ಹಿಂ.ಜಾ.ವೇ ಕಾರ್ಯದರ್ಶಿ ಕಾರ್ತಿಕ್ ಸುವರ್ಣ ಕೊಲೆ ಪ್ರಕರಣದ ಪ್ರಮುಖ ಆರೋಪಿ ಚರಣ್‌ರಾಜ್ ರೈ ಬರ್ಬರ ಹತ್ಯೆ ಪ್ರಕರಣ:  ರೌಡಿಶೀಟರ್ ಕಿಶೋರ್ ಪೂಜಾರಿ ತಂಡದ ಕೃತ್ಯ-ಕೇಸು ದಾಖಲು:  ತನ್ನ ಆಪ್ತ ಒಡನಾಡಿಯ ಕೊಲೆಗೆ ಸೇಡು ತೀರಿಸಿದ ಮೇರ್ಲ ಕುಟುಂಬಸ್ಥ?

0

ಪುತ್ತೂರು: ಎರಡೂವರೆ ವರ್ಷದ ಹಿಂದೆ ಆರ್ಯಾಪು ಗ್ರಾಮದ ಸಂಪ್ಯದಲ್ಲಿ ಸಾರ್ವಜನಿಕ ಗಣೇಶೋತ್ಸವದ ಪೆಂಡಾಲ್ ಒಳಗಡೆ ನಡೆದಿದ್ದ ಹಿಂದು ಜಾಗರಣ ವೇದಿಕೆಯ ಪುತ್ತೂರು ತಾಲೂಕು ಕಾರ್ಯದರ್ಶಿ ಕಾರ್ತಿಕ್ ಸುವರ್ಣ ಮೇರ್ಲರವರ ಕೊಲೆ ಪ್ರಕರಣದ ಪ್ರಮುಖ ಆರೋಪಿ ಚರಣ್‌ರಾಜ್ ರೈ(೨೯ವ)ಯವರನ್ನು ಕೊಳ್ತಿಗೆ ಸಮೀಪದ ಪೆರ್ಲಂಪಾಡಿಯಲ್ಲಿ ರಸ್ತೆ ಬದಿಯಲ್ಲೇ ಜೂನ್ 4ರಂದು ಸಂಜೆ ಕೊಚ್ಚಿ ಕೊಲೆ ಮಾಡಿದ ಘಟನೆಗೆ ಸಂಬಂಧಿಸಿ ರೌಡಿಶೀಟರ್ ಕಿಶೋರ್ ಕುಮಾರ್ ಕಲ್ಲಡ್ಕ ಮತ್ತಿತರರ ವಿರುದ್ಧ ಕೇಸು ದಾಖಲಾಗಿದೆ. ತನ್ನ ಆಪ್ತ ಒಡನಾಡಿಯಾಗಿದ್ದ, ಸಂಬಂಧಿಕನೂ ಆಗಿದ್ದ ಮೇರ್ಲ ಕುಟುಂಬದ ಕಾರ್ತಿಕ್ ಸುವರ್ಣರವರ ಕೊಲೆಗೆ ಪ್ರತಿಯಾಗಿ ದ್ವೇಷದಿಂದ ಚರಣ್ ರಾಜ್ ರೈ ಕೊಲೆ ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಚರಣ್ ರಾಜ್ ರೈ‌ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಕಿಶೋರ್ ಪೂಜಾರಿ ಮೂಲತಃ ಬಂಟ್ವಾಳ ತಾಲೂಕಿನ ಕಲ್ಲಡ್ಕ ನಿವಾಸಿಯಾಗಿದ್ದು ಬೆಂಗಳೂರು ಮತ್ತು ದರ್ಬೆಯಲ್ಲಿ ಬಟ್ಟೆ ಶಾಪ್ ಹೊಂದಿದ್ದರು. ರೌಡಿ ಶೀಟರ್ ಆಗಿರುವ ಕಿಶೋರ್ ಪೂಜಾರಿ ಮತ್ತು ಆತನ ಐವರು ಸಹಚರರು ಇತ್ತೀಚೆಗಷ್ಟೇ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಜೈಲು ಸೇರಿದ್ದವರು ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದರು. ಕಾರ್ತಿಕ್ ಸುವರ್ಣ ಕೊಲೆ ಬಳಿಕ ಪ್ರತೀಕಾರದ ಪ್ರತಿಜ್ಞೆ ಮಾಡಿದ್ದ ಕಿಶೋರ್ ಪೂಜಾರಿ ಮತ್ತು ಆತನ ಸಹಚರರು ಹಾಡುಹಗಲೇ ಚರಣ್ ರಾಜ್ ರೈಯವರನ್ನು ಇದೀಗ ಬಲಿ ಪಡೆದಿದ್ದಾರೆ. ಈ ಮೂಲಕ ರಿವೇಂಜ್ ಮರ್ಡರ್ ಗೆ ಪುತ್ತೂರು ಸಾಕ್ಷಿಯಾಗಿದೆ.

