ಪುತ್ತೂರು ಪೇಟೆಯ ಮಧ್ಯೆ ತಾರಸಿ ಮೇಲೆ ದಂಪತಿಯ ಕೃಷಿ ಕಾಯಕ

0

  • ಕಡಿಮೆ ಸ್ಥಳವಕಾಶವಿದ್ದರೂ ಊಹಿಸಲಾಗದಷ್ಟು ಹಣ್ಣುಗಳು, ತರಕಾರಿಗಳು
  • ಇಲ್ಲಿ ಏನಿದೆ ಅನ್ನುವುದಕ್ಕಿಂತ ಏನಿಲ್ಲವೆಂದು ಪ್ರಶ್ನಿಸಬೇಕಾಗಿದೆ !

 

 

ಪುತ್ತೂರು: ಛಲ ಮತ್ತು ತಾಳ್ಮೆ ಇದ್ದರೆ ಏನನ್ನೂ ಸಾಧಿಸಬಹುದು ಎಂಬುದಕ್ಕೆ ಇಲ್ಲೊಂದು ದಂಪತಿ ವಿಶೇಷವಾದ ಸಾಧನೆ ಮಾಡಿದ್ದಾರೆ. ತಮ್ಮ ಮನೆಯ ತಾರಸಿ ಮೇಲೆ ಸಾವಿರಾರು ಬಗೆಯ ವಿವಿಧ ಸಸ್ಯಗಳನ್ನು ಬೆಳೆದು ತಾರಸಿ ತೋಟವನ್ನು ಹೀಗೂ ಮಾಡಬಹುದು ಎಂದು ತೋರಿಸಿ ಕೊಟ್ಟಿದ್ದಾರೆ.

 


ಪುತ್ತೂರು ಪೇಟೆಯ ಪರ್ಲಡ್ಕ ರಸ್ತೆಯ ಕಲ್ಲಿಮಾರು ಸಮೀಪ ಬಾಲವನ ಈಜು ಕೊಳದ ಕಚೇರಿ ವ್ಯವಸ್ಥಾಪಕಿ ಪ್ರಫುಲ್ಲಾ ರೈ ಮತ್ತು ನಿವೃತ್ತ ಶಿಕ್ಷಕ ಜತ್ತಪ್ಪ ರೈ ದಂಪತಿ ಅವರು ತಮ್ಮ ಮನೆಯ ತಾರಸಿ ಮೇಲೆ ಏನುಂಟು, ಏನಿಲ್ಲ ಎನ್ನುವಂತೆ ಎಲ್ಲಾ ಬಗೆಯ ತರಕಾರಿ, ಹೂವು, ಹಣ್ಣು, ಔಷಧಿ ಸಸ್ಯಗಳನ್ನು ಬೆಳೆದಿದ್ದಾರೆ. ಕಳೆದ ೫ ವರ್ಷಗಳಿಂದ ಟೆರೇಸ್ ಗಾರ್ಡನ್ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಅವರು ತರಕಾರಿ ಬೆಳೆಸಿ ತಮ್ಮ ಮನೆಯ ದಿನ ನಿತ್ಯದ ಉಪಯೋಗಕ್ಕೆ ಬಳಸುವಂತೆ ಆಸಕ್ತರಿಗೆ ಮಾಹಿತಿಯನ್ನು ನೀಡುತ್ತಿದ್ದಾರೆ. ಪ್ರಫುಲ್ಲಾ ಅವರ ಮನೆಯಂಗಳದಿಂದಲೇ ಕೃಷಿ ಚಟುವಟಿಕ ಆರಂಭಗೊಳ್ಳುತ್ತದೆ. ಮನೆಯ ಗೇಟ್ ಬಳಿಯೇ ಕೆಂಪು ಬಸಲೆ, ಪಪ್ಪಾಯಿ, ರಾಮಫಲ, ಚಟ್ಟಿಗಳಲ್ಲಿ ಹೂವುಗಳು, ತಾವರೆ ಕೊಳ ಇದೆ. ಮನೆಯ ತಾರಸಿ ಮೆಟ್ಟಿಲುಗಳಲ್ಲೂ ಚಟ್ಟಿಯಲ್ಲಿ ತರಕಾರಿ ಕೃಷಿ ಇದೆ. ಮನೆ ತಾರಸಿ ಮೇಲೆ ಬದನೆ, ಬೆಂಡೆ, ಹೀರೆಕಾಯಿ, ಬಿನ್ಸ್, ಗೆಣಸು, ಬಿಳಿ ಅವರೆ, ಅಲಸಂಡೆ ಸೇರಿದಂತೆ ಎಲ್ಲಾ ಬಗೆಯ ತರಕಾರಿಗಳು, ಮಾವು, ಚಿಕ್ಕು, ಅಂಬಟೆ, ಹುಳಿ, ಕಿತ್ತಾಳೆ, ಮೂಸಂಬಿ, ಮರುಭೂಮಿಯಲ್ಲಾಗುವ ಡ್ಯಾಗನ್ ಫ್ರೂಟ್ಸ್, ಜಂಬುನೇರಳೆ ಸೇರಿದಂತೆ ಹಲವಾರು ಬಗೆಯ ಹಣ್ಣುಗಳು ಬೆಳೆದಿದ್ದಾರೆ. ಜತೆಗೆ ಅನೇಕ ಬಗೆಯ ಸೊಪ್ಪುಗಳನ್ನು ಇಲ್ಲಿ ಕಾಣಬಹುದು.

