ಎ.20ರಿಂದ ಬಾಲವನದಲ್ಲಿ ಮಕ್ಕಳ ಬೇಸಿಗೆ ಶಿಬಿರ ’ಬಣ್ಣ ಭಾವ’

0

ಪುತ್ತೂರು: ಕರ್ನಾಟಕ ಸರಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು, ಡಾ| ಕೋಟ ಶಿವರಾಮ ಕಾರಂತರ ಬಾಲವನ ಸಮಿತಿ ಪುತ್ತೂರು, ಸಹಾಯಕ ಆಯುಕ್ತರ ಕಛೇರಿ ಪುತ್ತೂರು ಇದರ ವತಿಯಿಂದ ಇದೇ ಎ.20 ರಿಂದ ಎ. 24ರ ತನಕ 5 ದಿನಗಳ ಕಾಲ ಮಕ್ಕಳ ಬೇಸಿಗೆ ಶಿಬಿರ ’ಬಣ್ಣ ಭಾವ’ವು ಬಾಲವನದಲ್ಲಿ ನಡೆಯಲಿದೆ ಎಂದು ಸಹಾಯಕ ಆಯುಕ್ತರು, ಬಾಲವನ ಸಮಿತಿಯ ಅಧ್ಯಕ್ಷ ಗಿರೀಶ್ ನಂದನ್ ತಿಳಿಸಿದ್ದಾರೆ.

ಎ.20ರಂದು ಪೂರ್ವಾಹ್ನ ಗಂಟೆ 9:30ಕ್ಕೆ ಶಾಸಕ ಸಂಜೀವ ಮಠಂದೂರು ರವರ ಅಧ್ಯಕ್ಷತೆಯಲ್ಲಿ, ಸಹಾಯಕ ಆಯುಕ್ತ ಗಿರೀಶ್ ನಂದನ್ ಎಂ ಅವರು ಶಿಬಿರವನ್ನು ಉದ್ಘಾಟಿಸಲಿದ್ದಾರೆ, ನಗರಸಭಾ ಅಧ್ಯಕ್ಷ ಕೆ. ಜೀವಂಧರ್ ಜೈನ್ ಮಕ್ಕಳಿಗೆ ಬಣ್ಣ ಹಂಚುತ್ತಾರೆ. ನಗರಸಭಾ ಸದಸ್ಯೆ ದೀಕ್ಷಾ ಪೈ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ ಆಶಯ ನುಡಿಗಳನ್ನಾಡಲಿದ್ದಾರೆ. ಎ.೨೪ರ ಸಂಜೆ ೩:೦೦ ಗಂಟೆಗೆ ಶಿಬಿರಾರ್ಥಿಗಳ ಕಲಿಕಾ ಪ್ರದರ್ಶನ ಮತ್ತು ಸಮಾರೋಪ ಸಮಾರಂಭ ನಡೆಯಲಿದ್ದು, ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ಶಾಸಕರು ವಹಿಸಲಿದ್ದಾರೆ. ಸಹಾಯಕ ಆಯುಕ್ತರು ಕಾರಂತವಾಣಿ ಪತ್ರಿಕೆಯನ್ನು ಅನಾವರಣಗೊಳಿಸಲಿದ್ದಾರೆ. ಕ.ಸಾ.ಪ ಪುತ್ತೂರು ಘಟಕ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಮುಕ್ತಾಯದ ಮಾತುಗಳನ್ನಾಡುತ್ತಾರೆ.