ಚರಣ್ ರಾಜ್ ರೈ ಬರ್ಬರ ಕೊಲೆ
ಸಂಪ್ಯದಲ್ಲಿರುವ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಹಿಂಭಾಗದ ನಿವಾಸಿಯಾಗಿರುವ ಚರಣ್‌ರಾಜ್ ರೈಯವರು ಪೆರ್ಲಂಪಾಡಿಯಲ್ಲಿ ತನ್ನ ಪತ್ನಿಯ ತಂದೆ ಉರುಂಬಿ ನಿವಾಸಿ ಕಿಟ್ಟಣ್ಣ ರೈಯವರ ಮಾಲಕತ್ವದಲ್ಲಿ ಜೂನ್ ೮ರಂದು ಶುಭಾರಂಭಗೊಳ್ಳಲಿರುವ ಮೆಡಿಕಲ್‌ನಲ್ಲಿ ಫರ್ನಿಚರ್, ಔಷಧಿ ಜೋಡಣೆ ಕೆಲಸದ ವೀಕ್ಷಣೆ ಮಾಡಲೆಂದು ಜೂನ್ 4ರಂದು ಸಂಜೆ ತನ್ನ ರಿಡ್ಜ್ ಕಾರಿನಲ್ಲಿ ಬಂದು ಹೊರಗೆ ನಿಂತಿದ್ದ ವೇಳೆ ಎರಡು ಬೈಕ್‌ಗಳಲ್ಲಿ ಬಂದ ೫ರಿಂದ ೬ ಮಂದಿಯ ತಂಡ ಚರಣ್‌ರಾಜ್ ರೈಯವರನ್ನು ಸುತ್ತುವರಿದು ಹರಿತವಾದ ಆಯುಧದಿಂದ ಕುತ್ತಿಗೆಗೆ ಗಾಯಗೊಳಿಸಿ, ತಲೆಗೆ ರಾಡ್‌ನಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಬೈಕ್‌ನಲ್ಲೇ ಪರಾರಿಯಾಗಿತ್ತು. ಈ ವೇಳೆ ಮೆಡಿಕಲ್‌ನಲ್ಲಿ ಔಷಧಿಗಳ ಜೋಡಣೆಯ ಉಸ್ತುವಾರಿ ನೋಡುತ್ತಿದ್ದ ಚರಣ್ ರೈಯವರ ಸ್ನೇಹಿತ ನವೀನ್ ಕುಲಾಲ್‌ರವರು ಒಳಗೆ ಇದ್ದಂತೆಯೇ ಹೊರಗಡೆ ಚರಣ್‌ರಾಜ್ ರೈಯವರ ಮೇಲೆ ದಾಳಿ ನಡೆದಿತ್ತು. ಅವರು ತಡೆಯಲು ಹೋಗುತ್ತಿದ್ದಂತೆಯೇ ಗಂಭೀರ ಗಾಯಗೊಂಡಿದ್ದ ಚರಣ್‌ರಾಜ್ ರೈ ಕುಸಿದು ಬಿದ್ದು ಅಲ್ಲಿಯೇ ಮೃತಪಟ್ಟಿದ್ದರು. ಮೃತ ಚರಣ್ ರಾಜ್ ರೈಯವರು ತಾಯಿ ಸುಧಾ, ಪತ್ನಿ ಪುತ್ತೂರಿನ ನ್ಯಾಯವಾದಿ ನರಸಿಂಹ ಪ್ರಸಾದ್ ಅವರ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಶ್ರೀರಕ್ಷಾ, ಒಂದು ವರ್ಷದ ಗಂಡು ಮಗು, ಸಹೋದರ ಕಿರಣ್ ರೈಯವರನ್ನು ಅಗಲಿದ್ದಾರೆ. ಕೊಲೆ ಪ್ರಕರಣದ ಪ್ರತ್ಯಕ್ಷದರ್ಶಿ ನವೀನ್ ಕುಲಾಲ್ ನೀಡಿದ ದೂರಿನಂತೆ ಪೊಲೀಸರು ಕಿಶೋರ್ ಪೂಜಾರಿ ಕಲ್ಲಡ್ಕ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪುತ್ತೂರು ಕಡೆಯಿಂದ ಬೈಕ್‌ನಲ್ಲಿ ಬಂದಿದ್ದ ದುಷ್ಕರ್ಮಿಗಳು:
