ಏ.17: ಮೂಡೂರು-ಪಡೂರು ಜೋಡುಕರೆ ಬಂಟ್ವಾಳ ಕಂಬಳ

0

ಬಂಟ್ವಾಳ : ಮೂಡೂರು-ಪಡೂರು ಜೋಡುಕರೆ ಕಂಬಳ ಸಮಿತಿ ಬಂಟ್ವಾಳ ಇದರ ಆಶ್ರಯದಲ್ಲಿ ಎ. 17ರಂದು ನಾವೂರು ಗ್ರಾಮದ ಕೂಡಿಬೈಲು ಎಂಬಲ್ಲಿ 11ನೇ ವರ್ಷದ ಹೊನಲು ಬೆಳಕಿನ ಬಂಟ್ವಾಳ ಕಂಬಳ ನಡೆಯಲಿದೆ ಎಂದು ಮಾಜಿ ಸಚಿವರಾದ ಕಂಬಳ ಸಮಿತಿ ಗೌರವ ಅಧ್ಯಕ್ಷ ಬಿ. ರಮಾನಾಥ ರೈ ತಿಳಿಸಿದ್ದಾರೆ.

ಬಿ.ಸಿ.ರೋಡ್ ರಂಗೋಲಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೈಯವರು ಆಹ್ವಾನ ಪತ್ರ ಬಿಡುಗಡೆಗೊಳಿಸಿ ಬಳಿಕ ಕಂಬಳದ ವಿವರ ನೀಡಿದರು. ಎ.17 ರಂದು ಬೆಳಗ್ಗೆ ೯.೩೦ಕ್ಕೆ ಸೋಲೂರು ಪೀಠಾಧಿಪತಿ ವಿಖ್ಯಾತನಂದ ಸ್ವಾಮೀಜಿ, ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಅಲ್ಲಿಪಾದೆ ಚರ್ಚ್ ಧರ್ಮಗುರು ವಂ| ಫೆಡ್ರಿಕ್ ಮೊಂತೆರೊ, ಕಾವಳಕಟ್ಟೆ ಹಝ್ರತ್ ಡಾ. ಮೌಲಾನ ಫಾಝಿಲ್ ರಿಝ್ವಿ, ಸುಲ್ತಾನ್‌ನಗರ ಮಸೀದಿ ಧರ್ಮಗುರು ಮೊಹಮ್ಮದ್ ನಾಸೀಹ್ ದಾರಿಮಿ ಮತ್ತು ಪ್ರಮುಖರ ಉಪಸ್ಥಿತಿಯಲ್ಲಿ ಉದ್ಘಾಟನೆ ನಡೆಯುವುದು ಎಂದು ರಮಾನಾಥ ರೈ ತಿಳಿಸಿದರು.

ಒಂದು ದಶಕಗಳ ಕಾಲ ಕಾವಳಕಟ್ಟೆಯಲ್ಲಿ ನಡೆಸುತ್ತಿದ್ದ ಕಂಬಳ ಕಾರಣಾಂತರಗಳಿಂದ ನಿಲುಗಡೆ ಆಗಿತ್ತು. ಅದರ ಪುನರಾರಂಭಕ್ಕೆ ಕೋಣಗಳ ಮಾಲಕರು, ಕಂಬಳಾಭಿಮಾನಿಗಳ ಅಪೇಕ್ಷೆಯಂತೆ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳ ಮಾರ್ಗದರ್ಶನದಲ್ಲಿ ಪ್ರಸ್ತುತ ಈ ಹಿಂದಿನ ಹೆಸರನ್ನು ಉಳಿಸಿಕೊಂಡು ಪುನರಾರಂಭ ಮಾಡಲಾಗಿದೆ, ಕಾವಳಕಟ್ಟೆ ಕಂಬಳದ ಮೂಲಕ ಚಿತ್ರರಂಗದ ತಾರೆಯರನ್ನು ಕಾಣುವ ಅವಕಾಶ ಜನತೆಗೆ ಆಗಿತ್ತು. ರಾಜ್ಯದ ಗಣ್ಯರು ಪಾಲ್ಗೊಳ್ಳುತ್ತಿದ್ದರು. ಜನಸಾಮಾನ್ಯರಿಗೂ ಕುಳಿತು ವೀಕ್ಷಿಸಲು ಗ್ಯಾಲರಿ ನಿರ್ಮಾಣ ಇತ್ಯಾದಿ ಹೊಸತನಗಳನ್ನು ಅಳವಡಿಸಿದ ಕೀರ್ತಿ ನಮ್ಮ ಕಂಬಳಕಿತ್ತು. ಅದೇ ಪರಂಪರೆಯನ್ನು ಮುಂದುವರಿಸುವುದಾಗಿ ತಿಳಿಸಿದ ಅವರು ಪ್ರಸ್ತುತ ಬಂಟ್ವಾಳ ಕಂಬಳವು ಜಿಲ್ಲೆಯ ಇತಿಹಾಸದಲ್ಲಿ ಕ್ಷಿಪ್ರ ಅವಧಿಯಲ್ಲಿ ಆಯೋಜಿತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ವ್ಯವಸ್ಥೆಗಳು ಸಿದ್ದಗೊಳ್ಳುತ್ತಿದೆ ಎಂದರು.

ಕಂಬಳ ಸಮಿತಿ ಅಧ್ಯಕ್ಷ ಪಿಯೂಸ್ ಎಲ್. ರೋಡ್ರಿಗಸ್, ಸಂಚಾಲಕ ಬಿ. ಪದ್ಮಶೇಖರ ಜೈನ್, ಕಾರ್ಯಾಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಸಮಿತಿ ಉಪಾಧ್ಯಕ್ಷರಾದ ಕೆ. ಮಾಯಿಲಪ್ಪ ಸಾಲಿಯಾನ್, ಸುದರ್ಶನ ಜೈನ್, ಸುದೀಪ್ ಕುಮಾರ್ ಶೆಟ್ಟಿ, ಬೇಬಿ ಕುಂದರ್, ಅವಿಲ್ ಮಿನೇಜಸ್, ಕೋಶಾಧಿಕಾರಿ ಪಿಲಿಪ್, ಶಬೀರ್ ಸಿದ್ಧಕಟ್ಟೆ ಮತ್ತು ಡೆಂಜಿಲ್ ನೊರೊನ್ಹಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here