ಕಾಂಚನ ಪೆರ್ಲ ಶ್ರೀ ಷಣ್ಮುಖ ದೇವಸ್ಥಾನದ ಬ್ರಹ್ಮಕಲಶೋತ್ಸವ, ಧಾರ್ಮಿಕ ಸಭೆ

0

  •  ದೇವಸ್ಥಾನ ಸಂಸ್ಕಾರ ಕೊಡುವ ಕೇಂದ್ರ ಆಗಬೇಕು: ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ
  • ಭಜನೆ, ಯಾಗದಿಂದ ಪರಿವರ್ತನೆ ಸಾಧ್ಯ: ಮಾಣಿಲ ಸ್ವಾಮೀಜಿ

 

ನೆಲ್ಯಾಡಿ: ಧರ್ಮ, ಸಂಸ್ಕೃತಿ ರಕ್ಷಣೆ ಪ್ರತಿ ಮನೆಯಲ್ಲೂ ಆಗಬೇಕು. ಸಾಮೂಹಿಕ ಆರಾಧನೆಗೆ ದೇವಸ್ಥಾನ ಬೇಕು. ದೇವಸ್ಥಾನ ಸಂಸ್ಕಾರ ಕೊಡುವ ಕೇಂದ್ರ ಆಗಬೇಕು ಎಂದು ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು.

 

 

ಅವರು ಕಡಬ ತಾಲೂಕಿನ ಆಲಂತಾಯ ಗ್ರಾಮದ ಕಾಂಚನ ಪೆರ್ಲ ಶ್ರೀ ಷಣ್ಮುಖ ದೇವಸ್ಥಾನದಲ್ಲಿ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವದ ೩ನೇ ದಿನವಾದ ಮಾ.೨೪ರಂದು ಸಂಜೆ ಕೀರ್ತಿಶೇಷ ಕೊರಗಪ್ಪ ಪೂಜಾರಿ ಪಾಲೇರಿ ಸಭಾಂಗಣದ ಕೀರ್ತಿಶೇಷ ಬ್ರಹ್ಮರಾಜ ಹೆಗ್ಡೆ ಶಾಂತಿಮಾರು ವೇದಿಕೆಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ದೇವಸ್ಥಾನಗಳಲ್ಲಿ ಕಾಲ ಕಾಲಕ್ಕೆ ಪೂಜೆ, ಸೇವೆ ನಡೆಯಬೇಕು. ಬದುಕು, ಧರ್ಮ, ಸಂಸ್ಕಾರದ ಸಂರಕ್ಷಣೆಗೆ ಶ್ರದ್ಧಾಕೇಂದ್ರ ಅಗತ್ಯವಿದೆ ಎಂದರು. ಮಾಣಿಲ ಶ್ರೀ ಧಾಮದ ಶ್ರೀ ಯೋಗಿ ಕೌಸ್ತುಭ ಕರ್ಮ ಯೋಗಿ ಮೋಹನ ದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ, ಭಜನೆ, ಯಾಗದಿಂದ ಪರಿವರ್ತನೆ ಸಾಧ್ಯವಿದೆ. ಪ್ರತಿ ಮನೆಯಲ್ಲೂ ಇಷ್ಟ ದೇವರ ನಾಮಸ್ಮರಣೆ ಮಾಡಬೇಕು. ಭಕ್ತಿ,ಶ್ರದ್ಧೆ, ನಿಷ್ಠೆ ಸಮಾಜದಲ್ಲಿ ಬೆಳೆಯಲು ಹಿರಿಯರು ದೇವಸ್ಥಾನ ನಿರ್ಮಿಸಿದ್ದಾರೆ ಎಂದು ನುಡಿದರು.