ಚರಣ್‌ರಾಜ್ ರೈಯವರು ಮೆಡಿಕಲ್ ಶಾಪ್‌ನ ಫರ್ನಿಚರ್ ಕೆಲಸವನ್ನು ಹೊರಗಿನಿಂದ ನೋಡುತ್ತಿದ್ದಾಗ ಪುತ್ತೂರು ಕಡೆಯಿಂದ ಎರಡು ಬೈಕ್‌ಗಳಲ್ಲಿ ಬಂದ ದುಷ್ಕರ್ಮಿಗಳ ತಂಡ ಚರಣ್‌ರಾಜ್ ರೈಯವರಿಗೆ ಹಿಂದಿನಿಂದ ಕುತ್ತಿಗೆಗೆ ಹರಿತವಾದ ಆಯುಧದಿಂದ ಕಡಿದಿದೆ. ಬಳಿಕ ತಲೆಗೆ ರಾಡ್‌ನಿಂದ ಹೊಡೆದಿದ್ದಾರೆ. ಗಂಭೀರ ಗಾಯಗೊಂಡ ಚರಣ್‌ರಾಜ್ ಕುಸಿದು ಬಿದ್ದ ತಕ್ಷಣ ದುಷ್ಕರ್ಮಿಗಳು ತಾವು ಬಂದಿದ್ದ ಬೈಕ್‌ಗಳಲ್ಲಿ ಪರಾರಿಯಾಗಿದ್ದಾರೆ.

5ರಿಂದ 6 ಮಂದಿಯ ಕೃತ್ಯ
ಎರಡು ಬೈಕ್‌ನಲ್ಲಿ 5ರಿಂದ 6 ಮಂದಿ ದುಷ್ಕರ್ಮಿಗಳು ಬಂದಿರುವುದಾಗಿ ಪೊಲೀಸರು ಮಾಹಿತಿ ಕಲೆ ಹಾಕಿದ್ದರು. ಹಂತಕರು ಯಾವುದೇ ಮುಖಗವಸು ಹಾಕಿರಲಿಲ್ಲ.‌ ನಿರ್ಭೀತಿಯಿಂದ ಬಂದು ಕೊಲೆ ನಡೆಸಿ ‘ನಮ್ಮ ಬೇಲೆ ಆಂಡ್’ ಎಂದು ಹೇಳುತ್ತಾ ಹೋಗಿದ್ದಾರೆ ಎಂದು ತಿಳಿದು ಬಂದಿದೆ. ಈ ನಡುವೆ ಕೊಲೆ ಮಾಡಿ ಪರಾರಿಯಾಗುವ ತರಾತುರಿಯಲ್ಲಿ ರಾಡ್‌ವೊಂದನ್ನು ಹಂತಕರು ಅಲ್ಲೇ ಎಸೆದು ಹೋಗಿದ್ದರು. ತಂಡದಲ್ಲಿ 5ರಿಂದ 6 ಮಂದಿ ಇದ್ದರು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದರು. ದುಷ್ಕರ್ಮಿಗಳು ಮಾರಾಕಾಸ್ತ್ರ ಬೀಸಿದ ರಭಸಕ್ಕೆ ಚರಣ್‌ರಾಜ್ ರೈಯವರ ಕತ್ತಿನಲ್ಲಿ 6 ಇಂಚು ಆಳದ ಗಾಯವಾಗಿತ್ತು. ಗಾಯದ ತೀವ್ರತೆಯಿಂದಾಗಿ ವಿಪರೀತ ರಕ್ತಸ್ರಾವ ಆಗಿತ್ತು. ಚರಣ್‌ರಾಜ್‌ರವರ ದೇಹ ರಕ್ತದ ಮಡುವಿನಲ್ಲಿ ಬಿದ್ದಿತ್ತು.

