ತಾ|ಸರಕಾರಿ ನೌಕರರ ಸಂಘದ ಮಹಾಸಭೆ, ಸನ್ಮಾನ

0

ತಾ|ಸರಕಾರಿ ನೌಕರರ ಸಂಘದ ಮಹಾಸಭೆ, ಸನ್ಮಾನ

ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ
ಪೊಟೊ ವಾಟ್ಸಪ್-ಸರಕಾರಿ

ಪುತ್ತೂರು: ಮಿನಿ ವಿಧಾನಸೌಧದ ಬಳಿ ಕಾರ್ಯಾಚರಿಸುತ್ತಿರುವ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬೆಂಗಳೂರು ಇದರ ಪುತ್ತೂರು ಶಾಖೆಯ ವಾರ್ಷಿಕ ಮಹಾಸಭೆಯ ಹಾಗೂ ಇತ್ತೀಚೆಗೆ ಸೇವೆಯಿಂದ ನಿವೃತ್ತಿಗೊಂಡ ವಾಣಿಜ್ಯ ತೆರಿಗೆ ಇಲಾಖೆಯ ಉದ್ಯೋಗಿ, ಸಂಘದ ಉಪಾಧ್ಯಕ್ಷರಾಗಿದ್ದ ರಾಮಚಂದ್ರ ಭಟ್‌ರವರಿಗೆ ಸನ್ಮಾನ ಕಾರ್ಯಕ್ರಮವು ಜೂ.೧೮ ರಂದು ಸಂಘದ ಸಭಾಂಗಣದಲ್ಲಿ ನೆರವೇರಿತು.
ಮಹಾಸಭೆಯ ಅಧ್ಯಕ್ಷತೆ ವಹಿಸಿರುವ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಆಚಾರ್ಯರವರು ಮಾತನಾಡಿ, ಇತ್ತೀಚೆಗೆ ಸೇವೆಯಿಂದ ನಿವೃತ್ತಗೊಂಡ ಸಂಘದ ಉಪಾಧ್ಯಕ್ಷರಾಗಿರುವ ರಾಮಚಂದ್ರ ಭಟ್‌ರವರೋರ್ವ ನಿಷ್ಕಲ್ಮಶ ಗುಣವುಳ್ಳ ವ್ಯಕ್ತಿ. ಸಂಘದ ಸುಸಜ್ಜಿತ ಕಟ್ಟಡದ ನಿರ್ಮಾಣ ಸಂದರ್ಭದಲ್ಲಿ ಆರ್ಥಿಕ ಕ್ರೋಢೀಕರಣಕ್ಕೆ ರಾಮಚಂದ್ರ ಭಟ್‌ರವರು ನಮ್ಮೊಂದಿಗೆ ಕೈಜೋಡಿಸಿದ್ದರು ಮಾತ್ರವಲ್ಲದೆ ಪ್ರತೀ ಇಲಾಖೆಯವರು ನೆರವು ನೀಡಿರುತ್ತಾರೆ. ಸಂಘದ ತಾಲೂಕು ಸರಕಾರಿ ನೌಕರರ ಸಂಘಕ್ಕೆ ನಿಜವಾಗಿಯೂ ರಾಮಚಂದ್ರ ಭಟ್‌ರವರೇ ಅಧ್ಯಕ್ಷರಾಗಬೇಕಿತ್ತು. ಆದರೆ ಅವರ ನಿವೃತ್ತಿಯ ಸಮಯ ಹತ್ತಿರವಿದ್ದುದರಿಂದ ಅವರೇ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಟ್ಟಿದ್ದರಿಂದ ಆ ಅಧ್ಯಕ್ಷ ಹುದ್ದೆಯ ಜವಾಬ್ದಾರಿಯು ನನ್ನ ಹೆಗಲೇರಿತು. ಯಾರಲ್ಲಿ ಅರ್ಥ ಮಾಡಿಕೊಳ್ಳುವ ಮನಸ್ಸು, ಕೈಜೋಡಿಸುವ ಸ್ನೇಹವಿರುತ್ತದೆಯೋ ಅವರು ಯಶಸ್ವಿಯಾಗುತ್ತಾರೆ. ಹಿಂದಿನ ಅಧ್ಯಕ್ಷರುಗಳ ಉತ್ತಮ ತಳಪಾಯದಿಂದ, ಆಶೀರ್ವಾದದಿಂದ ಸಂಘವು ಮುನ್ನೆಡೆಯುತ್ತಾ ಸಾಗುತ್ತಿದೆ. ಮುಂದಿನ ದಿನಗಳಲ್ಲೂ ಪ್ರತೀ ಇಲಾಖೆಯವರು ನಮ್ಮೊಂದಿಗೆ ಕೈಜೋಡಿಸಿ ಎಂದು ಹೇಳಿ ನಿವೃತ್ತಿಗೊಂಡ ರಾಮಚಂದ್ರ ಭಟ್‌ರವರ ಮುಂದಿನ ವಿಶ್ರಾಂತ ಜೀವನಕ್ಕೆ ಶುಭ ಹಾರೈಸಿದರು.
ತಾಲೂಕು ಸರಕಾರಿ ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷ ಮೌರಿಸ್ ಮಸ್ಕರೇನ್ಹಸ್ ಮಾತನಾಡಿ, ನಿವೃತ್ತಗೊಂಡ ರಾಮಚಂದ್ರ ಭಟ್‌ರವರು ಸರಳಜೀವಿ, ಸದಾ ನಗುಮುಖದಿಂದಲೇ ಇರುವವರು. ಸರಕಾರಿ ನೌಕರರ ಸಂಘದ ಬೆಳವಣಿಗೆಯ ಹಿಂದೆ ರಾಮಚಂದ್ರ ಭಟ್‌ರವರ ಕಾಣಿಕೆ ಬಹಳಷ್ಟು ಇದೆ. ಪ್ರತಿಯೊಂದು ಹಂತದಲ್ಲಿ ಅವರು ನಮಗೆ ಸಹಕರಿಸಿದ್ದಾರೆ. ರಾಮಚಂದ್ರ ಭಟ್‌ರವರು ಸಸ್ಯಹಾರಿಯಾದರೂ ಅವರು ನಮ್ಮೊಂದಿಗೆ ಬೆರೆಯುತ್ತಿದ್ದ ರೀತಿ ಬಹಳ ಖುಶಿ ನೀಡುತ್ತಿತ್ತು. ರಾಮಚಂದ್ರ ಭಟ್‌ರವರ ಮುಂದಿನ ನಿವೃತ್ತ ಜೀವನವು ಆಯುರಾರೋಗ್ಯದಿಂದ ಕೂಡಿರಲಿ ಎಂದು ಹಾರೈಸಿದರು.

