ಮಾಯಿಲಕೋಟೆಯಲ್ಲಿ ಪ್ರತಿಷ್ಠಾ ಮಹೋತ್ಸವ-ಧಾರ್ಮಿಕ ಸಭೆ

0

  • ‘ಅಚಲವಾದ ಭಕ್ತಿಯಿಂದ ದೇವರನ್ನು ಪೂಜಿಸಬೇಕು’

ನೆಲ್ಯಾಡಿ: ಕಾಯೇನ ವಾಚಾ ಮನಸಾ ಕಾರ್ಯೋನ್ಮುಖರಾದರೆ ಯಶಸ್ಸು ಖಂಡಿತ, ಪ್ರತಿಯೊಬ್ಬರಿಗೂ ಸಮಸ್ಯೆಗಳು ಬಂದಾಗಲೇ ದೇವರ ನೆನಪಾಗೋದು. ಭಕ್ತಿ, ಶ್ರದ್ಧೆ, ನಂಬಿಕೆ, ಶುದ್ಧ ಭಾವನೆಗಳಿದ್ದಾಗ ಸುಂದರ ದೇವಾಲಯ ನಿರ್ಮಾಣವಾಗಲು ಸಾಧ್ಯ ಎಂದು ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಹೇಳಿದರು.

ಅವರು ಶಿಲಾಮಯವಾಗಿ ಪುನರ್‌ನಿರ್ಮಾಣಗೊಂಡಿರುವ ಕೊಕ್ಕಡ ಸೀಮೆ ಮಾಯಿಲಕೋಟೆ ದೈವಸ್ಥಾನದ ಪ್ರತಿಷ್ಠಾ ಮಹೋತ್ಸವದ ಸಂದರ್ಭದಲ್ಲಿ ಮೇ ೧೨ರಂದು ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಆತ್ಮಸಾಕ್ಷಿಗೆ ವಿರುದ್ಧವಾಗಿ ಯಾವ ಮನುಷ್ಯನೂ ಜಗತ್ತಿನಲ್ಲಿ ಬದುಕಲು ಸಾಧ್ಯವಿಲ್ಲ. ತರ್ಕಕ್ಕಿಂತ ಅಚಲವಾದ ಭಕ್ತಿಯಿಂದ ದೇವರನ್ನು ಪೂಜಿಸಬೇಕು. ವರ್ಷಕ್ಕೊಮ್ಮೆ ದೇವರನ್ನು ನೆನೆದುಕೊಂಡು ಹರಕೆ ಒಪ್ಪಿಸಿದರೆ ಸಾಲದು. ಇತ್ಯ ಪೂಜೆಯ ಮೂಲಕ ದೇವರನ್ನು ಪೂಜಿಸಬೇಕೆಂದು ಹೇಳಿದರು. ಮಾಯಿಲಕೋಟೆ ದೈವ ಸನ್ನಿಧಿಯ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರೂ ಆದ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿಯವರು ಆಶೀರ್ವಚನ ನೀಡಿ, ತ್ಯಾಗ, ಸಮರ್ಪಣಾ ಭಾವನೆಯಿಂದ ಮಾಯಿಲಕೋಟೆ ದೈವ ಸನ್ನಿಧಿ ನಿರ್ಮಾಣಗೊಂಡಿದೆ. ಮುಂದೆಯೂ ಈ ಕ್ಷೇತ್ರ ಕಾರ್ಣಿಕ ಮರೆಯುತ್ತಾ ಭಕ್ತರನ್ನು ಹರಸುವಂತಾಗಲಿ ಎಂದರು. ಶುಭಾಸಂಸನೆ ಮಾಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರವರು, ಅಧರ್ಮದಲ್ಲಿ ನಡೆಯುವರಿಗೆ ಧರ್ಮದ ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸಲು ದೈವಸ್ಥಾನಗಳು ಉದಯಿಸಿವೆ. ಮಾಯಿಲಕೋಟೆ ಕ್ಷೇತ್ರವನ್ನು ಪ್ರವಾಸೋದ್ಯಮ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಪ್ರಯತ್ನ ಮಾಡುವುದಾಗಿ ಹೇಳಿದರು.