ಕೊಲೆ ಘಟನೆ ಸಂಜೆ 4 ಗಂಟೆ ಸುಮಾರಿಗೆ ನಡೆದಿತ್ತು. ಸ್ಥಳದಲ್ಲೇ ಚರಣ್‌ರಾಜ್ ರೈ ಮೃತಪಟ್ಟಿರುವುದರಿಂದ ಅವರ ಮೃತದೇಹವನ್ನು ಕೊಂಡೊಯ್ಯುವುದಕ್ಕೆ ಮೊದಲು ಮಂಗಳೂರಿನಿಂದ ಆಗಮಿಸಿದ ಬೆರಳಚ್ಚು ತಜ್ಞರು ಮತ್ತು ವಿಧಿ ವಿಜ್ಞಾನ ತಂಡದವರು ಕೊಲೆಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದರು. ಪೊಲೀಸರು ಘಟನೆ ನಡೆದ ಸ್ಥಳ ಮತ್ತು ಅಂಗಡಿಗೆ ಇರುವ ದೂರ, ದಿಕ್ಕುಗಳ ಕುರಿತು ಮಹಜರು ನಡೆಸಿದ ಬಳಿಕ ೭ ಗಂಟೆ ಸುಮಾರಿಗೆ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಆಂಬುಲೆನ್ಸ್‌ನಲ್ಲಿ ಮಂಗಳೂರು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು.

ಚರಣ್‌ರಾಜ್ ರೈಯವರು ನೂತನ ಮೆಡಿಕಲ್‌ಗೆ ಬಂದವರು ಅಲ್ಲೇ ಪಕ್ಕದಲ್ಲಿರುವ ಮನೆಗೆ ತೆರಳಿ ನೀರು ಕೇಳಿ ಕುಡಿದಿದ್ದರು. ಅದಾದ ಅರ್ಧ ಗಂಟೆಯಲ್ಲೇ ಕೊಲೆಯಾಗಿದ್ದಾರೆ. ಕೊಲೆ ಕುರಿತು ನೀರು ನೀಡಿದ ಮನೆಯ ಮಾಲಕಿ ದಿಗ್ಭ್ರಮೆಗೊಳಗಾಗಿದ್ದರು.

ಕಾರ್ತಿಕ್ ಮೇರ್ಲ ಮರ್ಡರ್ ಗೆ ರಿವೇಂಜ್: ಕಿಶೋರ್ ಪೂಜಾರಿ ತಂಡದ ಕೃತ್ಯ
2019ರ ಸೆಪ್ಟೆಂಬರ್ 3ರಂದು ಸಂಪ್ಯ ಪೊಲೀಸ್ ಠಾಣೆಯ ಮುಂಭಾಗದಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಗಣೇಶೋತ್ಸವದಲ್ಲಿ ಯಕ್ಷಗಾನ ವೀಕ್ಷಿಸುತ್ತಿದ್ದ ವೇಳೆ ಕೊಲೆಯಾದ ಹಿಂದು ಜಾಗರಣ ವೇದಿಕೆ ಪುತ್ತೂರು ತಾಲೂಕು ಕಾರ್ಯದರ್ಶಿ ಕಾರ್ತಿಕ್ ಸುವರ್ಣ ಮೇರ್ಲರವರ ಒಡನಾಡಿಯಾಗಿದ್ದ ಕಿಶೋರ್ ಪೂಜಾರಿ ತಂಡದಿಂದ ರಿವೇಂಜ್ ಮರ್ಡರ್ ನಡೆದಿದೆ ಎಂದು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಚರಣ್ ರಾಜ್ ರೈಯವರಿಗೆ ಇತರ ವಿಚಾರಕ್ಕೆ ಯಾವುದೇ ಶತ್ರುಗಳಿಲ್ಲ. ಕಾರ್ತಿಕ್ ಸುವರ್ಣ ಕೊಲೆಯಾದ ನಂತರ ಅದರ ದ್ವೇಷ ಹಲವರಲ್ಲಿ ಕಿಚ್ಚಾಗಿ ಕಂಡಿತ್ತು. ಇದೇ ಕಾರಣಕ್ಕಾಗಿ ಕಾರ್ತಿಕ್ ಸುವರ್ಣ ಕೊಲೆ ಪ್ರಕರಣದ ಆರೋಪಿಗಳಾದ ಕಿರಣ್ ರೈ, ಚರಣ್ ರಾಜ್ ರೈ ಜೀವ ಭಯದಲ್ಲಿಯೇ ಇರುತ್ತಿದ್ದರು. ಸಹೋದರರು ಹೆಚ್ಚಾಗಿ ಜತೆಯಾಗಿಯೇ ಓಡಾಡುತ್ತಿದ್ದರು. ಕಾರಿನಲ್ಲಿ ಹೋಗಿ ಬರುತ್ತಿದ್ದ ಅವರು ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸುತ್ತಿರಲಿಲ್ಲ. ಅವಶ್ಯಕ ಕಾರ್ಯಕ್ರಮಗಳಿಗೆ ಮಾತ್ರ ಹೋಗುತ್ತಿದ್ದರು. ಮಾತ್ರವಲ್ಲದೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟಿನಿಂದ ಜಾಮೀನು ಪಡೆದು ಬಂದಿದ್ದರೂ ಅದರ ಮಾಹಿತಿಯನ್ನು ಗುಪ್ತವಾಗಿ ಇರಿಸಲಾಗಿತ್ತು. ಈ ಮಧ್ಯೆ, ಕಾರ್ತಿಕ್ ಸುವರ್ಣರವರ ಕೊಲೆ ಕೃತ್ಯದಲ್ಲಿ ಆರೋಪಿಯಾಗಿ ಜೈಲಿನಲ್ಲಿರುವ ಮಂಗಳೂರಿನ ಪ್ರೀತೇಶ್ ಶೆಟ್ಟಿ ಪರ ಸಾಕ್ಷಿ ನುಡಿಯಬೇಕು ಎಂದು ಬಿರುಮಲೆ ಬೆಟ್ಟದಲ್ಲಿ ಡೀಲ್ ಕುದುರಿಸಲು ಮುಂದಾಗಿದ್ದ ತಾರಿಗುಡ್ಡೆಯ ರಾಧಾಕೃಷ್ಣ ಪೂಜಾರಿಗೆ ದರ್ಬೆ ಪೆಟ್ರೋಲ್ ಬಂಕ್ ನಲ್ಲಿ ದಾಳಿ ಮಾಡಿ ಕೊಲೆ ಯತ್ನ ನಡೆಸಿದ ಕೇಸಿಗೆ ಸಂಬಂಧಿಸಿ ಜೈಲು ಪಾಲಾಗಿದ್ದ ಕಿಶೋರ್ ಪೂಜಾರಿ ಮತ್ತು ಆತನ ತಂಡದವರು ಇತ್ತೀಚೆಗಷ್ಟೇ ಜಾಮೀನು ಪಡೆದು ಹೊರ ಬಂದಿದ್ದರು. ಕ್ರಿಮಿನಲ್ ಚಟುವಟಿಕೆ ಹಿನ್ನೆಲೆಯಲ್ಲಿ ರೌಡಿ ಶೀಟರ್ ಆಗಿರುವ ಕಿಶೋರ್ ಪೂಜಾರಿಯವರು ಕೊಲೆ ಯತ್ನ ಕೇಸಿಗೆ ಸಂಬಂಧಿಸಿ ಸಲ್ಲಿಸಿದ್ದ ಜಾಮೀನು ಅರ್ಜಿ ಹಲವು ಸಲ ವಜಾಗೊಂಡಿತ್ತು. ಇತ್ತೀಚೆಗಷ್ಟೇ ಜಾಮೀನು ಪಡೆದು ಹೊರ ಬಂದ ಕಿಶೋರ್ ಪೂಜಾರಿಯವರು ಚರಣ್ ರಾಜ್ ರೈ ಕೊಲೆಗೆ ಪ್ಲ್ಯಾನ್ ರೂಪಿಸಿದ್ದರು ಎಂದು ಮಾಹಿತಿ ಲಭ್ಯವಾಗಿದೆ.

ಕಾರ್ತಿಕ್ ಸುವರ್ಣ ಕೊಲೆ ಕೃತ್ಯದ ವಿರುದ್ಧ ಹಲವರು ಧ್ವನಿ ಎತ್ತುತ್ತಿದ್ದರಾದರೂ ಇದರಲ್ಲಿ ಕಿಶೋರ್ ಮುಂಚೂಣಿಯಲ್ಲಿದ್ದರು. ಇದೀಗ ಆತ ತನ್ನ ಸೇಡು ತೀರಿಸಿಕೊಂಡಿದ್ದಾನೆ.