 

ದೇವಸ್ಥಾನದ ಆಡಳಿತ ಮೊಕ್ತೇಸರ ಧನ್ಯಕುಮಾರ್ ರೈ ಬಿಳಿಯೂರುಗುತ್ತು ಸಭೆಯ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಧಾರ್ಮಿಕ ಪರಿಷತ್ತು ಸದಸ್ಯ ಸೂರ್ಯನಾರಾಯಣ ಭಟ್ ಕಶೆಕೋಡಿಯವರು ದೇವಾಲಯ-ಹಿಂದೂ ಧರ್ಮ ಮತ್ತು ರಾಷ್ಟ್ರೀಯತೆ ವಿಷಯದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು. ಮಾಜಿ ಸಚಿವ ಬಿ.ರಮಾನಾಥ ರೈ, ರಾಮಕುಂಜ ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ಪ್ರಾಂಶುಪಾಲ ಗಣರಾಜ್ ಕುಂಬ್ಳೆ, ಉಪ್ಪಿನಂಗಡಿಯ ದಂತ ವೈದ್ಯ ಡಾ.ರಾಜಾರಾಮ್ ಕೆ.ಬಿ., ತಾ.ಪಂ.ಮಾಜಿ ಸದಸ್ಯೆ ತೇಜಸ್ವಿನಿ ಕಟ್ಟಪುಣಿ, ಬೆಳ್ತಂಗಡಿ ಅಭ್ಯುದಯ ಕನ್ ಸ್ಟ್ರಕ್ಷನ್‌ನ ಮಾಲಕ ವಸಂತ ನಾಯಕ್ ಮಜಲುರವರು ಸಂದರ್ಭೋಚಿತವಾಗಿ ಮಾತನಾಡಿದರು.

ಸನ್ಮಾನ:
ಆಲಂತಾಯದಲ್ಲಿ ಕಾಂಚನ ಶ್ರೀ ಷಣ್ಮುಖ ದೇವಸ್ಥಾನಕ್ಕೆ ಮಹಾದ್ವಾರ ನಿರ್ಮಾಣ ಮಾಡಿದ ದಾಸಪ್ಪ ಗೌಡ ದಂಪತಿಯನ್ನು ಸ್ವಾಮೀಜಿ ಸನ್ಮಾನಿಸಿ ಗೌರವಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅಜಿತ್ ಕುಮಾರ್ ಪಾಲೇರಿ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಸುವರ್ಣ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರ ಒಕ್ಕೂಟ ಅಧ್ಯಕ್ಷ ಬಾಲಕೃಷ್ಣ ಹಾರ್ಪಳ, ಎಪಿಎಂಸಿ ಸದಸ್ಯ ಕುಶಾಲಪ್ಪ ಗೌಡ ಅನಿಲ, ಶ್ರೀ ಷಣ್ಮುಖ ದೇವಸ್ಥಾನ ಟ್ರಸ್ಟ್‌ನ ಕಾರ್ಯದರ್ಶಿ ರಮೇಶ್ ಬಿ.ಜಿ., ಸದಸ್ಯರಾದ ಪ್ರಶಾಂತ್ ರೈ ಅರಂತಬೈಲು, ಗುಲಾಬಿ ಶೆಟ್ಟಿ ಪುರ, ಗೋಳಿತೊಟ್ಟು ಗ್ರಾಮ ಪಂಚಾಯಿತಿ ಸದಸ್ಯರಾದ ಪದ್ಮನಾಭ ಪೂಜಾರಿ, ನೋಣಯ್ಯ ಗೌಡ ಡೆಬ್ಬೇಲಿ, ಸವಿತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದಾಮೋದರ ಪೂಜಾರಿ ಅನಾಲುಪಳಿಕೆ ಹಾಗೂ ಸುಂದರ ಶೆಟ್ಟಿ ಪುರ ದಂಪತಿ ಸ್ವಾಮೀಜಿಯವರಿಗೆ ಫಲ ತಾಂಬೂಲ ಸಮರ್ಪಣೆ ಮಾಡಿದರು. ಮನೋಹರ, ನೇಮಣ್ಣ ಗೌಡ, ಭಾರತಿ, ಗೀತಾ ರಮೇಶ್, ಪುರುಷೋತ್ತಮ, ರಮೇಶ್, ಅಶೋಕ್ ಸಿ.ಬಿ., ವಿಶಾಲಾಕ್ಷಿ, ದೇಜಪ್ಪ, ಸಂಕಪ್ಪ, ದಿನೇಶ್, ಅಶ್ವಥ್, ಪುಷ್ಪರಾಜ್, ನೇಮಣ್ಣ ಗೌಡ, ಹರೀಶ್‌ರವರು ಅತಿಥಿಗಳಿಗೆ ಶಾಲು ಹಾಕಿ ಗೌರವಿಸಿದರು. ಸುಬ್ರಾಯ ಪುಣಚ ಸ್ವಾಗತಿಸಿದರು. ಆನಂದ ಮೇಲೂರು ವಂದಿಸಿದರು. ಶಿಕ್ಷಕ ಪ್ರದೀಪ್ ಬಾಕಿಲ ಕಾರ್ಯಕ್ರಮ ನಿರೂಪಿಸಿದರು. ಸ್ವಾತಿ ಮತ್ತು ಜಯಶ್ರೀ ಪ್ರಾರ್ಥಿಸಿದರು.

