ಮಂಗಳೂರು ಕಥೋಲಿಕ್ ಧರ್ಮಪ್ರಾಂತ್ಯದ ಧರ್ಮಗುರುಗಳ ವರ್ಗಾವಣೆ ಪಟ್ಟಿ ಪ್ರಕಟ

0

  • ಫಿಲೋಮಿನಾ ಪಿಯು ಕಾಲೇಜು ಪ್ರಾಂಶುಪಾಲರಾಗಿ ವಂ|ಅಶೋಕ್ ರಾಯನ್
  • ಉಜಿರೆ ಅನುಗ್ರಹ ಪಿಯು ಕಾಲೇಜು ಪ್ರಾಂಶುಪಾಲರಾಗಿ ವಂ|ವಿಜಯ್ ಲೋಬೊ
  • ಫಿಲೋಮಿನಾ ಕಾಲೇಜು ಪ್ರಾಂಶುಪಾಲ, ಬೆಳ್ಳಾರೆ ಚರ್ಚ್‌ಗೆ ವಂ|ಆಂಟನಿ ಪ್ರಕಾಶ್

ಪುತ್ತೂರು:2022ನೇ ಸಾಲಿನ ಮಂಗಳೂರು ಕಥೋಲಿಕ್ ಧರ್ಮಪ್ರಾಂತ್ಯದ ಧರ್ಮಗುರುಗಳ ವರ್ಗಾವಣೆ ಪಟ್ಟಿ ಈಗಾಗಲೇ ಪ್ರಕಟಗೊಂಡಿದ್ದು, ಪುತ್ತೂರು ಧರ್ಮಕ್ಷೇತ್ರದಲ್ಲಿನ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿಗೆ ನೂತನ ಪ್ರಾಂಶುಪಾಲರಾಗಿ ಈಗಾಗಲೇ ಫಿಲೋಮಿನಾ ಸ್ನಾತಕೋತ್ತರ ವಾಣಿಜ್ಯ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಹಾಗೂ ಪುರುಷರ ವಸತಿ ನಿಲಯದಲ್ಲಿ ವಾರ್ಡನ್ ಆಗಿ ಸೇವೆ ಸಲ್ಲಿಸುತ್ತಿರುವ ವಂ|ಅಶೋಕ್ ರಾಯನ್ ಕ್ರಾಸ್ತಾ, ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ಕಳೆದ ೧೧ ವರ್ಷಗಳಿಂದ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವಂ|ವಿಜಯ್ ಲೋಬೋರವರು ಪ್ರಾಂಶುಪಾಲರಾಗಿ ಉಜಿರೆ ಅನುಗ್ರಹ ಪದವಿ ಪೂರ್ವ ಕಾಲೇಜಿಗೆ ವರ್ಗಾವಣೆ ಹಾಗೂ ಫಿಲೋಮಿನಾ ಕಾಲೇಜಿನಲ್ಲಿ ಪ್ರಸ್ತುತ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿರುವ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೋರವರು ಫಿಲೋಮಿನಾ ಕಾಲೇಜು ಪ್ರಾಂಶುಪಾಲ ಹುದ್ದೆಯ ಜವಾಬ್ದಾರಿಯ ಜೊತೆಗೆ ಮಾಯಿದೆ ದೇವುಸ್ ಚರ್ಚ್‌ನಿಂದ ಬೆಳ್ಳಾರೆ ಚರ್ಚ್‌ಗೆ ವಸತಿ ಧರ್ಮಗುರು(ಇನ್-ಚಾರ್ಜ್ ಧರ್ಮಗುರು)ಗಳಾಗಿ ವರ್ಗಾವಣೆ ಹೊಂದಿರುತ್ತಾರೆ.

ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ.ವಂ|ಡಾ|ಪೀಟರ್ ಪಾವ್ಲ್ ಸಲ್ದಾನ್ಹಾರವರು ಅಧಿಕೃತವಾಗಿ ಆದೇಶ ಹೊರಡಿಸಿರುತ್ತಾರೆ. ವಂ|ಆಂಟನಿ ಪ್ರಕಾಶ್ ಮೊಂತೇರೋರವರು ಮೇ ೧೬ ರಂದು ಬೆಳ್ಳಾರೆ ಚರ್ಚ್‌ನಲ್ಲಿ, ವಂ|ಅಶೋಕ್ ರಾಯನ್ ಕ್ರಾಸ್ತಾರವರು ಮೇ ೨೩ ರಂದು ಫಿಲೋಮಿನಾ ಪಿಯು ಕಾಲೇಜಿನಲ್ಲಿ ಹಾಗೂ ವಂ|ವಿಜಯ್ ಲೋಬೋರವರು ಮೇ ೨೪ರಂದು ಉಜಿರೆ ಅನುಗ್ರಹ ಪಿಯು ಕಾಲೇಜಿನಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇವರುಗಳಲ್ಲದೆ ಮಾಯಿದೆ ದೇವುಸ್ ಚರ್ಚ್‌ನಲ್ಲಿ ಪ್ರಧಾನ ಧರ್ಮಗುರುಗಳಾಗಿ ವಂ|ಲಾರೆನ್ಸ್ ಮಸ್ಕರೇನ್ಹಸ್, ಸಹಾಯಕ ಧರ್ಮಗುರುಗಳಾಗಿ ವಂ|ಕೆವಿನ್ ಲಾರೆನ್ಸ್ ಡಿ’ಸೋಜ, ಫಿಲೋಮಿನಾ ಕಾಲೇಜು ಕ್ಯಾಂಪಸ್ ನಿರ್ದೇಶಕರಾಗಿ ವಂ|ಸ್ಟ್ಯಾನಿ ಪಿಂಟೋರವರು ಎಂದಿನಂತೆ ಸೇವೆಯನ್ನು ಮುಂದುವರೆಸಲಿರುವರು.

ವಂ|ಅಶೋಕ್ ರಾಯನ್ ಪರಿಚಯ:
ತಾಕೊಡೆ ನಿವಾಸಿ ಆಲ್ಫೋನ್ಸ್ ಕ್ರಾಸ್ತಾ ಹಾಗೂ ಕ್ರಿಸ್ತಿನ್ ಡಿ’ಕುನ್ಹಾರವರ ಮೂವರು ಮಕ್ಕಳ ಪೈಕಿ ಹಿರಿಯವರಾಗಿ ಜನಿಸಿದ ವಂ|ಅಶೋಕ್ ರಾಯನ್ ಕ್ರಾಸ್ತಾರವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ತಾಕೊಡೆ ಸೈಂಟ್ ಜೋಸೆಫ್ಸ್ ಶಾಲೆಯಲ್ಲಿ, ಪ್ರೌಢಶಿಕ್ಷಣವನ್ನು ತಾಕೊಡೆ ಆದರ್ಶ್ ಪ್ರೌಢಶಾಲೆಯಲ್ಲಿ, ಪದವಿ ಪೂರ್ವ ಶಿಕ್ಷಣವನ್ನು ಮಂಗಳೂರು ಸೈಂಟ್ ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜಿನಲ್ಲಿ, ಪದವಿ ಶಿಕ್ಷಣವನ್ನು ಮೂಡಬಿದ್ರೆ ಮಹಾವೀರ ಕಾಲೇಜಿನಲ್ಲಿ, ಎಂಕಾಂ ಶಿಕ್ಷಣವನ್ನು ಸುರತ್ಕಲ್ ಗೋವಿಂದದಾಸ್ ಕಾಲೇಜಿನಲ್ಲಿ, ಬಿಎಡ್ ಶಿಕ್ಷಣವನ್ನು ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಹಾಗೂ ಧಾರ್ಮಿಕ ಶಿಕ್ಷಣವನ್ನು ಮಂಗಳೂರಿನ ಜೆಪ್ಪು ಸೆಮಿನರಿಯಲ್ಲಿ ಪೂರೈಸುವುದರ ಜೊತೆಗೆ ಕೆ-ಸೆಟ್ ಪರೀಕ್ಷೆಯಲ್ಲೂ ಉತ್ತೀರ್ಣಗೊಂಡಿದ್ದರು. ೨೦೧೪ರಲ್ಲಿ ಗುರುದೀಕ್ಷೆ ಗಳಿಸಿದ ಬಳಿಕ ಕಿನ್ನಿಗೋಳಿ ಚರ್ಚ್‌ನಲ್ಲಿ ಸಹಾಯಕ ಧರ್ಮಗುರುಗಳಾಗಿ ಧಾರ್ಮಿಕ ಸೇವೆ(೪ ವರ್ಷ)ಯನ್ನು ಆರಂಭಿಸಿದ್ದರು. ಬಳಿಕ ಬೆಳಾ ಸೈಂಟ್ ಮೇರೀಸ್ ಕಾಲೇಜಿಗೆ ಪ್ರಾಂಶುಪಾಲರಾಗಿ ಎರಡು ವರ್ಷ ಸೇವೆ ಸಲ್ಲಿಸಿದ್ದರು. ೨೦೨೦ರಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಪುರುಷರ ವಸತಿನಿಲಯದ ವಾರ್ಡನ್ ಆಗಿ ಜೊತೆಗೆ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ನಿಯುಕ್ತಿಗೊಂಡಿದ್ದರು.

ವಂ|ವಿಜಯ್ ಲೋಬೋ ಪರಿಚಯ:
ಉಡುಪಿ ಜಿಲ್ಲೆಯ ಬಾರ್ಕೂರು ನಿವಾಸಿ ವಿಲಿಯಂ ಲೋಬೋ ಹಾಗೂ ಮೇರಿ ಲೋಬೋರವರ ಪುತ್ರರಾಗಿರುವ ವಂ|ವಿಜಯ್ ಲೋಬೋರವರು ಎಂಎಸ್ಸಿ, ಬಿಎಡ್ ಪದವೀಧರರಾಗಿದ್ದು, ಬಿಎಡ್‌ನಲ್ಲಿ ಉಡುಪಿಯ ಡಾ.ಟಿಎಂಎ ಪೈ ಕಾಲೇಜ್ ಆಫ್ ಎಜ್ಯುಕೇಶನ್‌ನಲ್ಲಿ ಬಿಎಡ್‌ನಲ್ಲಿ ನಾಲ್ಕನೇ ರ್‍ಯಾಂಕ್ ವಿಜೇತರಾಗಿದ್ದಾರೆ. ಮಂಗಳೂರಿನ ಜೆಪ್ಪು ಸೆಮಿನರಿಯಲ್ಲಿ ಧಾರ್ಮಿಕ ಶಿಕ್ಷಣ ಪಡೆದು ೨೦೦೫ರಲ್ಲಿ ಗುರುದೀಕ್ಷೆಯನ್ನು ಗಳಿಸಿದ ಬಳಿಕ ಬೆಳ್ಮಣ್ ಸಂತ ಜೋಸೆಫ್ ಚರ್ಚ್‌ನಲ್ಲಿ ಸಹಾಯಕ ಧರ್ಮಗುರುಗಳಾಗಿ ಸೇವೆಯನ್ನು ಆರಂಭಿಸಿದ್ದು, ೨೦೦೮ರಲ್ಲಿ ಕಲ್ಯಾಣಪುರ ಸಂತ ಮಿಲಾಗ್ರಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮುಖ್ಯ ಗುರುಗಳಾಗಿ ಸೇವೆ ಸಲ್ಲಿಸಿರುತ್ತಾರೆ. ಅಲ್ಲಿ ಎರಡು ವರ್ಷ ಸೇವೆ ಸಲ್ಲಿಸಿ ಬಳಿಕ ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜ್‌ಗೆ ಪ್ರಾಂಶುಪಾಲರಾಗಿ ಭಡ್ತಿಯನ್ನು ಪಡೆದಿರುತ್ತಾರೆ. ೨೦೧೧ರಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿಗೆ ಪ್ರಾಂಶುಪಾಲರಾಗಿ ವರ್ಗಾವಣೆ ಹೊಂದಿ ಈಗಾಗಲೇ ೧೧ ವರ್ಷ ಪೂರೈಸಿದ್ದು, ಏತನ್ಮಧ್ಯೆ ತಂಜಾವೂರು ಪ್ರಿಸ್ಟ್ ವಿಶ್ವವಿದ್ಯಾನಿಲಯದಲ್ಲಿ ಪಿಎಚ್‌ಡಿ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.

