ಇಡ್ಕಿದು ಸೇವಾಸಹಕಾರಿ ಸಂಘದಲ್ಲಿ ಉದ್ಯೋಗ ನೈಪುಣ್ಯ ತರಬೇತಿ ಶಿಬಿರ ಉದ್ಘಾಟನೆ

0

  • ನಮ್ಮನ್ನು ನಾವು ಸಂಪೂರ್ಣ ತೊಡಗಿಸಿಕೊಂಡಾಗ ವ್ಯಕ್ತಿತ್ವ ವಿಕಸನ ಸಾಧ್ಯ: ಎಸ್.ಆರ್. ರಂಗಮೂರ್ತಿ

 

ವಿಟ್ಲ: ಕೋಟಿ ಕೋಟಿ ಉದ್ಯೋಗ ಸೃಷ್ಠಿಸುವ ಇರಾದೆ ನಮ್ಮ ಪ್ರಧಾನಿ ನರೇಂದ್ರ ಮೋದಿಯವರದ್ದಾಗಿದೆ. ಉದ್ಯೋಗ ಸೃಷ್ಟಿಯೆಂದರೆ ಅದು ಎಲ್ಲಾ ಸರಕಾರಿ ಉದ್ಯೋಗಗಳೇ ಅಲ್ಲಾ ಇಂತಹ ಸ್ವಉದ್ಯೋಗಗಳೂ ಸೇರಿದೆ. ಸ್ವ ಉದ್ಯೋಗ ಎಂದರೆ ನಮ್ಮ ಕಾಲ ಮೇಲೆ ನಾವು ನಿಲ್ಲುವಂತದ್ದು. ನಮ್ಮನ್ನು ನಾವು ಸಂಪೂರ್ಣವಾಗಿ ತೊಡಗಿಸಿಕೊಂಡು ಈ ಶಿಬಿರದಲ್ಲಿ ಭಾಗವಹಿಸಬೇಕು. ಆಗ ನಮ್ಮ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಸದಸ್ಯ ಎಸ್. ಆರ್. ರಂಗಮೂರ್ತಿ ಹೇಳಿದರು.

ಇಡ್ಕಿದು ಸೇವಾ ಸಹಕಾರಿ ಸಂಘ, ಅಮೃತ ಸಿಂಚನ ರೈತ ಸೇವಾ ಒಕ್ಕೂಟ, ಇಡ್ಕಿದು ಇದರ ವತಿಯಿಂದ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು, ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜು ಪುತ್ತೂರು ಇವರ ಸಹಯೋಗದಲ್ಲಿ ಮೇ.೨೬ರಂದು ಇಡ್ಕಿದು ಸೇವಾಸಹಕಾರಿ ಸಂಘದ ಉರಿಮಜಲು ಕೇಂದ್ರ ಕಚೇರಿಯ ಶತಾಮೃತ ಸಂಕೀರ್ಣದಲ್ಲಿ ನಡೆದ ಉದ್ಯೋಗ ನೈಪುಣ್ಯ ತರಬೇತಿ ಶಿಬಿರವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ನರೇಂದ್ರಮೋದಿಯವರು ಕೇವಲ ನಮ್ಮ ದೇಶಕ್ಕೆ ಮಾತ್ರ ಪ್ರಧಾನಿಯಲ್ಲ. ಜಗತ್ತಿನ ಓರ್ವ ನಾಯಕನಾಗಿ ಹೊರಹೊಮ್ಮಿದ್ದಾರೆ. ಇದೊಂದು ವಿಶಿಷ್ಠ ಕಾರ್ಯಕ್ರಮವಾಗಿದೆ. ನಮ್ಮ ವಿಕಾಸದ ಉzಶ ನಮ್ಮಲ್ಲಿರಬೇಕು. ಭಾಗ್ಯದ ಬಾಗಿಲಿನ ಕದ ತಟ್ಟುವ ಕೆಲಸ ನಮ್ಮಿಂದಲೇ ಆಗಬೇಕು. ಅವಕಾಶವನ್ನು ಸದುಪಯೋಗ ಮಾಡಿಕೊಳ್ಳುವ ಜಾಣ್ಮೆ ನಮ್ಮಲ್ಲಿರಬೇಕು. ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿ ಬದುಕನ್ನು ಭದ್ರವಾಗಿಸುವ ಕೆಲಸ ನಿಮ್ಮಿಂದಾಗಲಿ. ಎಲ್ಲರಿಗೂ ಶುಭವಾಗಲಿ ಎಂದರು.


