ನೆಲ್ಯಾಡಿ:ಕಾಂಗ್ರೆಸ್ ಸಮಾಲೋಚನಾ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ -`ಯಾರೂ ಆತ್ಮವಂಚನೆ ಮಾಡಬಾರದು ಅಧಿಕಾರ ತಾನಾಗಿಯೇ ಬರಬೇಕು’

0

  • ಪಕ್ಷದ ಮೇಲೆ ಬದ್ಧತೆ ತೋರಿಸಿ ಒಗ್ಗಟ್ಟಿನಿಂದ ಕೆಲಸ ಮಾಡಿ-ಹರೀಶ್ ಕುಮಾರ್
  •  ಜಿ.ಪಂ.ಕ್ಷೇತ್ರಕ್ಕೆ ಸೇವಾಮನೋಭಾವದ ತಂಡ -ಸುಭಾಶ್ಚಂದ್ರ ಶೆಟ್ಟಿ
  • ಸದಸ್ಯೆ ಅಸಮಾಧಾನ :ಶೇ.100 ಖಚಿತವಾದರೆ ಶಿಸ್ತು ಕ್ರಮ -ಹರೀಶ್ ಕುಮಾರ್

ನೆಲ್ಯಾಡಿ:ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿ ಮತ್ತು ರಾಜೀವ ಗಾಂಧಿ ಪಂಚಾಯತ್‌ರಾಜ್ ಸಂಘಟನೆ ದ.ಕ.ಜಿಲ್ಲೆ, ಕಡಬ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ನೆಲ್ಯಾಡಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಪಂಚಾಯತ್ ಸದಸ್ಯರುಗಳ, ಮಾಜಿ ಸದಸ್ಯರುಗಳ, ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳ, ಪಕ್ಷದ ಮುಖಂಡರುಗಳ, ಬೂತ್ ಸಮಿತಿ ಅಧ್ಯಕ್ಷರುಗಳ, ಕಾರ್ಯಕರ್ತರ ಸಮಾಲೋಚನಾ ಸಭೆ ಎ.29ರಂದು ನೆಲ್ಯಾಡಿಯಲ್ಲಿರುವ ಬಿರ್ವ ಹೋಟೆಲ್‌ನ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ವಿಧಾನಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ ಹಾಗೂ ಹರೀಶ್‌ಕುಮಾರ್‌ರವರು ಉಪಸ್ಥಿತರಿದ್ದು ಸಂವಾದ ನಡೆಸಿದರು.

ಆರಂಭದಲ್ಲಿ ಸಭೆ ಉದ್ದೇಶಿಸಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿಯವರು, ಕಾಂಗ್ರೆಸ್ ಪಕ್ಷ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ, ಬಡವರಿಗೆ, ದೀನ ದಲಿತರಿಗೆ ಆಶ್ರಯ ಕೊಟ್ಟ ಪಕ್ಷ ಆಗಿದೆ.ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಅಂದಾಜು 6 ಸಾವಿರ ಜನಪ್ರತಿನಿಧಿಗಳಿದ್ದಾರೆ. ಇದರಲ್ಲಿ ಕಾಂಗ್ರೆಸ್ ಬೆಂಬಲಿತರು1600 ರಿಂದ 1700ಮಂದಿ ಮಾತ್ರ. ಇದು ಒಂದು ರೀತಿಯಲ್ಲಿ ಪಕ್ಷಕ್ಕೆ ಹಿನ್ನೆಡೆಯಾಗಿದೆ. ಪಕ್ಷ ಸಂಘಟನೆ ದೃಷ್ಟಿಯಿಂದ ಎಲ್ಲರೂ ಒಮ್ಮತದಿಂದ ಕೆಲಸ ಮಾಡಬೇಕು. ಈ ರೀತಿಯಾದಲ್ಲಿ ಮಾತ್ರ ಪಕ್ಷದ ಅಭ್ಯರ್ಥಿಯ ಗೆಲುವು ಸಾಧ್ಯ ಎಂದರು. ಯಾರೂ ಆತ್ಮವಂಚನೆ ಮಾಡಬಾರದು. ಅಧಿಕಾರ ತಾನಾಗಿಯೇ ಬರಬೇಕು. ಅಧಿಕಾರ ಸಿಕ್ಕಿದಾಗ ವೈಯಕ್ತಿಕ ಕಾರಣ ಬದಿಗಿಟ್ಟು ಕೆಲಸ ಮಾಡಬೇಕು. ಜನರ, ಮನಸ್ಸು ಹೃದಯದಲ್ಲಿ ನಮ್ಮ ಹೆಸರು ಇರಬೇಕೆಂದು ಹೇಳಿದ ಮಂಜುನಾಥ ಭಂಡಾರಿಯವರು ನೆಲ್ಯಾಡಿ ಹಾಗೂ ಶಿರಾಡಿ ಪಂಚಾಯತ್‌ಗ ಭೇಟಿ ನೀಡುವುದಾಗಿ ಹೇಳಿದರು. ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಮಾತನಾಡಿ ಎಲ್ಲರೂ ಪಕ್ಷದ ಮೇಲೆ ಬದ್ಧತೆ ತೋರಿಸಿ ಒಗ್ಗಟ್ಟಿನಿಂದ ಕೆಲಸ ಮಾಡುವಂತೆ ಕರೆ ನೀಡಿದರು.