ವಂ|ಡಾ|ಆಂಟನಿ ಪ್ರಕಾಶ್ ಪರಿಚಯ:
ಕಳೆದ ಹನ್ನೆರಡು ವರ್ಷಗಳಿಂದ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದ ಪ್ರೊ|ಲಿಯೋ ನೊರೊನ್ಹಾರವರು ಮಡಂತ್ಯಾರ್‌ನ ಸೆಕ್ರೆಡ್ ಹಾರ್ಟ್ ಕಾಲೇಜಿಗೆ ಸಹಾಯಕ ಪ್ರಾಧ್ಯಾಪಕರಾಗಿ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಇವರಿಂದ ತೆರವಾದ ಹುದ್ದೆಗೆ ಭೌತಶಾಸ್ತ್ರ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ವಂ|ಡಾ|ಆಂಟನಿ ಪ್ರಕಾಶ್ ಮೊಂತೆರೋರವರು ಪ್ರಾಂಶುಪಾಲರಾಗಿ ನಿಯುಕ್ತಗೊಂಡಿದ್ದರು. ವಂ|ಪ್ರಕಾಶ್ ಮೊಂತೆರೋರವರ ಆರಂಭಿಕ ಶಿಕ್ಷಣ ಉಡುಪಿಯ ಶಿರ್ವದಲ್ಲಿ ಪಡೆದಿದ್ದರು. ಸಂತ ಫಿಲೊಮಿನಾ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಶಿಕ್ಷಣಗೈಯುತ್ತಿದ್ದ ಸಂದರ್ಭದಲ್ಲಿ ಮಂಗಳೂರು ವಿ.ವಿಯಿಂದ ಕಾಲೇಜಿಗೆ ಐದನೇ ರ್‍ಯಾಂಕ್ ಹಾಗೂ ಭೌತಶಾಸ್ತ್ರ ಸ್ನಾತಕೋತ್ತರ ವಿಭಾಗದಲ್ಲಿ ಮಂಗಳೂರು ವಿ.ವಿಯಲ್ಲಿ ಪ್ರಥಮ ರ್‍ಯಾಂಕ್‌ನೊಂದಿಗೆ ಎಂಎಸ್ಸಿ ಪದವಿಯನ್ನು ವಂ|ಪ್ರಕಾಶ್ ಮೊಂತೇರೋರವರು ಗಳಿಸಿರುತ್ತಾರೆ. ಮಂಗಳೂರು ವಿ.ವಿಯ ಡಾ|ವಿಜಯಕುಮಾರ್‌ರವರ ಮಾರ್ಗದರ್ಶನದಲ್ಲಿ ಸೈದ್ಧಾಂತಿಕ ಕಣ ಭೌತ ವಿಜ್ಞಾನದಲ್ಲಿ ಸಂಶೋಧನೆ ನಡೆಸಿ ಡಾಕ್ಟರೇಟ್ ಪದವಿಯನ್ನೂ ಅವರು ಪಡೆದುಕೊಂಡಿರುತ್ತಾರೆ. ಮಂಗಳೂರಿನ ಜೆಪ್ಪು ಸೆಮಿನರಿಯಲ್ಲಿ ಧಾರ್ಮಿಕ ಶಿಕ್ಷಣ ಪಡೆದು, ೨೦೦೬ರಲ್ಲಿ ಗುರುದೀಕ್ಷೆಯನ್ನು ಗಳಿಸಿದ ಬಳಿಕ ಬಿಜೈಯ ಸೈಂಟ್ ಝೇವಿಯರ್ ಚರ್ಚ್, ತಲಪಾಡಿಯ ಲೇಡಿ ಚರ್ಚ್ ಮತ್ತು ಪುತ್ತೂರಿನ ಮರೀಲ್ ಚರ್ಚುಗಳಲ್ಲಿಯೂ ಧಾರ್ಮಿಕ ಗುರುಗಳಾಗಿ ಸೇವೆ ಸಲ್ಲಿಸಿರುತ್ತಾರೆ. ವಂ|ಆಂಟನಿ ಪ್ರಕಾಶ್‌ರವರು ೨೦೧೧ರಲ್ಲಿ ಸಂತ ಫಿಲೋಮಿನಾ ಕಾಲೇಜಿನ ಭೌತಶಾಸ್ತ್ರ ವಿಭಾಗದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ನೇಮಕಗೊಂಡು ಶೈಕ್ಷಣಿಕ ವೃತ್ತಿಜೀವನವನ್ನು ಆರಂಭಿಸಿದ್ದರು. ಕಾಲೇಜಿನ ಕ್ಯಾಂಪಸ್ ನಿರ್ದೇಶಕರಾಗಿ ಮತ್ತು ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ನಿರ್ದೇಶಕರಾಗಿಯೂ ಅವರು ಕರ್ತವ್ಯ ನಿರ್ವಹಿಸಿರುತ್ತಾರೆ. ಕೇಂದ್ರ ಸರಕಾರದ ಬೋರ್ಡ್ ಆಫ್ ರೀಸರ್ಚ್ ಇನ್ ನ್ಯೂಕ್ಲಿಯರ್ ಸೈನ್ಸ್ ಇದರ ಅನುದಾನದಲ್ಲಿ ಉನ್ನತ ಸಂಶೋಧನಾ ಪ್ರಾಜೆಕ್ಟನ್ನು ವಂ|ಪ್ರಕಾಶ್ ಮೊಂತೇರೋರವರು ಯಶಸ್ವಿಯಾಗಿ ಮಂಡಿಸಿರುತ್ತಾರೆ. ಇವರ ಹಲವಾರು ಸಂಶೋಧನಾ ಲೇಖನಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾನ್ಯತೆಯ ಸಂಶೋಧನಾ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕರ್ನಾಟಕ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವಿಜಿಎಸ್‌ಟಿ ಯುವ ಸಂಶೋಧಕರಿಗೆ ಸಂಶೋಧನ ಲೇಖನ ಪ್ರಕಟಣೆಗೆ ನೀಡುವ ಪ್ರಶಸ್ತಿಯನ್ನು ವಂ|ಡಾ|ಆಂಟನಿ ಪ್ರಕಾಶ್ ಮೊಂತೆರೋರವರು ಭಾಜನರಾಗಿರುತ್ತಾರೆ. ಪ್ರಸ್ತುತ ನ್ಯೂಕ್ಲಿಯರ್ ಮತ್ತು ಕಣ ಭೌತ ವಿಜ್ಞಾನ ಕ್ಶೇತ್ರದಲ್ಲಿ ಸೈದ್ಧಾಂತಿಕ ಸಂಶೋಧನಾ ಕೇಂದ್ರವನ್ನು ಕಾಲೇಜಿನಲ್ಲಿ ಸ್ಥಾಪಿಸಲು ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯಿಂದ ಅನುದಾನ ಪಡೆದಿರುತ್ತಾರೆ. ಮೈಸೂರಿನ ಮುಕ್ತ ವಿಶ್ವ ವಿದ್ಯಾಲಯದಿಂದ ಕನ್ನಡದಲ್ಲಿ ಎಂಎ ಪದವಿಯನ್ನೂ ಪಡೆದ ಇವರು ಕೊಂಕಣಿ ಮತ್ತು ಕನ್ನಡದಲ್ಲಿ ಲೇಖನಗಳನ್ನು ಮತ್ತು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಬೈಬಲ್ ಕುರಿತು ಕನ್ನಡ, ಇಂಗ್ಲೀಷ್ ಮತ್ತು ಕೊಂಕಣಿಯಲ್ಲಿ ರಸಪ್ರಶ್ನೆ, ಪುಸ್ತಕಗಳನ್ನು ಕೂಡ ಪ್ರಕಟಿಸಿದ್ದಾರೆ.

