ರೈಲ್ವೇ ನಿಲ್ದಾಣ ಸಂಪರ್ಕಿಸುವ ಹಾರಾಡಿ ರಸ್ತೆ ಅಭಿವೃದ್ಧಿಗೆ ರೈಲ್ವೇ ಇಲಾಖೆಯಿಂದ ಹಸಿರು ನಿಶಾನೆ

0

  • ನಗರಸಭೆಗೆ ರೈಲ್ವೇ ಇಲಾಖೆಯಿಂದ ಎನ್‌ಒಸಿ


ಪುತ್ತೂರು:ಪುತ್ತೂರು ರೈಲ್ವೆ ನಿಲ್ದಾಣ ಸಂಪರ್ಕದ ಹಾರಾಡಿ ರಸ್ತೆ ಅಭಿವೃದ್ಧಿಗೆ ಕೊನೆಗೂ ರೈಲ್ವೇ ಇಲಾಖೆ ಹಸಿರು ನಿಶಾನೆ ತೋರಿದೆ.ರಸ್ತೆ ಅಭಿವೃದ್ಧಿಗೆ ಸಂಬಂಧಿಸಿ ನಗರಸಭೆಗೆ ನಿರಾಕ್ಷೇಪಣಾ ಪತ್ರ ನೀಡಿರುವುದು ಸಾರ್ವಜನಿಕರ ಬೇಡಿಕೆ ಈಡೇರುವ ನಿರೀಕ್ಷೆ ಹುಟ್ಟು ಹಾಕಿದೆ.ರಸ್ತೆ ಪೂರ್ಣ ಕಾಂಕ್ರಿಟೀಟಿಕರಣಗೊಳ್ಳಬೇಕೆಂದು ಸಾರ್ವಜನಿಕರ ಒತ್ತಾಯವೂ ಕೇಳಿ ಬರುತ್ತಿದೆ.


