ಒಡಿಯೂರು ಸಂಸ್ಥಾನದಲ್ಲಿ ಅಭಿನಂದನಾ ಸಮಾರಂಭ

0

  •  ಅವಕಾಶವನ್ನು ಸದ್ವಿನಿಯೋಗಿಸುವ ಮನಸ್ಸು ನಮ್ಮದಾಗಬೇಕು: ಒಡಿಯೂರು ಶ್ರೀ
  •  ಎಲ್ಲರ ಪ್ರೀತಿ ವಿಶ್ವಾಸದ ಪ್ರಯತ್ನದಿಂದಾಗಿ ಕಾರ್ಯಕ್ರಮ ಯಶಸ್ವಿಯಾಗಿದೆ: ಸಾಧ್ವಿ ಮಾತಾನಂದಮಯೀ
  • ಧರ್ಮ ಜಾಗೃತಿ ಮೂಡಿಸುವ ಕೆಲಸ ಶ್ರೀಗಳ ಷಷ್ಠ್ಯಬ್ದ ಕಾರ್ಯಕ್ರಮದಿಂದಾಗಿದೆ: ಡಾ. ಎಂ. ಮೋಹನ್ ಆಳ್ವ

ವಿಟ್ಲ: ಅವಕಾಶವನ್ನು ಸದ್ವಿನಿಯೋಗಿಸುವ ಮನಸ್ಸು ನಮ್ಮದಾಗಬೇಕು. ಸಾಧನೆಯ ಗುಟ್ಟು ಕರ್ತವ್ಯ ನಿಷ್ಠೆಯಲ್ಲಿ ಅಡಗಿದೆ. ಷಷ್ಠ್ಯಬ್ದ ಕಾರ್ಯಕ್ರಮ ಉತ್ತಮ ರೀತಿಯಲ್ಲಿ ನಡೆದಿದೆ ಎಂದು ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

 

ಅವರು ಮಾ.೨೯ರಂದು ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ಒಡಿಯೂರು ಶ್ರೀಗಳ ಷಷ್ಠ್ಯಬ್ದ ಸಂಭ್ರಮದ ಯಶಸ್ವಿಗೆ ಮತ್ತು ಶ್ರೀ ಒಡಿಯೂರು ರಥೋತ್ಸವ – ತುಳುನಾಡ ಜಾತ್ರೆ ಆನಂದೋತ್ಸವ -ಗುರುವಂದನೆ ಸಮಾರಂಭದಲ್ಲಿ ಸಹಕರಿಸಿದವರಿಗೆ ಅಭಿನಂದನೆ ಹಾಗೂ ಎ.೧೬ರಂದು ಕ್ಷೇತ್ರದಲ್ಲಿ ನಡೆಯಲಿರುವ ಶ್ರೀ ಹನುಮೋತ್ಸವದ ಸಮಾಲೋಚನಾ ಸಭೆಯಲ್ಲಿ ಆಶೀರ್ವಚನ ನೀಡಿದರು. ಷಷ್ಠ್ಯಬ್ದ ಸಂಭ್ರಮ ಹೊಸಹೊಸ ಕಾರ್ಯಕ್ರಮಕ್ಕೆ ವೇದಿಕೆಯಾಗಿದೆ. ಸೇವಾ ಕಾರ್ಯದ ಮೂಲಕ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಕೆಲಸವಾಗಬೇಕು ಎಂದು ಅವರು ಹೇಳಿದರು.

ಸಾಧ್ವಿ ಮಾತಾನಂದಮಯೀ ಆಶೀರ್ವಚನ ನೀಡಿ ಎಲ್ಲರ ಪ್ರೀತಿ ವಿಶ್ವಾಸದ ಪ್ರಯತ್ನದಿಂದಾಗಿ ಕಾರ್ಯಕ್ರಮ ಯಶಸ್ವಿಯಾಗಿದೆ. ನಂಬಿಕೆ ಗಟ್ಟಿಯಾದರೆ ಮಾಡಿದ ಕೆಲಸದಲ್ಲಿ ಯಶಸ್ಸಾಗುವುದು ಎಂದರು. ಒಡಿಯೂರು ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ ಸಮಿತಿಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಮಾತನಾಡಿ, ಧರ್ಮ ಜಾಗೃತಿ ಮೂಡಿಸುವ ಕೆಲಸ ಒಡಿಯೂರು ಶ್ರೀಗಳ ಷಷ್ಠ್ಯಬ್ದದಿಂದ ಆಗಿದೆ. ಸಹಕಾರ ಮನೊಭಾವನೆಯನ್ನು ಜನ ಹೆಚ್ಚಾಗಿ ಮರೆಯತ್ತಾರೆ. ಒಡಿಯೂರು ಶ್ರೀಗಳ ಯೋಚನೆಗಳು ಅರ್ಥಪೂರ್ಣವಾಗಿರುತ್ತದೆ. ಸಮಾಜದ ಏಳಿಗೆಗಾಗಿ ಸದಾ ಅವರ ಹೃದಯ ಮಿಡಿಯುತ್ತಿರುತ್ತದೆ. ಶ್ರೀಗಳ ಯೋಜನೆಯಂತೆ ಕಾರ್ಯಕ್ರಮ ಉತ್ತಮ ರೀತಿಯಲ್ಲಿ ನಡೆದು ಸಂತೃಪ್ತಿ ತಂದಿದೆ ಎಂದರು.

ಒಡಿಯೂರು ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ ಕಾರ್ಯಾಧ್ಯಕ್ಷ ಪದ್ಮನಾಭ ಕೊಟ್ಟಾರಿ, ಕೋಶಾಧಿಕಾರಿ ಸುರೇಶ್ ರೈ, ಸಂಘಟನಾ ಕಾರ್ಯದರ್ಶಿ ಚಂದ್ರಹಾಸ ರೈ ರಂಗೋಲಿ, ಪ್ರಧಾನ ಕಾರ್ಯದರ್ಶಿ ನವನೀತ ಶೆಟ್ಟಿ ಕದ್ರಿ, ಪುತ್ತೂರು ಷಷ್ಠ್ಯಬ್ದ ಸಂಭ್ರಮ ಸಮಿತಿ ಅಧ್ಯಕ್ಷ ಸೀತಾರಾಮ ರೈ ಸವಣೂರು, ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಸರ್ವಾಣಿ ಪಿ. ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಎ.೧೦ರಿಂದ ಕ್ಷೇತ್ರದಲ್ಲಿ ನಡೆಯಲಿರುವ ಅಖಂಡ ಭಗವನ್ನಾಮ ಸಂಕೀರ್ತನೆ ಹಾಗೂ ಮಾ೧೬ರಂದು ನಡೆಯಲಿರುವ ಶ್ರೀಮದ್ರಾಮಾಯಣ ಮಹಾಯಜ್ಞ, ಶ್ರೀ ಹನುಮೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ರೇಣುಕಾ ಎಸ್. ರೈ ಪ್ರಾರ್ಥಿಸಿದರು. ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು. ಸಂತೋಷ್ ಭಂಡಾರಿ ವಂದಿಸಿದರು.

LEAVE A REPLY

Please enter your comment!
Please enter your name here