ಪರಿಸರ ಸಂರಕ್ಷಣೆ ನಮ್ಮ ಬಹುಮುಖ್ಯ ಕರ್ತವ್ಯ ಮತ್ತು ಜವಾಬ್ದಾರಿ : ಡಾ. ಈಶ್ವರ ಪ್ರಸಾದ್

0

ಪುತ್ತೂರು:  ಪರಿಸರ ಸಂರಕ್ಷಣೆ ಮತ್ತು ಸ್ವಚ್ಛತೆ ನಮ್ಮ ಅತ್ಯಂತ ಮುಖ್ಯ ಜವಾಬ್ದಾರಿಗಳಲ್ಲೊಂದು. ನೈಸರ್ಗಿಕ ಪರಿಸರವನ್ನು ನಾವು ರಕ್ಷಿಸದೇ ಹೋದರೆ ಭೂಮಿತಾಯಿಗೆ ದ್ರೋಹವೆಸಗಿದಂತಾಗುತ್ತದೆ. ಶಿಕ್ಷಣದಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಆದ್ಯತೆಯ ಮೇರೆಗೆ ವಿದ್ಯಾರ್ಥಿಗಳು ಕಲಿಯಬೇಕಾಗಿದೆ ಎಂದು ವಿವೇಕಾನಂದ ಪದವಿ ಕಾಲೇಜಿನ ಜೀವಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ. ಈಶ್ವರಪ್ರಸಾದ್ ಕೆ.ಎಸ್, ಅಭಿಪ್ರಾಯ ವ್ಯಕ್ತಪಡಿಸಿದರು. ಅನಿಕೇತನ ಎಜುಕೇಶನಲ್ ಟ್ರಸ್ಟ್(ರಿ.) ಪುತ್ತೂರು, ಜೇಸಿಐ ಉಪ್ಪಿನಂಗಡಿ ಘಟಕ ಮತ್ತು ಕಾಂಚನ ವೆಂಕಟಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲೆಗಳ ಜಂಟಿ ಆಯೋಜನೆಯಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ 2022ರ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಡಾ.ಈಶ್ವರ ಪ್ರಸಾದ್, ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅನಿಕೇತನ ಎಜುಕೇಷನಲ್ ಟ್ರಸ್ಟ್ ನ ಆಡಳಿತ ನಿರ್ದೇಶಕ ಕೃಷ್ಣಪ್ರಸಾದ್ ನಡ್ಸಾರ್ ಮಾತನಾಡಿ, ಇಂದಿನ ಜಗತ್ತಿನ ಅತಿವೇಗದ ಬೆಳವಣಿಗೆಯಲ್ಲಿ, ನಾವು ಸಂವೇದನಾಶೀಲತೆಯನ್ನು ಕಳೆದುಕೊಳ್ಳುತ್ತಿದ್ದು, ನೈಸರ್ಗಿಕ ಪರಿಸರಕ್ಕೆ ಅಬಿವೃದ್ಧಿಯೇ ಮಾರಕವೆನಿಸುವ ಮಟ್ಟಕ್ಕೆ ಜಾಗತಿಕವಾಗಿ ಮಾಲಿನ್ಯಸಮಸ್ಯೆ ಎದುರಾಗಿದೆ. ಹಲವಾರು ಪ್ರಭೇದಗಳ ಪ್ರಾಣಿಪಕ್ಷಿ ಮತ್ತು ಸಸ್ಯ ಸಂಪತ್ತು ವಿನಾಶದ ಅಂಚಿನಲ್ಲಿವೆ. ನೈಸರ್ಗಿಕ ಸಮತೋಲನ ಕಾಪಾಡದೇ ಇದ್ದಲ್ಲಿ, ಮುಂದೊಂದು ದಿನ ಭೂಮಿ ಅತಿದೊಡ್ಡ ನೈಸರ್ಗಿಕ ದುರಂತವನ್ನೆದುರಿಸಬೇಕಾಗುತ್ತದೆ ಎಂದರು.

ಕಾರ್ಯಕ್ರಮದ ಇನ್ನೋರ್ವ ಅತಿಥಿ ಜೇಸಿಐ ಉಪಿನಂಗಡಿಯ ಘಟಕಾಧ್ಯಕ್ಷ ಜೇಸಿ ಮೋಹನಚಂದ್ರ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಬಜತ್ತೂರು ಗ್ರಾಮದ ಹಿರಿಯ ಪ್ರಗತಿಪರ ಕೃಷಿಕ ಶ್ರೀ ನಟ್ಟಿ ಈಶ್ವರನಾಯಕ್ ಕುಳ್ಳಾಜೆ, ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಗೆ ವಿವಿಧ ಪ್ರಭೇದದ ಸಸ್ಯಗಳ ಬಗ್ಗೆ ಮಾಹಿತಿಯನ್ನು ಸುಪ್ರೀತಾ ಕುಳ್ಳಾಜೆ ನೀಡಿದ್ದು, ಪ್ರಗತಿಪರ ಕೃಷಿಕ, ಶ್ರೀ ಮೂಲಚಂದ್ರ ಜೇನು ಸಾಕಣಿಕೆಯ ಬಗ್ಗೆ ಪ್ರಾಯೋಗಿಕ ಕಾರ್ಯಾಗಾರ ನಡೆಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯಗುರುಗಳಾದ ಶ್ರೀ ಸೂರ್ಯ ಪ್ರಕಾಶ್ ಉಡುಪ ವಹಿಸಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಶ್ರೀ ವೇಣುಗೋಪಾಲ್ ನಾಯಕ್ ಕುಳ್ಳಾಜೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here