ಎರಡು ಕೋಟಿ ರೂ. ವೆಚ್ಚದಲ್ಲಿ ಆದರ್ಶ ರೈಲು ನಿಲ್ದಾಣವಾಗಿ ಮೇಲ್ದರ್ಜೆಗೇರಿರುವ ಪುತ್ತೂರು ರೈಲು ನಿಲ್ದಾಣ ಸುಂದರವಾಗಿ ಕಂಗೊಳಿಸುತ್ತಿದ್ದರೂ ಅದನ್ನು ಸಂಪರ್ಕಿಸಲು ಮಡಿವಾಳಕಟ್ಟೆ ಕಡೆಯಿಂದ ಒಂದು ರಸ್ತೆಯಿದ್ದರೆ, ಹಾರಾಡಿ ಕಡೆಯಿಂದ ಇನ್ನೊಂದು ರಸ್ತೆ ಇದೆ.ಈ ಎರಡು ವರ್ತುಲ ರಸ್ತೆಯ ಪೈಕಿ ಮಡಿವಾಳಕಟ್ಟೆಯವರೆಗೆ ಸಾಗಿ ಪುತ್ತೂರು ನಗರ ಸಂಪರ್ಕಿಸುವ ರಸ್ತೆಯನ್ನು ಐದು ವರ್ಷಗಳ ಹಿಂದೆ ರೈಲ್ವೆ ಇಲಾಖೆಯೇ ಕಾಂಕ್ರಿಟೀಕರಣ ಮಾಡಿತ್ತು.ಅದು ನಗರದಿಂದ ರೈಲು ನಿಲ್ದಾಣ ಸಂಪರ್ಕಿಸುವ ಪ್ರಧಾನ ರಸ್ತೆಯಾದ ಕಾರಣ ಆ ಕಾಮಗಾರಿಯನ್ನು ಪೂರ್ತಿಯಾಗಿ ರೈಲ್ವೆ ನಿರ್ವಹಿಸಿತ್ತು.ಆದರೆ ಹಾರಾಡಿ ರಸ್ತೆ ಸಂಪೂರ್ಣ ನಾದುರಸ್ತಿ ಹೊಂದಿ ಪುತ್ತೂರಿಗೆ ಬರುವ ಹೊರಗಿನ ನಾಗರಿಕರಿಗೆ ಸುಂದರ ಪುತ್ತೂರಿನ ಇನ್ನೊಂದು ಮುಖವನ್ನು ತೋರಿಸುವಂತಿತ್ತು.ಇಡೀ ವರ್ತುಲ ರಸ್ತೆಯ ಅರ್ಧಭಾಗವನ್ನು ರೈಲ್ವೆ ಇಲಾಖೆ ಅಭಿವೃದ್ಧಿಪಡಿಸಿದ ಮೇಲೆ ಉಳಿದರ್ಧ ಹಾಗೆಯೇ ಉಳಿದಿತ್ತು. ದಶಕಗಳ ಹಿಂದೆ ಡಾಮಾರೀಕರಣಗೊಂಡ ಈ ರಸ್ತೆ ಇತ್ತೀಚಿನ ವರ್ಷಗಳಲ್ಲಿ ಸಂಪೂರ್ಣ ಹದಗೆಟ್ಟು ಹೋಗಿದ್ದು, ಅಲ್ಲಲ್ಲಿ ಹೊಂಡ ಗುಂಡಿಗಳು ನಿರ್ಮಾಣಗೊಂಡು, ಇದು ನಗರದೊಳಗಿನ ರಸ್ತೆಯೇ ಎಂಬ ಪ್ರಶ್ನೆ ಮೂಡುವಂತಿದೆ.ಇದೀಗ ರೈಲ್ವೇ ನಿಲ್ದಾಣ ಸಂಪರ್ಕಿಸುವ ಹಾರಾಡಿ ರಸ್ತೆಯನ್ನೂ ಅಭಿವೃದ್ಧಿಗೊಳಿಸಲು ರೈಲ್ವೇ ಇಲಾಖೆ ನಗರಸಭೆಗೆ ನಿರಾಕ್ಷೇಪಣ ಪತ್ರ ನೀಡಿದೆ.ನಗರಸಭೆ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಅವರು ತನ್ನ ವಾರ್ಡ್‌ನ ಈ ರಸ್ತೆ ಅಭಿವೃದ್ಧಿಗೆ ಪ್ರಯತ್ನ ಪಡುತ್ತಿದ್ದಾರೆ.
ಮಳೆ ಮುಗಿದ ತಕ್ಷಣ ಅಭಿವೃದ್ಧಿ ಆರಂಭ: ರೈಲ್ವೇ ಇಲಾಖೆಯಿಂದ ಎನ್‌ಒಸಿ ಬಂದಿದ್ದ ಹಿನ್ನೆಲೆಯಲ್ಲಿ ರಸ್ತೆ ಅಭಿವೃದ್ಧಿಗೆ ಎಸ್ಟಿಮೇಟ್, ನಕ್ಷೆಯನ್ನು ರೈಲ್ವೇ ಇಲಾಖೆಗೆ ನೀಡಬೇಕು.ರಸ್ತೆಯ ಒಟ್ಟು ಉದ್ದ, ವೆಚ್ಚದ ಕುರಿತು ಎಸ್ಟಿಮೇಟ್ ಮಾಡಲಾಗುತ್ತಿದೆ.ಕಾಂಕ್ರೀಟ್ ರಸ್ತೆಗೆ ವೆಚ್ಚ ಹೆಚ್ಚಾಗುವುದರಿಂದ ಡಾಮರೀಕರಣಕ್ಕೆ ಆದ್ಯತೆ ಇದೆ.ಈ ನಿಟ್ಟಿನಲ್ಲಿ ಟೆಂಡರ್ ಪ್ರೊಸೆಸ್ ಮುಗಿಸಿ ಮಳೆಗಾಲ ಮುಗಿದ ತಕ್ಷಣ ಅಭಿವೃದ್ಧಿ ಕಾಮಗಾರಿ ಆರಂಭಗೊಳಿಸಲಾಗುತ್ತದೆ ಎಂದು ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್ ತಿಳಿಸಿದ್ದಾರೆ.


ಸದ್ಬಳಕೆಯಾಗದ ಎಂ.ಪಿ.ಫಂಡ್: ಹಾರಾಡಿಯಿಂದ ರೈಲ್ವೇ ನಿಲ್ದಾಣ ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೆ ಈ ಹಿಂದೆ ಸಂಸದರ ಅನುದಾನ ರೂ.೧.೫ ಕೋಟಿ ಮಂಜೂರುಗೊಂಡಿತ್ತು.ಆದರ್ಶ ರೈಲು ನಿಲ್ದಾಣದ ಕಾಮಗಾರಿ ವೇಳೆಯೇ ರೈಲ್ವೇ ಇಲಾಖೆಯಿಂದಲೇ ಈ ರಸ್ತೆ ಅಭಿವೃದ್ಧಿ ಆಗುವ ಸಾಧ್ಯತೆ ಇತ್ತು. ಆದರೆ ಕೋವಿಡ್ ಸಂದರ್ಭದಲ್ಲಿ ರೈಲ್ವೇ ಇಲಾಖೆ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ಸಿಗಲಿಲ್ಲ. ತಾಂತ್ರಿಕ ಕಾರಣದಿಂದ ಅನುದಾನ ಸದ್ಬಳಕೆಯಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.