ಮಂಗಳೂರು ಕಥೋಲಿಕ್ ಧರ್ಮಪ್ರಾಂತ್ಯದ ಚರ್ಚ್ ವ್ಯಾಪ್ತಿಯಲ್ಲಿ ಚರ್ಚ್ ಪ್ರಧಾನ ಧರ್ಮಗುರುಗಳಿಗೆ ೬ ವರ್ಷ, ಸಹಾಯಕ ಧರ್ಮಗುರುಗಳಿಗೆ ೨ ವರ್ಷ, ಪ್ರಾಂಶುಪಾಲರು/ಸಹಾಯಕ ಪ್ರಾಧ್ಯಾಪಕರು/ಶಿಕ್ಷಕರಾಗಿ ಸೇವೆ ಸಲ್ಲಿಸುವ ಧರ್ಮಗುರುಗಳಿಗೆ ಗರಿಷ್ಟ ೧೦ ವರ್ಷ ಸೇವೆ ಸಲ್ಲಿಸಲು ಅಲಿಖಿತ ನಿಯಮವಾಗಿದ್ದು ಅದರಂತೆ ೧೧ ವರ್ಷ ಸೇವೆ ಸಲ್ಲಿಸಿರುವ ಫಿಲೋಮಿನಾ ಪಿಯು ಕಾಲೇಜು ಪ್ರಾಂಶುಪಾಲರಾದ ವಂ|ವಿಜಯ್ ಲೋಬೋ ಮತ್ತು ಕಾಲೇಜ್‌ನಲ್ಲಿ ಕ್ಯಾಂಪಸ್ ನಿರ್ದೇಶಕ, ಸಹಾಯಕ ಪ್ರಾಧ್ಯಾಪಕ(೧೦ ವರ್ಷ)ರಾಗಿ ಹಾಗೂ ಪ್ರಸ್ತುತ ಪ್ರಾಂಶುಪಾಲ(೧ ವರ್ಷ)ರಾಗಿ ಒಟ್ಟು ೧೧ ವರ್ಷ ಸೇವೆ ಸಲ್ಲಿಸಿರುವ ಫಿಲೋಮಿನಾ ಕಾಲೇಜು ಪ್ರಾಂಶುಪಾಲರಾದ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೋರವರನ್ನು ಫಿಲೋಮಿನಾ ಕಾಲೇಜು ಪ್ರಾಂಶುಪಾಲ ಹುದ್ದೆಯ ಜವಾಬ್ದಾರಿಯ ಜೊತೆಗೆ ಬೆಳ್ಳಾರೆ ಚರ್ಚ್ ಇನ್-ಚಾರ್ಜ್ ಧರ್ಮಗುರುಗಳಾಗಿ ವರ್ಗಾಯಿಸಲಾಗಿದೆ.

LEAVE A REPLY

Please enter your comment!
Please enter your name here