ಪುತ್ತೂರಾಯ, ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ಯೋಗೀಶ ಪೂಜಾರಿ ಕಡ್ತಿಲ, ಧಾರ್ಮಿಕ ಮುಖಂಡ ಅರುಣ್ ಕುಮಾರ್ ಪುತ್ತಿಲ, ಜಿ.ಪಂ.ಮಾಜಿ ಸದಸ್ಯ ಸರ್ವೋತ್ತಮ ಗೌಡರವರು ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು. ಪುತ್ತೂರು ಮಹಾವೀರ ಮೆಡಿಕಲ್‌ನ ಡಾ.ಅಶೋಕ್ ಪಡಿವಾಳ್, ದೇವಸ್ಥಾನದ ಆಡಳಿತ ಮೊಕ್ತೇಸರ ಧನ್ಯಕುಮಾರ್ ರೈ ಬಿಳಿಯೂರುಗುತ್ತು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅಜಿತ್‌ಕುಮಾರ್ ಪಾಲೇರಿ, ಗೋಳಿತ್ತೊಟ್ಟು ದುರ್ಗಾಬೀಡಿ ಮಾಲಕ ಕೇಶವ ಪೂಜಾರಿ ಕಿನ್ಯಡ್ಕ, ಪ್ರಧಾನ ಅರ್ಚಕ ಶ್ರೀನಿವಾಸ ಬಡೆಕ್ಕಿಲ್ಲಾಯ, ಶ್ರೀ ಷಣ್ಮುಖ ದೇವಸ್ಥಾನ ಟ್ರಸ್ಟ್ ನ ಸದಸ್ಯ ವಿಶ್ವನಾಥ ಗೌಡ ಪೆರಣ, ಗೋಳಿತ್ತೊಟ್ಟು ಗ್ರಾಮ ಪಂಚಾಯಿತಿ ಸದಸ್ಯರಾದ ರವಿ(ಶಿವಪ್ರಸಾದ್), ಬಾಬು ಪೂಜಾರಿ ಕಿನ್ಯಡ್ಕ, ಗುಲಾಬಿ, ಶ್ರುತಿ ಅಶೋಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದೇಜಪ್ಪ ಗೌಡ ಬಾಂಕೋಡಿ ದಂಪತಿ ಸ್ವಾಮೀಜಿಗೆ ಫಲ ತಾಂಬೂಲ ಸಮರ್ಪಣೆ ಮಾಡಿದರು. ರಜತ್ ಕುಮಾರ್ ಶಾಂತಿಮಾರು, ಮೋನಪ್ಪ ಪೂಜಾರಿ, ಸಾಂತಪ್ಪ ನಾಯ್ಕ್ ಶಿವಾರು, ಜಗನ್ನಾಥ ಪಾದೆ, ಸದಾನಂದ ಮುರಿಯೇಳು, ರಂಜಿತ್ ಮೇಲೂರು, ವಿಶ್ವನಾಥ ಗೌಡ, ನೋಣಯ್ಯ ಅಂಬರ್ಜೆ, ಸುಧೀರ್ ಪುಲಾರ, ಚಂದ್ರಶೇಖರ್, ಧರ್ಣಪ್ಪ ಗೌಡ, ದಿವ್ಯಾ ಯಶೋಧರ, ಭಾರತಿ ಸತೀಶ್, ವೇದಕುಮಾರ್‌ರವರು ಅತಿಥಿಗಳನ್ನು ಗೌರವಿಸಿದರು.
ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಡಾ.ರಾಮಕೃಷ್ಣ ಭಟ್ ಅಂಜರ ಸ್ವಾಗತಿಸಿದರು. ಪುಷ್ಪರಾಜ್ ಕಡಮದಪಳಿಕೆ ವಂದಿಸಿದರು. ರೇಣುಕಾ ಕಣಿಯೂರು ಕಾರ್ಯಕ್ರಮ ನಿರೂಪಿಸಿದರು. ನೆಲ್ಯಾಡಿ ಶ್ರೀರಾಮ ವಿದ್ಯಾಲಯದ ಕ್ಷಮಾ ಮತ್ತು ತಂಡದವರು ಪ್ರಾರ್ಥಿಸಿದರು.