ಹಿಂದೆ ಕಾಮಗಾರಿ ಬಾಕಿ ಆಗಿತ್ತು: ರೈಲು ನಿಲ್ದಾಣ ಸಂಪರ್ಕಿಸುವ ೨ ರಸ್ತೆಗಳು ಪುತ್ತೂರು ನಗರಕ್ಕೆ ವರ್ತುಲ ರಸ್ತೆಯಂತಿದ್ದು, ರೈಲು ಗ್ರಾಹಕರಿಗಿಂತ ಹೆಚ್ಚಾಗಿ ಇತರ ವಾಹನಗಳು ಸಂಚರಿಸುತ್ತವೆ. ಹೀಗಾಗಿ ರೈಲ್ವೆಯು ದೇಶದ ಇತರ ಕಡೆಗಳಂತೆ ಇಲ್ಲಿ ಕೂಡಾ ೫೦-೫೦ ಅನುದಾನ ಹಂಚಿಕೆಯ ಪ್ರಸ್ತಾಪ ಮುಂದಿಟ್ಟಿತ್ತು. ಸ್ಥಳೀಯಾಡಳಿತಗಳು ೫೦ ಶೇ.ಮೊತ್ತ ಪಾವತಿಸುವ ಬಗ್ಗೆ ರೈಲ್ವೆ ಜತೆ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಿದರೆ ರೈಲ್ವೆಯೇ ಕೆಲಸ ಮಾಡಿ ಅದರ ಅರ್ಧದ ಮೊತ್ತಕ್ಕೆ ಬಿಲ್ ನೀಡುತ್ತದೆ.ಬಿಲ್ ಮೊತ್ತವನ್ನು ಸ್ಥಳೀಯಾಡಳಿತ ರೈಲ್ವೆಗೆ ಕಟ್ಟಬೇಕು. ಈ ಯೋಜನೆ ನನೆಗುದಿಗೆ ಬಿದ್ದ ಕಾರಣ ಕೊನೆಗೆ ರೈಲ್ವೆ ಇಲಾಖೆ ಒಂದು ರಸ್ತೆಯ ಅರ್ಧ ಭಾಗವನ್ನು ಮಾತ್ರ ದುರಸ್ತಿಗೆ ಕೈಗೆತ್ತಿಕೊಂಡಿತ್ತು. ಸ್ಥಳೀಯಾಡಳಿತ ಹಣ ನೀಡದ್ದರಿಂದ ಹಾರಾಡಿ ಮೂಲಕ ನಿಲ್ದಾಣ ಸಂಪರ್ಕಿ ಸುವ ರಸ್ತೆ ಕಾಮಗಾರಿ ಬಾಕಿ ಉಳಿದಿತ್ತು.

ರಿಂಗ್ ರೋಡ್

 

ರೈಲ್ವೇ ನಿಲ್ದಾಣ ಸಂಪರ್ಕಿಸುವ ಹಾರಾಡಿ ರಸ್ತೆ ಅಭಿವೃದ್ಧಿಗೆ ರೈಲ್ವೇ ಇಲಾಖೆ ನಗರಸಭೆಗೆ ಎನ್‌ಒಸಿ ನೀಡಿದೆ.ಸುಮಾರು ಅರ್ಧ ಕಿ.ಮೀ. ಉದ್ದದ ಈ ರಸ್ತೆಯನ್ನು ಕಾಂಕ್ರಿಟೀಕರಣ ಮಾಡಲು ಉದ್ದೇ ಶಿಸಲಾಗಿದೆ.ಇದಕ್ಕಾಗಿ ಅಂದಾಜುಪಟ್ಟಿ ತಯಾರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.ಮುಂದಿನ ಹಂತದಲ್ಲಿ ಇದಕ್ಕಾಗಿ ಅನುದಾನವಿಟ್ಟು ಅಭಿವೃದ್ಧಿ ಮಾಡಲಾಗುವುದು.  ಅದೇ ರೀತಿ ಹಾರಾಡಿಯಿಂದ ನಗರಸಭೆ ಕಡೆಯಿಂದ ಇನ್ನೊಂದು ರಸ್ತೆ ಅಭಿವೃದ್ಧಿ ಪ್ರಗತಿಯಲ್ಲಿದೆ.ಈ ಎರಡು ರಸ್ತೆಗಳು ರಿಂಗ್ ರೋಡ್ ಮಾದರಿಯಾಗಲಿದೆ. – ಕೆ ಜೀವಂಧರ ಜೈನ್, ಅಧ್ಯಕ್ಷರು ನಗರಸಭೆ ಪುತ್ತೂರು


