ಮಕ್ಕಳಿಗೆ ಭಾರತಾಂಬೆಯನ್ನು ಕಾಣುವ ಶಿಕ್ಷಣ ಬೇಕು: ಶಾಸಕ ಮಠಂದೂರು

0

 


ಉಪ್ಪಿನಂಗಡಿ: ಆಧುನಿಕಯತೆಯ ಭರದಲ್ಲಿ ಸಿಲುಕಿ ನಾವಿಂದು ನಮ್ಮ ಸಂಸ್ಕೃತಿ, ಆಚಾರ- ವಿಚಾರಗಳನ್ನು ಮರೆಯುತ್ತಿದ್ದು, ವೈಟ್‌ಕಾಲರ್ ಜಾಬ್‌ಗಳಿಗಾಗಿ ಶಿಕ್ಷಣವನ್ನು ಕೂಡಾ ಐಷಾರಾಮಿಯತ್ತ ಕೊಂಡೊಯ್ಯುವ ಮೂಲಕ ವಿದೇಶಿ ಸಂಸ್ಕೃತಿಯತ್ತ ಮಕ್ಕಳನ್ನು ಒಯ್ಯುವ ಮನಸ್ಸು ನಮ್ಮದಾಗಿದೆ. ಇದು ದೇಶಕ್ಕೆ ಆಪತ್ತಾಗಿದ್ದು, ಇದರ ಬದಲು ಭಾರತಾಂಬೆಯನ್ನು ಕಾಣುವಂತಹ ಶಿಕ್ಷಣ ನಮ್ಮ ಮಕ್ಕಳು ಪಡೆಯಬೇಕು ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ತಿಳಿಸಿದರು.

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಂಗಸಂಸ್ಥೆಯಾಗಿರುವ ಇಲ್ಲಿನ ನಟ್ಟಿಬೈಲ್‌ನ ವೇದಶಂಕರನಗರದಲ್ಲಿರುವ ಶ್ರೀ ರಾಮ ಶಾಲೆಯ ನೂತನ ಕೊಠಡಿ ಹಾಗೂ ಉರಿಮಜಲು ಕೆ. ರಾಮ ಭಟ್ ಸಭಾಂಗಣವನ್ನು ಎ.15ರಂದು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ಇಲ್ಲಿನ ಸಂಪ್ರದಾಯ, ಆಚಾರ- ವಿಚಾರ, ಸಂಸ್ಕೃತಿ- ಸಂಸ್ಕಾರವನ್ನು ಕೂಡಿಸುವ, ಮಾತೃಭೂಮಿಯ ಬಗ್ಗೆ ಕಾಳಜಿ ಇರುವ ಶಿಕ್ಷಣ ನಮ್ಮದಾಗಬೇಕು. ಶಿಕ್ಷಣ ಪಡೆಯುವುದು ಕೇವಲ ಹಣ ಸಂಪಾದನೆಗಾಗಿ ಮಾತ್ರ ಅಲ್ಲ. ಆತ ಸಮಾಜದ ಉತ್ತಮ ನಾಗರಿಕನಾಗಲು ಕೂಡಾ ಎಂದ ಅವರು, ಅಂತಹ ಸಂಸ್ಕಾರಯುತ ಶಿಕ್ಷಣವನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದಡಿಯಲ್ಲಿರುವ ವಿದ್ಯಾಸಂಸ್ಥೆಗಳಲ್ಲಿ ಪಡೆದುಕೊಳ್ಳಲು ಸಾಧ್ಯ ಎಂದರು.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮಾತನಾಡಿ, ಶಿಕ್ಷಣದೊಂದಿಗೆ ಸಂಸ್ಕಾರವನ್ನು ಕಲಿಸುವ ಇಂತಹ ಶಾಲೆಗಳಲ್ಲಿ ಕಲಿತಾಗ ಮಾತ್ರ ನಮ್ಮ ಮಕ್ಕಳು ಸ್ವಾಮಿ ವಿವೇಕಾನಂದ, ಅಂಬೇಡ್ಕರ್ ಅವರಂತೆ ಆಗಲು ಸಾಧ್ಯ. ಇಲ್ಲಿ ಕಲಿತ ಮಕ್ಕಳನ್ನು ಸಮಾಜದ ಇತರ ವಿದ್ಯಾರ್ಥಿಗಳ ನಡುವೆ ಗುರುತು ಮಾಡಿ ಹೇಳಬಹುದು. ಯಾಕೆಂದರೆ ಅಷ್ಟು ಆಚಾರ- ವಿಚಾರಗಳು ಅವರಲ್ಲಿ ತುಂಬಿಕೊಂಡಿರುತ್ತದೆ ಎಂದರಲ್ಲದೆ, ಶ್ರೀ ರಾಮ ಶಾಲೆಗೆ ತನ್ನಿಂದಾಗುವ ಸಹಾಯ ನೀಡುವುದಾಗಿ ತಿಳಿಸಿದರು.

