ಪುತ್ತೂರು ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಕೌಡಿಚ್ಚಾರು ಶಾಖೆಯ ನವೀಕೃತ ಕಟ್ಟಡ, ಮಾರಾಟ ಮಳಿಗೆಯ ಉದ್ಘಾಟನೆ

0

  • ಕುಶಲಕರ್ಮಿಗಳಿಗೆ ಮತ್ತು ಕೌಶಲ್ಯಾಭಿವೃದ್ಧಿಗೆ ಸರಕಾರ ಒತ್ತು ನೀಡುತ್ತಿದೆ : ಸಂಜೀವ ಮಠಂದೂರು

ಪುತ್ತೂರು: ತುಳುನಾಡಿನ ಕರಕುಶಲತೆಗೆ ಐತಿಹಾಸಿಕ ಪರಂಪರೆ ಇದೆ. ಮಣ್ಣಿನ ಪಾತ್ರೆಗಳಲ್ಲಿ ಈ ನಾಡಿನ ಇತಿಹಾಸವನ್ನು ಹುಡುಕುವ ಪ್ರಯತ್ನ ನಡೆದಿದೆ. ಇಂತಹ ಕರಕುಶಲತೆಯನ್ನು ಮಾಡುವ ಕುಶಲಕರ್ಮಿಗಳಿಗೆ ಮತ್ತು ಅವರ ಕೌಶಲ್ಯದ ಅಭಿವೃದ್ಧಿಗೆ ಸರಕಾರ ವಿಶೇಷ ಒತ್ತು ನೀಡುವ ಕೆಲಸ ಮಾಡುತ್ತಿದೆ.ಈಗಾಗಲೇ ಕುಶಲಕರ್ಮಿಗಳಿಗೆ ವಿವಿಧ ಸೌಲಭ್ಯಗಳನ್ನು ಕೊಡುವ ಕೆಲಸವನ್ನು ಕೇಂದ್ರ ಸರಕಾರ ಮಾಡಿದೆ. ವೋಕಲ್ ಫಾರ್ ಲೋಕಲ್ ಎಂಬ ಪ್ರಧಾನಿಯವರ ಆಶಯದಂತೆ ಸ್ಥಳೀಯವಾಗಿ ತಯಾರು ಮಾಡುವ ಮಣ್ಣಿನ ಪಾತ್ರೆಗಳಿಗೆ ಮಾರುಕಟ್ಟೆ ಒದಗಿಸುವ ಕೆಲಸವನ್ನು ಸಹಕಾರ ಸಂಘ ಮಾಡುತ್ತಿದ್ದು ಆ ಮೂಲಕ ಕುಂಬರಿಕೆ ವೃತ್ತಿಯನ್ನು ಮಾಡುತ್ತಿರುವವರು ಸ್ವಾವಲಂಭಿ ಜೀವನ ನಡೆಸಲು ಸಾಧ್ಯವಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಮೇ.೨೨ ರಂದು ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ಪುತ್ತೂರು ಇದರ ಕೌಡಿಚ್ಚಾರು ಶಾಖೆಯ ನವೀಕೃತ ಕಟ್ಟಡ ಹಾಗೂ ಮಾರಾಟ ಮಳಿಗೆಯನ್ನು ದೀಪ ಬೆಳಗಿಸಿ, ರಿಬ್ಬನ್ ತುಂಡರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.ನಾನು ಕೂಡ ಸಹಕಾರ ಸಂಘದಿಂದಲೇ ರಾಜಕೀಯಕ್ಕೆ ಬಂದವರ ಎಂದ ಶಾಸಕರು ಕೃಷ್ಣ ಮೂಲ್ಯರು ಸ್ಥಾಪನೆ ಮಾಡಿದ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ಇಂದು ಬಹಳಷ್ಟು ಬೆಳೆದು ನಿಂತಿರುವುದು ಖುಷಿ ತಂದಿದೆ. ಸಹಕಾರ ಸಂಘದ ಮೂಲಕ ಬಹಳಷ್ಟು ಜನರಿಗೆ ಸ್ವಾವಲಂಭಿ ಜೀವನ ನಡೆಸಲು ಸಹಕಾರ ದೊರೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು. ಕೌಡಿಚ್ಚಾರು ಶಾಖೆಯ ಈ ಭಾಗದಲ್ಲಿ ಬಹಳಷ್ಟು ಹೆಸರನ್ನು ಗಳಿಸಿಕೊಂಡಿದೆ ಎಂದ ಶಾಸಕರು ಸಹಕಾರ ಸಂಘದಿಂದ ಇನ್ನಷ್ಟು ಜನರಿಗೆ ಪ್ರಯೋಜನ ಸಿಗಲಿ, ಕುಂಬರಿಕೆ ಮಾಡುವವರಿಗೆ ಒಳ್ಳೆಯ ಸೌಲಭ್ಯಗಳು ಸಿಗುವಂತಾಗಲಿ ಎಂದು ಹೇಳಿ ಶುಭ ಹಾರೈಸಿದರು.