ಮುಖ್ಯ ಅತಿಥಿಯಾಗಿ ಆಗಮಿಸಿದ ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್ ನ ಸಂಚಾಲಕರಾದ ಸಿ. ಮಹಾದೇವ ಶಾಸ್ತ್ರಿ ಮಣಿಲರವರು ಮಾತನಾಡಿ ಯಾವುದೇ ವಿಚಾರದಲ್ಲಿ ತರಬೇತಿ ನಡೆಯುತ್ತಿದ್ದಾಗ ನಿಮಗೆ ಯಾವುದೇ ರೀತಿಯ ಸಂಶಯಗಳಿದ್ದರೆ ಕೂಡಲೇ ಸರಿಪಡಿಸಿಕೊಳ್ಳಿ. ಇದೀಗ ವಿದ್ಯಾವ್ಯವಸ್ಥೆ ಮನೆಬಾಗಿಲಿಗೆ ತಲುಪುವಂತಾಗಿದೆ. ನಮ್ಮ ವಿವೇಕಾನಂದ ಪಾಲಿಟೆಕ್ನಿಕ್‌ನ ಮುಖಾಂತರ ಹಲವರಿಗೆ ಉದ್ಯೋಗ ಒದಗಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ಇದೊಂದು ಬಹಳ ಒಳ್ಳೆಯ ಕಾರ್ಯಕ್ರಮವಾಗಿದೆ. ಇದರ ಸದುಪಯೋಗವನ್ನು ಎಲ್ಲರೂ ಮಾಡಿಕೊಳ್ಳಿ ಎಂದರು.


ಇಡ್ಕಿದು ಸೇವಾಸಹಕಾರಿ ಸಂಘದ ಅಧ್ಯಕ್ಷರಾದ ಸುಧಾಕರ್ ಶೆಟ್ಟಿ ಬಿ.ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಇಡ್ಕಿದು ಸುದೃಢ, ಸಮೃದ್ದ ಗ್ರಾಮವಾಗಿದೆ. ಗ್ರಾಮೀಣ ಜನರ ಜೀವನಾಡಿಯಾಗಿ ಇಡ್ಕಿದು ಸೇವಾ ಸಹಕಾರಿ ಸಂಘ ಕಾರ್ಯನಿರ್ವಹಿಸುತ್ತಿದೆ. ಬಾಡಿಗೆ ಕಟ್ಟಡಲ್ಲಿರುವ ಕುಳ ಶಾಖೆಗೆ ಸುಸಜ್ಜಿತ ಕಟ್ಟಡ ನಿರ್ಮಾಣ ಕೆಲಸ ನಡೆಯುತ್ತಿದ್ದು, ಶೀಘ್ರದಲ್ಲಿ ಅದು ಲೋಕಾರ್ಪಣೆ ಗೊಳ್ಳಲಿದೆ. ಆರ್ಥಿಕ ಚಟುವಟಿಕೆಯೊಂದಿಗೆ ಸಾಮಾಜಿಕವಾಗಿಯೂ ಜನರನ್ನು ಮೇಲಕ್ಕೆತ್ತುವ ಕಾರ್ಯ ನಿರಂತರವಾಗಿ ನಮ್ಮ ಸಹಕಾರಿಯಿಂದ ನಡೆಯುತ್ತಾ ಬರುತ್ತಿದೆ ಎಂದರು.

