ಉದನೆ: ನದಿ ಪರಂಬೋಕು ಜಾಗದಲ್ಲಿ ಅಕ್ರಮ ವಾಣಿಜ್ಯ ಕಟ್ಟಡ ನಿರ್ಮಾಣ: ಕಟ್ಟಡ ತೆರವು ಮಾಡುವಂತೆ ಕಡಬ ತಹಸೀಲ್ದಾರ್‌ಗೆ ಹೈಕೋರ್ಟು ಆದೇಶ

0

೦ ಕಂದಾಯ ಇಲಾಖೆಯಲ್ಲಿ ನಡೆದ ಬ್ರಹ್ಮಾಂಡ ಭ್ರಷ್ಠಾಚಾರದ ಸ್ಯಾಂಪಲ್.

೦ ಮನೆ, ಜಾಗ ಇದ್ದ ವ್ಯಕ್ತಿಗೆ ನದಿ ಪರಂಬೋಕು ಜಾಗದಲ್ಲಿ 94\ಸಿ ಮಂಜೂರು

೦ ಅಕ್ರಮ ಮಂಜೂರಾತಿ ರದ್ಧತಿಗೆ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ದಾವೆ.

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ ೭೫ರ ಬದಿಯಲ್ಲಿ, ಉದನೆ ಪೇಟೆಗೆ ಸನಿಹದಲ್ಲಿ ಹರಿಯುವ ಗುಂಡ್ಯ ಹೊಳೆಯ ದಡದಲ್ಲಿ ನದಿ ಪರಂಬೋಕು ಜಾಗದಲ್ಲಿ ಅಕ್ರಮವಾಗಿ ನಿರ್ಮಾಣವಾಗುತ್ತಿರುವ ವಾಣಿಜ್ಯ ಕಟ್ಟಡವನ್ನು ತೆರವು ಮಾಡುವಂತೆ ಕಡಬ ತಹಸೀಲ್ದಾರ್‌ಗೆ ಹೈಕೋರ್ಟು ಆದೇಶ ನೀಡಿದೆ. ರಾಷ್ಟ್ರೀಯ ಹೆದ್ದಾರಿ ೭೫ರಲ್ಲಿ, ಉದನೆ ಪೇಟೆಯಲ್ಲಿ ಕೊಣಾಜೆ ಗ್ರಾಮದ ಸರ್ವೆ ನಂಬ್ರ 137ರಲ್ಲಿ ಸುಜಿ ತೋಮಸ್ ಎಂಬವರು ಗುಂಡ್ಯ ಹೊಳೆಯ ನದಿ ಕಿನಾರೆಯಲ್ಲಿ ನದಿ ಪರಂಬೋಕು ಜಾಗದಲ್ಲಿ ಗ್ರಾಮ ಪಂಚಾಯಿತಿನಿಂದ ಯಾವುದೇ ಪರವಾನಿಗೆ ಪಡೆಯದೆ ಅನಧಿಕೃತವಾಗಿ ಅಕ್ರಮ ತಾರಸಿ ಕಟ್ಟಡವನ್ನು ಕಟ್ಟುತ್ತಿದ್ದು ಇದನ್ನು ತೆರವು ಮಾಡುವಂತೆ ಶಿರಾಡಿ ಗ್ರಾಮದ ಅಲ್ಯಾದೆ ಮನೆ ನಿವಾಸಿ ಟಿ.ಜೆ. ಮ್ಯಾಥ್ಯು ಎಂಬವರು ನೀಡಿರುವ ದೂರು ಅರ್ಜಿಯನ್ನು ಆಲಿಸಿರುವ ಕರ್ನಾಟಕ ಹೈಕೋರ್ಟು ೮ ವಾರದ ಒಳಗಾಗಿ ಅಕ್ರಮ ಕಟ್ಟಡವನ್ನು ತೆರವು ಮಾಡುವಂತೆ ಕಡಬ ತಹಸೀಲ್ದಾರ್ ಅವರಿಗೆ ಎ. 12ರಂದು ಆದೇಶ ನೀಡಿದೆ.


94\ಸಿ ಮಂಜೂರಾತಿಯೂ ಅಕ್ರಮ:
ಆರೋಪಿತ ಸುಜಿ ತೋಮಸ್ ಅವರಿಗೆ ಜಾಗ, ಮನೆ ಇರುತ್ತದೆ. ಅದಾಗ್ಯೂ ಹೆದ್ದಾರಿ ಬದಿಯಲ್ಲಿ 0.03 ಎಕ್ರೆ ಜಾಗ ಹೊಂದಿದ್ದು, ಇದರಲ್ಲಿ ವಾಣಿಜ್ಯ ಕಟ್ಟಡ ಇದ್ದು, ಬಟ್ಟೆ ಅಂಗಡಿ ನಡೆಸುತ್ತಿದ್ದಾರೆ. ಸರ್ಕಾರ ಅಧಿಸೂಚನೆ ಪ್ರಕಾರ 94\ಸಿ ಮಂಜೂರಾತಿಗೆ 2012ರ ಮೊದಲಿನ ಮನೆ ಯಾ ಕನಿಷ್ಠ ಗುಡಿಸಲು ಆದರೂ ಇರಬೇಕು ಎಂಬ ನಿಯಮ ಇದ್ದಾಗ್ಯೂ ನದಿ ಪರಂಬೋಕು ಜಾಗವನ್ನು ಇವರ ಹೆಸರಿಗೆ 94\ಸಿ ಮಂಜೂರಾತಿ ನೀಡಲಾಗಿದ್ದು, ಇದೀಗ ಈ ನಿವೇಶನದಲ್ಲಿ ಅಕ್ರಮ ಕಟ್ಟಡ ನಿರ್ಮಿಸಿರುವುದಾಗಿದೆ ಎಂದು ಅವರು ನೀಡಿರುವ ದೂರಿನಲ್ಲಿ ಆಪಾದಿಸಿದ್ದಾರೆ.

ಗ್ರಾಮ ಪಂಚಾಯಿತಿಯ ತಡೆಯಾಜ್ಞೆ ಉಲ್ಲಂಘನೆ:
ನದಿ ಪರಂಬೋಕು ಜಾಗದಲ್ಲಿ ಅಕ್ರಮವಾಗಿ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡುತ್ತಿರುವ ಬಗ್ಗೆಯೂ ಟಿ.ಜೆ. ಮ್ಯಾಥ್ಯು ಅವರು ಕೊಣಾಜೆ ಗ್ರಾಮ ಪಂಚಾಯಿತಿಗೆ ಆಕ್ಷೇಪ ದೂರು ಸಲ್ಲಿಸಿದ್ದು, ಗ್ರಾಮ ಪಂಚಾಯಿತಿ ಪರವಾಣಿಗೆ ನೀಡಲು ನಿರಾಕರಿಸಿರುತ್ತದೆ ಮತ್ತು ಕಟ್ಟಡ ನಿರ್ಮಾಣ ಮಾಡದಂತೆ ತಡೆಯಾಜ್ಞೆ ನೀಡಿರುತ್ತದೆ. ಆದರೆ ಕಟ್ಟಡ ಕಾಮಗಾರಿ ನಿರಂತರವಾಗಿ ನಡೆಯುತ್ತಿದ್ದು ತಡೆಯಾಜ್ಞೆಯನ್ನೂ ಉಲ್ಲಂಘಿಸಲಾಗಿದೆ ಎಂದು ಆಪಾದಿಸಲಾಗಿದ್ದು, ಇದನ್ನೆಲ್ಲ ಮಾನ್ಯ ಮಾಡಿರುವ ಹೈಕೋರ್ಟು ಅಕ್ರಮ ಕಟ್ಟಡವನ್ನು ತೆರವು ಮಾಡಿ ವರದಿ ಸಲ್ಲಿಸುವಂತೆ ಕಡಬ ತಹಸೀಲ್ದಾರ್ ಅವರಿಗೆ ನೀಡಿರುವ ಆದೇಶದಲ್ಲಿ ತಿಳಿಸಲಾಗಿದೆ.

94/ಸಿ ಮಂಜೂರಾತಿ ರದ್ಧತಿಗೆ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ದಾವೆ
ಆರೋಪಿತ ಸುಜಿ ತೋಮಸ್ ಅವರಿಗೆ ಜಾಗ, ಮನೆ ಇರುತ್ತದೆ. ಆದರೂ ಮತ್ತೆ ನದಿ ಪರಂಬೋಕು ಜಾಗವನ್ನು 94\ಸಿ ಅಡಿಯಲ್ಲಿ ಕಡಬ ತಹಸೀಲ್ದಾರ್ ಮಂಜೂರಾತಿ ಮಾಡಿರುವುದರ ವಿರುದ್ಧ ಟಿ.ಜೆ. ಮ್ಯಾಥ್ಯು ಅವರು ಪುತ್ತೂರು ಸಹಾಯಕ ಕಮೀಷನರ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಆದರೆ ಈ ಹಿಂದಿನ ಸಹಾಯಕ ಕಮೀಷನರ್ ಆಕ್ಷೇಪ ಅರ್ಜಿಯನ್ನು ತಿರಸ್ಕರಿಸಿ, ಸುಜಿ ತೋಮಸ್ ಪರ ಅದೇಶ ನೀಡಿದ್ದು, ಇದನ್ನು ಪ್ರಶ್ನಿಸಿರುವ ಟಿ.ಜೆ. ಮ್ಯಾಥ್ಯು ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದು, ಇದು ವಿಚಾರಣೆ ಹಂತದಲ್ಲಿ ಇರುವುದಾಗಿ ತಿಳಿದು ಬಂದಿದೆ.