ತಾಲೂಕು ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಕೆ.ಕೃಷ್ಣಪ್ಪರವರು ಮಾತನಾಡಿ, ೩೬ ವರ್ಷ ಕರ್ನಾಟಕದ ದೊಡ್ಡ ಇಲಾಖೆಯಾಗಿರುವ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಸೇವೆ ನೀಡಿರುವ ರಾಮಚಂದ್ರ ಭಟ್‌ರವರು ತಾಲೂಕು ಸರಕಾರಿ ನೌಕರರ ಸಂಘಕ್ಕೆ ಕಳೆದ ಎಂಟು ವರ್ಷಗಳಿಂದ ಸೇವೆ ನೀಡುತ್ತಿದ್ದಾರೆ. ಪ್ರಜಾಪ್ರಭುತ್ವದ ಆಡಳಿತ ವ್ಯವಸ್ಥೆಯಲ್ಲಿ ಸರಕಾರಿ ನೌಕರರ ಸೇವೆ ಪ್ರಮುಖವಾಗಿದ್ದು ಸದಾ ಒತ್ತಡದ ಕಾರ್ಯವಾಗಿರುತ್ತದೆ. ವಿನಮ್ರತೆ, ಸಂತೋಷದಿಂದ ಕೂಡಿದ ನಗುಮುಖದ ಸೇವೆಯೇ ರಾಮಚಂದ್ರ ಭಟ್‌ರವರಿಗೆ ಭೂಷಣವಾಗಿದ್ದು ಅವರ ನಿವೃತ್ತ ಜೀವನವು ಸುಖ-ನೆಮ್ಮದಿಯಿಂದ ಕೂಡಿರಲಿ ಎಂಬುದೇ ನಮ್ಮ ಹಾರೈಕೆಯಾಗಿದೆ.


ಅಭಿನಂದನೆ:
ಇತ್ತೀಚೆಗೆ ನಡೆದ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಶಸ್ತಿ ವಿಜೇತರಾದ ಸಂಘದ ಸದಸ್ಯರಾದ ಲಘು ಶಾಸ್ತ್ರೀಯ ಸಂಗೀತದಲ್ಲಿ ೩ನೇ ಬಹುಮಾನ ವಿಜೇತರಾದ ನ್ಯಾಯಾಂಗ ಇಲಾಖೆಯ ರಾಮ್ ಕುಮಾರ್, ಚೆಸ್‌ನಲ್ಲಿ ದ್ವಿತೀಯ ಪ್ರಶಸ್ತಿ ಪಡೆದ ವಾಣಿಜ್ಯ ತೆರಿಗೆ ಇಲಾಖೆಯ ವರುಣ್ ಕುಮಾರ್ ಬಿ, ಮಹಿಳೆಯರ ಶಾಟ್‌ಪುಟ್‌ನಲ್ಲಿ ೩ನೇ ಬಹುಮಾನ ವಿಜೇತರಾದ ಆರೋಗ್ಯ ಇಲಾಖೆಯ ಜಯಶ್ರೀ ಪಿ.ರವರಿಗೆ ಶಾಲು ಹೊದಿಸಿ ಅಭಿನಂದಿಸಲಾಯಿತು.

