ಪೆರಾಬೆ ಗ್ರಾ.ಪಂ.ಸಾಮಾನ್ಯ ಸಭೆ : ಕುಡಿಯುವ ನೀರಿನ ಸ್ಥಾವರಗಳ ಮೀಟರ್ ಪ್ರತಿ ತಿಂಗಳು ಪರಿಶೀಲನೆಗೆ ಮೆಸ್ಕಾಂಗೆ ಮನವಿಗೆ ನಿರ್ಣಯ

0

ಪೆರಾಬೆ: ಪೆರಾಬೆ ಗ್ರಾ.ಪಂ.ನ ಕುಡಿಯುವ ನೀರಿನ ಸ್ಥಾವರಗಳ ಮೀಟರ್‌ಗಳನ್ನು ಪ್ರತಿ ತಿಂಗಳು ಪರಿಶೀಲನೆ ನಡೆಸುವಂತೆ ಮೆಸ್ಕಾಂಗೆ ಪತ್ರ ಬರೆಯಲು ಪೆರಾಬೆ ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಗಿದೆ.


ಸಭೆ ಗ್ರಾ.ಪಂ.ಅಧ್ಯಕ್ಷ ಮೋಹನ್‌ದಾಸ ರೈ ಪರಾರಿ ಅವರ ಅಧ್ಯಕ್ಷತೆಯಲ್ಲಿ ಮೇ 30ರಂದು ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಕುಡಿಯುವ ನೀರಿನ ಸ್ಥಾವರಗಳ ವಿದ್ಯುತ್ ಬಿಲ್ಲು ಪ್ರತಿ ತಿಂಗಳು ಏರು ಪೇರಾಗುತ್ತಿದೆ ಎಂಬ ವಿಚಾರ ಸಭೆಯಲ್ಲಿ ಪ್ರಸ್ತಾಪಗೊಂಡಿತು. ಈ ಬಗ್ಗೆ ಚರ್ಚೆ ನಡೆಸಿ ಕುಡಿಯುವ ನೀರಿನ ಸ್ಥಾವರಗಳ ಮೀಟರ್ ಪ್ರತಿ ತಿಂಗಳು ಪರಿಶೀಲನೆ ನಡೆಸುವಂತೆ ಮೆಸ್ಕಾಂಗೆ ಪತ್ರ ಬರೆಯಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಸ್ವಚ್ಛತೆಗೆ ಗಮನಕೊಡಬೇಕು:

ಸದಸ್ಯರಾದ ಕೃಷ್ಣ ವೈ ಹಾಗೂ ಸಿ.ಎಂ.ಫಯಾಝ್‌ರವರು ಮಾತನಾಡಿ, ಮನೆ ಬಾಡಿಗೆಗೆ ನೀಡುವ ಮಾಲಕರು, ಆ ಪರಿಸರದಲ್ಲಿ ಸ್ವಚ್ಛತೆಗೆ ಗಮನಕೊಡಬೇಕು. ಬಾಡಿಗೆದಾರರು ಘನತ್ಯಾಜ್ಯ ಮತ್ತು ದ್ರವ ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವುದು ಕಂಡು ಬರುತ್ತಿದೆ. ಇದರ ಬಗ್ಗೆ ಸೂಕ್ತ ಕ್ರಮ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಈ ಬಗ್ಗೆ ಚರ್ಚೆ ನಡೆದು ಮನೆ ಬಾಡಿಗೆಗೆ ನೀಡುವ ಮಾಲಕರಿಗೆ ನೋಟಿಸ್ ನೀಡಿ ಸೂಕ್ತ ಕ್ರಮ ಕೈಗೊಳ್ಳಲು ನಿರ್ಣಯಿಸಲಾಯಿತು. ಸ್ವಚ್ಛತೆ ಕಾಪಾಡುವಂತೆ ಹೋಟೆಲ್ ಮಾಲಕರಿಗೂ ನೋಟಿಸ್ ನೀಡುವುದೆಂದು ನಿರ್ಣಯಿಸಲಾಯಿತು.

ಜೂ.9: ನೀರು ನಿರ್ವಾಹಕರ ಸಭೆ

ಜೂ.9ರಂದು ಪೆರಾಬೆ ಹಾಗೂ ಕುಂತೂರು ಗ್ರಾಮದ ಕುಡಿಯುವ ನೀರಿನ ಸ್ಥಾವರಗಳ ನಿರ್ವಾಹಕರ ಸಭೆಯನ್ನು ಪೆರಾಬೆ ಗ್ರಾ.ಪಂ.ಸಭಾಂಗಣದಲ್ಲಿ ಕುಡಿಯುವ ನೀರಿನ ಸ್ಥಾವರಗಳ ಅಧ್ಯಕ್ಷ ಸದಾನಂದ ಕೆ.ರವರ ಅಧ್ಯಕ್ಷತೆಯಲ್ಲಿ ನಡೆಸುವುದೆಂದು ತೀರ್ಮಾನಿಸಲಾಯಿತು. ಉಪಾಧ್ಯಕ್ಷೆ ಸಂಧ್ಯಾ ಕೆ., ಸದಸ್ಯರಾದ ಸದಾನಂದ ಕೆ., ಕೃಷ್ಣ ವೈ, ಪಿ.ಜಿ.ರಾಜು, ಫಯಾಝ್ ಸಿ.ಎಂ., ಮಮತಾ, ಕುಮಾರ ಬಿ.ಕೆ., ಸುಶೀಲ, ಮೋಹಿನಿ, ವೇದಾವತಿ, ಕಾವೇರಿ, ಲೀಲಾವತಿ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಾಲಿನಿ ಕೆ.ಬಿ.,ಸ್ವಾಗತಿಸಿ, ಸರಕಾರದ ಸುತ್ತೋಲೆಗಳ ಬಗ್ಗೆ ಮಾಹಿತಿ ನೀಡಿದರು. ಗ್ರಾ.ಪಂ.ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here