ರಾಜೀವ ಗಾಂಧಿ ಪಂಚಾಯತ್‌ರಾಜ್ ಸಂಘಟನೆಯ ದ.ಕ.ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕೊಳ್ನಾಡು ಮಾತನಾಡಿ, ಪ್ರತಿ ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಇಬ್ಬರು ಪುರುಷ ಹಾಗೂ ಓರ್ವ ಮಹಿಳೆಯನ್ನು ಸಂಯೋಜಕರಾಗಿ ನೇಮಕ ಮಾಡಲಾಗುವುದು.ಸಂಯೋಜಕರು ಗ್ರಾಮಗಳಿಗೆ ಭೇಟಿ ನೀಡಿ ಪಂಚಾಯಿತಿ ಸದಸ್ಯರ, ಮಾಜಿ ಸದಸ್ಯರ, ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿ ಪರಾಜಿತ ಅಭ್ಯರ್ಥಿಗಳನ್ನು ಭೇಟಿ ಮಾಡಿ ಪಕ್ಷ ಸಂಘಟನೆಗೆ ಕ್ರಮ ಕೈಗೊಳ್ಳಬೇಕು.ಇದರೊಂದಿಗೆ ಸೇವಾ ಮನೋಭಾವದ ತಂಡವೊಂದನ್ನು ರಚಿಸಲಾಗುವುದು. ಮುಂದಿನ ದಿನಗಳಲ್ಲಿ ಜನರ ಕಾನೂನು ಬದ್ಧ ಹಕ್ಕುಗಳಿಗೆ ಹೋರಾಟ ನಡೆಸಲಾಗುವುದು ಎಂದರು.

ಕೆಪಿಸಿಸಿ ಸುಳ್ಯ ಬ್ಲಾಕ್ ಸಂಯೋಜಕ ಕೃಷ್ಣಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಕೆಪಿಸಿಸಿ ಸದಸ್ಯ, ಉದ್ಯಮಿ ಕೆ.ಪಿ.ತೋಮಸ್ ವಂದಿಸಿದರು. ಕಡಬ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರುಗಳಾದ ದಿವಾಕರ ಗೌಡ ಉದನೆ, ಸತೀಶ್ ಕುಮಾರ್ ಕೆಡೆಂಜಿ, ವಿಜಯಕುಮಾರ್ ಕೆರ್ಮಾಯಿ, ರೋಯ್ ಅಬ್ರಹಾಂ ಪದವು, ಜಿ.ಪಂ.ಮಾಜಿ ಸದಸ್ಯರಾದ ಪಿ.ಪಿ.ವರ್ಗೀಸ್, ಸರ್ವೋತ್ತಮ ಗೌಡ, ಹಿಂದುಳಿದ ವರ್ಗಗಳ ಸಮಿತಿ ಅಧ್ಯಕ್ಷ ಪೂವಪ್ಪ ಕರ್ಕೇರ, ಕಡಬ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಅಬ್ರಹಾಂ ಕೆ.ಪಿ., ಕಡಬ ಬ್ಲಾಕ್ ಪಂಚಾಯತ್ ರಾಜ್ ಸಂಘಟನೆ ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆ, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಜಯಾನಂದ ಬಂಟ್ರಿಯಾಲ್, ಪ್ರಶಾಂತ್ ರೈ ಅರಂತಬೈಲು, ಪ್ರಮುಖರಾದ ಇಸ್ಮಾಯಿಲ್ ನೆಲ್ಯಾಡಿ, ಸತೀಶ್ ರೈ ಕೊಣಾಲುಗುತ್ತು ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

ಕಡೆಗಣನೆ ಆರೋಪ:

