ಹಣಿಯೂರು ಗುತ್ತು ಪರಿವಾರ ಬಂಟರ ತರವಾಡು ಮನೆಯಲ್ಲಿ ದೈವಗಳ ಪುನರ್ ಪ್ರತಿಷ್ಠೆ, ನೂತನ ದೈವಸ್ಥಾನ, ತರವಾಡು ಮನೆಯ ಗೃಹಪ್ರವೇಶ

0

 

ಪುತ್ತೂರು: ಪರಿವಾರ ಬಂಟರ ಸಮುದಾಯದ ಹಣಿಯೂರು ಗುತ್ತಿನ ಮನೆ ಇದೀಗ ಸಮರ್ಪಣೆಯಾಗಿದೆ. ಕುಟುಂಬಕ್ಕೆ ಸಿಕ್ಕಿದ ಅವಕಾಶವಿದು. ದಾನ – ಧರ್ಮ ಜೀವನದಲ್ಲಿ ಅತೀ ಮುಖ್ಯವಾದುದು. ಈ ಭೂಮಿಯಲ್ಲಿ ನಮ್ಮ ಅಸ್ತಿತ್ವವನ್ನು ತೋರಿಸಲು ಇಂತಹ ಕುಟುಂಬದ ಮನೆಗಳು ಅತೀ ಮುಖ್ಯ. ಧರ್ಮ ಕಾರ್ಯವನ್ನು ಮಾಡುವ ಕೆಲಸ ಎಲ್ಲರಿಗೂ ಒದಗಿಬರುವುದಿಲ್ಲ. ಕುಟುಂಬ ನೋಡಿದವನಿಗೆ ಸದಾ ದೇವರ ದಯೆಯಿದೆ. ಕುಟುಂಬದ ಮನೆಯ ಅಸ್ಥಿತ್ವವನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕು ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ಹೇಳಿದರು.


ಅವರು ಕೊಡಿಪ್ಪಾಡಿ ಹಣಿಯೂರು ಗುತ್ತು ಪರಿವಾರ ಬಂಟರ ತರವಾಡು ದೈವಸ್ಥಾನದಲ್ಲಿ ಮೇ.15ರಂದು ನಡೆದ ಶ್ರೀ ಧೂಮಾವತಿ – ಬಂಟ ಹಾಗೂ ಪರಿವಾರ ದೈವಗಳ ಪುನರ್ ಪ್ರತಿಷ್ಠೆ ಮತ್ತು ನೂತನ ದೈವಸ್ಥಾನ ಮತ್ತು ತರವಾಡು ಮನೆಯ ಗೃಹಪ್ರವೇಶದ ಪ್ರಯುಕ್ತ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು.
ಡಾ. ಕೆ.ಸಿ. ನಾಕ್‌ರವರ ಕೈಯಲ್ಲಿ ಈ ಒಂದು ಸುಂದರ ಆಲಯದ ನಿರ್ಮಾಣವಾಗಿದೆ. ಕುಟುಂಬದ ಮನೆಗಳಿಗೆ ಅದರದೇ ಆದ ಮಹತ್ವವಿದೆ. ಕುಟುಂಬದ ಮನೆಯಿಲ್ಲದವನಿಗೆ ನೆಮ್ಮದಿ ಇರದು. ವರ್ಷಕ್ಕೊಮ್ಮೆಯಾದರೂ ಕುಟುಂಬದ ಮನೆಗೆ ತೆರಳಿ ಮುಡಿಪು ಹಾಗೂ ದೈವದೇವರ ಕೆಲಸದಲ್ಲಿ ನಾವು ಭಾಗಿಯಾಗಬೇಕು. ಕುಟುಂಬದ ಮನೆಗಳಿಗೆ ವೈಜ್ಞಾನಿಕ ಹಿನ್ನೆಲೆಯಿದೆ ಅದೇ ರೀತಿ ಆಧ್ಯಾತ್ಮದ ಚಿಂತನೆ ಇದೆ. ನಮ್ಮನ್ನು ಒಟ್ಟುಗೂಡಿಸುವ ಕೆಲಸ ಇಂತಹ ಕುಟುಂಬದ ಮನೆಯಿಂದ ಸಾಧ್ಯ ಎಂದರು.

