ಮುಂದಿನ ಚುನಾವಣೆಯಲ್ಲಿ ಪ್ರತೀ ವಿಧಾನಸಭಾ ಕ್ಷೇತ್ರದಿಂದ `ಆಪ್’ ಸ್ಪರ್ಧೆ: ಸಂತೋಷ್ ಕಾಮತ್

0

ಪುತ್ತೂರು: ಆಮ್ ಆದ್ಮಿ ಪಕ್ಷ ಬಹಳ ವೇಗವಾಗಿ ಬೆಳೆಯುತ್ತಿದೆ. ವಿವಿಧ ಜನರು ನಮ್ಮ ಪಕ್ಷವನ್ನು ಬೆಂಬಲಿಸುತ್ತಾ ನಮ್ಮೊಂದಿಗೆ ಕೈಜೋಡಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಆಮ್ ಆದ್ಮಿ ಪಾರ್ಟಿ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಮುಂದಿನ ದಿನಗಳಲ್ಲಿ ಮಂಗಳೂರು ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯತ್, ನಗರ ಪಂಚಾಯತ್, ಗ್ರಾಮ ಪಂಚಾಯತ್ ಪ್ರತೀ ವಾರ್ಡ್‌ಗಳಲ್ಲಿಯೂ ನಮ್ಮ ಅಭ್ಯರ್ಥಿಗಳನ್ನು ಸ್ಪರ್ಧಿಸುವಂತೆ ಮಾಡುತ್ತಿದ್ದೇವೆ ಎಂದು ಆಮ್ ಆದ್ಮಿ ಪಕ್ಷದ ದ.ಕ. ಜಿಲ್ಲಾಧ್ಯಕ್ಷ ಸಂತೋಷ್ ಕಾಮತ್ ಹೇಳಿದ್ದಾರೆ.

ಎ.29ರಂದು ಸುದ್ದಿ ಸ್ಟುಡಿಯೋದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಲವಾರು ವರ್ಷಗಳಿಂದ ದೆಹಲಿಯಲ್ಲಿ ಕೇಜ್ರಿವಾಲ್ ಅವರು ನಡೆಸುತ್ತಿರುವ ಆಡಳಿತವನ್ನು ಮೆಚ್ಚಿ ಪಂಜಾಬ್‌ನಲ್ಲಿ ನಮ್ಮ ಪಕ್ಷಕ್ಕೆ ಅಭೂತಪೂರ್ವ ಯಶಸ್ಸು ಸಿಕ್ಕಿದೆ. ಇಂದು ರಾಷ್ಟ್ರೀಯ ಪಕ್ಷವಾಗಿ ಆಮ್ ಆದ್ಮಿ ಮುನ್ನುಗ್ಗುತ್ತಿದೆ. ಬೆಂಗಳೂರಿನಲ್ಲಿ ಕೂಡ ಪ್ರತೀ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಚೇರಿಗಳನ್ನು ತೆರೆದು ಅಲ್ಲಿ ಜನರನ್ನು ಸಂಪರ್ಕಿಸುವ ಕಾರ್ಯಕ್ರಮ ಮಾಡಿ, ಜನರ ಮೂಲಭೂತ ಸಮಸ್ಯೆಗಳನ್ನು ಅರಿಯುವಂತಹ ಕಾರ್ಯಕ್ರಮ ನಡೆಯುತ್ತಿದೆ. ಮುಂದೆ ನಮ್ಮ ಜಿಲ್ಲೆಯ ಪ್ರತೀ ತಾಲೂಕು ಮಟ್ಟದಲ್ಲಿ, ಪ್ರತೀ ಗ್ರಾಮ ಮಟ್ಟದಲ್ಲಿ ಅಲ್ಲಿನ ಸಾಮಾಜಿಕ ವ್ಯವಸ್ಥೆ, ನೈಜ ಪರಿಸ್ಥಿತಿ, ಅಲ್ಲಿನ ಅಗತ್ಯತೆಗಳು, ಕುಂದುಕೊರತೆಗಳೆಲ್ಲವನ್ನೂ ಗಮನಿಸಿ ಮುಂದಿನ ದಿನಗಳಲ್ಲಿ ನಮ್ಮ ಪಕ್ಷ ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ಇದಕ್ಕೆ ಪುತ್ತೂರಿನ ಪ್ರತೀ ನಾಗರಿಕರು ನಮ್ಮೊಂದಿಗೆ ಕೈಜೋಡಿಸಬೇಕು. ಉತ್ತಮ ಸಮಾಜಕ್ಕಾಗಿ, ಸಮಾಜದ ಕಟ್ಟಕಡೆಯ ವ್ಯಕ್ತಿ ಕೂಡ ನಮ್ಮೊಂದಿಗೆ ಸೇರಬೇಕು, ಇದು ಜನಸಾಮಾನ್ಯರ ಪಕ್ಷ, ಕ್ರಾಂತಿಕಾರಿ ಪಕ್ಷವಾಗಿದ್ದು, ಎಲ್ಲರೂ ಕೈಜೋಡಿಸಬೇಕು ಎಂದವರು ಹೇಳಿದರು.

