ಐತ್ತೂರು ಗ್ರಾಮ ಪಂಚಾಯತ್ ಸಾಮಾನ್ಯ ಸಭೆ

0

  • ಪಂಚಾಯತ್ ಕಛೇರಿಗೆ ಬಂದರೂ ಸಭೆಗೆ ಬಾರದ ಉಪಾಧ್ಯಕ್ಷರ ಸಹಿತ ಸದಸ್ಯರ ಮನವೊಲಿಕೆ
  • ಉಪಾಧ್ಯಕ್ಷರು, ಸದಸ್ಯರ ಗಮನಕ್ಕೆ ತಾರದೆ ಪಂಚಾಯತ್ ಆವರಣದಲ್ಲಿ ಶೆಡ್ ನಿರ್ಮಾಣ ಆರೋಪ
  • ಉಪಾಧ್ಯಕ್ಷರು ಸೇರಿದಂತೆ ಐವರು ಸದಸ್ಯರಿಂದ ಸಾಮಾನ್ಯ ಸಭೆಗೆ ಪತ್ರ ಸಲ್ಲಿಕೆ

ಕಡಬ: ಉಪಾಧ್ಯಕ್ಷರು ಹಾಗೂ ಸದಸ್ಯರ ಗಮನಕ್ಕೆ ತಾರದೆ ಪಂಚಾಯತ್ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಅಲ್ಲದೆ, ಅಧ್ಯಕ್ಷರು ಇತರ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿ ಕಳೆದ ಬಾರಿ ಉಪಾಧ್ಯಕ್ಷರು ಹಾಗೂ ಸದಸ್ಯರು ಸಾಮಾನ್ಯ ಸಭೆಗೆ ಗೈರು ಹಾಜರಾಗುವುದರ ಮೂಲಕ ಮುಂದೂಡಲ್ಪಟ್ಟಿದ್ದ ಐತ್ತೂರು ಗ್ರಾ.ಪಂ. ಸಾಮಾನ್ಯ ಸಭೆ ಮೇ.27ರಂದು ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ಯಾಮಲಾ ಅಧ್ಯಕ್ಷತೆ ವಹಿಸಿದ್ದರು.


ಸಭೆ 11 ಗಂಟೆಗೆ ನಿಗದಿಯಾಗಿದ್ದು ಈ ವೇಳೆ ಅಧ್ಯಕ್ಷೆ ಶ್ಯಾಮಲಾ, ಸದಸ್ಯರಾದ ಈರೇಶ್ ಗೌಡ, ವಿ.ಯಂ. ಕುರಿಯನ್, ಪ್ರೇಮಾ, ಮನಮೋಹನ ಗೌಡ ಗೊಳ್ಯಾಡಿ ಮತ್ತು ಪಿಡಿಒ ಸುಜಾತಾ ಉಪಸ್ಥಿತರಿದ್ದರು. ಇದೇ ವೇಳೆ ಪಂಚಾಯತ್ ಕಛೇರಿಗೆ ಉಪಾಧ್ಯಕ್ಷ ರೋಹಿತ್, ಸದಸ್ಯರಾದ ವತ್ಸಲ, ಧನಲಕ್ಷ್ಮಿ, ಉಷಾ, ನಾಗೇಶ್ ಕೋಕಳ ಅವರು ಆಗಮಿಸಿದ್ದರೂ ಸಭೆಗೆ ಆಗಮಿಸಲಿಲ್ಲ. ಸುಮಾರು 20 ನಿಮಿಷ ಕಳೆದರೂ ಉಪಾಧ್ಯಕ್ಷರು ಸಹಿತ ಐವರು ಸದಸ್ಯರು ಸಭೆಗೆ ಬರಲಿಲ್ಲ. ಈ ವೇಳೆ ಕೋರಂ ಕೊರತೆಯಿಂದ ಸಭೆ ಮುಂದೂಡುವ ಹಂತಕ್ಕೆ ಬಂದಾಗ ಪಂಚಾಯತ್ ಕಛೇರಿಯಲ್ಲಿ ಕುಳಿತಿರುವ ಉಪಾಧ್ಯಕ್ಷರು ಸಹಿತ ಸದಸ್ಯರನ್ನು ಮಾತುಕತೆ ನಡೆಸಿ ಸಭೆಗೆ ಕರೆ ತರುವಂತೆ ಪಿ.ಡಿ.ಒ ಸುಜಾತಾ ಅವರು ಸದಸ್ಯರಾದ ಮನಮೋಹನ ಗೊಳ್ಯಾಡಿ ಹಾಗೂ ಈರೇಶ್ ಅವರಲ್ಲಿ ಹೇಳಿದರು. ಪಂಚಾಯತ್ ಕಛೇರಿಗೆ ತೆರಳಿದ ಇಬ್ಬರು ಸದಸ್ಯರು ಉಪಾಧ್ಯಕ್ಷರು ಹಾಗೂ ನಾಲ್ವರು ಸದಸ್ಯರನ್ನು ಮನವೊಲಿಸಿ ಸಭೆಗೆ ಕರೆ ತರುವಲ್ಲಿ ಯಶಸ್ವಿಯಾದರು. ಬಳಿಕ ಸಭೆ ಪ್ರಾರಂಭಿಸಲಾಯಿತು. ಸಭೆಗೆ ಪ್ರವೇಶಿಸುವಾಗಲೇ ಉಪಾಧ್ಯಕ್ಷರು ಪತ್ರವೊಂದನ್ನು ಪಿಡಿಒ ಅವರಿಗೆ ಸಲ್ಲಿಸಿದರು. ಈ ಪತ್ರವನ್ನು ಸಭೆಯ ಕೊನೆಯಲ್ಲಿ ಓದುವ ಎಂದು ಹೇಳಿ ಟೇಬಲ್ ಮೇಲೆ ಪಿಡಿಓ ಇಟ್ಟುಕೊಂಡರು. ಬಳಿಕ ಸಭೆ ನಡೆಸಲಾಯಿತು. ಸಭೆಯಲ್ಲಿ ವಸತಿ ಮನೆಗಳ ಹಂಚಿಕೆ ಬಗ್ಗೆ ಮಾಹಿತಿ, ಜಮಾ ಖರ್ಚುಗಳ ವಿವರಣೆ, ಮುಂದಿನ ಕ್ರಿಯಾ ಯೋಜನೆಗಳ ಬಗ್ಗೆ ಚರ್ಚೆ ಮತ್ತು ಕೆಲವೊಂದು ಕಾಮಗಾರಿಗಳ ಚರ್ಚೆ ನಡೆಯಿತು.

ಚರ್ಚೆಯ ಮಧ್ಯದಲ್ಲಿ ಉಪಾಧ್ಯಕ್ಷರು ತನ್ನ ಪತ್ರವನ್ನು ಓದಬೇಕೆಂದು ಹೇಳಿದರು. ಇದಕ್ಕೆ ಪಿ.ಡಿ.ಒ ಸುಜಾತ ಅವರು ಉತ್ತರಿಸಿ ಸಭೆಯ ಕೊನೆಯಲ್ಲಿ ಓದುವ ಎಂದು ಹೇಳಿದರು. ಅಂತೆಯೇ ಸಭೆಯ ಕೊನೆಯಲ್ಲಿ ಉಪಾಧ್ಯಕ್ಷರು ನೀಡಿದ ಪತ್ರವನ್ನು ಓದಲಾಯಿತು. ಇದೇ ವೇಳೆ ಮಧ್ಯಪ್ರವೇಶಿಸಿದ ಪಿ.ಡಿ.ಒ ಅವರು ಈ ಚರ್ಚೆಯ ವಿಷಯ ಪತ್ರಿಕೆಯಲ್ಲಿ ಬರುವುದು ಬೇಡ ಅದಕ್ಕಾಗಿ ಈಗ ಈ ವಿಷಯದ ಬಗ್ಗೆ ಚರ್ಚೆ ಬೇಡ ಎಂದು ಹೇಳಿ ವಂದನಾರ್ಪಣೆ ಮಾಡುವಂತೆ ಸಿಬ್ಬಂದಿಗೆ ಸೂಚನೆ ನೀಡಿದರು.

ಉಪಾಧ್ಯಕ್ಷರು, ಸದಸ್ಯರ ಗಮನಕ್ಕೆ ತಾರದೆ ಪಂಚಾಯತ್ ಆವರಣದಲ್ಲಿ ಶೆಡ್ ನಿರ್ಮಾಣ ಆರೋಪ

ಗ್ರಾ.ಪಂ. ಉಪಾಧ್ಯಕ್ಷ ರೋಹಿತ್ ಅವರು ಪಿ.ಡಿ.ಒ ಅವರಿಗೆ ನೀಡಿದ ಪತ್ರದಲ್ಲಿ ‘ಉಪಾಧ್ಯಕ್ಷರು ಮತ್ತು ಐದು ಜನ ಸದಸ್ಯರ ಅಭಿಪ್ರಾಯ, ಪಂಚಾಯತ್ ಉಪಾಧ್ಯಕ್ಷರು ಹಾಗೂ ಸದಸ್ಯರ ಗಮನಕ್ಕೆ ಬಾರದೆ ಪಂಚಾಯತ್ ವಠಾರದಲ್ಲಿ ಶೆಡ್ ನಿರ್ಮಿಸಿರುವುದರಿಂದ ಪ್ರಸ್ತುತ ಕ್ರಿಯಾ ಯೋಜನೆಯಲ್ಲಿ ಹಣ ಮೀಸಲಿಡಬಾರದು. ಪಂಚಾಯತ್ ಆವರಣ ಗೋಡೆಗೆ ಬಳಸಿರುವ ಕೆಂಪು ಕಲ್ಲು 2ನೇ ದರ್ಜೆಯದ್ದು ಆಗಿರುವುದರಿಂದ ಅದಕ್ಕೆ ಹಣ ಬಿಡುಗಡೆ ಮಾಡಬಾರದು. ಕ್ರಿಯಾ ಯೋಜನೆ ಮಾಡುವಾಗ 2ನೇ ವಾರ್ಡ್ ನಲ್ಲಿ ಹಾಗೂ ಸದಸ್ಯರೋರ್ವರ ಭಾಗಕ್ಕೆ ಹಣ ಮೀಸಲಿಡುವುದರಿಂದ ಈ ಬಾರಿ ಸದಸ್ಯರಾದ ಧನಲಕ್ಷ್ಮಿ ಹಾಗೂ ಜಯಲಕ್ಷ್ಮಿ ಅವರುಗಳು ಸೂಚಿಸಿದ ಭಾಗಕ್ಕೆ ಹಣ ಮೀಸಲು ಇರಿಸಬೇಕು, ಸಾಮಾನ್ಯ ಸಭೆಯ ನಿರ್ಣಯ ಪ್ರತಿಯನ್ನು ಸದಸ್ಯರಿಗೆ ನೀಡಬೇಕು, ಪಂಚಾಯತ್ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿ ನಡೆಸಿದರೂ ಅದನ್ನು ಮುಂಚಿತವಾಗಿ ಉಪಾಧ್ಯಕ್ಷರಿಗೆ ಲಿಖಿತ ಮಾಹಿತಿ ನೀಡಬೇಕು’ ಎಂದು ಉಲ್ಲೇಖಿಸಲಾಗಿತ್ತು.

