2024–24ನೇ ಸಾಲಿನ ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯ ಫಲಿತಾಂಶ ಪ್ರಕಟವಾಗಿದ್ದು, ಎಲ್ಲ ಏಳು ವಿಭಾಗಗಳಲ್ಲೂ ಮೊದಲ 10 ರ‍್ಯಾಂಕ್ ವಿಜೇತರಲ್ಲಿ ಬೆಂಗಳೂರು ಮತ್ತು ಮಂಗಳೂರಿನಲ್ಲಿ ಕಲಿತ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ.
ಯೋಗ ಮತ್ತು ನ್ಯಾಚುರೋಪಥಿ ಮತ್ತು ಬಿ.ಎಸ್ಸಿ(ಕೃಷಿ) ವಿಭಾಗದಲ್ಲಿ ಮಂಗಳೂರಿನ ಕೊಡಿಯಾಲಬೈಲ್‌ನಲ್ಲಿರುವ ಎಕ್ಸ್‌ಪರ್ಟ್ ಪಿಯು ಸೈನ್ಸ್ ಕಾಲೇಜಿನ ಎಸ್.ಆರ್. ನಿಹಾರ್, ಎಂಜಿನಿಯರಿಂಗ್‌ನಲ್ಲಿ ಬೆಂಗಳೂರಿನ ಸಹಕಾರ ನಗರದಲ್ಲಿರುವ ನಾರಾಯಣ ಒಲಿಂಪಿಯಾಡ್ ಸ್ಕೂಲ್‌ನ ಹರ್ಷ ಕಾರ್ತಿಕೇಯ ವುಟುಕುರಿ, ಪಶು ವೈದ್ಯಕೀಯ (ಬಿ.ವಿ.ಎಸ್ಸಿ), ಬಿ.ಫಾರ್ಮಾ (ಫಾರ್ಮಸಿ), ಫಾರ್ಮಾ ಡಿ (ಫಾರ್ಮಸಿ) ಮತ್ತು ಬಿ.ಎಸ್ಸಿ ನರ್ಸಿಂಗ್‌ನಲ್ಲಿ ಬೆಂಗಳೂರಿನ ಮಾರತ್‌ಹಳ್ಳಿಯಲ್ಲಿರುವ ಶ್ರೀ ಚೈತನ್ಯ ಟೆಕ್ನೊ ಸ್ಕೂಲ್‌ನ ವಿ. ಕಲ್ಯಾಣ್ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ. ಎಂಜಿನಿಯರಿಂಗ್, ಯೋಗ ಮತ್ತು ನ್ಯಾಚುರೋಪಥಿ, ಪಶು ವೈದ್ಯಕೀಯ, ಕೃಷಿ ವಿಜ್ಞಾನ, ಬಿ. ಫಾರ್ಮಸಿ, ಫಾರ್ಮಾ ಡಿ ಮತ್ತು ಬಿ.ಎಸ್ಸಿ (ನರ್ಸಿಂಗ್) ಕೋರ್ಸುಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಏಪ್ರಿಲ್ 18 ಮತ್ತು 19ರಂದು ಸಿಇಟಿ ನಡೆಸಿತ್ತು.