ಚರಣ್‌ರಾಜ್ ರೈ ಅವರ ಗಂಡು ಮಗುವಿನ ಒಂದನೇ ವರ್ಷದ ಹುಟ್ಟು ಹಬ್ಬವನ್ನು ಸಂಪ್ಯದ ಅವರ ಮನೆಯಲ್ಲಿ ಮೇ ೨೭ರಂದು ಆಚರಿಸಲಾಗಿತ್ತು. ಈ ವೇಳೆ ಮನೆ ಮಂದಿ ಸಂತೋಷದಿಂದ ಹುಟ್ಟು ಹಬ್ಬದಲ್ಲಿ ಭಾಗಿಯಾಗಿದ್ದರು. ಇದೀಗ ಆ ಮನೆಯಲ್ಲಿ ದುಃಖ ಮಡುಗಟ್ಟಿದೆ.

ಗಣೇಶೋತ್ಸವದಲ್ಲಿ ಕಾರ್ತಿಕ್ ಮೇರ್ಲ ಕೊಲೆಯಾಗಿದ್ದರು
ಸಂಪ್ಯ ಪೊಲೀಸ್ ಠಾಣೆಯ ಮುಂಭಾಗದಲ್ಲಿ ೨೦೧೯ರ ಸೆಪ್ಟೆಂಬರ್ ೩ರಂದು ರಾತ್ರಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಪ್ರಯುಕ್ತ ನಡೆಯುತ್ತಿದ್ದ ಯಕ್ಷಗಾನವನ್ನು ವೀಕ್ಷಿಸುತ್ತಿದ್ದ ಹಿಂದೂ ಜಾಗರಣ ವೇದಿಕೆಯ ತಾಲೂಕು ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಮೇರ್ಲರವರ ಬರ್ಬರ ಕೊಲೆ ನಡೆದಿತ್ತು. ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ನಿವೃತ್ತ ಮ್ಯಾನೇಜರ್, ಆರ್ಯಾಪು ಮೇರ್ಲ ನಿವಾಸಿ ರಮೇಶ್ ಸುವರ್ಣರವರ ಪುತ್ರ ಕಾರ್ತಿಕ್ ಅವರು ನೆಹರೂನಗರದಲ್ಲಿ ಧನು ಪಟ್ಲ ಅವರ ಮಾಲಕತ್ವದ ರೂಫಿಂಗ್ ಶೀಟ್ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದವರು ತನ್ನ ಊರಿನ ಗಣೇಶೋತ್ಸವಕ್ಕೆ ಬಂದು ಯಕ್ಷಗಾನ ವೀಕ್ಷಿಸುತ್ತಿದ್ದರು. ಸಂಘಟನೆಯಲ್ಲಿ ಸಕ್ರಿಯವಾಗಿದ್ದ ಮತ್ತು ಹಲವಾರು ಸ್ನೇಹಿತರನ್ನು ಹೊಂದಿದ್ದ ಕಾರ್ತಿಕ್ ಸುವರ್ಣರವರನ್ನು ಚೂರಿಯಿಂದ ಇರಿದು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಕೊಲೆ ಪ್ರಕರಣದಲ್ಲಿ ಆರ್ಯಾಪು ಗ್ರಾಮದ ಚರಣ್‌ರಾಜ್ ರೈ(೨೬ ವ), ಚರಣ್‌ರಾಜ್ ರೈಯವರ ಸಹೋದರ ಕಿರಣ್ ರೈ(೩೬ವ) ಮತ್ತು ಮಂಗಳೂರು ಉಳ್ಳಾಲಬೈಲು ನಿವಾಸಿ ಪ್ರೀತೇಶ್ ಶೆಟ್ಟಿ(೨೮ವ) ಹಾಗೂ ಈ ಮೂವರು ಕೊಲೆ ಆರೋಪಿಗಳಿಗೆ ಆಶ್ರಯ ನೀಡಿದ ಆರೋಪದಡಿ ಮಂಗಳೂರು ಅತ್ತಾವರದ ಸ್ವೀವನ್ ಮೊಂತೆರೋರವರನ್ನು ಪೊಲೀಸರು ಬಂಧಿಸಿದ್ದರು. ಕೆಲವೇ ದಿನಗಳಲ್ಲಿ ಅತ್ತಾವರದ ಸ್ಟೀವನ್ ಮೊಂತೆರೋ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದರು. ವರ್ಷದ ಬಳಿಕ ಚರಣ್ ರಾಜ್ ರೈ ಮತ್ತು ಅವರ ಸಹೋದರ ಕಿರಣ್ ರೈ ನ್ಯಾಯಾಲಯದಿಂದ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ಇನ್ನೊಬ್ಬ ಆರೋಪಿ ರೌಡಿ ಶೀಟರ್ ಪ್ರೀತೇಶ್ ಶೆಟ್ಟಿ ಇನ್ನೂ ಜೈಲಿನಲ್ಲಿದ್ದಾನೆ.