 


ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಸಂಜೀವ ಮಠಂದೂರುರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂತಹ ತರವಾಡು ಮನೆಗಳು ಇಂದಿನ ಕಾಲ ಘಟ್ಟದಲ್ಲಿ ಅತೀ ಅಗತ್ಯ. ಸಣ್ಣ ಸಣ್ಣ ಸಮುದಾಯಗಳ ಅಸ್ತಿತ್ವ ಉಳಿವಿಗೆ ಇಂತಹ ತರುವಾಡು ಮನೆಗಳ ಪಾತ್ರ ಅಪಾರ. ಇಂತಹ ತರವಾಡಿನಿಂದಾಗಿ ಸಮಾಜ ಮುಖಿ ಸಂದೇಶ ಕೊಡುವ ಕೆಲಸ ನಡೆಯಬೇಕಾಗಿದೆ. ತರವಾಡುಮನೆಗಳು ಹಿಂದೂ ಸಮಾಜದ ಒಗ್ಗಟ್ಟಿನ ಕೇಂದ್ರ. ಅವರವರ ಸಮಾಜಕ್ಕೆ ಅವರದೇ ಆದ ಕಟ್ಟು ಪಾಡುಗಳಿವೆ. ಏಕತೆಯಲ್ಲಿ ವಿವಿಧತೆ ಕಾಣುವುದು ಹಿಂದೂ ಸಮಾಜದ ವೈಶಿಷ್ಟ್ಯ. ಪರಿವಾರ ಬಂಟ ಸಮುದಾಯದ ಕೊಡುಗೆ ಸಮಾಜಕ್ಕೆ ಹಲವಿದೆ. ಹಿಂದೂ ಸಮಾಜಕ್ಕೆ ಇತರರನ್ನು ಪ್ರೀತಿಸುವ ಶಕ್ತಿ ಇದೆ. ತರವಾಡು ಮನೆಗಳು ವಿಭಿನ್ನವಾಗಿ ಸಮಾಜದಲ್ಲಿ ಗುರುತಿಸುವಂತಾಗಬೇಕಾಗಿದೆ ಎಂದ ಅವರು ತರವಾಡು ಮನೆಗೆ ಬರುವ ರಸ್ತೆಗೆ ಕಾಂಕ್ರಿಟೀಕರಣ ಹಾಗೂ ತರವಾಡಿನ ಅಂಗಳಕ್ಕೆ ಇಂಟರ್ ಲಾಕ್ ಅಳವಡಿಕೆಗಾಗಿ ೨೦ಲಕ್ಷ ರೂಪಾಯಿ ಅನುದಾನ ಒದಗಿಸುವ ಭರವಸೆ ನೀಡಿದರು.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಮುಳಿಯ ಕೇಶವ ಭಟ್‌ರವರು ಧಾರ್ಮಿಕ ಉಪನ್ಯಾಸ ನೀಡಿ, ಹಿಂದೂ ಧರ್ಮಕ್ಕೆ ಅದರದೇ ಆದ ಸ್ಥಾನಮಾನವಿದೆ. ಪ್ರಕೃತಿಯೊಂದಿಗೆ ವಿಲೀನವಾಗಿರುವ ಧರ್ಮ ಹಿಂದೂ ಧರ್ಮವಾಗಿದೆ. ಪ್ರಕೃತಿಯನ್ನು ಪೂಜಿಸುವ ಕೆಲಸ ನಮ್ಮಿಂದಾಗುತ್ತಿದೆ. ಎಲ್ಲರೂ ಸೇರಿಕೊಂಡು ಮಾಡಿದ ಕೆಲಸದಲ್ಲಿ ಯಶಸ್ಸಿದೆ ಎನ್ನುವುದಕ್ಕೆ ಹಣಿಯೂರು ಗುತ್ತಿನ ತರವಾಡು ಮನೆಯೇ ಶಾಕ್ಷಿ. ಯೋಗ ಭಾಗ್ಯ ಕೂಡಿ ಬಂದಾಗ ಇಂತಹ ಸತ್ಕರ್ಮ ಮಾಡಲು ಸಾಧ್ಯ. ನಮ್ಮ ಭರತ ದೇಶದಲ್ಲಿ ಜಾತಿ ಪದ್ದತಿ ಹಿಂದೆ ಇರಲಿಲ್ಲಿ. ಬ್ರಿಟೀಷರ ಕಾಲದ ನಂತರ ಜಾತಿ ಪದ್ದತಿ ಆರಂಭವಾಗಿದೆ. ಡಾ. ಕೆ.ಸಿ ನಾಯ್ಕ್‌ ರವರು ಋಷಿ ಸದೃಶರು. ಎಲ್ಲರನ್ನು ಪ್ರೀತಿಸುವ ಧರ್ಮ ಹಿಂದೂ ಧರ್ಮ. ದರ್ಮದ ಉಳಿವಿಗಾಗಿ ನಾವು ಕೆಲಸ ಮಾಡಬೇಕಿದೆ ಎಂದರು.

ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿರುವ ಜನಾರ್ದನ ಎರ್ಕಡಿತ್ತಾಯರವರು ಮಾತನಾಡಿ, ಇಲ್ಲಿನ ಉಗ್ರಾಣ ವ್ಯವಸ್ಥೆ ಅವಿಸ್ಮರಣೀಯವಾಗಿದೆ, ದೊಡ್ಡದೊಡ್ಡ ದೇವಸ್ಥಾನದಲ್ಲಿ ಸಾಮಾಗ್ರಿಗಳನ್ನು ಜೋಡಣೆ ಮಾಡಿರುವ ರೀತಿಯಲ್ಲಿ ಇಲ್ಲಿನ ಉಗ್ರಾಣದಲ್ಲಿ ಸಾಮಾಗ್ರಿಗಳನ್ನು ಜೋಡಿಸಲಾಗಿದೆ. ತರವಾಡು ಮನೆಗಳಲ್ಲಿಯೂ ಈ ರೀತಿಯ ವ್ಯವಸ್ಥೆ ಮಾಡಬಹುದು ಎನ್ನುವುದನ್ನು ಇಲ್ಲಿಯವರು ತೋರಿಸಿಕೊಟ್ಟಿದ್ದಾರೆ ಎಂದರು.

ಹಣಿಯೂರು ಫ್ಯಾಮಿಲಿ ಡೈಟೀಸ್ ಟ್ರಸ್ಟ್ ನ ಅಧ್ಯಕ್ಷರಾಗಿರುವ ಡಾ.ಕೆ.ಸಿ. ನಾಯ್ಕ್‌ ರವರು ಮಾತನಾಡಿ ಇಷ್ಟೊಂದು ಸುಂದರ ತರವಾಡು ಮನೆ ನಿರ್ಮಾಣವಾಗಿರುವುದು ನನ್ನ ಒಬ್ಬನಿಂದಾಗಿ ಅಲ್ಲ ನಮ್ಮ ಇಡೀ ಕುಟುಂಬದ ಸದಸ್ಯರ ಪರಿಶ್ರಮ ಅದರಲ್ಲಿ ಅಡಗಿದೆ. ದೈವಸ್ಥಾನ, ದೇವಸ್ಥಾನ ಕಟ್ಟಿಸಲು ಓರ್ವ ವ್ಯಕ್ತಿಯಿಂದ ಸಾಧ್ಯವಿಲ್ಲ. ಎಲ್ಲರ ಸಹಕಾರದಿಂದ ಅದೆಲ್ಲ ಸಾಧ್ಯ. ದೇವರು ನನ್ಮನ್ನು ಗುರುತಿಸಿ ನನ್ನಿಂದ ಆ ಕೆಲಸಮಾಡಿಸಿದ್ದಾರೆ ಅಷ್ಟೆ. ಒಗ್ಗಟ್ಟಿನಿಂದ ಮಾಡಿದ ಕೆಲಸಕ್ಕೆ ಯಶಸ್ಸಿದೆ ಎನ್ನುವುದಕ್ಕೆ ಅತೀ ಕಡಿಮೆ ಅವಧಿಯಲ್ಲಿ ನಿರ್ಮಾಣವಾಗಿರುವ ನಮ್ಮ ತರವಾಡು ಮನೆಯೇ ಸಾಕ್ಷಿ ಎಂದರು. ಕುಟುಂಬವಿದ್ದರೆ ನಾವಿದ್ದೇವೆ. ಗುರಿ ಹಾಗೂ ಗುರು ಇದ್ದರೆ ಯಾವುದೇ ವ್ಯಕ್ತಿಯು ಯಶಸ್ಸು ಸಾಧಿಸಲು ಸಾಧ್ಯ. ನಮ್ಮ ಉಳಿವಿನ ನೆಲೆಗಟ್ಟನ್ನು ಭದ್ರವಾಗಿಸಲು ತರವಾಡು ಮನೆಗಳು ಅತೀ ಮುಖ್ಯ ಈ ವರೆಗಿನ ಕಾರ್ಯಕ್ರಮ ಅತೀ ಸುಂದರವಾಗಿ ಆಗಿದೆ. ನಾನು ಕುಟುಂಬದ ಸದಸ್ಯನಾಗಿ ಕೆಲಸ ಮಾಡಿದ್ದೇನೆ ಎಂದರು.

ಪರಿವಾರ ಬಂಟರ ಸಂಘದ ಅಧ್ಯಕ್ಷರಾಗಿರುವ ಎ. ಸಂತೋಷ್ ಕುಮಾರ್, ಡಾ.ಕೆ.ಸಿ. ನಾಯ್ಕ್‌ರವರ ಪತ್ನಿ ಸಗುಣ ಸಿ. ನಾಯ್ಕ್‌, ನಗರಸಭಾ ಅಧ್ಯಕ್ಷರಾದ ಜೀವಂದರ್ ಜೈನ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರಾಧಾಕೃಷ್ಣ ನಾಯ್ಕ್‌ ದಂಪತಿಗಳು ಸ್ವಾಮೀಜಿಗೆ ಫಲಪುಷ್ಪ ನೀಡಿ ಗೌರವಿಸಿದರು. ಪುರುಷೋತ್ತಮ ನಾಯ್ಕ್‌, ಸುಕೇಶ್ ನಾಯ್ಕ್‌ ಬೈರಂಗಡಿ, ಶಕೀಲ ಪುರುಷೋತ್ತಮ ನಾಯ್ಕ್‌, ಕೆ.ಸಿ. ನಾಯ್ಕ್‌ ಮೊದಲಾದವರು ಅತಿಥಿಗಳಿಗೆ ಶಾಲುಹೊದಿಸಿ ಗೌರವಿಸಿದರು.

ವಸಂತ ನಾಯ್ಕ್‌  ಮಜಲುರವರು ಪರಿವಾರ ಬಂಟ ಸಮುದಾಯದ ಪರವಾಗಿ ಮಾತನಾಡಿದರು. ಸತೀಶ್ ನಾಯ್ಕ್ ಪರ್ಲಡ್ಕ ಸ್ವಾಗತಿಸಿ, ಅತಿಥಿಗಳ ಪರಿಚಯ ಮಾಡಿದರು. ಅಶೋಕ್  ನಾಯ್ಕ್‌  ಹಣಿಯೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗುಲಾಬಿ ಮಂಗಳೂರು ಕಾರ್ಯಕ್ರಮ ನಿರೂಪಿಸಿದರು. ಸುಕೇಶ್ ನಾಯ್ಕ್‌ ಬೈರಂಗಡಿ ವಂದಿಸಿದರು.

