ಉಪ್ಪಳಿಗೆ ಶ್ರೀವಿಷ್ಣು ಯುವಕ ಮಂಡಲದ ವಾರ್ಷಿಕೋತ್ಸವ

  • ಉಪ್ಪಳಿಗೆ ಹಿ.ಪ್ರಾ ಶಾಲಾ ಸಭಾಂಗಣಕ್ಕೆ ರೂ.5ಲಕ್ಷ ಅನುದಾನ-ಶಾಸಕ ಮಠಂದೂರು

 

ಪುತ್ತೂರು:ಸರಕಾರಿ ಶಾಲೆಗಳ ಮೂಲಭೂತ ಸೌಲಭ್ಯಗಳ ಈಡೇರಿಸಲು ಆಧ್ಯತೆಯಲ್ಲಿ ಅನುದಾನ ನೀಡಲಾಗುತ್ತಿದೆ. ಉಪ್ಪಳಿಗೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಾಣ ಹಂತದಲ್ಲಿರುವ ಸಭಾಂಗಣದ ನಿರ್ಮಾಣಕ್ಕೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ರೂ.5ಲಕ್ಷ ಅನುದಾನ ನೀಡುವುದಾಗಿ ಶಾಸಕ ಸಂಜೀವ ಮಠಂದೂರು ಘೋಷಣೆ ಮಾಡಿದರು.

ಉಪ್ಪಳಿಗೆ ಹಿ.ಪ್ರಾ ಶಾಲಾ ವಠಾರದಲ್ಲಿ ಜೂ.11ರಂದು ಸಂಜೆ ನಡೆದ ಉಪ್ಪಳಿಗೆ ಶ್ರೀ ವಿಷ್ಣು ಯುವಕ ಮಂಡಲದ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯುವಶಕ್ತಿ ದೇಶದ ಶಕ್ತಿ. ಯುವಶಕ್ತಿಯವು ಸಮಾಜದ ಒಳಿತಾಗಿ ಸದ್ವಿನಿಯೋಗವಾಗಬೇಕು. ಸಮಾಜದ ಪ್ರತಿಯೊಂದ ಕ್ಷೇತ್ರದಲ್ಲಿಯೂ ಯುವ ಶಕ್ತಿಯು ತಮ್ಮ ಕಾರ್ಯವನ್ನು ತೋರ್‍ಪಡಿಸಬೇಕು ಎಂದರು. ಕಲಾವಿದರಿಗೆ ಪ್ರೋತ್ಸಾಹ, ಜನಸ್ನೇಹಿ ಪೊಲೀಸರು ಹಾಗೂ ಪವರ್‌ಮೆನ್‌ಗಳನ್ನು ಗುರುತಿಸಿ ಸನ್ಮಾನಿಸುವ ಆದರ್ಶನೀಯ ಕಾರ್ಯಕ್ರಮವನ್ನು ಹಾಖಿಕೊಂಡಿರುವುದನ್ನು ಶ್ಲಾಘಿಸಿದರು.


ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ, ಯವ ಶಕ್ತಿಯನ್ನು ಸಾಮಾಜಿಕವಾಗಿ ತೊಡಗಿಸಿಕೊಂಡಿರುವ ವಿಷ್ಣು ಯುವಕ ಮಂಡಲ ಬಡವರ ಕಷ್ಟ ಸುಖಗಳಿಗೆ ಸ್ಪಂದಿಸುವ ಕಾರ್ಯ ಮಾಡುತ್ತಿದೆ ಎಂದರು.


ಮಂಗಳೂರು ಬ್ರೈಟ್ ವೇ ಇಂಡಿಯಾ ಕನ್ಸಲ್ಟೆನ್ಸಿಯ ನಿರ್ದೇಶಕ ಮನಮೋಹನ್ ರೈ ಚೆಲ್ಯಡ್ಕ ಮಾತನಾಡಿ, ಉತ್ತಮ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ವಿಷ್ಣು ಯುವಕ ಮಂಡಲ ಜೀವಂತವಾಗಿ ಉಳಿದಿದೆ. ಯುವಕ ಮಂಡಲವು ಸಾಮಾಜಿಕವಾಗಿ ಮಾದರಿ ಕಾರ್ಯಕ್ರಮಗಳನ್ನು ನೀಡುತ್ತಿದೆ ಎಂದರು.
ನ್ಯಾಯವಾದಿ ಚಿದಾನಂದ ಬೈಲಾಡಿ ಮಾತನಾಡಿ, ಯುವಕ ಮಂಡಲದ ಸಾಧನೆಯ ಅಭಿನಂದನೀಯ. ಸಾಧಕರನ್ನು ಗೌರವಿಸುವ ಮೂಲಕ ಮೆಚ್ಚುಗೆ ಗೆ ಪಾತ್ರವಾಗಿದೆ ಎಂದರು.