10 ಲಕ್ಷ ರೂ. ಘೋಷಣೆ
ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಆಶ್ರಯದಲ್ಲಿ ಕೌಡಿಚ್ಚಾರುನಲ್ಲಿ ಸಭಾ ಭವನ ನಿರ್ಮಿಸುವ ಉದ್ದೇಶವಿದ್ದು ಈ ಬಗ್ಗೆ ಸರಕಾರದಿಂದ ಸುಮಾರು ೪ ಕೋಟಿ ರೂ. ಅನುದಾನ ಕೊಡಿಸುವಂತೆ ಶಾಸಕರಿಗೆ ಸಂಘದ ಅಧ್ಯಕ್ಷ ಭಾಸ್ಕರ ಎಂ.ಪೆರುವಾಯಿಯವರು ಮನವಿ ಪತ್ರ ನೀಡಿದರು. ಇದಕ್ಕೆ ಶೀಘ್ರವಾಗಿ ಸ್ಪಂದಿಸಿದ ಶಾಸಕರು 4 ಕೋಟಿ ರೂ.ಬಹಳ ದೊಡ್ಡ ಮೊತ್ತವಾಗಿದೆ ಈ ಬಗ್ಗೆ ಪ್ರಯತ್ನ ಪಡುತ್ತೇನೆ. ಸದ್ಯಕ್ಕೆ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯ ಮೂಲಕ 10 ಲಕ್ಷ ರೂ.ಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಆತ್ಮನಿರ್ಭರ ಭಾರತದ ಕನಸು ನನಸಾಗುತ್ತಿದೆ: ನನ್ಯ ಅಚ್ಚುತ ಮೂಡೆತ್ತಾಯ
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಾವು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯರವರು ಮಾತನಾಡಿ, ಇಂದು ಎಲ್ಲಾ ಕ್ಷೇತ್ರಗಳಲ್ಲೂ ಸಹಕಾರ ಸಂಘದ ಪಾತ್ರ ಇದೆ.ಕೃಷ್ಣ ಮೂಲ್ಯರವರಿಂದ ಆರಂಭವಾದ ಸಹಕಾರ ಸಂಘ ಇಂದು ಬಹಳಷ್ಟು ಅಭಿವೃದ್ಧಿಯನ್ನು ಕಂಡಿದೆ ಇದಕ್ಕೆ ಮುಖ್ಯ ಕಾರಣ ಸಂಘದ ಸದಸ್ಯರುಗಳು ಆಗಿದ್ದಾರೆ. ಪ್ರಧಾನಿಯವರ ಆತ್ಮನಿರ್ಭರ ಭಾರತದ ಕನಸನ್ನು ನನಸು ಮಾಡುವ ಕೆಲಸವನ್ನು ಇಂತಹ ಸಹಕಾರ ಸಂಘಗಳು ಮಾಡುತ್ತಿವೆ. ಸ್ವಾಭಿಮಾನದ ಬದುಕು ನಮ್ಮದಾಗಬೇಕು ಎಂಬ ನಿಟ್ಟಿನಲ್ಲಿ ಸಂಘದ ಸದಸ್ಯರು ತಯಾರಿಸುವ ಮಣ್ಣಿನ ಪಾತ್ರೆಗಳನ್ನು ಖರೀದಿಸಿ ಮಾರಾಟ ಮಾಡುವ ವ್ಯವಸ್ಥೆಯನ್ನು ಕೂಡ ಸಹಕಾರ ಸಂಘ ಮಾಡುತ್ತಿರುವುದು ಶ್ಲಾಘನೀಯ, ಸಂಘವು ಇನ್ನಷ್ಟು ಅಭಿವೃದ್ಧಿಯನ್ನು ಕಾಣಲಿ ಎಂದು ಹೇಳಿ ಶುಭ ಹಾರೈಸಿದರು.

