ಉಪ್ಪಿನಂಗಡಿ: ಬೆಂಕಿ ಬಿದ್ದಿದ್ದ ಮನೆಯಿಂದ ಚಿನ್ನಾಭರಣ ಕಳವು-ತಡವಾಗಿ ಬೆಳಕಿಗೆ

0

ಉಪ್ಪಿನಂಗಡಿ: ಮೇ 16 ರಂದು ಮನೆಗೆ ಬೆಂಕಿ ಬಿದ್ದ ಪ್ರಕರಣದಲ್ಲಿ ಮನೆಯ ಕಪಾಟಿನಲ್ಲಿದ್ದ 2.50 ಲಕ್ಷ ರೂ ಮೊತ್ತದ ಚಿನ್ನಾಭರಣ ಕಳವಿಗೀಡಾದ ಕೃತ್ಯ ವಿಳಂಬವಾಗಿ ಬೆಳಕಿಗೆ ಬಂದಿದ್ದು, ಈ ಸಂಬಂಧ ಸೋಮವಾರದಂದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ತಾಲೂಕು ಕಣಿಯೂರು ಗ್ರಾಮದ ಮಲೆಂಗಲ್ ಎಂಬಲ್ಲಿನ ಆನಂದ ಮೂಲ್ಯ ಎಂಬವರ ಮನೆಗೆ ಮೇ 16ರಂದು ಬೆಂಕಿ ತಗುಲಿದ್ದು, ಸ್ಥಳೀಯರು ಸಕಾಲಿಕ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದರು. ಆದರೆ ಆ ವೇಳೆಗಾಗಲೇ ಮನೆಯಲ್ಲಿದ್ದ ಬಟ್ಟೆ ಬರೆ, ಕ್ಯಾಮರಾದ ಪರಿಕರಗಳು ಸುಟ್ಟು ಹೋಗಿದ್ದು, ಕಪಾಟಿನಲ್ಲಿದ್ದ ಚಿನ್ನ ಇಡುವ ಬಾಕ್ಸ್ ಮತ್ತು ದಾಖಲೆ ಪತ್ರಗಳು ಯಥಾ ಸ್ಥಿತಿಯಲ್ಲಿದ್ದವು. ಈ ಬಗ್ಗೆ ಸಮಾಧಾನ ಹೊಂದಿದ್ದ ಅವರು, ಮೇ 30 ರ ಸೋಮವಾರದಂದು ಎಲ್ಲಾ ವಸ್ತುಗಳನ್ನು ಒಪ್ಪವಾಗಿ ಜೋಡಿಸಿ ಇಡುವಾಗ ಚಿನ್ನ ಇಡುವ ಬಾಕ್ಸ್ ನೊಳಗಿದ್ದ ವಿವಿಧ ಆಭರಣಗಳು ಸೇರಿದಂತೆ ಒಟ್ಟು 2.50 ಲಕ್ಷ ಮೌಲ್ಯದ ಚಿನ್ನಾಭರಣವು ಕಳವಾಗಿರುವುದು ಕಂಡು ಬಂದಿದ್ದು, ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕದ್ದು ಬೆಂಕಿ ಹಚ್ಚಿದರೆ? ಅಥವಾ ನಂದಿಸಲು ಬಂದು ಕದ್ದರೆ ?:

ಆನಂದ ಮೂಲ್ಯರವರ ಮನೆಗೆ ಬೆಂಕಿ ತಗುಲಿದಾಗ ಮನೆಯ ಹೊರಗಡೆ ಇದ್ದ ಮನೆಯ ಮಂದಿಯ ಅನುಪಸ್ಥಿತಿಯಲ್ಲಿ ಸ್ಥಳೀಯರು ಬೆಂಕಿ ನಂದಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದರು. ಇದೀಗ ಅವರ ಮನೆಯ ಚಿನ್ನದ ಆಭರಣ ಇಡುವ ಪೆಟ್ಟಿಗೆಯಲ್ಲಿದ್ದ ಚಿನ್ನಾಭರಣ ನಾಪತ್ತೆಯಾಗಿರುವುದರಿಂದ ಮನೆಗೆ ಬೆಂಕಿ ತಗುಲಿದ ಪ್ರಕರಣವೇ ಇದೀಗ ನಾನಾ ಸಂಶಯಕ್ಕೆ ಕಾರಣವಾಗಿದೆ. ಚಿನ್ನಾಭರಣ ಕದಿಯಲು ಬಂದಾತ ತನ್ನ ಕೃತ್ಯವನ್ನು ಮರೆ ಮಾಚಲು ಮನೆಗೆ ಬೆಂಕಿ ಹಚ್ಚಿರುವ ಸಾಧ್ಯತೆ ಒಂದಾದರೆ, ಅಗ್ನಿ ಅವಘಡ ಸಂಭವಿಸಿದ ವೇಳೆ ಬೆಂಕಿ ನಂದಿಸುವ ಕಾರ್ಯಾಚರಣೆಗೆಂದು ಬಂದಿದ್ದ ವೇಳೆ ಚಿನ್ನಾಭರಣ ಕದಿಯಲಾಗಿರುವ ಸಾಧ್ಯತೆಯೂ ಕಂಡು ಬಂದಿದ್ದು, ಇದೀಗ ಪೊಲೀಸರು ವಿವಿಧ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here