ಆಮ್ ಆದ್ಮಿ ದೇಶದಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವ ಪಕ್ಷ. ದೇಶದಲ್ಲಿ ರಾಜ್ಯದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿರುವಾಗ ಜನರ ಆಕಾಂಕ್ಷೆ ಜನರ ಮನೋಭಾವನೆಗಳಿಗೆ ಸ್ಪಂದಿಸದ ಸರ್ಕಾರಗಳು ಇವೆಲ್ಲವನ್ನೂ ಗಮನಿಸುತ್ತಿರುವ ನಾಗರಿಕರು ದೇಶದ ಉದ್ದಗಲಕ್ಕೆ ಒಂದು ಹೊಸ, ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವಂತಹ ಪಕ್ಷ, ಜನಸಾಮಾನ್ಯರಿಗೆ ಒಳ್ಳೆಯ ಆರೋಗ್ಯ ವ್ಯವಸ್ಥೆಯನ್ನು ಕಲ್ಪಿಸುವ, ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸವನ್ನು ನೀಡುವ, ಉತ್ತಮ ಮೂಲಸೌಕರ್ಯ ಒದಗಿಸುವ ಪಕ್ಷವನ್ನು ಜನಸಾಮಾನ್ಯರು ಬಯಸಿದ್ದಾರೆ. ಯಾವುದೇ ಜಾತಿ, ಮತ, ಧರ್ಮ ಭೇದವಿಲ್ಲದೆ ಮಾನವೀಯ ನೆಲೆಯಲ್ಲಿ ಪ್ರತಿಯೊಬ್ಬರನ್ನು ಪ್ರೀತಿಸುವ, ಸಂತೋಷವನ್ನು ಹಂಚುವ ಕಾರ್ಯಕ್ರಮವನ್ನು ಆಮ್ ಆದ್ಮಿ ಪಕ್ಷ ಮಾಡುತ್ತಿದೆ. ಆಮ್ ಆದ್ಮಿ ಪಕ್ಷ ಬಹಳ ವೇಗವಾಗಿ ಬೆಳೆಯುತ್ತಿದೆ. ಒಳ್ಳೆಯ ಅಭ್ಯರ್ಥಿಗಳ ಹುಡುಕಾಟದಲ್ಲಿ ಕೂಡ ನಾವಿದ್ದೇವೆ. ಸಮಾಜದ ಸುಶಿಕ್ಷಿತ, ಗಣ್ಯ ವ್ಯಕ್ತಿಗಳನ್ನು ಸೇರಿಸಿಕೊಂಡು ಪಕ್ಷವನ್ನು ಬೆಳೆಸುವಲ್ಲಿ ನಮ್ಮ ಪ್ರಾಮಾಣಿಕ ಪ್ರಯತ್ನ ಮುಂದುವರೆದಿದೆ ಎಂದು ಹೇಳಿದರು.

ಆಮ್ ಆದ್ಮಿ ಪಕ್ಷದ ದ.ಕ. ಉಡುಪಿ ಜಿಲ್ಲಾ ವೀಕ್ಷಕ ಅಶೋಕ್ ಎಡಮಲೆ ಮಾತನಾಡಿ, ಆಮ್ ಆದ್ಮಿ ಪಕ್ಷವು ದಕ್ಷಿಣ ಕನ್ನಡದಲ್ಲಿ ಜೊತೆಗೆ ಇಡೀ ರಾಜ್ಯದಲ್ಲಿ ಮುಂದಿನ ವಿಧಾನಸಭೆ ಜೊತೆಗೆ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಸ್ಪರ್ಧಿಸುವ ನಿರ್ಣಯ ಕೈಗೊಂಡಿದೆ. ಈ ನಿಟ್ಟಿನಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದೇವೆ. ಭ್ರಷ್ಟಾಚಾರ ರಹಿತ, ಪಾರದರ್ಶಕ, ವೈಜ್ಞಾನಿಕ ಮನೋಭಾವದ ಆಡಳಿತ ನಡೆಸುವ ದೃಷ್ಟಿಯಲ್ಲಿ ಅಂತಹ ಅಭ್ಯರ್ಥಿಗಳನ್ನು ಪ್ರತೀ ಕ್ಷೇತ್ರಗಳಲ್ಲಿ ನಿಲ್ಲಿಸಬೇಕು. ಸಾಂಪ್ರದಾಯಿಕ ರಾಜಕಾರಣದಿಂದ ಹೊರತಾದ ಪ್ರತಿನಿಧಿತ್ವವನ್ನು ತರಲು ಈ ಭಾಗದ ಜನರು ಸಹಕರಿಸಬೇಕು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಆಮ್ ಆದ್ಮಿ ಪಕ್ಷದ ಮುಖಂಡರಾದ ಜನಾರ್ದನ ಬಂಗೇರ, ಅಶ್ರ- ಜೊತೆಗಿದ್ದರು.

LEAVE A REPLY

Please enter your comment!
Please enter your name here