ಅರಿಯಡ್ಕ ಗ್ರಾಪಂ ಅಧ್ಯಕ್ಷೆ ಸೌಮ್ಯ ಬಾಲಸುಬ್ರಹ್ಮಣ್ಯರವರು ಸಂದರ್ಭೋಚಿತವಾಗಿ ಮಾತನಾಡಿ ಸಂಘವು ಇನ್ನಷ್ಟು ಅಭಿವೃದ್ಧಿಯನ್ನು ಕಾಣಲಿ ಎಂದು ಹೇಳಿ ಶುಭ ಹಾರೈಸಿದರು.ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ತ್ರಿವೇಣಿ ರಾವ್ ಕೆ.ರವರು ಸಂದರ್ಭೋಚಿತವಾಗಿ ಮಾತನಾಡಿ, ಸಂಘವು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಾಗಲಿ ಎಂದು ಹೇಳಿ ಶುಭ ಹಾರೈಸಿದರು.ಕರಕುಶಲ ಅಭಿವೃದ್ಧಿ ಮತ್ತು ಸೇವಾ ಕೇಂದ್ರ ಮಂಗಳೂರು ಇದರ ಸಹಾಯಕ ನಿರ್ದೇಶಕ ಶಿಬಿ ಮೈಕೆಲ್ ಮಾತನಾಡಿ, ಕರಕುಶಲಕರ್ಮಿಗಳಿಗೆ ಇಲಾಖೆಯಿಂದ ಹಲವು ಯೋಜನೆಗಳು ಲಭ್ಯವಿದ್ದು ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ತಿಳಿಸಿದರು. ಕುಶಲಕರ್ಮಿಗಳಿಗೆ ಐಡಿ ಕಾರ್ಡ್ ವಿತರಣೆ ಮಾಡಲಾಗಿದ್ದು ಈ ಕಾರ್ಡ್ ಮೂಲಕವು ಕೆಲವು ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಿದೆ ಎಂದು ಹೇಳಿದರು. ಕೌಡಿಚ್ಚಾರು ಶಾಖೆಯ ನಿರ್ದೇಶಕ ಶಿವಪ್ಪ ಮೂಲ್ಯ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಜಲ ಮತ್ತು ವಾಸ್ತು ತಜ್ಞರಾದ ನಾರಾಯಣ ಮೂಲ್ಯ ನನ್ಯ ಪಟ್ಟಾಜೆ ಉಪಸ್ಥಿತರಿದ್ದರು. ಸಂಘದ ಕಾನೂನು ಸಲಹೆಗಾರ ಭಾಸ್ಕರ ಕೋಡಿಂಬಾಳರವರಿಗೆ ಶಾಲು ಹಾಕಿ ಹೂ ಗುಚ್ಚ ನೀಡಿ ಗೌರವಿಸಲಾಯಿತು. ದೀಪಕ್ ಕುಮಾರ್ ಪ್ರಾರ್ಥಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಜನಾರ್ದನ ಮೂಲ್ಯ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ದಾಮೋದರ ವಿ, ನಿರ್ದೇಶಕರುಗಳಾದ ಗಣೇಶ್ ಪಿ.ಎಚ್,ನಾಗೇಶ್ ಕುಲಾಲ್, ಶಿವಪ್ಪ ಮೂಲ್ಯ, ಶುಭ ಎ.ಬಂಜನ್, ನಾರಾಯಣ ಕುಲಾಲ್ ,ಕೌಡಿಚ್ಚಾರು ಶಾಖೆಯ ವನಿತಾ ಅತಿಥಿಗಳಿಗೆ ಶಾಲು, ಹೂ ನೀಡಿ ಸ್ವಾಗತಿಸಿದರು. ಸಂಘದ ಉಪಾಧ್ಯಕ್ಷ ದಾಮೋದರ ವಿ ವಂದಿಸಿದರು. ಸಂಘದ ನಿರ್ದೇಶಕರುಗಳು, ಸಿಬ್ಬಂದಿಗಳು ಸಹಕರಿಸಿದ್ದರು.

ಕುಂಬಾರಿಕಾ ಚಕ್ರ ವಿತರಣೆ
ಕರಕುಶಲ ಅಭಿವೃದ್ಧಿ ಮತ್ತು ಸೇವಾ ಕೇಂದ್ರ ಮಂಗಳೂರು ಮತ್ತು ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಆಶ್ರಯದಲ್ಲಿ ಸುಮಾರು ೫೦ ಮಂದಿ ಕುಶಲ ಕರ್ಮಿಗಳಿಗೆ ವಿದ್ಯುತ್ ಚಾಲಿತ ಕುಂಬಾರಿಕಾ ಚಕ್ರಗಳನ್ನು ಈ ಸಂದರ್ಭದಲ್ಲಿ ಉಚಿತವಾಗಿ ವಿತರಣೆ ಮಾಡಲಾಯಿತು.