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೃಷ್ಣಭಟ್ ಕೆ.ಎಂ. ಮಾತನಾಡಿ, ಕೆಲವು ಖಾಸಗಿ ಶಾಲೆಗಳಿಂದು ವ್ಯವಹಾರಿಕವಾಗಿ ನಡೆದರೆ, ಸರಕಾರಿ ಶಾಲೆಗಳು ಸರಕಾರಿ ನೀತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಆದರೆ ವಿವೇಕಾನಂದ ವಿದ್ಯಾವರ್ಧಕ ಸಂಘದಡಿಯಲ್ಲಿರುವ ಶೈಕ್ಷಣಿಕ ಸಂಸ್ಥೆಗಳು ಅದಕ್ಕೆ ತದ್ವಿರುದ್ಧವಾಗಿ ನಾಳಿನ ಉತ್ತಮ ಸಮಾಜಕ್ಕೆ ಉತ್ತಮ ನಾಗರಿಕರನ್ನು ನೀಡುವ ಉದ್ದೇಶದಿಂದ ಸಹಕಾರಿ ಸಂಘದ ರೂಪದಲ್ಲಿ ಕಾರ್ಯನಿರ್ವಹಿಸುತ್ತದೆ. ಆದ್ದರಿಂದಲೇ ಈ ಸಂಘದಡಿಯಲ್ಲಿ 76ವಿದ್ಯಾಸಂಸ್ಥೆಗಳು ಕಾರ್ಯನಿರ್ವಹಿಸುವಂತಾಗಿವೆ. ಇದು ಸಮಾಜದ ಸೊತ್ತಾಗಿರುವುದರಿಂದ ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಸಲಹಾ ಸಮಿತಿಯ ಸದಸ್ಯ ಎಸ್.ಆರ್. ರಂಗಮೂರ್ತಿ ಮಾತನಾಡಿ, ಸಿಬಿಎಸ್‌ಸಿ ಸ್ಕೂಲ್‌ಗಳು, ಆಂಗ್ಲಮಾಧ್ಯಮ ಶಾಲೆಗಳನ್ನು ಕಟ್ಟುವುದು ದೊಡ್ಡ ವಿಷಯ ಅಲ್ಲ. ಆದರೆ ಇಂದಿನ ಬದಲಾಗಿರುವ ಬದುಕಿನಲ್ಲಿ ಕನ್ನಡ ಮಾಧ್ಯಮ ಶಾಲೆಯೊಂದನ್ನು ಕಟ್ಟಿ ಬೆಳೆಸುವುದು ಕಷ್ಟದ ಮಾತೇ. ಆದರೆ ಉಪ್ಪಿನಂಗಡಿಯಲ್ಲಿ ಅದು ಯಶಸ್ವಿಯಾಗಿದ್ದು, 33 ಮಕ್ಕಳಿಂದ ಆರಂಭಗೊಂಡ ಶಾಲೆಯಲ್ಲಿಂದು 632ಜನ ವಿದ್ಯಾರ್ಥಿಗಳಿದ್ದಾರೆ. ರಾಷ್ಟ್ರ ನಿರ್ಮಾಣಕ್ಕೆ ಬೇಕಾದ ವ್ಯಕ್ತಿತ್ವವನ್ನು ರೂಪಿಸುವ ಶಿಕ್ಷಣ, ತ್ಯಾಗ ಮನೋಭಾವದ ಆಡಳಿತ ಮಂಡಳಿ ತಂಡ ಇಲ್ಲಿರುವುದೇ ಇದಕ್ಕೆ ಕಾರಣ ಎಂದರಲ್ಲದೆ, ಈ ಶಾಲೆಯನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಪಡಿಸಬೇಕು ಎಂದು ಶಾಸಕ ಸಂಜೀವ ಮಠಂದೂರು ಅವರಲ್ಲಿ ಮನವಿ ಮಾಡಿದರು.

ವೇದಿಕೆಯಲ್ಲಿ ಯುವ ಉದ್ಯಮಿ ನಟೇಶ್ ಪೂಜಾರಿ ಬೆಂಗಳೂರು, ಶಾಲಾ ಅಧ್ಯಕ್ಷ ಕರುಣಾಕರ ಸುವರ್ಣ ಉಪಸ್ಥಿತರಿದ್ದರು. ಈ ಸಂದರ್ಭ ಕಳೆದ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದ ಸಿಂಚನ್ ಅವರಿಗೆ ಗೌರವಾರ್ಪಣೆ ನಡೆಯಿತು. ಪ್ರಾಥಮಿಕ ಶಾಲಾ ವಿಭಾಗದ ಮುಖ್ಯಗುರು ವಿಮಲಾ ತೇಜಾಕ್ಷಿ ಸ್ವಾಗತಿಸಿದರು. ಶಾಲಾ ಸಂಚಾಲಕ ಯು.ಜಿ. ರಾಧಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೌಢಶಾಲಾ ವಿಭಾಗದ ಮುಖ್ಯಗುರು ರಘುರಾಮ ಭಟ್ ವಂದಿಸಿದರು. ಮಾತಾಜಿ ಶಿಲ್ಪಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here