ದೈವಗಳ ಪ್ರತಿಷ್ಠೆ, ವೈದಿಕ ಕಾರ್ಯಕ್ರಮ: ಮೇ.೧೫ರಂದು ಕುಟುಕುಡೇಲು ರಘುರಾಮ ತಂತ್ರಿಯವರ ನೇತೃತ್ವದಲ್ಲಿ ಬೆಳಗ್ಗೆ ಗಣಪತಿ ಹೋಮ, ನಾಗತಂಬಿಲ, ಚಂಡಿಕಾಯಾಗ, ಹರಿಸೇವೆ ನಡೆಯಿತು.. ಬೆಳಗ್ಗೆ ೯.೫೨ ರಿಂದ ೧೦.೨೨ರ ಮಿಥುನ ಲಗ್ನದಲ್ಲಿ ದೈವಗಳ ಪುನರ್ ಪ್ರತಿಷ್ಠೆ ನಡೆಯಿತು.

ಹಲವಾರು ಕಡೆಗಳಿಂದ ಹಸಿರುವಾಣಿ: ಮೇ.೧೪ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನ, ಮಂಗಳೂರಿನ ಮಂಗಳಾದೇವಿ ದೇವಸ್ಥಾನ, ಹಳೆಕೋಟೆ ಮಾರಿಯಮ್ಮ ದೇವಸ್ಥಾನ ಬೋಳಾರ, ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನ, ಅನಂತಪದ್ಮನಾಭ ದೇವಸ್ಥಾನ ಕುಡುಪು, ಗೋಪಾಲಕೃಷ್ಣ ದೇವಸ್ಥಾನ ಶಕ್ತಿನಗರ, ವಿವಿಧ ಕಡೆಯ ಬಂದುಮಿತ್ರರು, ಕುಟುಂಬಸ್ಥರು, ಸಂಬಂಧಿಕರಿಂದ ಹಾಗೂ ವಿವಿಧ ಕಡೆಗಳಿಂದ ಹಸಿರುವಾಣಿ ಸಮರ್ಪಣೆಯಾಗಿದೆ.

ಕುಟುಂಬದ ಮನೆಯ ಅಸ್ಥಿತ್ವವನ್ನು ಉಳಿಸಿ ಬೆಳೆಸುವ ಕಾರ್ಯ ವಾಗಬೇಕು: ಶ್ರೀ ರಾಜಶೇಖರಾನಂದ ಸ್ವಾಮೀಜಿ

ಅಸ್ತಿತ್ವ ಉಳಿವಿಗೆ ಇಂತಹ ತರುವಾಡು ಮನೆಗಳ ಪಾತ್ರ ಅಪಾರ: ಸಂಜೀವ ಮಠಂದೂರು

 

ಯೋಗ ಭಾಗ್ಯ ಕೂಡಿ ಬಂದಾಗ ಇಂತಹ ಸತ್ಕರ್ಮ ಮಾಡಲು ಸಾಧ್ಯ ಮುಳಿಯ ಕೇಶವ ಭಟ್

ಇಲ್ಲಿನ ಉಗ್ರಾಣ ವ್ಯವಸ್ಥೆ ಅವಿ ಸ್ಮರಣೀಯ: ಜನಾರ್ದನ ಎರ್ಕಡಿತ್ತಾಯ

ನಮ್ಮ ಉಳಿವಿನ ನೆಲೆಗಟ್ಟನ್ನು ಭದ್ರ ವಾಗಿಸಲು ತರವಾಡು ಮನೆಗಳು ಅತೀ ಮುಖ್ಯ: ಡಾ.ಕೆ.ಸಿ.ನಾಯ್ಕ್

LEAVE A REPLY

Please enter your comment!
Please enter your name here