ತಾ.ಪಂ.ಮಾಜಿ ಸದಸ್ಯೆ ಆಶಾ ಲಕ್ಷ್ಮಣ್ ಮಾತನಾಡಿ, ಗುಂಡ್ಯದಲ್ಲಿ ಸುಸಜ್ಜಿತ ಶೌಚಾಲಯ ನಿರ್ಮಾಣಕ್ಕೆ ಅನುದಾನ ಕೊಟ್ಟಿದ್ದೇನೆ. ತಾ.ಪಂ.ಸದಸ್ಯೆಯಾಗಿದ್ದ ವೇಳೆ ಗ್ರಾಮಕ್ಕೆ ಹೆಚ್ಚಿನ ಅನುದಾನವೂ ತಂದಿದ್ದೇನೆ. ಆದರೆ ಈಗ ಶಿರಾಡಿ ಗ್ರಾಮ ಪಂಚಾಯಿತಿಯಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತವಿದ್ದರೂ ಯಾವುದೇ ಕಾರ್ಯಕ್ರಮಕ್ಕೆ ನಮಗೆ ಆಹ್ವಾನ ನೀಡದೆ ಕಡೆಗಣಿಸುತ್ತಿದ್ದಾರೆ ಎಂದು ಹೇಳಿದರು. ಶಿರಾಡಿ ಗ್ರಾ.ಪಂ.ಅಧ್ಯಕ್ಷೆ ವಿನೀತಾ ತಂಗಚ್ಚನ್‌ರವರು, ಶಿರಾಡಿ ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ಬೂತ್ ಸಮಿತಿ ರಚನೆ ಮಾಡುವಂತೆ ಕಾರ್ಯಕರ್ತರು ಒತ್ತಾಯಿಸಿದರು. ಜಾರ್ಜ್‌ಕುಟ್ಟಿ ಉಪದೇಶಿ, ವರ್ಗೀಸ್ ಅಬ್ರಹಾಂ, ಜೋಸ್ ಕೆ.ಜೆ., ಶಿರಾಡಿ ಗ್ರಾ.ಪಂ.ಉಪಾಧ್ಯಕ್ಷ ಕಾರ್ತಿಕೇಯನ್, ರೋಯಿ ಇಚ್ಲಂಪಾಡಿ ಮತ್ತಿತರರು ವಿವಿಧ ವಿಚಾರಗಳನ್ನು ಪ್ರಸ್ತಾಪಿಸಿದರು.

ಗ್ರಾ.ಪಂ.ಅಧ್ಯಕ್ಷರ ಆಯ್ಕೆ ವೇಳೆ ಅಡ್ಡ ಮತದಾನ ಮಾಡಿದರೂ ಕ್ರಮಕೈಗೊಂಡಿಲ್ಲ

ನೆಲ್ಯಾಡಿ ಗ್ರಾ.ಪಂ.ಸದಸ್ಯೆ ರೇಷ್ಮಾಶಶಿಯವರು ಮಾತನಾಡಿ, 14 ಸದಸ್ಯ ಬಲದ ನೆಲ್ಯಾಡಿ ಗ್ರಾ.ಪಂ.ನಲ್ಲಿ ಕಾಂಗ್ರೆಸ್ ಬೆಂಬಲಿತ 8 ಸದಸ್ಯರಿದ್ದರೂ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸದಸ್ಯರೊಬ್ಬರ ಅಡ್ಡ ಮತದಾನದಿಂದಾಗಿ ನಮಗೆ ಸೋಲಾಗಿದೆ. ಚುನಾವಣೆ ನಡೆದು 1 ವರ್ಷ ಕಳೆದರೂ ಅಡ್ಡಮತದಾನ ಮಾಡಿದವರನ್ನು ಈ ತನಕ ಪತ್ತೆ ಮಾಡಿ ಕ್ರಮ ಕೈಗೊಂಡಿಲ್ಲ. ಇದರಿಂದ ನಮಗೆ ಹಿನ್ನಡೆಯಾಗಿದೆ ಎಂದರು. ಗ್ರಾ.ಪಂ.ಸದಸ್ಯೆ ಉಷಾಜೋಯಿಯವರು ಇದಕ್ಕೆ ಪೂರಕವಾಗಿ ಮಾತನಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿಯವರು, ಪಕ್ಷ ಬೆಂಬಲಿತ 8 ಮಂದಿ ಸದಸ್ಯರೂ ತಾವು ಕ್ರಾಸ್ ವೋಟ್ ಮಾಡಿಲ್ಲ ಎಂದು ಪ್ರಮಾಣ ಮಾಡಿದ್ದಾರೆ.ಯಾವ ಸದಸ್ಯ ಕ್ರಾಸ್ ವೋಟಿಂಗ್ ಮಾಡಿರಬಹುದು ಎಂಬುದು ನಮಗೆ ಇನ್ನೂ ಖಚಿತಗೊಂಡಿಲ್ಲ.ಶೇ.100 ಗ್ಯಾರಂಟಿ ಸಿಗದೇ ಇರುವುದರಿಂದ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು. ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್‌ರವರು ಮಾತನಾಡಿ, ನೆಲ್ಯಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಯಾರು ಕ್ರಾಸ್ ವೋಟ್ ಮಾಡಿದ್ದಾರೆ ಎಂಬುದು ಶೇ.100ರಷ್ಟು ಗ್ಯಾರಂಟಿ ಆದಲ್ಲಿ ಕ್ರಮ ಕೈಗೊಳ್ಳಬಹುದಾಗಿದೆ ಎಂದರು.

LEAVE A REPLY

Please enter your comment!
Please enter your name here