ಚರಣ್ ರಾಜ್ ರೈ ಕೊಲೆ ನಡೆದ ಮಾಹಿತಿ ತಿಳಿದ ತಕ್ಷಣವೇ ಪೆರ್ಲಂಪಾಡಿಗೆ ಭೇಟಿ ನೀಡಿದ್ದ ದ.ಕ.ಜಿಲ್ಲಾ ಎಸ್ಪಿ ಋಷಿಕೇಶ್ ಭಗವಾನ್ ಸೋನಾವನೆಯವರು ಕೊಲೆ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಿದ್ದರು. ತನಿಖಾ ತಂಡ ಹಂತಕರಿಗೆ ಶೋಧ ಆರಂಭಿಸಿದೆ. ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಕೊಲೆಯ ಪ್ರತ್ಯಕ್ಷದರ್ಶಿ ನವೀನ್ ಕುಮಾರ್ ದೂರು-ಕಿಶೋರ್ ವಿರುದ್ಧ ಕೊಲೆ ಪ್ರಕರಣ ದಾಖಲು
ಚರಣ್ ರಾಜ್ ರೈ ಕೊಲೆ ಪ್ರಕರಣದ ಪ್ರತ್ಯಕ್ಷ ಸಾಕ್ಷಿಯಾಗಿರುವ ಚಿಕ್ಕಮುಡ್ನೂರು ಗ್ರಾಮದ ತಾರಿಗುಡ್ಡೆ ನಿವಾಸಿ ನವೀನ್ ಕುಮಾರ್ (42 ವರ್ಷ)ರವರು ನೀಡಿದ ದೂರಿನಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕಿಶೋರ್ ಪೂಜಾರಿ ಕಲ್ಲಡ್ಕ ಹಾಗೂ ಇತರ ಅಪರಿಚಿತ ಮೂರು ಮಂದಿ ಕೊಲೆ ನಡೆಸಿರುವುದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಆರ್ಯಾಪು ಗ್ರಾಮ ಸಂಪ್ಯದ ಬಾಲಕೃಷ್ಣ ರೈಯವರ ಪುತ್ರ ಚರಣ್ ರಾಜ್ ಎಂಬವರ ಪತ್ನಿಯ ತಂದೆ ಕಿಟ್ಟಣ್ಣ ರೈ ಎಂಬವರು ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ಎಂಬಲ್ಲಿ ಮೆಡಿಕಲ್ ಶಾಪ್ ಪ್ರಾರಂಭಿಸುವವರಿದ್ದು ಈ ಮೆಡಿಕಲ್ ಶಾಪ್ ನ ಪೂರ್ವ ತಯಾರಿ ಕೆಲಸಕ್ಕೆ ಸಹಾಯ ಮಾಡಲು ತಾನು ಚರಣ್ ರಾಜ್ ನ ಜೊತೆಗೆ ಆಗಾಗ ಪೆರ್ಲಂಪಾಡಿ ಗೆ ಬರುತ್ತಿದ್ದೆ. ಅದರಂತೆ ಜೂನ್ ದಿನಾಂಕ 04ರಂದುಸ್ನೇಹಿತ ಚರಣ್ ರಾಜ್ ಜೊತೆಗೆ ಆತನ ಮಾರುತಿ ರಿಡ್ಜ್ ಕಾರು (ನಂ KA19MF1185)ನಲ್ಲಿ 11-00 ಗಂಟೆಗೆ ಪೆರ್ಲಂಪಾಡಿಗೆ ಬಂದು ಬಂದು ಮೆಡಿಕಲ್ ಶಾಪ್ ಕೆಲಸ ಕಾರ್ಯಗಳಲ್ಲಿ ತೊಡಗಿದ್ದು ಸಂಜೆ ಸಮಯ ಸುಮಾರು 04:15 ಗಂಟೆಗೆ ಮೆಡಿಕಲ್ ಶಾಪ್ ನ ಒಳಗೆ ಕೆಲಸ ಕಾರ್ಯಗಳಲ್ಲಿ ನಿರತರಾಗಿದ್ದ ವೇಳೆ ಮೆಡಿಕಲ್ ಶಾಪ್ ನ ಹೊರಗೆ ಕಾರಿನ ಬಳಿ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ಚರಣ್ ರಾಜನಿಗೆ ಯಾರೋ ಹಲ್ಲೆ ಮಾಡಿದ್ದರು. ಈ ವೇಳೆ ಚರಣ್ ರಾಜ್ ಬೊಬ್ಬೆ ಹೊಡೆದಿದ್ದನ್ನು ಕೇಳಿ ನಾನು ಅಂಗಡಿಯ ಹೊರಗೆ ಬಂದಾಗ ಯಾರೋ ಅಪರಿಚಿತ ಮೂವರು ಮಂದಿ ಕೈಯಲ್ಲಿ ತಲವಾರು ಹಿಡಿದು ಕೊಂಡು ನೆಲದಲ್ಲಿ ಬಿದ್ದಿದ್ದ ಚರಣ್ ರಾಜನಿಗೆ ಹೊಡೆಯುವುದನ್ನು ಕಂಡಾಗ ತಡೆಯಲು ಮುಂದೆ ಹೋದಾಗ ಪರಿಚಯ ಇರುವ ಕಲ್ಲಡ್ಕದ ಕಿಶೋರ್ ಪೂಜಾರಿಯವರು ಮುಂದೆ ಬಂದು ತನ್ನನ್ನು ಮುಂದಕ್ಕೆ ಹೋಗದಂತೆ ತಡೆದು ತುಳು ಭಾಷೆಯಲ್ಲಿ ‘ಆಣಿದ ವಿಚಾರ ಗೊತ್ತುಂಡತ್ತಾ ಬೊಕ್ಕ ಎಂಕುಲು ಇಂಬ್ಯನ್ ಬುಡ್ಪುನಾ’ ಎಂಬುದಾಗಿ ಹೇಳಿ ಅವರು ಬಂದ ಮೋಟಾರ್ ಸೈಕಲಿನಲ್ಲಿ ಅಂಚಿನಡ್ಕದ ಕಡೆಗೆ ಹೋಗಿದ್ದಾರೆ. ತಲವಾರು ಹಾಗೂ ರಾಡ್ ನಿಂದ ಹಲ್ಲೆ ಮಾಡಿದ ಪರಿಣಾಮ ಚರಣ್ ರಾಜನ ಕುತ್ತಿಗೆಗೆ ತೀವ್ರ ತರದ ಗಾಯವಾಗಿದೆ, ತಲೆಯಲ್ಲಿ ರಕ್ತದ ಗಾಯಗಳಾಗಿದ್ದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಈ ಹಿಂದೆ ಆರ್ಯಾಪು ಗ್ರಾಮದ ಮೇರ್ಲ ನಿವಾಸಿ ಕಾರ್ತಿಕ್ ಎಂಬಾತನನ್ನು ಸಂಪ್ಯ ಪೊಲೀಸ್ ಠಾಣೆಯ ಮುಂಭಾಗ ಕೊಲೆ ನಡೆಸಿದ ಪ್ರಕರಣದಲ್ಲಿ ಚರಣ್ ರಾಜ ಆರೋಪಿಯಾಗಿದ್ದು ಇದೇ ದ್ವೇಷದಿಂದ ಕಾರ್ತಿಕನ ಸ್ನೇಹಿತ ಕಿಶೋರ್ ಹಾಗೂ ಇತರರು ಈ ಕೃತ್ಯ ಎಸಗಿದ್ದು ಆರೋಪಿಗಳನ್ನು ಕೃತ್ಯದ ವೇಳೆ ನಾನು ನೋಡಿದ್ದು ಮುಂದಕ್ಕೆ ನೋಡಿದರೆ ಗುರುತಿಸುತ್ತೇನೆ ಎಂದು ನವೀನ್ ಅವರು ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಕೊಲೆ ಪ್ರಕರಣ ದಾಖಲಿಸಿರುವ ಪೊಲೀಸರು ಹಂತಕರ ಜಾಡು ಹಿಡಿದಿದ್ದಾರೆ.

LEAVE A REPLY

Please enter your comment!
Please enter your name here