ರಾಜ್ಯ ಪರಿಷತ್ ಸದಸ್ಯ ಪುರುಷೋತ್ತಮ್ ಬಿ ಸ್ವಾಗತಿಸಿ, ಕಾರ್ಯಕಾರಿ ಸಮಿತಿ ಸದಸ್ಯ ಚಿದಾನಂದ ಬಿ ವಂದಿಸಿದರು. ಶಿಕ್ಷಕಿ ಸ್ಮಿತಾಶ್ರೀ ಪ್ರಾರ್ಥಿಸಿದರು. ಕಾರ್ಯದರ್ಶಿ ಅಬ್ರಹಾಂ ಎಸ್.ಎ ವರದಿ, ಕೋಶಾಧಿಕಾರಿ ನಾಗೇಶ್ ಕೆ ಲೆಕ್ಕಪತ್ರ ಮಂಡಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ವಿನೋದ್ ಕುಮಾರ್ ಕೆ ಕಾರ್ಯಕ್ರಮ ನಿರೂಪಿಸಿದರು.

ಸಂಘಕ್ಕೆ ಪದಾಧಿಕಾರಿಗಳ ನೇಮಕ..
ತಾಲೂಕು ಸರಕಾರಿ ನೌಕರರ ಸಂಘದ ಗೌರವಾಧ್ಯಕ್ಷರಾಗಿ ಎಪಿಎಂಸಿ ಪುತ್ತೂರು ಕಾರ್ಯದರ್ಶಿ ರಾಮಚಂದ್ರ, ಹಿರಿಯ ಉಪಾಧ್ಯಕ್ಷರಾಗಿ ಬಿಳಿಯೂರುಕಟ್ಟೆ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಹರಿಪ್ರಕಾಶ್ ಬೈಲಾಡಿ, ಉಪಾಧ್ಯಕ್ಷರುಗಳಾಗಿ ಆರೋಗ್ಯ ಇಲಾಖೆಯ ಶ್ರೀಮತಿ ಪದ್ಮಾವತಿ ಎಂ.ಆರ್, ಪಶುಸಂಗೋಪನಾ ಇಲಾಖೆಯ ಹೊನ್ನಪ್ಪ ಗೌಡ, ಅಬಕಾರಿ ಇಲಾಖೆಯ ವಿಜಯಕುಮಾರ್, ನಾಮನಿರ್ದೇಶಿತ ಸದಸ್ಯರಾಗಿ ಬೆಟ್ಟಂಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸೀತಾರಾಮ ಗೌಡ ಮಿತ್ತಡ್ಕರವರನ್ನು ನೇಮಕ ಮಾಡಲಾಗಿದೆ. ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಆಚಾರ್ಯರವರ ಸೂಚನೆಯಂತೆ, ಜಿಲ್ಲಾ ಹಾಗೂ ರಾಜ್ಯಾಧ್ಯಕ್ಷರ ಅನುಮತಿ ಮೇರೆಗೆ ಈ ಆಯ್ಕೆಯನ್ನು ನಡೆಸಲಾಗಿದೆ.

ಸೇವೆಯಿಂದ ನಿವೃತ್ತಗೊಂಡರೂ ಪ್ರವೃತ್ತಿಯಿಂದ ನಿವೃತ್ತಿಯಾಗುವುದಿಲ್ಲ ಎಂದು ಹಿರಿಯರು ಹೇಳುತ್ತಾರೆ. ಸಂಘದಲ್ಲಿ ಕೇವಲ ಸದಸ್ಯನಾಗಿರುತ್ತೇನೆ, ಪದಾಧಿಕಾರಿಯಾಗಿ ಅಲ್ಲ ಎಂದು ನಾನು ಮೌರಿಸ್ ಮಸ್ಕರೇನ್ಹಸ್‌ರವರಲ್ಲಿ ಹೇಳಿಕೊಂಡಿದ್ದೆ. ಆದರೆ ಅವರು ನನ್ನನ್ನು ಸಂಘದ ಜವಾಬ್ದಾರಿ ಹುದ್ದೆಯಲ್ಲಿ ಕೂರಿಸಿರುತ್ತಾರೆ. ಸಂಘದ ಪ್ರತಿಯೊಂದು ಬೆಳವಣಿಗೆಯಲ್ಲಿ ಹಿಂದಿನ ಹಾಗೂ ಇಂದಿನ ಅಧ್ಯಕ್ಷರುಗಳು, ಸಮಿತಿ ಸದಸ್ಯರು ನನ್ನೊಂದಿಗೆ ಬಹಳ ಆತ್ಮೀಯತೆಯಿಂದ, ಪ್ರೀತಿಯಿಂದ ಆದರಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಸನ್ಮಾನಿತ ನಿಕಟಪೂರ್ವ ಉಪಾಧ್ಯಕ್ಷರಾದ ರಾಮಚಂದ್ರ ಭಟ್ ಹೇಳಿದರು.

 

LEAVE A REPLY

Please enter your comment!
Please enter your name here