ಮೇ.21ಕ್ಕೆ ಎಪಿಎಂಸಿ ರಸ್ತೆಯ ರೈಲ್ವೇ ಅಂಡರ್ ಪಾಸ್ ರೂ.11.56 ಕೋಟಿಯ ಕಾಮಗಾರಿಗೆ ಗುದ್ದಲಿ ಪೂಜೆ, ನವೀಕೃತ ವಸತಿ ಗೃಹ ಉದ್ಘಾಟನೆ, ಸಾಧಕರಿಗೆ ಸನ್ಮಾನ – ಶಾಸಕ ಸಂಜೀವ ಮಠಂದೂರು ಪತ್ರಿಕಾಗೋಷ್ಠಿ

0

ಪುತ್ತೂರು: ಬಹು ಕಾಲದ ಬೇಡಿಕೆಯಂತೆ ಮೈಸೂರು ವಿಭಾಗದ ನೈರುತ್ಯ ರೈಲ್ವೇ, ಪುತ್ತೂರು ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ರೈಲ್ವೇ ಇಲಾಖೆ ಮತ್ತು ರಾಜ್ಯ ಸರಕಾರದ ಮೂಲಭೂತ ಸೌಕರ್ಯ ಇಲಾಖೆಯಿಂದ 50-50 ಅನುದಾನದಲ್ಲಿ ರೂ.11.56 ಕೋಟಿಯಲ್ಲಿ ಎಪಿಎಂಸಿ ರಸ್ತೆಯ ರೈಲ್ವೇ ಅಂಡರ್ ಪಾಸ್ ಕಾಮಗಾರಿಗೆ ಮೇ.21ಕ್ಕೆ ಶಿಲಾನ್ಯಾಸ ನಡೆಯಲಿದೆ ಎಂದು ಶಾಸಕ ಸಂಜೀವ ಮಠಂದೂರು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.


ಅವರು ಎಪಿಎಂಸಿ ಯಾರ್ಡ್ ನ ಸಭಾಂಗಣದಲ್ಲಿ ಮಾತನಾಡಿದರು. ಸುಳ್ಯ, ಕಡಬಗಳಿಗೆ ಪುತ್ತೂರು ಕೇಂದ್ರಸ್ಥಾನವಾಗಿರುವ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸರ್ವಋತು ರಸ್ತೆಯಾಗಿ ಪುತ್ತೂರು ಹೃದಯ ಭಾಗಕ್ಕೆ ಸಂಪರ್ಕ ಮಾಡುವ ಎಪಿಎಂಸಿ ರಸ್ತೆಯಲ್ಲಿ ರೈಲ್ವೇ ಅಂಡರ್ ಪಾಸ್ ಯೋಜನೆಗೆ ಡಿ.ವಿ.ಸದಾನಂದ ಗೌಡ ಅವರು ರೈಲ್ವೇ ಇಲಾಖೆ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಚರ್ಚಿಸಿದ್ದರು. ಬಳಿಕದ ದಿನದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಮಂತ್ರಿಗಳು ಪ್ರಯತ್ನ ಪಟ್ಟಿದ್ದಾರೆ. ಇದೀಗ ಯೋಜನೆಗೆ ಅನುದಾನ ಬಂದು ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ. ಈ ಮಳೆಗಾಲ ಹೊರತು ಪಡಿಸಿ ಮುಂದಿನ ನಾಲ್ಕು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಅವರು ಹೇಳಿದರು. ಸಂಸದ ನಳಿನ್ ಕುಮಾರ್ ಕಟೀಲ್ ಗುದ್ದಲಿ ಪೂಜೆ ನೆರವೇರಿಸಲಿದ್ದು, ಮಾಜಿ ಮುಖ್ಯಮಂತ್ರಿ ಸಂಸದ ಡಿ.ವಿ.ಸದಾನಂದ ಗೌಡ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ನಾಮಫಲಕ ಅನಾವರಣ ಮಾಡಲಿದ್ದಾರೆ. ಸಹಕಾರ ಸಚಿವ ಎಸ್.ಟಿ‌ ಸೋಮಶೇಖರ್ ಅತಿಥಿ ಗೃಹ ಉದ್ಘಾಟಿಸಲಿದ್ದಾರೆ. ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಅಂಗಾರ ಎಸ್ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಾಧಕರನ್ನು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸನ್ಮಾನಿಸಲಿದ್ದಾರೆ. ಹಲವಾರು ಮಂದಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು‌. ಪತ್ರಿಕಾಗೋಷ್ಠಿಯಲ್ಲಿ ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ಉಪಾಧ್ಯಕ್ಷ ಮಂಜುನಾಥ್ ಎನ್ ಎಸ್, ಸದಸ್ಯರಾದ ಕೃಷ್ಣಕುಮಾರ್ ರೈ, ಅಬ್ದುಲ್ ಶಕೂರು ಹಾಜಿ, ತಾ.ಪಂ ಮಾಜಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಅಡಿಕೆ ವರ್ತಕರ ಸಂಘದ ಅಧ್ಯಕ್ಷ ರವೀಂದ್ರನಾಥ ರೈ ಬಳ್ಳಮಜಲು ಸೇರಿದಂತೆ ವರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here