ಮೇ.31: ಆರ್‌ಟಿಓ ಆನಂದ ಗೌಡ ನಿವೃತ್ತಿ

0

ಪುತ್ತೂರು: ಪುತ್ತೂರಿನಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿರುವ ಆನಂದ ಗೌಡರು ಮೇ.31ರಂದು ಕರ್ತವ್ಯದಿಂದ ವಯೋನಿವೃತ್ತಿ ಹೊಂದಲಿದ್ದಾರೆ. ಮೂಲತಃ ಈಶ್ವರಮಂಗಲದ ನಿವಾಸಿಯಾಗಿದ್ದು, ಪ್ರಸ್ತುತ ಉಡುಪಿಯಲ್ಲಿ ವಾಸವಾಗಿರುವ ಆನಂದ ಗೌಡರು 1990ರಲ್ಲಿ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಾರಿಗೆ ಇಲಾಖೆಗೆ ಸೇರ್ಪಡೆಯಾಗಿ ಬೆಂಗಳೂರು ಕೋರಮಂಗಲ ಆರ್‌ಟಿಒ ಕಚೇರಿಯಲ್ಲಿ ಸೇವೆ ಆರಂಭಿಸಿದ್ದರು. ಬಳಿಕ ಮೈಸೂರು ಬೆಂಗಳೂರು, ಜಯನಗರ, ಇಂದಿರಾನಗರ, ಬೆಳಗಾಂ, ಚಿಕ್ಕೋಡಿ, ರಾಮನಗರ, ಕೆ.ಆರ್.ಪುರಂ, ಅತ್ತಿಬೆಲೆ, ಮಂಡ್ಯ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಈ ಮಧ್ಯೆ 1997ರಲ್ಲಿ ಪುತ್ತೂರಿನಲ್ಲಿ ಮೋಟಾರು ವಾಹನ ತನಿಖಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಒಂದೂವರೆ ವರ್ಷದ ಬಳಿಕ ಮೋಟಾರು ವಾಹನ ಹಿರಿಯ ನಿರೀಕ್ಷಕರಾಗಿ ಪದೋನ್ನತಿ ಹೊಂದಿ ಜಯನಗರ ಆರ್‌ಟಿಒ ಕಚೇರಿಗೆ ವರ್ಗಾವಣೆಗೊಂಡಿದ್ದರು. ನಂತರ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ ಪದೋನ್ನತಿ ಪಡೆದು ಬೆಂಗಳೂರಿನ ಕೋರಮಂಗಲ ಮತ್ತು ಅತ್ತಿಬೆಲೆಯಲ್ಲಿ ಕಾರ್ಯನಿರ್ವಹಿಸಿರುವುದಲ್ಲದೆ ಹೆಚ್ಚುವರಿಯಾಗಿ ಮಂಡ್ಯ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ ಎರಡು ವರ್ಷ ಕರ್ತವ್ಯ ನಿರ್ವಹಿಸಿದ್ದರು. 2018ರಲ್ಲಿಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ ಪೂರ್ಣಾವಧಿಗೆ ನೇಮಕಗೊಂಡು ಪುತ್ತೂರಿಗೆ ವರ್ಗಾವಣೆಗೊಂಡಿದ್ದರು.

ಪುತ್ತೂರಿನ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ರೆಕಾರ್ಡ್ ರೂಮ್‌ನ ಸಮಸ್ಯೆ, ನೀರಿನ ಸಮಸ್ಯೆಯನ್ನು ನಿವಾರಿಸಿರುತ್ತಾರೆ. ಕಚೇರಿ ಕಟ್ಟಡದಲ್ಲಿ ಮಳೆನೀರು ಕೊಯ್ಲು ಯೋಜನೆಯನ್ನು ಅನುಷ್ಠಾನಗೊಳಿಸುವ ಮೂಲಕ ನೀರಿಲ್ಲದೆ ಇದ್ದ ಬೋರ್‌ವೆಲ್ ಸಂಪೂರ್ಣ ಚಾರ್ಜ್ ಆಗುವಂತೆ ಮಾಡಿದ್ದಾರೆ. ಕಚೇರಿಯಲ್ಲಿ ರೆಕಾರ್ಡ್‌ಗಳನ್ನು ಇಡಲು ಸ್ಥಳಾವಕಾಶವೇ ಇರದ ಹಿನ್ನೆಲೆಯಲ್ಲಿ ಬಹಳಷ್ಟು ಪ್ರಯತ್ನಪಟ್ಟು ಸರ್ಕಾರಕ್ಕೆ ಮನವಿ ಸಲ್ಲಿಸಿ ಅನುದಾನ ಮಂಜೂರುಗೊಳಿಸಿ ಮೊದಲ ಮಹಡಿಯಲ್ಲಿ ರೆಕಾರ್ಡ್ ರೂಮ್ ಮಾಡಿ, ಕಟ್ಟಡವನ್ನು ನವೀಕರಿಸುವ ಕೆಲಸಗಳು ನಡೆಯುತ್ತಿದೆ.

2018ರಲ್ಲಿ ಪುತ್ತೂರಿಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ ಬಂದಾಗ 48 ಕೋಟಿ ರೂ. ರಾಜಸ್ವ ವಸೂಲಿ ಗುರಿಯಿತ್ತು. ಆ ವರ್ಷ ಶೇ.98ರಷ್ಟು ಗುರಿಯನ್ನು ಸಾಧಿಸಿದ್ದಾರೆ. 2020-21ನೇ ಸಾಲಿನಲ್ಲಿ ೫೦ ಕೋಟಿ ರೂ.ಗಳ ಗುರಿ ನೀಡಲಾಗಿತ್ತು. ಆ ಅವಧಿಯಲ್ಲಿ ಕೋವಿಡ್ ಕಾರಣದಿಂದ ನಿಗದಿತ ಗುರಿ ತಲುಪಲು ಸಾಧ್ಯವಾಗಲಿಲ್ಲ. ಆದರೂ ಶೇ.98ರಷ್ಟು ಗುರಿ ಸಾಧಿಸಿದ್ದಾರೆ. 2021-22ನೇ ಸಾಲಿಗೆ 52 ಕೋಟಿ ರೂ.ಗಳ ಟಾರ್ಗೆಟ್ ನೀಡಲಾಗಿದೆ. ಕೋವಿಡ್ ಎರಡನೇ ಅಲೆಯ ಕಾರಣದಿಂದ 93% ಆದಾಯವನ್ನು ಸಂಗ್ರಹಿಸಿರುತ್ತಾರೆ. ಇವರ ಅವಧಿಯಲ್ಲಿಯೇ ಬಿಹೆಚ್ ಸೀರೀಸ್ ನೋಂದಣಿಗೆ ಹೆಚ್ಚಿನ ಒತ್ತು ನೀಡಿರುತ್ತಾರೆ.

LEAVE A REPLY

Please enter your comment!
Please enter your name here