 

ಆರೋಗ್ಯಾಮೃತ ಯೋಜನೆಯ ಕುರಿತಾಗಿ ತಜ್ಞ ವೈದ್ಯರೊಂದಿಗೆ ಸಭೆ ನಡೆಸಲಾಗಿದ್ದು, ಮುಂದಿನ ದಿನಗಳಲ್ಲಿ ಅದು ಕಾರ್ಯ ರೂಪಕ್ಕೆ ತರಲಾಗುವುದು. ಇದೀಗಾಗಲೇ ಆರೋಗ್ಯಾಮೃತ ಯೋಜನೆಯಡಿಯಲ್ಲಿ ಸುಮಾರು ಐದು ಕುಟುಂಬಗಳಿಗೆ ಸಹಾಯವನ್ನು ಮಾಡಲಾಗಿದೆ. ನಮ್ಮ ನೂತನ ಕಟ್ಟಡದಲ್ಲಿ ಆರೋಗ್ಯ ಕೇಂದ್ರ ಮುಂದಿನ ದಿನಗಳಲ್ಲಿ ಕಾರ್ಯಾರಂಭಗೊಳ್ಳಲಿದೆ. ಬಡ ವಿದ್ಯಾರ್ಥಿಗಳ ವಿದ್ಯಾರ್ಜನೆಗಾಗಿ ವಿದ್ಯಾಮೃತ ಯೋಜನೆಯನ್ನು ಜಾರಿಗೆ ತರಲಾಗುವುದು. ಆತ್ಮನಿರ್ಭರಭಾರತ ನಿರ್ಮಾಣ ಇಲ್ಲಿಂದಲೇ ಆರಂಭವಾಗಬೇಕು. ಶಿಬಿರಾರ್ಥಿಗಳಿಗೆ ಬೇಕಾದ ಎಲ್ಲಾ ಸಹಕಾರವನ್ನು ನಾವು ನೀಡಲು ಬದ್ದರಾಗಿದ್ದೇವೆ. ಸೇವಾ ಚಟುವಟಿಕೆ ನಡೆಸುವ ನಮ್ಮ ಸಂಸ್ಥೆಗೆ ನಿಮ್ಮೆಲ್ಲರ ಸಹಕಾರ ಅಗತ್ಯ. ನಿಮ್ಮ ಪ್ರೇರಣೆಯೇ ನಮ್ಮ ಯಶಸ್ಸಿನ ಮೆಟ್ಟಿಲು ಎಂದರು. ಅಮೃತ ಸಿಂಚನ ರೈತ ಸೇವಾ ಒಕ್ಕೂಟದ ಅಧ್ಯಕ್ಷರಾದ ಪ್ರಕಾಶ್ ಕೆ. ಎಸ್. ಉರಿಮಜಲು ಸ್ವಾಗತಿಸಿ ಗ್ರಾಮದ ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಈ ಉದ್ಯೋಗ ನೈಪುಣ್ಯ ತರಬೇತಿ ಶಿಬಿರವನ್ನು ಹಮ್ಮಿಕೊಂಡಿzವೆ ಎಂದರು. ಉಪಾಧ್ಯಕ್ಷರಾದ ರಾಮ್ ಭಟ್, ಅಮೃತ ಸಿಂಚನ ರೈತ ಸೇವಾ ಒಕ್ಕೂಟದ ಉಪಾಧ್ಯಕ್ಷ ಕೇಶವ ಪಾಂಡೇಲು ಅತಿಥಿಗಳಿಗೆ ಶಾಲು ನೆನಪಿನ ಕಾಣಿಕೆ ನೀಡಿ ಸ್ವಾಗತಿಸಿದರು. ಜಯಲಕ್ಷ್ಮಿ ವೈಯ್ಯಕ್ತಿಕ ಗೀತೆ ಹಾಡಿದರು. ಇಡ್ಕಿದು ಸೇವಾ ಸಹಕಾರಿ ಸಂಘ ದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ನಾಯ್ಕ್ ವಂದಿಸಿದರು. ಸಿಬ್ಬಂದಿ ಈಶ್ವರ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ಶಿಬಿರವು ಮೇ.೩೧ರ ವರೆಗೆ ನಡೆಯಲಿದೆ.

LEAVE A REPLY

Please enter your comment!
Please enter your name here