ಪ್ರತಿಷ್ಠಾ ಮಹೋತ್ಸವ ಸಮಿತಿ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್, ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ, ಸುಳ್ಯ ಕೋಟೆ ಮಾಯಿಲ ಸಮುದಾಯ ಸಂಘದ ಅಧ್ಯಕ್ಷ ಕುಮಾರ್ ಬಳ್ಳಕರವರು ಸಂದರ್ಭೋಚಿತವಾಗಿ ಮಾತನಾಡಿದರು. ಭಾಸ್ಕರ ಗೌಡ ದೇವಸ್ಯ, ಜಿ.ಪಂ.ಮಾಜಿ ಅಧ್ಯಕ್ಷ ಕೊರಗಪ್ಪ ನಾಯ್ಕ್, ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ರಾವ್ ಮುಂಡ್ರುಪ್ಪಾಡಿ, ಮಾಯಿಲಕೋಟೆ ದೈವ ಸನ್ನಿಧಿಯ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ರಾಮಕೃಷ್ಣ ದೇವಾಡಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರತಿಷ್ಠಾ ಮಹೋತ್ಸವ ಸಮಿತಿ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ಹಾಗೂ ಚಂದ್ರಾವತಿ ದಂಪತಿ ಮತ್ತು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಮಕೃಷ್ಣ ದೇವಾಡಿಗ ಹಾಗೂ ಅಶ್ವಿನಿ ದಂಪತಿ ತುಳಸಿ ಮಾಲಾರ್ಪಣೆ, ಫಲ ತಾಂಬೂಲ ಸಮರ್ಪಿಸಿ ಗೌರವಿಸಿದರು. ಪ್ರತಿಷ್ಠಾ ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಶಾಂತರಾಮ ಎ., ಆಹಾರ ಸಮಿತಿ ಸಂಚಾಲಕ ದಾಮೋದರ ಗೌಡ ನ್ಯೂ ಆರಿಗ, ಪ್ರತಿಷ್ಠಾ ಮಹೋತ್ಸವ ಸಮಿತಿ ಉಪಾಧ್ಯಕ್ಷ ಕುಶಾಲಪ್ಪ ಗೌಡ ಪುಡ್ಕೆತ್ತೂರು, ಪ್ರಚಾರ ಸಮಿತಿ ಸಂಚಾಲಕ ಗಣೇಶ್ ಕಲಾಯಿ, ವಿವಿಧ ಸಮಿತಿಗಳ ಸದಸ್ಯರಾದ ಆನಂದ ಗೌಡ ಹಾರ ಕೆರೆಕ್ಕೋಡಿ, ಜಯಾನಂದ ಪೊಯ್ಯೊಳೆ, ವಿಠಲ ತೆಂಕಬೈಲು, ಶಶಿ ಪುತ್ಯೆಮಜಲು, ಶೀನಪ್ಪ ಗೌಡ, ಕೇಶವ ಕೊಲ್ಲಾಜೆಪಳಿಕೆ, ವಿನಯ್ ಹಾರ ಅತಿಥಿಗಳಿಗೆ ಶಾಲು ಹಾಕಿ, ಪುಷ್ಪಗುಚ್ಛ ನೀಡಿ ಗೌರವಿಸಿದರು.
ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಜಯರಾಮ ಗೌಡ ಹಾರ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಭಾಗದ ಜನರಿಗೆ ನಾನಾ ರೀತಿಯ ಕಷ್ಟಗಳು, ತೊಂದರೆಗಳು ಬರುತ್ತಿದ್ದ ಹಿನ್ನೆಲೆಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಚಿಂತನೆ ಮಾಡಲಾಗಿತ್ತು. ಕ್ಷೇತ್ರದ ಬಗ್ಗೆ ಯಾರಿಗೂ ಹೆಚ್ಚಿನ ಮಾಹಿತಿ ಗೊತ್ತಿರಲಿಲ್ಲ. ಅಷ್ಟಮಂಗಳ ಪ್ರಶ್ನೆಯಲ್ಲಿ ಈ ಕ್ಷೇತ್ರದ ಇತಿಹಾಸ ತಿಳಿದುಬಂದಿದೆ. ಪ್ರಶ್ನೆಯಲ್ಲಿ ಕಂಡು ಬಂದಂತ ಎಲ್ಲಾ ಪರಿಹಾರಗಳನ್ನು ಮಾಡಿ ಜೀರ್ಣೋದ್ಧಾರ ಕೆಲಸ ಮಾಡಲಾಗಿದೆ ಎಂದರು. ಕೊಕ್ಕಡ ಗ್ರಾ.ಪಂ.ಅಧ್ಯಕ್ಷ ಯೋಗೀಶ್ ಆಲಂಬಿಲ ಸ್ವಾಗತಿಸಿದರು. ಸ್ವಾಗತ ಸಮಿತಿ ಸಂಚಾಲಕ ಲಕ್ಷ್ಮೀನಾರಾಯಣ ಟಿ.ಎಂ.ವಂದಿಸಿದರು. ವಿಶ್ವನಾಥ ರೈ, ದಾಮೋದರ ಅಜ್ಜಾವರ, ಸುರೇಶ್ ಪಡಿಪಂಡ ಕಾರ್ಯಕ್ರಮ ನಿರೂಪಿಸಿದರು. ಶ್ರಾವ್ಯ, ಪಂಚಮಿ ಹಾಗೂ ಬಳಗದವರು ಪ್ರಾರ್ಥಿಸಿದರು.

ಸನ್ಮಾನ: ಶಿಲ್ಪಿಗಳಾದ ಶ್ರೀನಿವಾಸ ಮಿಯಾರ್ ಕಾರ್ಕಳ, ಸುಬ್ರಹ್ಮಣ್ಯ ಆಚಾರಿ ಕೊಕ್ಕಡ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಮಾಯಿಲ ಸಮಾಜ ಬಾಂಧವರು ಶ್ರೀ ಧರ್ಮಪಾಲನಾಥ ಸ್ವಾಮೀಜಿ ಹಾಗೂ ಶ್ರೀ ಮೋಹನದಾಸ ಸ್ವಾಮೀಜಿಯವರಿಗೆ ಗೌರವಾರ್ಪಣೆ ಸಲ್ಲಿಸಿದರು.

LEAVE A REPLY

Please enter your comment!
Please enter your name here