ವೈದಿಕ ಕಾರ್ಯಕ್ರಮ:
ಬ್ರಹ್ಮಕಲಶೋತ್ಸವದ ಅಂಗವಾಗಿ ಬೆಳಿಗ್ಗೆ ಗಣಪತಿ ಹೋಮ, ಬಿಂಬಶುದ್ಧಿ, ಕಲಶ ಪೂಜೆ, ಅಂಕುರ ಪೂಜೆ,ಕಲಶಾಭಿಷೇಕ, ಸ್ಕಂದ ಪ್ರಾಯಶ್ಚಿತ್ತ ಹೋಮಗಳು, ಹೋಮ ಕಲಶಾಭಿಷೇಕ,ಮಧ್ಯಾಹ್ನ ಮಹಾಪೂಜೆ,ಅನ್ನಸಂತರ್ಪಣೆ ನಡೆಯಿತು. ಸಂಜೆ ಅಂಕುರ ಪೂಜೆ, ದುರ್ಗಾನಮಸ್ಕಾರ ಪೂಜೆ,ರಾತ್ರಿ ಅನ್ನಸಂತರ್ಪಣೆ ನಡೆಯಿತು.

ಭಜನೆ/ಸಾಂಸ್ಕೃತಿಕ ಕಾರ್ಯಕ್ರಮ:
ಮಧ್ಯಾಹ್ನ ಬಂದಾರು ಮಲೆಂಗಲ್ಲು ಶ್ರೀ ಉಮಾಮಹೇಶ್ವರ ಭಜನಾ ಮಂಡಳಿ ಹಾಗೂ ಸಂಜೆ ಇಳಂತಿಲ ವಾಣಿನಗರ ವಾಣಿಶ್ರೀ ಭಜನಾ ಮಂಡಳಿ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ ಶಾಂತಿನಗರ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ರಾತ್ರಿ ಬಿ.ಕೆ.ಪದ್ಮರಾಜ ಎಕ್ಕಾರ್ ಸಂಚಾಲಕತ್ವದ ಪರಮ ಪದ್ಮ ಕಲಾವಿದರು ತಂಡದವರಿಂದ ‘ ಶಿವಪುರ್ಸಾದ ಬಬ್ಬರ್ಯೆ’ ತುಳು ಜಾನಪದ ಐತಿಹಾಸಿಕ ನಾಟಕ ನಡೆಯಿತು.

ದೇವಳದಲ್ಲಿ ಇಂದು:
ಬ್ರಹ್ಮಕಲಶೋತ್ಸವದ ಮೂರನೇ ದಿನವಾದ ಮಾ.೨೪ರಂದು ಬೆಳಿಗ್ಗೆ, ಸಂಜೆ ವೈದಿಕ ಕಾರ್ಯಕ್ರಮ ನಡೆಯಲಿದೆ. ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಭಜನಾ ಮಂಡಳಿ ಹಾಗೂ ಪಟ್ರಮೆ ಶ್ರೀ ನಮೋ ವಿಷ್ಣುಮೂರ್ತಿ ವಿಶ್ವಹಿಂದು ಪರಿಷದ್ ಭಜನಾ ಮಂಡಳಿಯವರಿಂದ ಭಜನೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ ಸುಜನಾ ಕುಮಾರಿ ಕೆ.ಆಲಂತಾಯ ಮತ್ತು ಕೃತಿ ಪಿ.ಶೆಟ್ಟಿ ಪಾಲೇರಿ ಹಾಗೂ ಬಳಗದವರಿಂದ ಭರತನಾಟ್ಯ, ರಾತ್ರಿ ಪುತ್ತೂರಿನ ನೃತ್ಯೋಪಾಸನಾ ಕಲಾಕೇಂದ್ರದವರಿಂದ ‘ನೃತ್ಯೋಹಂ-ಭರತನಾಟ್ಯ’ ನಡೆಯಲಿದೆ. ಸಂಜೆ ನಡೆಯಲಿರುವ ಧಾರ್ಮಿಕ ಸಭೆಯಲ್ಲಿ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ರಾಜ್ಯ ಧಾರ್ಮಿಕ ಪರಿಷತ್ತು ಸದಸ್ಯ ಸೂರ್ಯನಾರಾಯಣ ಭಟ್ ಕಶೆಕೋಡಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.

LEAVE A REPLY

Please enter your comment!
Please enter your name here