ಹಾರಾಡಿಯಿಂದ ಮಡಿವಾಳಕಟ್ಟೆ ಸಂಪರ್ಕ ರಸ್ತೆ ಪಿಡಬ್ಲ್ಯೂಡಿಗೆ !
ಹಾರಾಡಿಯಿಂದ ಮಡಿವಾಳಕಟ್ಟೆ ಸಂಪರ್ಕ ರಸ್ತೆಯ ಅಭಿವೃದ್ಧಿಯನ್ನು ನಗರಸಭೆ ಅಧ್ಯಕ್ಷರ ಮುತುವರ್ಜಿಯಲ್ಲಿ ಕೈಗೆತ್ತಿಗೊಂಡಿದೆ.ಪ್ರಸ್ತುತ ಹಾರಾಡಿಯಿಂದ ರೈಲ್ವೇ ನಿಲ್ದಾಣ ಸಂಪರ್ಕಿಸುವ ರಸ್ತೆ ಅಭಿವೃದ್ದಿಯಾದರೂ ಭವಿಷ್ಯದಲ್ಲಿ ರೈಲ್ವೆ ಇಲಾಖೆಯವರು ಘನ ವಾಹನ ಸಂಚಾರಕ್ಕೆ ನಿಷೇಧ ಹೇರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಹಾರಾಡಿಯಿಂದ ಮಡಿವಾಳ ಕಟ್ಟೆ ರಸ್ತೆಯ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.ಆದರೆ ರಸ್ತೆಗೆ ಸಂಬಂಧಿಸಿ ಒಂದೆರಡು ಕಡೆ ಖಾಸಗಿಯವರು ಜಮೀನು ಬಿಟ್ಟು ಕೊಡದ ಕಾರಣ ಅವರಲ್ಲಿ ಮಾತುಕತೆ ನಡೆಯುತ್ತಿದೆ. ಈ ನಡುವೆ ನಗರಸಭೆ ರಸ್ತೆಗಾಗಿ ಜಮೀನು ಸ್ವಾಧೀನ ಪಡಿಸಲು ರಸ್ತೆಯನ್ನು ಲೋಕೋಪಯೋಗಿ ಇಲಾಖೆಗೆ ಹ್ಯಾಂಡ್‌ಓವರ್ ಮಾಡಲಿದೆ. ಲೋಕೋಪಯೋಗಿ ಇಲಾಖೆಯವರ ಸ್ವಾಧೀನದಲ್ಲಿ ರಸ್ತೆ ಅಭಿವೃದ್ಧಿ ಹೊಂದಿದರೆ ಕಾನೂನಿನ ಚೌಕಟ್ಟಿನಲ್ಲಿ ಜಮೀನು ಸ್ವಾಧೀನ ಮಾಡಿ ಚತುಷ್ಪಥ ರಸ್ತೆ ಮಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ವಾಹನ ದಟ್ಟಣೆ ನಿಯಂತ್ರಿಸಲು ರಸ್ತೆ ಅಭಿವೃದ್ಧಿ ಅಗತ್ಯ

 

ನಿಲ್ದಾಣದ ಪ್ರವೇಶ ದ್ವಾರದಿಂದ ಹಾರಾಡಿ ಕ್ರಾಸ್‌ವರೆಗೆ ಸಾಗಿ ಉಪ್ಪಿನಂಗಡಿ ರಸ್ತೆಯನ್ನು ಸೇರುವ ಮಾರ್ಗವು ರೈಲ್ವೆ ನಿಲ್ದಾಣ ಸಂಪರ್ಕದ ಪ್ರಮುಖ ರಸ್ತೆಯಲ್ಲ.ಆದರೂ ಉಪ್ಪಿನಂಡಿ ಕಡೆಯಿಂದ ಬರುವವರಿಗೆ, ಪಡೀಲ್, ಹಾರಾಡಿ, ಬೊಳುವಾರು, ಕಬಕ ಕಡೆಯಿಂದ ಬರುವವರಿಗೆ ರೈಲ್ವೆ ನಿಲ್ದಾಣ ಸಂಪರ್ಕಿಸಲು ಹತ್ತಿರದ ರಸ್ತೆಯಾಗಿದೆ. ಇದರ ಜೊತೆಗೆ ಪೇಟೆಯ ವಾಹನ ದಟ್ಟಣೆ ನಿಯಂತ್ರಣಕ್ಕೂ ಅಭಿವೃದ್ಧಿ ಪೂರಕವಾಗಿದೆ.ರಸ್ತೆ ಮಾತ್ರ ಸಂಪೂರ್ಣ ಕಾಂಕ್ರಿಟೀಕರಣ ಮಾಡಬೇಕು.ಇಲ್ಲದಿದ್ದರೆ ಮತ್ತೆ ರಸ್ತೆ ಕೆಟ್ಟು ಹೋಗುವ ಸಾಧ್ಯತೆ ಇದೆ. – ಸುದರ್ಶನ್ ಪುತ್ತೂರು

LEAVE A REPLY

Please enter your comment!
Please enter your name here