ಕೆದಂಬಾಡಿ ಗ್ರಾಪಂ: ಡಾ| ಅಂಬೇಡ್ಕರ್ ಜಯಂತಿ ಆಚರಣೆ, ನೀರಿನ ಬ್ಯಾರಲ್ ವಿತರಣೆ

0

  • ಅಂಬೇಡ್ಕರ್ ಒಬ್ಬರು ಮಹಾನ್ ಮಾನವತಾವಾದಿ: ರತನ್ ರೈ ಕುಂಬ್ರ

ಪುತ್ತೂರು: ಸಂವಿಧಾನ ಶಿಲ್ಪಿ ಡಾ| ಬಿ.ಆರ್ ಅಂಬೇಡ್ಕರ್ ಒಬ್ಬರು ಮಹಾನ್ ಮಾನವತಾವಾದಿಯಾಗಿದ್ದರು. ಅಧಿಕಾರಶಾಹಿಯನ್ನು ಕಿತ್ತೆಸೆದು ಅವಕಾಶದಿಂದ ಯಾರೂ ವಂಚಿತರಾಗಬಾರದು ಎಂಬ ನಿಟ್ಟಿನಲ್ಲಿ ಮಾನವ ಹಕ್ಕುಗಳಿಗಾಗಿ ಹೋರಾಡಿದ ಒಬ್ಬ ಮಹಾನ್ ಮಾನವತಾವಾದಿ, ಸಮಾನತೆಯನ್ನು ಸಾರಿದ ಮಹಾನ್ ಚೇತನ, ಅವರ ಜೀವನ ಆದರ್ಶಗಳು ನಮಗೆಲ್ಲರಿಗೂ ಮಾರ್ಗದರ್ಶಕವಾಗಿದೆ ಎಂದು ಕೆದಂಬಾಡಿ ಗ್ರಾಪಂ ಅಧ್ಯಕ್ಷ ರತನ್ ರೈ ಕುಂಬ್ರ ಹೇಳಿದರು.
ಅವರು ಎ.14 ರಂದು ಕೆದಂಬಾಡಿ ಗ್ರಾಮ ಪಂಚಾಯತ್ ವತಿಯಿಂದ ಗ್ರಾಪಂ ವಠಾರದಲ್ಲಿ ನಡೆದ ಡಾ| ಬಿ.ಆರ್.ಅಂಬೇಡ್ಕರ್‌ರವರು 131 ನೇ ಜನ್ಮ ದಿನಾಚರಣೆ ಹಾಗೂ ಗ್ರಾಮದ ಎಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಟುಂಬಗಳಿಗೆ ನೀರಿನ ಬ್ಯಾರಲ್ ವಿತರಣಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಂಬೇಡ್ಕರ್‌ರವರು ಹಾಕಿಕೊಟ್ಟ ಸಂವಿಧಾನದ ಅಡಿಯಲ್ಲಿ ಇಂದು ನಾವೆಲ್ಲರೂ ಜೀವನ ಮಾಡುತ್ತಿದ್ದೇವೆ ಎಂದ ರತನ್ ರೈಯವರು, ಅಂಬೇಡ್ಕರ್‌ರವರ ಬಗ್ಗೆ ನಾವೆಲ್ಲರೂ ಮತ್ತಷ್ಟು ತಿಳಿದುಕೊಳ್ಳಬೇಕಾದ ಅಗತ್ಯತೆ, ಅವರ ಜೀವನ ಚರಿತ್ರೆಯನ್ನು ತಿಳಿದುಕೊಂಡು ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ಹೇಳಿ ಶುಭಾಶಯ ಕೋರಿದರು.