ವೈದಿಕ ಕಾರ್ಯಕ್ರಮ:
ವೈದಿಕ ಕಾರ್ಯಕ್ರಮ ದ ಅಂಗವಾಗಿ ಬೆಳಿಗ್ಗೆ ಗಣಪತಿ ಹೋಮ, ಅಂಕುರ ಪೂಜೆ, ಶಾಂತಿ ಹೋಮಗಳು, ಹೋಮ ಕಲಶಾಭಿಷೇಕಗಳು, ಅಂಕುರ ಪೂಜೆ, ತ್ರಿಕಾಲ ಪೂಜೆ, ಮಂಟಪ ಸಂಸ್ಕಾರ ನಡೆಯಿತು.

ಭಜನೆ/ಸಾಂಸ್ಕೃತಿಕ ಕಾರ್ಯಕ್ರಮ:
ಬೆಳಿಗ್ಗೆ ಶ್ರೀ ಕಾಳಿಕಾಂಬಾ ಭಜನಾ ಮಂಡಳಿ ಉಪ್ಪಿನಂಗಡಿ ಹಾಗೂ ಸಂಜೆ ಪಟ್ರಮೆ ಶ್ರೀ ನಮೋ ವಿಷ್ಣುಮೂರ್ತಿ ವಿಶ್ವಹಿಂದೂ ಪರಿಷತ್ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ ಸುಜನಾ ಕುಮಾರಿ ಕೆ.ಆಲಂತಾಯ ಮತ್ತು ಕೃತಿ ಟಿ.ಶೆಟ್ಟಿ ಪಾಲೇರಿ ಹಾಗೂ ಬಳಗದವರಿಂದ ಭರತನಾಟ್ಯ ಹಾಗೂ ರಾತ್ರಿ ನ್ರತ್ಯೋಪಾಸಣಾ ಕಲಾಕೇಂದ್ರ ಪುತ್ತೂರು ಇವರಿಂದ ನ್ರತ್ಯೋಹಂ-ಭರತ ನಾಟ್ಯ ನಡೆಯಿತು.

ಇಂದು ದೇವಳದಲ್ಲಿ:
ಬ್ರಹ್ಮಕಲಶೋತ್ಸವದ ನಾಲ್ಕನೇ ದಿನವಾದ ಮಾ.೨೫ರಂದು ಬೆಳಿಗ್ಗೆ ಹಾಗೂ ಸಂಜೆ ವಿವಿಧ ವೈದಿಕ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ ಪೆರ್ನೆ ಶ್ರೀ ರಾಮಾಂಜನೇಯ ಭಜನಾ ಮಂಡಳಿ ಹಾಗೂ ಸಂಜೆ ಕರಾಯ ಶ್ರೀ ಕೃಷ್ಣ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಆಲಂತಾಯ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಾತ್ರಿ ಯಕ್ಷಗಾನ ನೃತ್ಯ ವೈಭವ ನಡೆಯಲಿದೆ. ಸಂಜೆ ನಡೆಯುವ ಧಾರ್ಮಿಕ ಸಭೆಯಲ್ಲಿ ಕನ್ಯಾಡಿ ಶ್ರೀ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಭಾಸ್ಕರ ಭಟ್ ಪಂಜ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.

LEAVE A REPLY

Please enter your comment!
Please enter your name here