ಬೆಂಗಳೂರಿಗೆ ಚಿಕಿತ್ಸೆಗೆ ಕರೆದೊಯ್ಯುತ್ತಿದ್ದ ಮಂಗಳೂರಿನ ಬಾಲಕಿ ನೆಲ್ಯಾಡಿಯಲ್ಲಿ ಸಾವು

0

ನೆಲ್ಯಾಡಿ: ಎರಡೂ ಕಿಡ್ನಿ ವೈಫಲ್ಯಗೊಂಡ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಆಂಬುಲೆನ್ಸ್‌ನಲ್ಲಿ ಬೆಂಗಳೂರಿಗೆ ಕರೆದೊಯ್ಯುತ್ತಿದ್ದ ಬಾಲಕಿ ನೆಲ್ಯಾಡಿಗೆ ತಲುಪುವ ವೇಳೆಗೆ ಆಂಬುಲೆನ್ಸ್‌ನಲ್ಲಿಯೇ ಸಾವಿಗೀಡಾದ ಘಟನೆ ಮೇ 31ರಂದು ನಡೆದಿದೆ.
ಮಂಗಳೂರು ತೊಕ್ಕೊಟ್ಟು ಸಮೀಪದ ಸೇವಂತಿಗುಡ್ಡೆ ನಿವಾಸಿ ರಮೇಶ್ ನಾಯ್ಕ್ ಹಾಗೂ ರೇವತಿ ದಂಪತಿಯ ಪುತ್ರಿ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ತೇಜಸ್ವಿನಿ(15ವ.)ಯವರ ಎರಡೂ ಕಿಡ್ನಿಗಳು ವೈಫಲ್ಯಗೊಂಡಿದ್ದು ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇಲ್ಲಿ ತೇಜಸ್ವಿನಿಗೆ ಡಯಾಲಿಸಿಸ್ ಚಿಕಿತ್ಸೆ ನಡೆಸಲಾಗುತ್ತಿದ್ದು ಆಕೆಗೆ ಬೇರೆ ಕಿಡ್ನಿ ಕಸಿ ಮಾಡಬೇಕೆಂದು ವೈದ್ಯರು ಸಲಹೆ ನೀಡಿದ್ದರು ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ತೇಜಸ್ವಿನಿ ಕುಟುಂಬವು ಮಗಳ ಚಿಕಿತ್ಸೆಗಾಗಿ ದಾನಿಗಳಲ್ಲಿ ನೆರವು ಯಾಚಿಸಿತ್ತು. ಕೆಲವರು ತೇಜಸ್ವಿನಿ ಚಿಕಿತ್ಸೆಗೆ ಸಹಕರಿಸಿದ್ದರು. ಈ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ತೇಜಸ್ವಿನಿಯನ್ನು ಮೇ 31ರಂದು ಬೆಳಿಗ್ಗೆ ಆಂಬುಲೆನ್ಸ್ ಮೂಲಕ ಮಂಗಳೂರಿನಿಂದ ಉಪ್ಪಿನಂಗಡಿ, ನೆಲ್ಯಾಡಿ ಮಾರ್ಗವಾಗಿ ಬೆಂಗಳೂರಿಗೆ ಕರೆದೊಯ್ಯಲಾಗುತ್ತಿತ್ತು. ಆದರೆ ದಾರಿಮಧ್ಯೆ ತೇಜಸ್ವಿನಿಗೆ ತೀವ್ರ ಉಸಿರಾಟದ ಸಮಸ್ಯೆ ಉಂಟಾಗಿ ಆರೋಗ್ಯ ಹದಗೆಟ್ಟಿತ್ತು. ಈ ಹಿನ್ನೆಲೆಯಲ್ಲಿ ನೆಲ್ಯಾಡಿಯಲ್ಲಿ ಖಾಸಗಿ ಆಸ್ಪತ್ರೆಯೊಂದರ ವೈದ್ಯರನ್ನು ಬರಮಾಡಿಕೊಂಡು ಆಂಬುಲೆನ್ಸ್‌ನಲ್ಲಿಯೇ ತೇಜಸ್ವಿನಿಯನ್ನು ತಪಾಸಣೆಗೊಳಪಡಿಸಲಾಗಿದೆ. ವೈದ್ಯರು ತಪಾಸಣೆ ವೇಳೆಗೆ ತೇಜಸ್ವಿನಿ ಮೃತಪಟ್ಟಿದ್ದರು ಎಂದು ವರದಿಯಾಗಿದೆ.

LEAVE A REPLY

Please enter your comment!
Please enter your name here