5 ರಿಂದ 10ನೇ ತರಗತಿಯ ಒಳಗಿನ ಮಕ್ಕಳಿಗೆ ಶಿಬಿರ
ಶಿಬಿರವು ಪುತ್ತೂರು ತಾಲೂಕಿನ ೫ನೇ ತರಗತಿಯಿಂದ ೧೦ನೇ ತರಗತಿಯ ಒಳಗಿನ ಆಯ್ದ ನೂರು ಮಕ್ಕಳಿಗೆ ಸಂಯೋಜಿಸಲಾಗಿದ್ದು, ಶಿಬಿರದಲ್ಲಿ ಹಾಡು-ಅಭಿನಯ, ಕ್ರಾಫ್ಟ್, ಮನೋರಂಜನಾ ಆಟಗಳು, ಕ್ರಿಯಾತ್ಮಕ ಚಿತ್ರಕಲೆ ಇತ್ಯಾದಿ ಸೃಜನಶೀಲ ವಿಷಯಗಳ ಮೇಲೆ ನಡೆಯಲಿದೆ. ಈ ಶಿಬಿರದಲ್ಲಿ ಜಿಲ್ಲೆಯ ಪ್ರಸಿದ್ಧ ಸಂಪನ್ಮೂಲ ವ್ಯಕ್ತಿಗಳಾದ ಮೂಡಬಿದ್ರೆ ಎಕ್ಸಲೆಂಟ್‌ನ ಕಲಾ ಶಿಕ್ಷಕ ಭಾಸ್ಕರ ನೆಲ್ಯಾಡಿ, ಸೈಂಟ್ ತೆರೆಸಾ ಮಂಗಳೂರಿನ ಕಲಾ ಶಿಕ್ಷಕ ಸುಧೀರ್ ಬಾಳೆಪುಣಿ, ಪುತ್ತೂರಿನ ಪ್ರಸಿದ್ಧ ಒರಿಗಾಮಿ ಕಲಾವಿದ ಚರಣ್ ಕುಮಾರ್ ಪುದು, ಖ್ಯಾತ ಯಕ್ಷಗಾನ ಕಲಾವಿದ ಶಿಕ್ಷಕ ತಾರಾನಾಥ ಸವಣೂರು, ಖ್ಯಾತ ಗೂಡುದೀಪ ಕಲಾವಿದೆ ಯಶೋಧಾ ಹಂಟ್ಯಾರು ಮುಂತಾದವರು ಭಾಗವಹಿಸಲಿದ್ದಾರೆ. ಶಿಬಿರಾಧಿಕಾರಿಗಳಾಗಿ ಅರೆಲ್ತಡಿ ಶಿಕ್ಷಕರಾದ ಶ್ರೀಕಾಂತ್ ಕಂಬಳಕೋಡಿ, ಸಂಜಯನಗರ ಶಾಲಾ ಶಿಕ್ಷಕಿಯರಾದ ಶ್ರೀಮತಿ ಸ್ಮಿತಾಶ್ರೀ ಬಿ, ಶ್ರೀಮತಿ ಸುನಿಲ, ಹಾರಾಡಿ ಶಾಲಾ ಶಿಕ್ಷಕಿ ಗಂಗಾವತಿ, ಧನ್ಯ ಕುಮಾರಿ, ಪುಣ್ಚಪ್ಪಾಡಿ ಶಾಲಾ ಶಿಕ್ಷಕರಾದ ರಶ್ಮಿತಾ ನರಿಮೊಗರು ಕಾರ‍್ಯನಿರ್ವಹಿಸಲಿದ್ದಾರೆ. ಶಿಬಿರದಲ್ಲಿ ಭಾಗವಹಿಸಲು ಆಸಕ್ತಿ ಇರುವ ಮಕ್ಕಳಿಂದ ಗೂಗಲ್ ಫಾರ್ಮ್ ಮೂಲಕ ದಾಖಲಾತಿಯನ್ನು ಆಹ್ವಾನಿಸಲಾಗಿದ್ದು, ಈಗಾಗಲೇ ನೂರಕ್ಕೂ ಹೆಚ್ಚು ಮಕ್ಕಳು ಗೂಗಲ್ ಫಾರ್ಮ್ ಮೂಲಕ ತಮ್ಮ ಭಾಗವಹಿಸುವಿಕೆಯನ್ನು ತಿಳಿಸಿದ್ದಾರೆ ಎಂದು ಬಾಲವನದ ಕಾರ‍್ಯಕ್ರಮ ಸಂಯೋಜಕ ಜಗನ್ನಾಥ ಪಿ ಅರಿಯಡ್ಕರವರು ತಿಳಿಸಿದ್ದಾರೆ. 

LEAVE A REPLY

Please enter your comment!
Please enter your name here