ಮಾಸಾಶನ ಬಿಡುಗಡೆ
ಕುಶಲ ಕರ್ಮಿಗಳಿಗೆ ವಿಶೇಷ ಪಿಂಚಣಿ ಯೋಜನೆಯನ್ನು ಸಹಕಾರ ಸಂಘ ಜಾರಿಗೆ ತಂದಿದ್ದು ಇದರಲ್ಲಿ ಮಾಸಾಶನ ರೂ.5೦೦ ರಂತೆ ಕುಶಲ ಕರ್ಮಿಗಳಿಗೆ ದೊರೆಯಲಿದೆ. ಇದನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.ಸಹಕಾರ ಸಂಘಗಳ ನಿಬಂಧಕರಾದ ತ್ರಿವೇಣಿ ರಾವ್.ಕೆರವರು ಕುಶಲ ಕರ್ಮಿಗಳಿಗೆ ಪಿಂಚಣಿ ಯೋಜನೆಯ ಬಾಂಡ್ ವಿತರಿಸಿದರು. ಇದೇ ಸಂದರ್ಭದಲ್ಲಿ ಕುಶಲಕರ್ಮಿಗಳಿಗೆ ಗುರುತಿನ ಚೀಟಿ ವಿತರಣೆ ಕೂಡ ನಡೆಯಿತು.

ಕುಂಬಾರಿಕೆ ಪ್ರಾತ್ಯಕ್ಷಿತೆ
ಮಣ್ಣಿನ ಪಾತ್ರೆ ತಯಾರಿಯ ಬಗ್ಗೆ ಸಭೆಯಲ್ಲಿ ಪ್ರಾತ್ಯಕ್ಷಿತೆ ನಡೆಯಿತು. ಮೋಹನ್ ಎಂಬವರು ವಿದ್ಯುತ್ ಚಾಲಿತ ಕುಂಬಾರಿಕ ಚಕ್ರದ ಮೂಲಕ ಸ್ಥಳದಲ್ಲೇ ಸುಂದರವಾದ ಮಣ್ಣಿನ ಪಾತ್ರೆಯೊಂದನ್ನು ತಯಾರಿಸಿದರು.

ಶಾಸಕರಿಗೆ ಸನ್ಮಾನ
ಶಾಸಕ ಸಂಜೀವ ಮಠಂದೂರುರವರಿಗೆ ಈ ಸಂದರ್ಭದಲ್ಲಿ ಸಹಕಾರ ಸಂಘದ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು. ಶಾಲು,ಪೇಟಾ,ಹಾರ ಹಾಕಿ, ಫಲಪುಷ್ಪ, ಸ್ಮರಣಿಕೆ ನೀಡಿ ಶಾಸಕರನ್ನು ಸನ್ಮಾನಿಸಿ ಗೌರವಿಸಲಾಯಿತು.

“ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘವು ಒಟ್ಟು 12 ಶಾಖೆಗಳನ್ನು ಹೊಂದಿದೆ. ಕುಂಬರಿಕೆ ಉಳಿಯಬೇಕು ಮತ್ತು ಕುಂಬರಿಕೆ ಮಾಡುವವರಿಗೆ ಪ್ರೋತ್ಸಾಹ ನೀಡಬೇಕು ಎಂಬ ನಿಟ್ಟಿನಲ್ಲಿ ಸಂಘದ ವತಿಯಿಂದ ಪ್ರೋತ್ಸಾಹಗಳನ್ನು ನೀಡಲಾಗುತ್ತಿದೆ. ಸದಸ್ಯರ ಮಕ್ಕಳಿಗೆ ಬಡ್ಡಿರಹಿತ ವಿದ್ಯಾಭ್ಯಾಸ ಸಾಲ ಅಲ್ಲದೆ ಇತರ ಸಾಲಗಳನ್ನು ಕೂಡ ನೀಡಲಾಗುತ್ತಿದೆ. ನವೀಕೃತ ನೂತನ ಕಟ್ಟಡದಲ್ಲಿ ಕೌಡಿಚ್ಚಾರು ಶಾಖೆ ಆರಂಭಗೊಂಡಿದೆ. ಹೊಸ ಮಾರಾಟ ಮಳಿಗೆ ಕೂಡ ಆಗಿದೆ. ಸಂಘದ ಬೆಳವಣಿಗೆಗೆ ಪ್ರತಿಯೊಬ್ಬರ ಪ್ರೋತ್ಸಾಹದ ಅಗತ್ಯ ಇದೆ”ಭಾಸ್ಕರ ಎಂ. ಪೆರುವಾಯಿ, ಅಧ್ಯಕ್ಷರು ಕುಂಬಾರರ ಗುಡಿ ಕೈಗಾರಿಕಾ ಸಂಘ

ಚಿತ್ರ: ಕೃಷ್ಣ ಸ್ಟುಡಿಯೋ ಪುತ್ತೂರು

LEAVE A REPLY

Please enter your comment!
Please enter your name here