ಪತ್ರಿಕೆಯವರು ಸಭೆಯಿಂದ ಹೊರ ಹೋಗಿ!
ಪಿ.ಡಿ.ಒ ಮತ್ತು ಅಧ್ಯಕ್ಷರಿಂದ ಒತ್ತಡ

ಸಾಮಾನ್ಯ ಸಭೆಯ ವರದಿಗಾಗಿ ಸಭೆಗೆ ಹೋಗಿದ್ದ ಪತ್ರಕರ್ತರಲ್ಲಿ ಸಭೆಯ ಪ್ರಾರಂಭದಿಂದಲೂ ಸಾಮಾನ್ಯ ಸಭೆಯ ವಿಚಾರ ಜಾಸ್ತಿ ಹಾಕಬೇಡಿ ಎಂದು ಹೇಳುತ್ತಿದ್ದ ಪಿ.ಡಿ.ಒ ಸುಜಾತ ಅವರು ಸಭೆಯ ಕೊನೆಗೆ ಚರ್ಚೆಗೆ ಇಟ್ಟಿದ್ದ ಉಪಾಧ್ಯಕ್ಷರ ಪತ್ರವನ್ನು ವಂದನಾರ್ಪಣೆಯ ಬಳಿಕ ಚರ್ಚೆ ಮಾಡುವ ಎಂದು ಹೇಳಿ ತರಾತುರಿಯಲ್ಲಿ ವಂದನಾರ್ಪಣೆ ಮಾಡಿಸಿದರಲ್ಲದೆ ರಾಷ್ಟ್ರಗೀತೆ ಹಾಡಿ ಸಭೆ ಮುಕ್ತಾಯವಾಯಿತು ಎಂದು ಹೇಳಿದರು. ಆದರೆ ಉಪಾಧ್ಯಕ್ಷರು ನೀಡಿದ ಪತ್ರದ ಬಗ್ಗೆ ಚರ್ಚೆ ಇರುವ ಕಾರಣ ಪತ್ರಕರ್ತರು ಅಲ್ಲಿಯೇ ಕುಳಿತುಕೊಂಡಿದ್ದರು. ಇದನ್ನು ಗಮನಿಸಿದ ಪಿ.ಡಿ.ಒ ಸುಜಾತ ಹಾಗೂ ಅಧ್ಯಕ್ಷೆ ಶ್ಯಾಮಲ ಅವರು ನೀವು ಹೋಗಿ ಸಭೆಯ ಚರ್ಚೆಯ ವಿಷಯಗಳು ಪತ್ರಿಕೆಯಲ್ಲಿ ಬರುವುದು ಬೇಡ, ಹೋಗಿ ಎಂದು ಹೇಳಿದರು. “ನಾನು ಸಭೆಯಿಂದ ಹೋಗಬೇಕಂತೆ ನೀವೇನು ಹೇಳ್ತಿರಿ” ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಇತರ ಸದಸ್ಯರಲ್ಲಿ ವರದಿಗಾರ ಪ್ರಶ್ನಿಸಿದಾಗ ಇಲ್ಲ, ಇಲ್ಲ ನಾವೇನು ನಿಮ್ಮನ್ನು ಹೋಗಿ ಅಂತಾ ಹೇಳ್ತಾ ಇಲ್ಲ ಎಂದು ಉತ್ತರಿಸಿದರು. ಬಳಿಕ ಪತ್ರಕರ್ತರು ಸಭೆಯಿಂದ ತೆರಳಿದರು. ನಂತರ ಕೆಲವೊಂದು ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು ಎಂದು ಮಾಹಿತಿ ಲಭ್ಯವಾಗಿದೆ.

LEAVE A REPLY

Please enter your comment!
Please enter your name here