ಮಹಮ್ಮದ್ ಹಾಜಿ ಕುಕ್ಕುವಳ್ಳಿ ಮಾತನಾಡಿ, ಶಾಲೆಗೆ ಮಕ್ಕಳಿಗೆ ಆಟಕ್ಕೆ ಅಗತ್ಯವಾದ ಒಂದು ಲಕ್ಷ ಮೌಲ್ಯದ ಜಾರು ಬಂಡಿ ಕೊಡುಗೆ ನೀಡುವುದಾಗಿ ಘೋಷಣೆ ಮಾಡಿದರು ನೀಡುವುದಾಗಿ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಧನಂಜಯ ನಾಕ್ ಉಪ್ಪಳಿಗೆ ಮಾತನಾಡಿ, ಧರ್ಮ, ರಾಜಕೀಯ ರಹಿತವಾಗಿ ಕಾರ್ಯನಿರ್ವಹಿಸುತ್ತಿರುವ ನಮ್ಮ ಯುವಕ ಮಂಡಲವು ಸಾಮಾಜಿಕ, ಧಾರ್ಮಿಕ ವಾಗಿ ಎಲ್ಲಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದೆ ಎಂದರು. ಉಪ್ಪಳಿಗೆ ಸರಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ನಾರಾಯಣ ಕೆ., ರಾಜ್ಯ ಪ್ರಶಸ್ತಿ ಪುರಸ್ಕೃತ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಕೋರ್ಮಂಡ, ನಿವೃತ್ತ ಶಿಕ್ಷಕ ದೇವಪ್ಪ ನಾಯ್ಕ ಉಪ್ಪಳಿಗೆ ಸಂದರ್ಬೋಚಿತವಾಗಿ ಮಾತನಾಡಿ ಶುಭಹಾರೈಸಿದರು.

ಉಪ್ಪಳಿಗೆ ಹಿ.ಪ್ರಾ ಶಾಲಾ ಮುಖ್ಯ ಶಿಕ್ಷಕಿ ಲಿಂಗಮ್ಮ, ಕಮಲ್ ಕನ್‌ಸ್ಟ್ರಕ್ಷನ್‌ನ ಕಮಲ್ ಕುಲಾಲ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ದಾಸ್ ಪ್ರಕಾಶ್ ರೈ ಉಪ್ಪಳಿಗೆ, ಶಿವಂ ಕಂಪ್ಯೂಟರ್‌ನ ಮ್ಹಾಲಕ ಸುದರ್ಶನ್ ರೈ ನೀರ್ಪಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ;
ಇರ್ದೆ ವಿಷ್ಣುಮೂರ್ತಿ ದೇವಸ್ಥಾನ ಸಹಿತ ಹಲವು ಕಡೆ ನಡೆದ ಕಳ್ಳತನ ಪ್ರಕರಣಗಳಿ ಭೇದಿಸಿದ ಸಂಪ್ಯ ಠಾಣಾ ಪೊಲೀಸ್ ಸಿಬಂದಿಗಳಾದ ಪ್ರವೀಣ್ ರೈ ಪಾಲ್ತಾಡು, ವರ್ಗೀಸ್ , ಜಗದೀಶ್, ಅದ್ರಾಮ, ರಾಜ್ಯ ಪ್ರಶಸ್ತಿ ಪುರಸ್ಕೃತ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಕೋರ್ಮಂಡ, ಮೆಸ್ಕಾಂ ಬೆಟ್ಟಂಪಾಡಿ ಶಾಖೆಯ ಪವರ್ ಮೆನ್‌ಗಳಾದ ಮಂಜುನಾಥ ಹಾಗೂ ಮಿಥುನ್ ರವರನ್ನು ಸನ್ಮಾನಿಸಲಾಯಿತು. ೨೦೨೧-೨೨ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಉಪ್ಪಳಿಗೆ ಸರಕಾರಿ ಪ್ರೌಢ ಶಾಲಾ ಪವನ್ ಕುಮಾರ್, ಇಶಾ ಶೆಟ್ಟಿ, ಸಾಧನ, ಏಳನೇ ತರಗತಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಶರಣ್ಯ, ಯಕ್ಷಿತಾ, ಚಿತ್ರಕಲೆಯಲ್ಲಿ ಸಾಧನೆ ಮಾಡಿದ ಲಾವಣ್ಯರವರನ್ನು ಗೌರವಿಸಲಾಯಿತು. ಛದ್ಮವೇಶ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಮಂಜುನಾಥ ಎನ್.ಎಸ್ ಸ್ವಾಗತಿಸಿದರು. ಸ್ಥಾಪಕಾಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಕಾಶ್ ರೈ ಬೈಲಾಡಿ, ಪ್ರಮೋದ್ ರೈ ಕುದ್ಕಲ್, ಶಿವಪ್ರಸಾದ್ ಉಪ್ಪಳಿಗೆ, ಪ್ರಮೋದ್ ಉಪ್ಪಳಿಗೆ, ಗಂಗಾಧರ ಆಳ್ವ, ಪುತ್ತು ಚೆಲ್ಯಡ್ಕ, ದಿಲೀಪ್ ಉಪ್ಪಳಿಗೆ, ಚೇತನ್ ಉಪ್ಪಳಿಗೆ, ಸದಾಶಿವ ರೈ ಗುಮ್ಮಟೆಗದ್ದೆ, ನಿತ್ಯಾನಂದ ಬೈಲಾಡಿ, ಹರೀಶ್ ಉಪ್ಪಳಿಗೆ, ಲೋಕನಾಥ ಆಚಾರ್ಯ ಅತಿಥಿಗಳನ್ನು ಶಾಲು ಹಾಕಿ ಸ್ವಾಗತಿಸಿದರು. ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ್ ರೈ ಬೈಲಾಡಿ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಅಮ್ಮ ಕಲಾವಿದರು ಮಂಗಳೂರು ಇವರಿಂದ ಪರಕೆ ಪೂವಕ್ಕೆ ಎಂಬ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು.

ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಉಪ್ಪಳಿಗೆ ಹಿ.ಪ್ರಾ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಲೋಕನಾಥ ಆಚಾರ್ಯ ಧ್ವಜಾರೋಹಣ ನೆರವೇರಿಸಿದರು. ಬಳಿಕ ಛದ್ಮವೇಶ ಸ್ಪರ್ಧೆ ನಡೆಯಿತು. ಸಂಜೆ ಉಪ್ಪಳಿಗೆ ಹಿ.ಪ್ರಾ ಶಾಲೆ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.