ನೆಲ್ಯಾಡಿ: ವಿವಿ ಕಾಲೇಜು ವಿದ್ಯಾರ್ಥಿ ಸಂಘದ ಉದ್ಘಾಟನೆ, ಸಾಂಸ್ಕೃತಿಕ ಪ್ರತಿಭಾ ಆಯ್ಕೆ ಸ್ಪರ್ಧೆ, ವನಮಹೋತ್ಸವ

0

ನೆಲ್ಯಾಡಿ: ವಿಶ್ವವಿದ್ಯಾಲಯ ಕಾಲೇಜು ನೆಲ್ಯಾಡಿಯಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ ಮತ್ತು ಸಾಂಸ್ಕೃತಿಕ ಪ್ರತಿಭಾ ಆಯ್ಕೆ ಕಾರ್ಯಕ್ರಮ ಜೂ.10ರಂದು ನಡೆಯಿತು.

ಸುಬ್ರಹ್ಮಣ್ಯ ಕೆಎಸ್‌ಎಸ್ ಕಾಲೇಜಿನ ಆಂಗ್ಲಭಾಷಾ ವಿಭಾಗದ ಮುಖ್ಯಸ್ಥ ಡಾ. ಗೋವಿಂದ ಎನ್.ಎಸ್. ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರ ಶಿಕ್ಷಣಕ್ಕಾಗಿ ವಿದ್ಯಾರ್ಥಿ ವೇತನ ಹಾಗೂ ಅನೇಕ ಬೆಂಬಲಗಳನ್ನು ಕೊಡುತ್ತಿದ್ದು ಅದನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು. ಶಿಕ್ಷಕರ ಸಲಹೆ, ಮಾರ್ಗದರ್ಶನದೊಂದಿಗೆ ವಿದ್ಯಾರ್ಥಿಗಳು ತಮ್ಮ ಕರ್ತವ್ಯ ಪಾಲಿಸಬೇಕು. ಪ್ರಾಕ್ಟಿಕಲ್ ಆಗಿ ಕಾರ್ಯ ನಿರ್ವಹಿಸಬೇಕು ಎಂದರು. ನಾನು, ನನ್ನ ಕುಟುಂಬ ಭ್ರಷ್ಟಾಚಾರ ಮಾಡುವುದಿಲ್ಲ, ನನ್ನ ರಾಷ್ಟ್ರ ಭ್ರಷ್ಟವಾಗುವುದನ್ನು ನಾನು ಬಯಸುವುದಿಲ್ಲ ಎಂಬ ನಿರ್ಧಾರದೊಂದಿಗೆ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಬೇಕು ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯ ಕಾಲೇಜು ನೆಲ್ಯಾಡಿಯ ಸಂಯೋಜಕ ಡಾ. ಜಯರಾಜ್ ಎನ್., ಮಾತನಾಡಿ, ಕಾಲೇಜಿನ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ವಿವಿಧ ಸವಾಲುಗಳನ್ನು ಎದುರಿಸಿ ಕಾರ್ಯ ನಿರ್ವಹಿಸಲಾಗುವುದು ಎಂದರು.

ವಿದ್ಯಾರ್ಥಿ ನಾಯಕರುಗಳು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ವಿದ್ಯಾರ್ಥಿ ಕ್ಷೇಮಪಾಲಕ ಸುರೇಶ್ ಕೆ.,ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇತಿಹಾಸ ವಿಭಾಗದ ಸಹ ಸಂಯೋಜಕ, ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಸೀತಾರಾಮರವರು ಉದ್ಘಾಟಕರನ್ನು ಪರಿಚಯಿಸಿದರು. ಯುವ ರೆಡ್ ಕ್ರಾಸ್ ಸಂಸ್ಥೆ ಕಾರ್ಯಕ್ರಮಾಧಿಕಾರಿ ಡಾ. ನೂರಂದಪ್ಪ ಅವರು ವಂದಿಸಿದರು. ಲಲಿತ ಕಲಾ ಸಂಘದ ಸಂಚಾಲಕಿ ದಿವ್ಯಾಶ್ರೀ ಜಿ. ನಿರೂಪಿಸಿದರು.

ವನಮಹೋತ್ಸವ:

ನೆಲ್ಯಾಡಿಯ ಗಾಂಧಿ ಮೈದಾನದಲ್ಲಿ ಕಾಲೇಜಿನ ಯುವ ರೆಡ್ ಕ್ರಾಸ್ ವಿಭಾಗದ ವತಿಯಿಂದ ಗಿಡ ನೆಡುವುದರ ಮುಖಾಂತರ ವನಮಹೋತ್ಸವ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ನೆಲ್ಯಾಡಿ ಗ್ರಾಮ ಪಂಚಾಯತ್‌ನ ಅಭಿವೃದ್ಧಿ ಅಧಿಕಾರಿ ಮಂಜುಳ ಎನ್., ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್, ಸಿಬ್ಬಂದಿ ಶಿವಪ್ರಸಾದ್ ಭಾಗವಹಿಸಿದರು. ಕಾಲೇಜಿನ ಉಪನ್ಯಾಸಕ ಉಪನ್ಯಾಸಕಿರು, ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here