ವಾಸ್ತವಾಂಶ ತಿಳಿಸಿದ್ದ ಗ್ರಾಮಕರಣಿಕರ ವರದಿಗೂ ಕಿಮ್ಮತ್ತು ಇಲ್ಲ…!!!
ಸುಜಿ ತೋಮಸ್ ಅವರಿಗೆ 94\ಸಿ ಮಂಜೂರಾತಿ ಮಾಡಿರುವುದನ್ನು ಆಕ್ಷೇಪಿಸಿ ಟಿ.ಜೆ. ಮ್ಯಾಥ್ಯು ಅವರು ನೀಡಿರುವ ದೂರಿಗೆ ಪ್ರತಿಯಾಗಿ ಕೊಣಾಜೆ ಗ್ರಾಮಕರಣಿಕರು ಸ್ಥಳ ಪರಿಶೀಲನೆ ನಡೆಸಿ ಕಡಬ ತಹಸೀಲ್ದಾರ್ ಮತ್ತು ಸಹಾಯಕ ಕಮೀಷನರ್ ಅವರಿಗೆ ವರದಿ ಸಲ್ಲಿಸಿದ್ದು, ಅದರಲ್ಲಿ “ಸುಜಿ ತೋಮಸ್ ಅವರಿಗೆ 94\ಸಿ ಅಡಿಯಲ್ಲಿ ಸ.ನಂಬ್ರ 137\೩ರಲ್ಲಿ 0.05 ಎಕ್ರೆ ಮಂಜೂರಾಗಿದ್ದು, ಇದರಲ್ಲಿ ವಾಸದ ಕಟ್ಟಡ ಇರುವುದಿಲ್ಲ, ಬದಲಾಗಿ ವಾಣಿಜ್ಯ ಕಟ್ಟಡವಿದ್ದು, ಕಟ್ಟಡದ ಹಿಂಭಾಗದಲ್ಲಿ ಮತ್ತೆ ಅಕ್ರಮ ಕಟ್ಟಡ ನಿರ್ಮಿಸುತ್ತಿದ್ದಾರೆ, ಸದ್ರಿ ಪ್ರದೇಶ ಹೊಳೆ ಪರಂಬೋಕುನಲ್ಲಿ ಬರುವುದಾಗಿದೆ” ಎಂದು ತಿಳಿಸಲಾಗಿದೆ. ಆದರೂ ಇದೆಲ್ಲವನ್ನೂ ಮೀರಿ ತಹಸೀಲ್ದಾರ್ ಮತ್ತು ಪುತ್ತೂರು ಸಹಾಯಕ ಕಮೀಷನರ್ 94\ಸಿ ಮಂಜೂರಾತಿಯನ್ನು ಮಾನ್ಯ ಮಾಡಿರುವುದು ಬ್ರಹ್ಮಾಂಡ ಭ್ರಷ್ಠಾಚರದ ಉದಾಹರಣೆ ಆಗಿರುತ್ತದೆ ಎಂಬ ಮಾತುಗಳು ಎಲ್ಲೆಡೆಯಿಂದ ಕೇಳಿ ಬರಲಾರಂಭಿಸಿದೆ.

ಹೈಕೋರ್ಟು ಆದೇಶ ಪಾಲನೆ ಆಗುತ್ತದೆ-ಜಿಲ್ಲಾಧಿಕಾರಿ
ಕಡಬ ತಾಲ್ಲೂಕು ವ್ಯಾಪ್ತಿಯ ಕೌಕ್ರಾಡಿ ಸೇರಿದಂತೆ ಕೆಲವೊಂದು ಕಡೆ 94\ಸಿ ವಿತರಣೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ದೂರು ಬಂದಿತ್ತು. ಅವುಗಳನ್ನು ಈಗಾಗಲೇ ತೆರವು ಮಾಡಿಸಲಾಗಿದೆ. ಇದೀಗ ಹೈಕೋರ್ಟು ಆದೇಶ ಆಗಿರುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ, ಬರಬಹುದು, ಬಂದ ತಕ್ಷಣ ಖಂಡಿತವಾಗಿಯೂ ಆದೇಶ ಪಾಲನೆ ಮಾಡಲಾಗುವುದು ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

ಆದೇಶ ಬಂದಿದ್ದು, ಪಾಲನೆ ಮಾಡಲಾಗುವುದು-ತಹಸೀಲ್ದಾರ್
ತೆರವು ಆದೇಶ ಬಂದಿರುತ್ತದೆ. ಕಂದಾಯ ನಿರೀಕ್ಷಕರಿಂದ ವರದಿ ತರಿಸಿಕೊಂಡು ಸೂಕ್ತ ಕ್ರಮ ಜರಗಿಸಲಾಗುವುದು, ಆ ಮೂಲಕ ಹೈಕೋರ್ಟು ಆದೇಶವನ್ನು ಪಾಲನೆ ಮಾಡಲಾಗುವುದು ಎಂದು ಕಡಬ ತಹಸೀಲ್ದಾರ್ ಅನಂತ ಶಂಕರ ತಿಳಿಸಿದ್ದಾರೆ.

 

LEAVE A REPLY

Please enter your comment!
Please enter your name here