ವೇದಿಕೆಯಲ್ಲಿ ಗ್ರಾಪಂ ಸದಸ್ಯರುಗಳಾದ ಕೃಷ್ಣ ಕುಮಾರ್ ಇದ್ಯಪೆ, ವಿಠಲ ರೈ ಮಿತ್ತೋಡಿ, ಜಯಲಕ್ಷ್ಮೀ ಬಲ್ಲಾಳ್, ಸುಜಾತ, ರೇವತಿ ಬೋಳೋಡಿ ಉಪಸ್ಥಿತರಿದ್ದರು. ಅಭಿವೃದ್ಧಿ ಅಧಿಕಾರಿ ಅಜಿತ್ ಜಿ.ಕೆ ಸ್ವಾಗತಿಸಿ, ವಂದಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸುನಂದ ರೈಯವರು ನೀರಿನ ಬ್ಯಾರೆಲ್‌ನ ಫಲಾನುಭವಿಗಳ ಹೆಸರು ಓದಿ ಹೇಳಿದರು. ಸಿಬ್ಬಂದಿಗಳಾದ ಜಯಂತ ಮೇರ್ಲ, ಗಣೇಶ್, ಮೃದುಳ, ಶಶಿಪ್ರಭಾ, ವಿದ್ಯಾಪ್ರಸಾದ್ ಸಹಕರಿಸಿದ್ದರು. ದೀಪ ಬೆಳಗಿಸಿ ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ನಮನ ಸಲ್ಲಿಸಲಾಯಿತು.

ಗ್ರಾಮದ ಎಲ್ಲಾ ಎಸ್.ಸಿ, ಎಸ್.ಟಿ ಕುಟುಂಬಗಳಿಗೆ ನೀರಿನ ಬ್ಯಾರಲ್

ಕೆದಂಬಾಡಿ ಗ್ರಾಮದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ಪಂಗಡದ ಸುಮಾರು 170ಕುಟುಂಬಗಳಿಗೆ ನೀರಿನ ಬ್ಯಾರಲ್ ಅನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು. ಅಧ್ಯಕ್ಷ ರತನ್ ರೈಯವರು ಸಾಂಕೇತಿಕವಾಗಿ ವಿತರಿಸಿ ಶುಭ ಹಾರೈಸಿದರು.

ಶಾಸಕರು ಪುತ್ತೂರಿನ ಪುಣ್ಯಕೋಟಿ
ಪುತ್ತೂರಿನ ಶಾಸಕ ಸಂಜೀವ ಮಠಂದೂರುರವರು ಕೆದಂಬಾಡಿ ಗ್ರಾಮದ ಅಭಿವೃದ್ಧಿಗೆ ಈಗಾಗಲೇ ಸುಮಾರು ೧೫ ಕೋಟಿ ರೂ.ಗಳಷ್ಟು ಅನುದಾನವನ್ನು ನೀಡಿದ್ದಾರೆ. ಇದರಲ್ಲಿ ಕೆಲವು ಕಾಮಗಾರಿಗಳು ಪೂರ್ಣಗೊಂಡಿದ್ದು ಇನ್ನುಳಿದಂತೆ ಕಾಮಗಾರಿಗಳು ಆರಂಭಗೊಳ್ಳಬೇಕಿದೆ. ಗ್ರಾಮಸ್ಥರ ಬಹುದಿನದ ಬೇಡಿಕೆಯಾಗಿದ್ದ ಕುಂಬ್ರ ಸಾರೆಪುಣಿ ಸನ್ಯಾಸಿಗುಡ್ಡೆ ಇದ್ಪಾಡಿ ಕೊಡಂಕೀರಿಯಾಗಿ ಮುಂಡೂರುಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಶಾಸಕರು ಈಗಾಗಲೇ ೧.೫ ಕೋಟಿ ರೂ. ಸೇತುವೆಗೆ ಮಂಜೂರು ಮಾಡಿದ್ದು ಸದ್ಯದಲ್ಲೇ ಕೆಲಸ ಆರಂಭಗೊಳ್ಳಲಿದೆ. ಈ ಸಂಪರ್ಕ ಸೇತುವೆಯಾದರೆ ಕೊಡಂಕೀರಿ ಭಾಗದಿಂದ ಕುಂಬ್ರ, ತಿಂಗಳಾಡಿ ಇತ್ಯಾದಿ ಭಾಗಗಳಿಗೆ ಬರುವ ಗ್ರಾಮಸ್ಥರಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದು ರತನ್ ರೈ ಕುಂಬ್ರರವರು ಈ ಸಂದರ್ಭದಲ್ಲಿ ತಿಳಿಸಿದರು. ವಿಧಾನಸಭಾ ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿರುವ ಶಾಸಕ ಸಂಜೀವ ಮಠಂದೂರುರವರು ಪುತ್ತೂರಿನ ಪುಣ್ಯಕೋಟಿ ಎಂದರೆ ತಪ್ಪಾಗಲಾರದು ಎಂದು ಹೇಳಿದರು.

LEAVE A REPLY

Please enter your comment!
Please enter your name here