ಹೂವಿನ ಗಿಡಗಳು:
ತಾರಸಿ ತೋಟದಲ್ಲಿ ಸುಮಾರು ಹಲವು ಮಾದಿರಿಯ ಹೂವುಗಳನ್ನು ಪ್ರಫುಲ್ಲಾ ಅವರು ಬೆಳೆಸಿದ್ದಾರೆ. ಕನಕಾಂಬರ, ಸೇವಂತಿಗೆ, ದಾಸವಾಳ, ಆಂತೋರಿಯಮ್ ಸೇರಿದಂತೆ ಸುಂದರ ಹೂದೋಟವನ್ನು ಬೆಳೆಸಿದ್ದಾರೆ. ಯಾವುದೇ ಹಬ್ಬ ಹರಿದಿನಗಳನ್ನು ಹೂವಿಗೆ ಬರವಿಲ್ಲದಂತೆ ಆಚರಿಸುತ್ತಾರೆ. ಒಟ್ಟಾರೆ ಹೇಳುವುದಾದರೆ ಒಂದು ದೊಡ್ಡ ತೋಟದಲ್ಲಿ ಮಾಡಬಹುದಾದ ಕೃಷಿಯನ್ನು ಈ ದಂಪತಿ ತಮ್ಮ ಮನೆಯ ತಾರಸಿ ಮೇಲೆ ಮಾಡಿ ಸಾಧಿಸಿದ್ದಾರೆ.

ಹಸಿ ತ್ಯಾಜ್ಯವೇ ಗೊಬ್ಬರ:
ಪ್ರಫುಲ್ಲಾ ಅವರ ಮನೆಯ ತಾರಸಿ ತೋಟಕ್ಕೆ ಯಾವುದೇ ರಾಸಾಯನಿಕ ಗೊಬ್ಬರಗಳನ್ನು ಬಳಸುತ್ತಿಲ್ಲ. ಮನೆಯಲ್ಲಿ ಸಿಗುವ ತರಕಾರಿ ತ್ಯಾಜ್ಯಗಳನ್ನೇ ಗೊಬ್ಬರವನ್ನಾಗಿ ಉಪಯೋಗಿಸುತ್ತಿದ್ದಾರೆ. ಇದರ ಜೊತೆಗೆ ವಾರಣಾಸಿಯ ತಾರಸಿಯ ಎರೆಹುಳು ಗೊಬ್ಬರವನ್ನು ಇವರು ಗಿಡಗಳಿಗೆ ಬಳಸುತ್ತಿದ್ದಾರೆ. ಒಟ್ಟಿನಲ್ಲಿ ಮನೆಯ ಉತ್ಪತ್ತಿಯಾಗುವ ಹಸಿ ಕಸ ಸಂಪೂರ್ಣ ಸದ್ಬಳಕೆ ಮಾಡಿಕೊಂಡು ಕೇವಲ ಒಣ ಕಸವನ್ನು ಮಾತ್ರ ನಗರಸಭೆ ತ್ಯಾಜ್ಯ ಸಂಗ್ರಹಣ ವಾಹನಕ್ಕೆ ನೀಡುತ್ತಿದ್ದಾರೆ.

ಗಿಡಗಳ ಜೊತೆ ಪ್ರೀತಿ ಬೇಕು
ನಾವು ಗಿಡ ನೆಟ್ಟು ಬಿಟ್ಟರೆ ಸಾಲದು ಅದರ ಬಗ್ಗೆ ಪ್ರೀತಿ ಬೇಕು. ಪ್ರತಿ ದಿನ ಗಿಡಗಳ ಬಳಿಗೆ ಹೋಗಿ ಅದರ ಆರೈಕೆ ಮಾಡಬೇಕು. ಗಿಡಗಳಿಗೆ ಎಷ್ಟು ಬೇಕೋ ಅಷ್ಟೆ ನೀರು ಕೊಡಬೇಕು. ಬಹುತೇಕ ಕಡೆ ಡ್ರಿಪ್ಸ್ ಹಾಕಿರುತ್ತಾರೆ. ಆದರೆ ಗಿಡ ಬಳಿಕಗೆ ಹೋಗದ ಕಾರಣ ಅದು ಫಲ ಬಿಡುವುದಿಲ್ಲ. ಈ ನಿಟ್ಟಿನಲ್ಲಿ ದಿನಕ್ಕೆ ಒಮ್ಮೆಯಾದರೂ ಗಿಡದ ಬಳಿಗೆ ಹೋಗಬೇಕು. ಈ ಪ್ರೀತಿ ಬೆಳೆಸಿದರೆ ಗಿಡಗಳು ಫಲ ಹೆಚ್ಚು ಕೊಡುತ್ತವೆ. ಪ್ರಫುಲ್ಲಾ ರೈ

LEAVE A REPLY

Please enter your comment!
Please enter your name here