ಕೊಯಿಲ: ನಿವೇಶನಕ್ಕೆ ಮೀಸಲಿಟ್ಟ ಜಾಗದ ಗಡಿ ಗುರುತು ಸಮಸ್ಯೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಭೇಟಿ-ಪರಿಶೀಲನೆ

0

ರಾಮಕುಂಜ: ಕಡಬ ತಾಲೂಕು ಕೊಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂಜಿ ಎಂಬಲ್ಲಿನ ಸರ್ಕಾರಿ ಜಾಗವನ್ನು ನಿವೇಶನ ರಹಿತರಿಗೆ ಹಂಚುವ ಸಂಬಂಧ ಜಾಗದ ಗಡಿ ಗುರುತು ಮಾಡಲು ತಕರಾರು ಇದ್ದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರರವರು ಎ.29ರಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

 

ಕೊಯಿಲ ಗ್ರಾಮದ ಸರ್ವೆ ನಂಬ್ರ 196ರಲ್ಲಿ ಸುಮಾರು ನಾಲ್ಕುವರೆ ಎಕ್ರೆ ಸರ್ಕಾರಿ ಜಮೀನನ್ನು ನಿವೇಶನಕ್ಕಾಗಿ ಮೀಸಲಿಡಲಾಗಿದೆ. ಈ ಜಾಗದ ಗಡಿ ಗುರುತು ಮಾಡಲು ಮುಂದಾದಾಗ ಸ್ಥಳೀಯರು ಸ್ವಾಧೀನಪಡಿಸಿಕೊಂಡಿವುದು ಗಮನಕ್ಕೆ ಬಂದಿದೆ. ಹಾಗಾಗಿ ಜಾಗದ ಗಡಿ ಗುರುತು ಮಾಡಲು ಸಮಸ್ಯೆಯಾಗಿದೆ ಎಂದು ಗ್ರಾಮಕರಣಿಕ ಶೇಷಾದ್ರಿಯವರು ಸಮಸ್ಯೆಯನ್ನು ಜಿಲ್ಲಾಧಿಕಾರಿಯವರಿಗೆ ವಿವರಿಸಿದರು. ಕಾನೂನಾತ್ಮಕವಾಗಿ ಪರಿಶೀಲಿಸಿ ಸರ್ಕಾರಿ ಜಾಗವನ್ನು ಸ್ವಾಧೀನತೆಯನ್ನು ತಕ್ಷಣ ತೆರವು ಮಾಡಿ ಜಾಗದ ಗುರುತು ಮಾಡಿ ಎಂದು ಜಿಲ್ಲಾಧಿಕಾರಿಯವರು ಆದೇಶಿಸಿದರು. ಸರ್ಕಾರಿ ಜಾಗವನ್ನು ಉಳಿಸಿಕೊಂಡು ಭವಿಷ್ಯದಲ್ಲಿ ಉಪಯುಕ್ತವಾಗುವಂತೆ ಯೋಜನೆ ಹಾಕಿಕೊಳ್ಳಿ, ನಿವೇಶನಕ್ಕೆ ಸೀಮಿತಗೊಳಿಸದೆ ಅರಣ್ಯ ನಡುತೋಪು, ಔಷಧಿ ಸಸ್ಯಗಳ ನಾಟಿ, ನೀರಿನ ಒರತೆಯಿರುವ ಜಾಗವಾದರೆ ನರೇಗಾದಡಿಯಲ್ಲಿ ಕೆರೆ ನಿರ್ಮಾಣ, ಸಾರ್ವಜನಿಕ ಆಟದ ಮೈದಾನ ಮುಂತಾದವುಗಳ ಬಗ್ಗೆ ಯೋಚಿಸಿ ಕ್ರಮಕೈಗೊಳ್ಳಿ. ಯೋಜನೆ ಹಾಕಿಕೊಳ್ಳುವಾಗ ಸ್ಥಳಿಯಾಡಳಿತವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ ಎಂದು ಜಿಲ್ಲಾಧಿಕಾರಿಯವರು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಕಡಬ ತಹಸೀಲ್ದಾರ ಅನಂತ ಶಂಕರ, ಕಂದಾಯ ನಿರೀಕ್ಷಕ ಅವಿನ್ ರಂಗತ್ತ ಮಲೆ, ಪಿಡಿಓ ನಮಿತಾ, ಗ್ರಾ.ಪಂ.ಅಧ್ಯಕ್ಷ ಹರ್ಷಿತ್ ಕುಮಾರ್, ಗ್ರಾ.ಪಂ.ಸದಸ್ಯರು ಉಪಸ್ಥಿತರಿದ್ದರು.

ಖಯಾಂ ಗ್ರಾಮಕರಣಿಕರ ನೇಮಕಕ್ಕೆ ಮನವಿ:
ಕೊಲ ಗ್ರಾಮಕ್ಕೆ ಖಾಯಂ ಗ್ರಾಮಕರಣಿಕರನ್ನು ನೀಡಿ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಹರ್ಷಿತ್ ಕುಮಾರ್‌ರವರು ಈ ವೇಳೆ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿದರು. ಜಿಲ್ಲೆಯಲ್ಲಿ ಗ್ರಾಮ ಕರಣಿಕರ ಕೊರತೆಯಿದೆ. ಮುಂದಿನ ದಿನಗಳಲ್ಲಿ ಕ್ರಮಕೈಗೊಳ್ಳಲಾಗುವುದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರರವರು ಹೇಳಿದರು.

LEAVE A REPLY

Please enter your comment!
Please enter your name here